ನಟ ದರ್ಶನ್ ಮನೆಯನ್ನು ತೆರವು ಮಾಡ್ತಾರಾ..? ಮುನಿರತ್ನ ಶಪಥ ಕೈಗೂಡುತ್ತಾ..!?

ಬೆಂಗಳೂರಿನಲ್ಲಿ ಮಳೆ ಅವಾಂತರ ಸರ್ಕಾರದ ನಿದ್ರೆ ಕೆಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ 3 ದಿನಗಳಿಂದ ಎಡೆಬಿಡದೆ ಸಿಟಿರೌಂಡ್ ಮಾಡ್ತಿದ್ದಾರೆ. ಇವತ್ತೂ ಕೂಡ ಬೆಂಗಳೂರು ನಗರ ಪ್ರದಕ್ಷಿಣೆ ಹಾಕುತ್ತಿದ್ದು, ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರ ಕಷ್ಟ ಆಲಿಸಲಿದ್ದಾರೆ. ಆದರೆ ನಿನ್ನೆ ಗುರುವಾರ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ಸಿಎಂ, ರಾಜಕಾಲುವೆ ಒತ್ತುವರಿ ಆಗಿರುವುದನ್ನು ಒಪ್ಪಿಕೊಂಡಿದ್ದರು. ಆ ಬಳಿಕ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜಕಾಲುವೆ ಒತ್ತುವರಿ ಹಾಗೂ ಹೂಳು ತೆಗೆದಿಲ್ಲ ಎನ್ನುವ ಕಾರಣಕ್ಕೆ ಅಧಿಕಾರಿಗಳ ವಿರುದ್ಧ ಕಣ್ಣು ಕೆಂಪು ಮಾಡಿಕೊಂಡಿದ್ದಾರೆ. ಕೂಡಲೇ ಹೂಳು ತೆಗೆಯುವಂತೆ ಸೂಚನೆ ಕೊಟ್ಟಿದ್ದಾರೆ. ರಾಜಕಾಲುವೆ ಒತ್ತುವರಿ ಆಗಿರುವುದು ಸತ್ಯ ಎನ್ನುವ ಮಾತನ್ನು ಸಿಎಂ ಮಾಧ್ಯಮಗಳ ಎದುರು ಒಪ್ಪಿಕೊಂಡಿದ್ದಾರೆ. ಅದರಲ್ಲಿ ಪ್ರಮುಖ ಆಗಿರುವುದು RR ನಗರ ಒತ್ತುವರಿ.

ರಾಜಕಾಲುವೆ ಮೇಲಿದೆ ಅಂತೆ ನಟ ದರ್ಶನ್ ಮನೆ..!?

ಬೆಂಗಳೂರಿನ ಪ್ರತಿಷ್ಠಿತ ನಗರಗಳಲ್ಲಿ ಒಂದಾಗಿರುವ ರಾಜರಾಜೇಶ್ವರಿ ನಗರ (RR Nagara) ಗಣ್ಯರು, ಸೆಲೆಬ್ರಿಟಿಗಳು ವಾಸ ಮಾಡುವ ಏರಿಯಾಗಳಲ್ಲಿ ಒಂದು. ಇದೇ ಏರಿಯಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಯೂ ಇದೆ. ಈ ಹಿಂದೆ ಕುಮಾರಸ್ವಾಮಿ ಸರ್ಕಾರದಲ್ಲಿ ನಟ ದರ್ಶನ್ ಅವರ ಮನೆಯನ್ನು ತೆರವು ಮಾಡಲು ಕ್ರಮ ತೆಗೆದುಕೊಳ್ಳಲಾಗಿತ್ತು. ಆದರೆ ಕೋರ್ಟ್ ಮೊರೆ ಹೋಗಿದ್ದ ನಟ ದರ್ಶನ್, ಬಿಬಿಎಂಪಿ ತೆರವು ಕಾರ್ಯಾಚರಣೆಗೆ ತಡೆಯಾಜ್ಞೆ ತಂದಿದ್ದರು. ಆ ಬಳಿಕ ಸರ್ಕಾರ ಬದಲಾಗಿತ್ತು. ಸರ್ಕಾರದ ನಡೆಗಳು ಅದಲು ಬದಲಾದವು. ಇದೀಗ ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ಆರ್.ಆರ್ ನಗರ ಪ್ರಮುಖವಾಗಿದೆ. ಸಿಎಂ ಬಸವರಾಮಜ ಬೊಮ್ಮಾಯಿ ಕೂಡ ರಾಜಕಾಲುವೆ ಒತ್ತುವರಿ ಆಗಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ ಅಂದ ಮೇಲೆ ತೆರವು ಕಾರ್ಯಾಚರಣೆಗೆ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ನಟ ದರ್ಶನ್ ಅವರ ಮನೆ ಕೂಡ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದೆ ಎನ್ನುವುದು ಖಚಿತವಾದರೆ ತೆರವು ಕೂಡ ಶತಸಿದ್ದ ಎನ್ನಲಾಗ್ತಿದೆ. ಇದಕ್ಕೆ ಇನ್ನೂ ಒಂದು ಕಾರಣವಿದೆ.

ದುರ್ಯೋಧನನಿಗೆ ಗಧೆ ಏಟು ಕೊಟ್ಟ ಮುನಿರತ್ನ..!

ಕುರುಕ್ಷೇತ್ರ ಚಿತ್ರದ ನಿರ್ಮಾಪಕ ಮುನಿರತ್ನ ದುರ್ಯೋಧನ ಪಾತ್ರಧಾರಿ ನಟ ದರ್ಶನ್‌ಗೆ ಪೆಟ್ಟು ಕೊಡುವ ಸುಳಿವು ಕೊಟ್ಟಿದ್ದಾರೆ. ಆರ್.ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದ ಸಾಕಷ್ಟು ಅವಾಂತರ ಸಂಭವಿಸಿದ್ದು, ಐಡಿಯಲ್ ಹೋಮ್ ಬಹುಭಾಗ ನೀರಿನಿಂದ ಮುಚ್ಚಿಹೋಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸ್ಥಳ ಪರಿಶೀಲನೆ ನಡೆಸಿದ್ದರು. ಆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಮುನಿರತ್ನ, ರಾಜಕಾಲುವೆ ಒತ್ತುವರಿ ಆಗಿರುವುದರಿಂದ ಈ ಸಮಸ್ಯೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ರಾಜಕಾಲುವೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇನೆ. ಒಂದು ವೇಳೆ ಸಮಸ್ಯೆಗೆ ಪರಿಹಾರ ಕಲ್ಪಿಸದೆ ಇದ್ದರೆ ನಾನು ಮುಂದಿನ ಬಾರಿ ಚುನಾವಣೆಗೆ ಸ್ಪರ್ಧೆಯನ್ನೇ ಮಾಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಅಂದರೆ ಒತ್ತುವರಿ ತೆರವು ಮಾಡುವುದಕ್ಕೆ ಎಲ್ಲಾ ರೀತಿಯ ತಯಾರಿ ನಡೆದಿದೆ ಎನ್ನಬಹುದು. ಇದರ ಜೊತೆಗೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಒಡೆತನದ ಎಸ್.ಎಸ್ ಆಸ್ಪತ್ರೆ ಕೂಡ ಒತ್ತುವರಿ ಪಟ್ಟಿಯಲ್ಲಿ ಇದೆ ಎನ್ನಬಹುದಾಗಿದೆ. ಇದೀಗ ಮುನಿರತ್ನ ಮಾತನ್ನು ಇಡೀ ರಾಜ್ಯದ ಜನತೆ ನೋಡಿದ್ದಾರೆ. ನಟ ದರ್ಶನ್ ಸೇರಿದಂತೆ ಒತ್ತುವರಿ ಮಾಡಿಕೊಂಡ ಶ್ರೀಮಂತರ ಮನೆ ಕೆಡವಬೇಕಿದೆ.

ನಟ ದರ್ಶನ್ ನಿವಾಸ

ಸರ್ಕಾರ ಒಂದು ಬಾರಿ ಮನಸ್ಸು ಮಾಡಬೇಕಿದೆ..!

ಬೆಂಗಳೂರಿನಲ್ಲಿ ಪ್ರತಿವರ್ಷವೂ ಮಳೆಗಾಲದಲ್ಲಿ ಹಲವು ಜೀವಗಳು ಪ್ರಾಣವನ್ನೇ ಕಳೆದುಕೊಳ್ಳುವ ವಿಚಾರ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಯಾವುದೇ ಸರ್ಕಾರ ಅಧಿಕಾರದಲ್ಲಿ ಇದ್ದರೂ ಶಾಶ್ವತ ಪರಿಹಾರ ಮಾಡುತ್ತೇವೆ ಎನ್ನುವ ರೆಡಿಮೇಡ್ ಉತ್ತರ ಕೊಡುವುದನ್ನು ನಾವು ಗಮನಿಸಿದ್ದೇವೆ. ಈ ಭಾರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಬೆಂಗಳೂರಿನ ಮಳೆ ಅವಾಂತರಕ್ಕೆ ಇತಿಶ್ರೀ ಹೇಳ್ತವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯದ ಜನರ ಎದುರು ಓಪನ್‌ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಆದರೆ ಒಮ್ಮೆ ರಾಜಕಾಲುವೆಗಳ ಸರ್ವೇ ಮಾಡಿಸಿ, ಒತ್ತುವರಿ ಮಾಡಿದ್ದವರಿಗೆ ನೋಟಿಸ್ ಜಾರಿ ಮಾಡಿ ಒಂದು ಕಡೆಯಿಂದ ತೆರವು ಮಾಡುತ್ತ ರಾಜಕಾಲುವೆಯನ್ನು ಸುಭದ್ರವಾಗಿ ನಿರ್ಮಾಣ ಮಾಡಿದರೆ ಮುಂದಿನ ದಿನಗಳಲ್ಲಿ ಆಗುವ ಹೆಚ್ಚಿನ ಅನಾಹುತಗಳನ್ನು ತಡೆಯಬಹುದಾಗಿದೆ. ಇಲ್ಲದಿದ್ದರೆ ಪ್ರತಿವರ್ಷವೂ ಇದೇ ಕಥೆ. ಆದರೆ ತೆರವು ಮಾಡುತ್ತೇವೆ ಎಂದು ಬಡವರ ಮನೆಗಳನ್ನು ಒಡೆದು ಶ್ರೀಮಂತರ ಮನೆ ಬಳಿ ಹೋಗಿ ನಿಲ್ಲುವುದು ಸರ್ಕಾರ ಮೂರ್ಖತನವನ್ನು ಪ್ರದರ್ಶನ ಮಾಡಿದಂತೆ ಎನ್ನುವುದನ್ನು ಮರೆಯಬಾರದು.

Related Posts

Don't Miss it !