ನಿಮ್ಮ ಸೈಟ್​ ಬೇರೆಯವರಿಗೆ ಮಾರಾಟ ಆಗಿರಬಹುದು..! ಯಾಕೆ ಗೊತ್ತಾ..?

ಬೆಂಗಳೂರಿನಲ್ಲಿ ಒಬ್ಬರ ಸೈಟ್​ ಇನ್ನೊಬ್ಬರಿಗೆ ಮಾರಾಟ ಮಾಡುವುದು ಸರ್ವೇ ಸಾಮಾನ್ಯ ಸಂಗತಿ ಎನ್ನುವಂತಾಗಿದೆ. ಈ ರೀತಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬೇರೆ ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದ ಖದೀಮರ ಪಡೆಯನ್ನು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿ ಕಂಬಿ ಹಿಂದಕ್ಕೆ ಕಳುಹಿಸಿದ್ದಾರೆ. ಆದರೆ ಇಷ್ಟು ದಿನ ಅದೆಷ್ಟು ಸೈಟ್​ಗಳಿಗೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೋ..? ಅದೆಷ್ಟು ಜನರಿಗೆ ಈಗಾಗಲೇ ಮಾರಾಟ ಮಾಡಿದ್ದಾರೋ ಎನ್ನುವ ಆತಂಕ ಬೆಂಗಳೂರಿಗರನ್ನು ಕಾಡುವುದಕ್ಕೆ ಶುರುಮಾಡಿದೆ. ಇದರಲ್ಲಿ ನಿಮ್ಮ ಸೈಟ್​ ಇದ್ದರೂ ಅಚ್ಚರಿಯೇನಿಲ್ಲ. ಯಾವುದಕ್ಕೂ ಒಮ್ಮೆ ಸೈಟ್​ ಬಳಿಗೆ ಹೋಗಿ ಪರಿಶೀಲನೆ ಮಾಡಿಕೊಳ್ಳುವುದು ಒಳಿತು.

ಸೈಟ್​ನ ನಕಲಿ ಪೇಪರ್​ ಮಾಡಿಸೋದು ಹೇಗೆ..?

ಬೆಂಗಳೂರಿನ ಅನೇಕ ಏರಿಯಾಗಳಲ್ಲಿ ಸುತ್ತಾಡುತ್ತಿದ್ದ ಈ ಟೀಂ, ಖಾಲಿ ಸೈಟ್​ ಹಾಗೂ ಜಾಗಗಳನ್ನು ಪತ್ತೆ ಹಚ್ಚುತ್ತಿತ್ತು. ಈ ಸೈಟ್​ ಮಾರಾಟಕ್ಕೆ ಇದೆಯಂತೆ ಮಾಲೀಕರು ಯಾರು..? ಎಲ್ಲಿದ್ದಾರೆ ಎಂದು ಅಕ್ಕಪಕ್ಕದ ನಿವಾಸಿಗಳ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಒಂದು ವೇಳೆ ಮಾಲೀಕರು ಇಲ್ಲಿಲ್ಲ, ಸೈಟ್​ ಖರೀದಿ ಮಾಡಿದ ಬಳಿಕ ಆಗೊಮ್ಮೆ ಹೀಗೊಮ್ಮೆ ಬಂದು ಹೋಗ್ತಾರೆ ಎನ್ನುವ ಮಾಹಿತಿ ಸಿಕ್ಕರೆ ಆ ಸೈಟ್​ಗೆ ನಕಲಿ ದಾಖಲೆ ಸೃಷ್ಟಿಸುವ ಕೆಲಸ ಆರಂಭ ಆಗ್ತಿತ್ತು. ನಕಲಿ ದಾಖಲೆಗಳನ್ನೇ ಬಳಸಿ ಬೇರೊಬ್ಬರಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ತಿದ್ರು. ಇದೇ ರೀತಿ ಬೆಂಗಳೂರಿನಲ್ಲಿ ಹತ್ತಾರು ಸೈಟ್​ಗಳನ್ನು ಮಾರಾಟ ಮಾಡಿದ್ದ ಖತರ್ನಾಕ್​ ಗ್ಯಾಂಗ್​ ಇದೀಗ ಪೊಲೀಸರ ಬಲೆಯಲ್ಲಿ ಸಿಕ್ಕಿ ಬಿದ್ದಿದೆ.

ನಕಲಿ ಗ್ಯಾಂಗ್​ ಬಗ್ಗೆ ಸಲ್ಲಿಕೆಯಾಗಿತ್ತು ದೂರು..!

ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಸೈಟ್​ ಮಾರಾಟ ಮಾಡುತ್ತಿದ್ದಾರೆ ಎನ್ನುವ ವಿಚಾರ ಪೊಲೀಸರ ಗಮನಕ್ಕೆ ಬಂದಿತ್ತು. ಸೈಟ್​ ಕಳೆದುಕೊಂಡ ಸುವರ್ಣಮ್ಮ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ವಿದ್ಯಾರಣ್ಯಪುರ ಪೊಲೀಸರು ತನಿಖೆ ನಡೆಸುತ್ತಿದ್ದರು. ಇದೀಗ ಇಡೀ ಟೀಂ ಪೊಲೀಸರ ಬಲೆಗೆ ಬಿದ್ದಿದೆ. 65 ಲಕ್ಷ ರೂಪಾಯಿಗೆ ಸೈಟ್​ ಮಾರಾಟ ಮಾಡಿ ಮೋಜು ಮಸ್ತಿ ಮಾಡಿದ್ದ ಆರೋಪಿಗಳಾದ ಫೈಜ್ ಸುಲ್ತಾನ, ಕಬೀರ್ ಅಲಿ, ಜಯಮ್ಮ ಅಲಿಯಾಸ್​ ಕಲ್ಪನಾ, ಪೂಜಾ, ಜಗದೀಶ್​ ಅಲಿಯಾಸ್​ ಯೋಗೇಶ್​ ಎಂಬುವರನ್ನು ಬಂಧಿಸಿದ್ದಾರೆ. ಹೆಚ್​ಎಂಟಿ ಲೇಔಟ್​ನಲ್ಲಿದ್ದ ಸುವರ್ಣಮ್ಮ ಎಂಬುವರ ಸೈಟ್​ಗೆ ನಕಲಿ ದಾಖಲೆ ಸೃಷ್ಟಿಸಿ ಸುವರ್ಣಮ್ಮ ಅವರೇ ಮಾರಾಟ ಮಾಡಿದ ರೀತಿಯಲ್ಲಿ ಯಾರಿಗೂ ತಿಳಿಯದಂತೆ ಮಾರಾಟ ಮಾಡಿದ್ದರು ಎನ್ನುವುದು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ.

ಬೆಂಗಳೂರಲ್ಲಿ ಸೈಟ್​ ಕಾಪಾಡಿಕೊಳ್ಳೋದು ಹೇಗೆ..?

ಬೆಂಗಳೂರಿನ ಸಂಜಯ್​​ ನಗರ ಠಾಣೆಯಲ್ಲೂ ಇದೇ ರೀತಿ ಪ್ರಕರಣ ದಾಖಲಾಗಿದೆ. ಒಂದು ಪ್ರಕರಣದಲ್ಲಿ ಮಾತ್ರ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 102 ಗ್ರಾಂ ಚಿನ್ನಾಭರಣ ಹಾಗೂ ಒಂದು ಟಾಟಾ ಸಫಾರಿ ವಾಹನವನ್ನು ಜಪ್ತಿ ಮಾಡಿದ್ದಾರೆ. ಆದರೆ ಇದೇ ರೀತಿ ಬೆಂಗಳೂರಿನಲ್ಲಿ ಸಾಕಷ್ಟು ಕೇಸ್​ಗಳು ಕೋರ್ಟ್​ ಕಟಕಟೆ ಏರಿವೆ. ಆರೋಪಿ ಫೈಜ್​ ಸುಲ್ತಾನ ಪದವಿಧರೆ ಆಗಿದ್ದು, ಕಾರಣಾಂತರಗಳಿಂದ ಗಂಡನಿಂದ ದೂರ ಇದ್ದಳು ಎನ್ನಲಾಗಿದೆ. ಕಬೀರ್​ ಅಲಿ ರಿಯಲ್​ ಎಸ್ಟೇಟ್​ ವ್ಯವಹಾರ ಮಾಡ್ತಿದ್ದು, ಆತನ ಜೊತೆಗೆ ಸೇರಿ ದೋಖಾ ಗ್ಯಾಂಗ್​ ಕಟ್ಟಿದ್ದಳು ಎನ್ನುವುದು ತಿಳಿದು ಬಂದಿದೆ. ಸೈಟ್​ ಖರೀದಿ ಮಾಡಿ 10 ವರ್ಷ ಆದ್ಮೇಲೆ ಮನೆ ಕಟ್ಟೋಣ ಎನ್ನುವವರು ತೋಟವನ್ನಾಗಿ ಆದರೂ ಪರಿವರ್ತನೆ ಮಾಡಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ವಾರಕ್ಕೊಮ್ಮೆ ಆ ಕಡೆಗೆ ಹೋಗಿ ಸುತ್ತಾಡಿ ಬರಬೇಕು. ಇಲ್ಲದಿದ್ದರೆ ವಂಚಕರ ಟೋಪಿ ನಿಮ್ಮ ಶಿರವೇರಿರುತ್ತದೆ. ಯಾವುದಕ್ಕೂ ನಿಮ್ಮ ಸೈಟ್​ ಬಳಿಕ ಒಮ್ಮೆ ಹೋಗಿ ಸುತ್ತಾಡಿ ಬನ್ನಿ. ಇಲ್ಲದಿದರೆ ಬೇರೆ ಯಾರಾದರೂ ಖರೀದಿ ಮಾಡಿ ಮನೆ ಕಟ್ಟಿರುತ್ತಾರೆ ಜೋಕೆ.

Related Posts

Don't Miss it !