100 ರೂಪಾಯಿ ಲಂಚ.. ಅರ್ಧ ಹೆಲ್ಮೆಟ್​.. ಇದು ಪೊಲೀಸರಿಗೇ ಎಚ್ಚರಿಕೆ ಗಂಟೆ..!!

ಉತ್ತಮ ಗುಣಮಟ್ಟದ ಹೆಲ್ಮೆಟ್​ ಹಾಕಬೇಕು ಎನ್ನುವುದು ನಿಯಮ. ಆದ್ರೆ ಬೆಂಗಳೂರಿನಂತಹ ನಗರಗಳಲ್ಲಿ ತಲೆ ಮೇಲೆ ಪ್ಲಾಸ್ಟಿಕ್​ ಹೆಲ್ಮೆಟ್​​ ಇಟ್ಟುಕೊಂಡು ಓಡಾಡುವ ಜನರ ಸಂಖ್ಯೆ ಅತ್ಯಧಿಕವಾಗಿದೆ. ಈ ಬಗ್ಗೆ ಪೊಲೀಸರೇ ಎಚ್ಚೆತ್ತುಕೊಳ್ಳಿ ಎಂದು The Public Spot ಕೂಡ ಎಚ್ಚರಿಸುವ ಕೆಲಸ ಮಾಡಿತ್ತು. ಇದೀಗ ಅರ್ಧ ಹೆಲ್ಮೆಟ್​ ಹಾಕಿಕೊಂಡು ಓಡಾಡುವ ಜನರಿಗೆ ಪೊಲೀಸರು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅರ್ಧ ಹೆಲ್ಮೆಟ್​ ಹಾಕಿದ್ರೆ ದಂಡ ವಿಧಿಸುತ್ತೇವೆ ಎನ್ನುವ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಇದೇ ರೀತಿ ಜನಸಾಮಾನ್ಯರಿಗೆ ತಿಳುವಳಿಕೆ ನೀಡಬೇಕಿದ್ದ ಟ್ರಾಫಿಕ್ ಪೊಲೀಸರು ಒಬ್ಬರು ಅಮಾನತು ಆಗಿದ್ದಾರೆ.

ಇದನ್ನೂ ಓದಿ: ದುಡಿದು ತಿನ್ನುವ ಛಲಗಾತಿ, ಹೆತ್ತವರ ಮಾತು ಕೇಳದೆ ಹುಟ್ಟಿದ ದಿನವೇ ಹೆಣವಾದಳು..!!

ಹೆಲ್ಮೆಟ್​​ ತಪಾಸಣೆ ನೆಪದಲ್ಲಿ ಲಂಚಕ್ಕೆ ಆಸೆ..!

ಪೊಲೀಸರು ಹೆಲ್ಮೆಟ್​ ತಪಾಸಣೆ ನಡೆಸಿ ಹಣ ಪಡೆದು ಬಿಟ್ಟು ಕಳಿಸುವುದು ಸಾಮಾನ್ಯ ಸಂಗತಿ. ಆದರೆ ಇದೀಗ ಕೇವಲ 100 ರೂಪಾಯಿ ಪಡೆದುಕೊಂಡ ತಪ್ಪಿಗೆ ಪೊಲೀಸ್​ ಪೇದೆ ಒಬ್ಬರು ಅಮಾನರು ಶಿಕ್ಷೆಗೆ ಗುರಿಯಾಗಿದ್ದಾರೆ. ಬೆಂಗಳೂರಿನ ​HAL ಪೊಲೀಸ್​ ಠಾಣೆಯ ಕಾನ್ಸ್​ಟೇಬಲ್​ ಪವನ್ ದ್ಯಾಮಣ್ಣನವರ್ ಅಮಾನತುಗೊಂಡ ಪೊಲೀಸ್​​ ಪೇದೆ. ಸಿಗ್ನಲ್​ನಲ್ಲಿ ನಿಂತಿದ್ದ ಪೇದೆ ಪವನ್ ದ್ಯಾಮಣ್ಣನವರ್, ಅರ್ಧ ಹೆಲ್ಮೆಟ್​ ಹಾಕಿಕೊಂಡು ಬರುತ್ತಿದ್ದ ಬೈಕ್​ ಸವಾರನನ್ನು ಅಡ್ಡಗಟ್ಟಿದ್ದಾರೆ. ಅರ್ಧ ಹೆಲ್ಮೆಟ್​ ಬಳಸುವಂತಿಲ್ಲ ಎಂದು ತಿಳಿಸಿದ್ದಾರೆ. ಆ ವೇಳೆ ಬೈಕ್​ ಸವಾರನ ಕೀ ಕಿತ್ತುಕೊಂಡಿದ್ದಾರೆ. ಆಗ ಮೆಲ್ಲನೆ ಪೊಲೀಸ್​ ಪವನ್ ದ್ಯಾಮಣ್ಣನವರ್ ಅವರ ಜೇಬಿಗೆ 100 ರೂಪಾಯಿ ಇಟ್ಟು ಅಲ್ಲಿಂದ ತೆರಳುವ ಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಪಡೆದುಕೊಂಡ ಹಣ ವಾಪಸ್​ ಕೊಟ್ಟಿದ್ದಾರೆ ಪವನ್ ದ್ಯಾಮಣ್ಣನವರ್.

ಇದನ್ನೂ ಓದಿ: ಡಿಸಿ ಕಚೇರಿಯಲ್ಲಿ ‘ಹಾಲ’ಪ್ಪ ಬಳಿಕ ದೂರು ಕೊಡಲು ಬಂದ ಬೆಕ್ಕಣ್ಣ..!

100 ರೂಪಾಯಿ ಲಂಚದ ದೃಶ್ಯ ಕ್ಯಾಮರಾದಲ್ಲಿ ಸೆರೆ..!

ಟ್ರಾಫಿಕ್​ ಪೊಲೀಸ್​ ಕಾನ್ಸ್​ಟೇಬಲ್​​​​ ಪವನ್ ದ್ಯಾಮಣ್ಣನವರ್ ಬೈಕ್​ ಸವಾರನ ಜೊತೆಗೆ ಮಾತನಾಡುವುದು, 100 ರೂಪಾಯಿ ಲಂಚ ಪಡೆಯುವುದು, ಆ ಬಳಿಕ ಮೊಬೈಲ್​ ಕಿತ್ತುಕೊಳ್ಳುವ ಯತ್ನ ಮಾಡಿರುವುದು ಎಲ್ಲವೂ ಮೊಬೈಲ್​ನಲ್ಲಿ ಸೆರೆಯಾಗಿತ್ತು. ಪೊಲೀಸ್​ ಕಾನ್ಸ್​ಟೇಬಲ್​ ಲಂಚ ಸ್ವೀಕಾರ ಮಾಡುವ ವಿಚಾರವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಲಾಗಿತ್ತು. ಬೆಂಗಳೂರು ಪೊಲೀಸರಿಗೂ ಟ್ಯಾಗ್​ ಮಾಡಲಾಗಿತ್ತು. ಈ ಬಗ್ಗೆ ತನಿಖೆಗೆ ಆದೇಶ ಮಾಡಿದ್ದ ಸಂಚಾರಿ ಪೊಲೀಸ್​ ಆಯುಕ್ತ ಡಾ ಬಿ.ಆರ್​ ರವಿಕಾಂತೇಗೌಡ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಸಾವಿರಾರು ಲಂಚ ಹೊಡೆಯುವ ಪೊಲೀಸರ ನಡುವೆ 100 ರೂಪಾಯಿಗೆ ಕೈಚಾಚಿ ಅಮಾನತು ಆಗಿದ್ದಾರೆ ಕಾನ್ಸ್​​ಟೇಬಲ್​ ಪವನ್ ದ್ಯಾಮಣ್ಣನವರ್.

ಪೊಲೀಸರಿಗೆ ಈ ಘಟನೆ ಎಚ್ಚರಿಕೆ ಗಂಟೆ..!

ಸಮಾಜದಲ್ಲಿ ಈಗ ಎಲ್ಲರ ಕೈಯ್ಯಲ್ಲೂ ಮೊಬೈಲ್​ಗಳು ಇರುವ ಕಾರಣ ಪೊಲೀಸರು ಸೇರಿದಂತೆ ಅಧಿಕಾರಿಗಳು ಮಾಡುವ ಅನಾಚಾರದ ಸಾಕ್ಷಿಯನ್ನು ಸಂಗ್ರಹ ಮಾಡುವುದು ಸುಲಭ. ಮಾಧ್ಯಮಗಳೇ ಭ್ರಷ್ಟಾಚಾರವನ್ನು ಪ್ರಶ್ನೆ ಮಾಡಬೇಕು ಎನ್ನುವ ಕಾಲ ಈಗಿಲ್ಲ. ಮಾಧ್ಯಮಕ್ಕೆ ಇರುವ ಶಕ್ತಿ ಸಾರ್ವಜನಿಕರಿಗೆ ಇರುವ ಶಕ್ತಿ ಎರಡೂ ಒಂದೇ. ಸೂಕ್ತ ಸಾಕ್ಷಿ ಇಟ್ಟುಕೊಂಡು ಯಾರನ್ನು ಬೇಕಿದ್ದರೂ ಪ್ರಶ್ನೆ ಮಾಡಬಹುದು. ಇಲ್ಲವೇ ತನ್ನಷ್ಟಕ್ಕೆ ತಾನು ಭ್ರಷ್ಟಾಚಾರವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಬಹುದು. ಕಂಡ ಕಂಡಲ್ಲಿ ಕೈ ಚಾಚುವ ಪೊಲೀಸರೇ ಇನ್ಮುಂದೆ ಈ ರೀತಿಯ ಪ್ರಕರಣಗಳು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಕಾರಣ ಸಾರ್ವಜನಿಕರ ಜೊತೆಗೆ ನೀವು ನಡೆದುಕೊಳ್ಳುವ ರೀತಿಯೂ ಒಂದು ಎಂದರೆ ಸುಳ್ಳಲ್ಲ.

Related Posts

Don't Miss it !