ಸಕ್ಕರೆ ಕಾಯಿಲೆಗೆ ನಾಟಿ ಔಷಧಿ, ಕುತ್ತಿಗೆ ಕೊಯ್ದು ಬಂಗಾರ ಕದ್ದ ಬಿಹಾರಿ..!

ಸಕ್ಕರೆ ಕಾಯಿಲೆ ಬೆಂಗಳೂರಿನಂತಹ ನಗರ ವಾಸಿಗಳಿಗೆ ಸಿಗುವ ವಿಶೇಷ ಉಡುಗೊರೆ ಅಂದ್ರೆ ಸುಳ್ಳಲ್ಲ. ಸೂರ್ಯನ ಬಿಸಿಲನ್ನೇ ಕಾಣದ, ಮನೆಯಿಂದ ಕಚೇರಿಗೆ ಕಚೇರಿಯಿಂದ ಮನೆಗೆ ವಾಹನದಲ್ಲಿ ಸುತ್ತಾಡುವ, ಕಲುಷಿತ ಗಾಳಿ ಸೇವನೆ ಮಾಡಿಕೊಂಡು ಬೆಂಗಳೂರಿನಲ್ಲಿ ಇರುವುದೇ ಹೆಮ್ಮೆಯ ಸಂಗತಿ ಎಂದು ಬದುಕುತ್ತಿರುವ ಜನರಿಗೆ ಸಕ್ಕರೆ ಕಾಯಿಲೆ ಅರ್ಥಾತ್​ ಮಧುಮೇಹ, ಶುಗರ್​​ ಎಂಬುದು ಕೂಡ ಹೆಮ್ಮೆಯ ಸಂಗತಿ. ಆದರೆ ಈ ರೀತಿಯ ಸಕ್ಕರೆ ಕಾಯಿಲೆಯಿಂದ ಬಳಲುವ ಜನರು ಸಕ್ಕರೆ ಕಾಯಿಲೆ ಗುಣ ಮಾಡಿಕೊಳ್ಳಲು ಯಾವುದೇ ಔಷಧಿ ಬಗ್ಗೆ ಹೇಳಿದರೂ ಪ್ರಯೋಗ ಮಾಡುವುದು ಕೂಡ ಸಾಮಾನ್ಯವಾಗಿದೆ. ಸಕ್ಕರೆ ಕಾಯಿಲೆ ಒಮ್ಮೆ ದೇಹಕ್ಕೆ ಬಂದ ಬಳಿಕ ನಿಯಂತ್ರಣ ಮಾಡುವುದಕ್ಕೇ ಮಾತ್ರ ಅವಕಾಶವಿದೆ. ಅದು ಶಿಸ್ತುಬದ್ದ ಆಹಾರ ಹಾಗೂ ಶಿಸ್ತುಬದ್ಧ ಜೀವನ ಕ್ರಮ. ಅದನ್ನು ಬಿಟ್ಟು ಬೇರೆ ಯಾವುದೇ ಔಷಧ, ಸಕ್ಕರೆ ಕಾಯಿಲೆಯನ್ನು ಗುಣಪಡಿಸುವುದಕ್ಕೆ ಸಾಧ್ಯವೇ ಇಲ್ಲ. ಆದರೂ ನಾಟಿ ಔಷಧಿ ತೆಗೆದುಕೊಳ್ಳಲು ಹೋದ ಮಹಿಳೆಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ; ಸಿದ್ದರಾಮಯ್ಯ ಭೇಟಿ ಮಾಡಿದ ಜೆಡಿಎಸ್ ಶಾಸಕ..! ಪಕ್ಷ ಬಿಡುವ ಬಗ್ಗೆ ಗುಸುಗುಸು..!

ಬೆಂಗಳೂರಿನಲ್ಲೂ ಇದ್ದಾರೆ ಖತರ್ನಾಕ್​ ನಾಟಿ ವೈದ್ಯರು..!

ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೂ ಸ್ಥಾನವಿದೆ. ಅಂದ ಮೇಲೆ ವೈಜ್ಞಾನಿಕವಾಗಿ ವೈದ್ಯಕೀಯ ಲೋಕ ಬೃಹತ್​ ಉದ್ಯಮವಾಗಿ ಬೆಳೆದು ನಿಂತಿದೆ. ಈ ನಡುವೆ ಬೆಂಗಳೂರಿನಂತಹ ನಗರದಲ್ಲೂ ನಾಟಿ ಔಷಧಿ ಪಡೆಯುವ ಜನರ ಸಂಖ್ಯೆಯೂ ಕಡಿಮೆ ಏನಿಲ್ಲ. ಇದೇ ರೀತಿ ಸಕ್ಕರೆ ಕಾಯಿಲೆಗೆ ಔಷಧಿ ಪಡೆಯಲು ಹೋಗಿದ್ದ ಮಹಿಳೆ ಕಳೆದ ಶುಕ್ರವಾರ ಹೆಣವಾಗಿ ಹೋಗಿದ್ದರು. ಕುತ್ತಿಗೆಯಲ್ಲಿ ಹಾಕಿದ್ದ 60 ಗ್ರಾಂ ಚಿನ್ನದ ಸರಕ್ಕಾಗಿ ಪರಿಚಿತ ನಾಟಿ ವೈದ್ಯನೇ ಕೊಲೆ ಮಾಡಿದ್ದ. ಯಲಹಂಕದ ಕಟ್ಟಿಗೇನಹಳ್ಳಿ ನಿವಾಸಿ ಸಿದ್ದಮ್ಮ, ಹಾಡಹಗಲೇ ಹೆಣವಾಗಿ ಹೋಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಂದು ವಾರದೊಳಗೆ ಆರೋಪಿಗೆ ಕೋಳ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. 50 ವರ್ಷದ ಸಿದ್ದಮ್ಮನ ಹತ್ಯೆ ಮಾಡಿ ಚಿನ್ನದ ಸರ ಕಳವು ಮಾಡಿ ಓಡಿ ಹೋಗಿದ್ದ ನಾಟಿ ವೈದ್ಯ ಸಲೀಂ ಎಂಬಾತನನ್ನು ಬಂಧಿಸಿದ್ದಾರೆ. ಈತನಿಂತ ಚಿನ್ನದ ಸರ ಖರೀದಿ ಮಾಡಿದ್ದ ಇನ್ನಿಬ್ಬರನ್ನೂ ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಇದನ್ನೂ ಓದಿ: ಸುಂದರ ಸಂಸಾರವನ್ನು ಸುಟ್ಟು ಹಾಕಿತೇ ಐಶಾರಾಮಿ ಬದುಕಿನ ಕನಸು..!?

ಹೊಟ್ಟೆ, ಬಟ್ಟೆಗಾಗಿ ಬೆಂಗಳೂರಿಗೆ ಬಂದಿದ್ದ ಬಿಹಾರಿ..!!

ಕರ್ನಾಟಕದ ಹಳ್ಳಿ ಪ್ರದೇಶದಿಂದ ಪಟ್ಟಣಕ್ಕೆ ಬಂದು ಬದುಕು ಕಟ್ಟಿಕೊಳ್ಳುವುದು ಸಾಮಾನ್ಯ. ಅದೇ ರೀತಿ ಸಾಕಷ್ಟು ಜನರು ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಮನೆ ಮಾಡಿಕೊಂಡು ನೆಲೆಸುವುದುಂಟು. ಇದೇ ರೀತಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಬಂದಿದ್ದ ಬಿಹಾರಿ ಸಲೀಂ, ಸಕ್ಕರೆ ಕಾಯಿಲೆಗೆ ನಾಟಿ ಔಷಧಿ ಕೊಡ್ತೇನೆ ಎನ್ನುವ ವ್ಯವಹಾರ ಶುರು ಮಾಡಿದ್ದ. 20 ವರ್ಷದಿಂದ ಗಾರೆ ಹೊರುವ ಕೆಲಸ ಮಾಡ್ತಿದ್ದ ಸಲೀಂ, ಹಾಗೂ ಆತನ ಪತ್ನಿ, ಕಳೆದ ನಾಲ್ಕೈದು ವರ್ಷಗಳಿಂದ ನಾಟಿ ವೈದ್ಯನಾಗಿ ಬದಲಾಗಿದ್ದರು. ನಾಟಿ ಔಷಧಿ ತೆಗೆದುಕೊಳ್ಳಲು ಬಂದಿದ್ದ ಸಿದ್ದಮ್ಮರನ್ನು ಮನೆ ಒಳಕ್ಕೆ ಕರೆದು ಕೊಲೆ ಮಾಡಿ 60 ಗ್ರಾಂ ಚಿನ್ನದ ಸರ, ಕಿವಿಯ ಓಲೆ, ಬೆಳ್ಳಿ ಕಾಲು ಚೈನು ತೆಗೆದುಕೊಂಡು ಪರಾರಿ ಆಗಿದ್ದ. ಆರೋಪಿ ಮನೆಯ ಪಕ್ಕದ ರಸ್ತೆಯ ಮಹಿಳೆ ಆಗಿದ್ದರಿಂದ ಕೊಲೆ ಪಾತಕರಿಗೆ ಪೊಲೀಸರು ಸರಳವಾಗಿಯೇ ಬಲೆ ಬೀಸಿದ್ದರು.

ಕೊಲೆ ವಿಚಾರ ಬೆಳಕಿಗೆ ಬಂದಿದ್ದೇ ಸಲೀಂ ಪತ್ನಿಯಿಂದ..!

ನಾಟಿ ವೈದ್ಯ ಸಲೀಂ ಕೊಲೆ ಮಾಡಿ ಚಿನ್ನವನ್ನು ಕಿತ್ತುಕೊಂಡು ಎಸ್ಕೇಪ್​ ಆಗಿದ್ದ. ಆದರೆ ಕೊಲೆ ವಿಚಾರ ಬಹಿರಂಗ ಆಗಿದ್ದೇ ಸಲೀಂ ಪತ್ನಿಯಿಂದ. ಕೆಲಸಕ್ಕೆ ಹೋಗಿದ್ದ ಸಲೀಂ ಪತ್ನಿ ಮನೆಗೆ ವಾಪಸ್​ ಬಂದಾಗ ಕೊಲೆ ನಡೆದಿರುವುದು ಬಹಿರಂಗ ಆಗಿತ್ತು. ಸಲೀಂ ಇಲ್ಲದಿರುವುದರ ಬಗ್ಗೆ ಮಾಹಿತಿ ಪಡೆದ ಯಲಹಂಕ ಪೊಲೀಸರು ಸಲೀಂಗಾಗಿ ಹುಡುಕಾಟ ನಡೆಸಿದ್ದರು. ಅಷ್ಟರಲ್ಲಿ ಸಲೀಂ, ಬಿಹಾರದ ಅಂಗಡಿ ಒಂದರಲ್ಲಿ ಅಡವಿಟ್ಟು 3 ಲಕ್ಷ ಹಣವನ್ನು ಪಡೆದಿದ್ದ ವಿಚಾರ ಪೊಲೀಸರಿಗೆ ಸಿಕ್ಕಿತ್ತು. ನೇರವಾಗಿ ಕೊಲೆ ಆರೋಪಿ‌ ಸಲೀಂ ಜೊತೆಗೆ ಅಂಗಡಿ ಮಾಲೀಕರಾದ ಬವರ್ ಲಾಲ್ ಮತ್ತು ಕೈಲಾಶ್ ಎಂಬಾತರನ್ನೂ ಪೊಲೀಸರು ಬಂಧಿಸಿದ್ದಾರೆ. ಆದರೆ ಸಲೀಂ ಚಿನ್ನದ ಸರ ಕಳವು ಮಾಡಿದ್ದು ಯಾಕೆ..? ಹಣಕ್ಕಾಗಿ ಕೊಲೆ ಮಾಡಿದ್ದರೆ ಪತ್ನಿ ಜೊತೆಗೆ ಎಸ್ಕೇಪ್​ ಆಗಬೇಕಿತ್ತಲ್ಲ..! ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೂ ಗಾರೆ ಕೆಲಸದ ಬಿಹಾರಿ ಸಲೀಂ, ಪರಿಚಯಸ್ಥ ಮಹಿಳೆ ಕುತ್ತಿಗೆಗೆ ಕತ್ತಿ ಇಟ್ಟಿದ್ದು ಮಾತ್ರ ವಿಪರ್ಯಾಸ.

ನೀತಿ: ಹಣವೆಂಬ ದುರಾಸೆ ಏನನ್ನು ಬೇಕಾದರೂ ಮಾಡಿಸುತ್ತದೆ. ಒಳ್ಳೆಯವರೇ ಕೆಟ್ಟವರಾಗ್ತಾರೆ..

ಕಮೆಂಟ್ ಮಾಡಿ ನಿಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರಾದ ನೀವೇ ನಮ್ಮ ಮಾರ್ಗದರ್ಶಕರು

Related Posts

Don't Miss it !