ಐಶಾರಾಮಿ ಬಂಗಲೆಯ ಐದು ಸಾವು..! 5 ದಿನ ಹೆಣಗಳ ಜೊತೆಗೆ ಒಂಟಿ ಮಗು..!!

ಬೆಂಗಳೂರು ಭೀಕರ ಘಟನೆಗೆ ಸಾಕ್ಷಿಯಾಗಿದೆ. ಅಂದಾಜು 5 ದಿನಗಳ ಹಿಂದೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಂಭತ್ತು ತಿಂಗಳ ಗಂಡು ಮಗುವೊಂದು ಆಹಾರ ಇಲ್ಲದೆ ರೋಧಿಸುತ್ತಲೇ ಸಾವನ್ನಪ್ಪಿದೆ. ಮೂರಂತಸ್ತಿನ ಭವ್ಯ ಬಂಗಲೆಯ ಒಂದೊಂದು ರೂಮಲ್ಲೂ ಒಂದೊಂದು ಹೆಣಗಳು ನೇತಾಡುವ ವಿಚಾರ ತಿಳಿದು ಇಡೀ ಬೆಂಗಳೂರಿಗರೇ ಬೆಚ್ಚಿ ಬಿದ್ದಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಪತ್ರಿಕೆಯ ಪತ್ರಕರ್ತ ಹಲ್ಲಗೇರಿ ಶಂಕರ್ ಎಂಬುವರ ಪತ್ನಿ 50 ವರ್ಷದ ಭಾರತಿ, ಹೆಣ್ಣು ಮಕ್ಕಳಾದ 33 ವರ್ಷದ ಸಿಂಚನಾ, 30 ವರ್ಷದ ಸಿಂಧೂರಾಣಿ ಹಾಗೂ 26 ವರ್ಷದ ಮಗ ಮಧು ಸಾಗರ್​ ಸಾವನ್ನಪ್ಪಿದ್ದಾರೆ. ಆತ್ಮಹತ್ಯೆ ಎನಿಸಿದರೂ ಸಾಕಷ್ಟು ಅನುಮಾನಗಳು ಸೃಷ್ಟಿಯಾಗುತ್ತಿವೆ.

5 ಹೆಣಗಳ ಜೊತೆಗೆ 5 ದಿನದ ಜೀವನ..!

ನಾಲ್ವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈಗಾಗಲೇ ಶವಗಳು ಕೊಳೆತಿವೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಹೆಣಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದ್ದು, ಕೊಲೆಯೋ..? ಆತ್ಮಹತ್ಯೆಯೋ..? ಎನ್ನುವುದು ಮರಣೋತ್ತರ ಪರೀಕ್ಷೆ ವರದಿ ಬಳಿಕ ಗೊತ್ತಾಗಬೇಕಿದೆ. ಆದರೆ, 5 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಮೂರು ವರ್ಷದ ಹೆಣ್ಣು ಮಗು ಪ್ರೇಕ್ಷಾ ಅನ್ನ ಆಹಾರವಿಲ್ಲದಿದ್ದರೂ 5 ದಿನಗಳ ಕಾಲ ಶವಗಳ ಜೊತೆಯಲ್ಲೇ ಬದುಕಿ ಉಳಿದಿದೆ. ಸಾವಿನ ಶಾಕ್​ಗೆ ಒಳಗಾಗಿದ್ದ ಹೆಣ್ಣು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಪತ್ರಕರ್ತ ಹಲ್ಲಗೇರಿ ಶಂಕರ್ ಹೇಳುತ್ತಿರುವ ಹೇಳಿಕೆಗಳೂ ಆತ್ಮಹತ್ಯೆ ಬಗ್ಗೆ ಅನುಮಾನ ಸೃಷ್ಟಿಗೆ ಕಾರಣವಾಗಿದೆ.

Read this also;

ಆರ್ಥಿಕ ಸಮಸ್ಯೆ ಇಲ್ಲ ಎನ್ನುತ್ತಿದೆ ಭವ್ಯ ಬಂಗೆಲೆ..!

ಕೋಟಿ ಕೋಟಿ ವೆಚ್ಚ ಮಾಡಿ ಮೂರಂತ್ತಸ್ಥಿನ ಕಟ್ಟಡ ಹಲ್ಲಗೇರಿ ಶಂಕರ್ ಅವರ ಶ್ರೀಮಂತಿಕೆಯನ್ನು ಸಾರಿ ಹೇಳುತ್ತಿದೆ. ಆದರೆ ಮೊದಲ ಮಗಳು ಸಿಂಚನಾ ಗಂಡನ ಮನೆಯಲ್ಲಿ ಜಗಳ ಮಾಡಿಕೊಂಡು ಅಪ್ಪನ ಮನೆ ಸೇರಿದ್ದಳು. ಗಂಡ ಬೇರೆ ಮನೆ ಮಾಡುವ ತನಕ ನಾನು ತವರಲ್ಲೇ ಉಳಿಯುತ್ತೇನೆ ಎಂದಿದ್ದಳು. ಹಲ್ಲಗೇರಿ ಶಂಕರ್ ಎಷ್ಟು ಬಾರಿ ಬುದ್ಧಿವಾದ ಹೇಳಿದ್ದರೂ ಕೇಳಿರಲಿಲ್ಲ. ಇದೇ ಕಾರಣದಿಂದ ಕುಟುಂಬದಲ್ಲಿ ಜಗಳ ನಡೆದಿತ್ತು. ಜಗಳದ ಬಳಿಕ ಮನೆ ಬಿಟ್ಟು ಹೋಗಿದ್ದ ಹಲ್ಲಗೇರಿ ಶಂಕರ್, ನಾಲ್ಕು ದಿನ ಬಿಟ್ಟು ವಾಪಸ್​ ಬಂದಿದ್ದರು. ಆದರೆ ಮನೆಯವರೆಲ್ಲಾ ಸಂಬಂಧಿಕರ ಮನೆಗೆ ಹೋಗಿರಬಹುದು ಎಂದು ತಿಳಿದು ವಾಪಸ್​ ಆಗಿದ್ದರು ಎನ್ನಲಾಗಿದೆ. ಆದರೆ, ಮನೆ ಬಳಿಗೆ ಬಂದಾಗ ಯಾರೂ ಇಲ್ಲ ಎನ್ನುವುದು ದಿಳಿದ ಮೇಲೂ ಒಂದು ದಿನ ಕಳೆದಿದ್ದು ಹೇಗೆ ಎನ್ನುವುದಕ್ಕೆ ಉತ್ತರ ಸಿಕ್ಕಿಲ್ಲ.

ಸಾಯುವ ಮುನ್ನ ಹಾಲು ಕುಡಿಸಿದ್ದ ಕಂದ ಸಾವು..!

ಸಿಂಧೂರಾಣಿ ಸಾಯುವ ಮುನ್ನ ಮಗುವಿಗೆ ಹಾಲುಣಿಸಿ ಮಲಗಿಸಿದ್ದಾರೆ. ಮಂಚದ ಮೇಲೆ ಮಲಗಿದ್ದ 9 ತಿಂಗಳ ಗಂಡು ಮಗು ಎದ್ದು ಹಸಿವಿನಿಂದ ಒದ್ದಾಡಿದೆ. ಆದರೆ ತಾಯಿ ಸತ್ತಿರುವ ಸುದ್ದಿ ತಿಳಿಯುವ ಸಾಧ್ಯತೆಗಳೇ ಇಲ್ಲದೆ ಬಿಕ್ಕಳಿಸಿ ಅಳುತ್ತಲೇ ಮಂಚದ ಮೇಲೆಯೇ ಪ್ರಾಣ ಬಿಟ್ಟಿತ್ತು ಮಗು. 3 ವರ್ಷದ ಕಂದಮ್ಮ ಪ್ರೇಕ್ಷಾ ಕೂಡ ಸಾವುಗಳನ್ನು ಕಂಡು ಶಾಕ್​ಗೆ ಒಳಗಾಗಿದ್ದರಿಂದ ಯಾವುದೇ ಸಹಾಯ ಮಾಡಲಿಲ್ಲ. ಮೂರು ಅಂತಸ್ಥಿನ ಕಟ್ಟಡದಲ್ಲಿ ಸಾಕಷ್ಟು ರೂಮುಗಳಿದ್ದು, ಎಲ್ಲರೂ ತಮ್ಮ ತಮ್ಮ ರೂಮಿನಲ್ಲೇ ಸಾವನ್ನಪ್ಪಿದ್ದರು ಎನ್ನಲಾಗಿದ್ದು, ಮೂರು ವರ್ಷದ ಹೆಣ್ಣು ಮಗು ದಿಕ್ಕು ತೋಚದಂತಾಗಿ ಕಿರುಚಾಡಿದರೂ ಇಡೀ ಬಂಗಲೆಗೆ ಸೌಂಡ್ ಫ್ರೂಫ್ ಹಾಕಿಸಿದ್ದ ಕಾರಣ ಯಾರಿಗೂ ಶಬ್ಧ ಕೇಳಿಸಿಲ್ಲ. ಅನಿವಾರ್ಯವಾಗಿ ಕೊಳೆತ ಹೆಣದ ವಾಸನಯಲ್ಲೇ ನೀರೂ ಕುಡಿಯದೆ ಪ್ರೇಕ್ಷಾ ಬದುಕಿದ್ದು ಅಚ್ಚರಿಯ ವಿಚಾರವಾಗಿದೆ.

ಸಿಂಚನಾ, ಭಾರತಿ, ಸಿಂಧೂರಾಣಿ, ಪ್ರೇಕ್ಷಾ, ಶಂಕರ್, ಮಧು ಸಾಗರ್

Read this also;

ನಾಮಕರಣ ವಿಚಾರದಲ್ಲೂ ಆಗಿತ್ತಂತೆ ಗಲಾಟೆ..!

2ನೇ ಮಗಳು ಸಿಂಧೂರಾಣಿ ಮಗು 9 ತಿಂಗಳ ಮಗುವಿನ ತಾಯಿಯಾಗಿದ್ದು, ತವರಿನಲ್ಲಿ ಬಾಣಂತನ ಮುಗಿಸಿ ಗಂಡನ ಮನೆಗೆ ಹೋಗಬೇಕಿತ್ತು. ನಾಮಕರಣ ಮಾಡುವ ವಿಚಾರದಲ್ಲೂ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು ಎನ್ನುವುದು ತಿಳಿದು ಬಂದಿದೆ. ಇನ್ನೊಂದು ಮೂಲಗಳ ಪ್ರಕಾರ MSILನಲ್ಲಿ ಹಾಕಿದ್ದ ಚೀಟಿ ಹಣ 10 ಲಕ್ಷ ರೂಪಾಯಿ ಇತ್ತು. ಆ ಹಣಕ್ಕಾಗಿ ಕುಟುಂಬಸ್ಥರಲ್ಲಿ ಜಗಳ ಸೃಷ್ಟಿಯಾಗಿತ್ತು. ಶಂಕರ್ ಒಂದು ಕಡೆ ಆದ್ರೆ ಇಡೀ ಕುಟುಂಬ ಮತ್ತೊಂದು ಕಡೆ ಆಗಿತ್ತು. ಕಳೆದ ಭಾನುವಾರ ಸಂಜೆ ಕೂಡ ಕುಟುಂಬಸ್ಥರ ನಡುವೆ ಗಲಾಟೆ ಆಗಿತ್ತು ಎನ್ನಲಾಗಿದೆ. ಕಳೆದ 5 ದಿನಗಳಿಂದ ಆಫೀಸ್​ನಲ್ಲಿ ಇದ್ದೆ ಎಂದು ಒಮ್ಮೆ ಹೇಳಿದ್ರೆ ಇನ್ನೊಮ್ಮೆ ಮೈಸೂರಲ್ಲಿ ಆಸ್ಪತ್ರೆಗೆ ಹೋಗಿದ್ದೆ ಎಂದಿದ್ದಾರೆ. ಪೊಲೀಸರ ಎದುರು ಶಂಕರ್ ದ್ವಂಧ್ವ ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ಪೊಲೀಸರಿಗೆ ಅನುಮಾನಗಳು ಶುರುವಾಗಿದ್ದು, ಶಂಕರ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Related Posts

Don't Miss it !