ಶಾಸಕಾಂಗ ಸಭೆಗೂ ಮುನ್ನ ಸಿಎಂ ಪಟ್ಟಕ್ಕೆ ಭಾರೀ ಕಸರತ್ತು! ಗೆಲ್ತಾರಾ ಯಡಿಯೂರಪ್ಪ..!

ಬೆಂಗಳೂರಿನ ಕ್ಯಾಪಿಟಲ್​ ಹೋಟೆಲ್​ನಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಯುತ್ತಿದೆ. ಸಿಎಂ ಯಾರು ಎಂಬುದನ್ನು ಆಯ್ಕೆ ಮಾಡುವ ಸಲುವಾಗಿ ಬಿಜೆಪಿ ಶಾಸಕರು, ಸಂಸದರ ಸಭೆ ಕರೆಯಲಾಗಿದೆ. ಈ ನಡುವೆ ಬಿ.ಎಲ್​ ಸಂತೋಷ್​ ಆಯ್ಕೆ ಮಾಡಿರುವ ಬಿಜೆಪಿ ಹೈಕಮಾಂಡ್​ ಶಾಸಕರ ವಿರೋಧ ಎಷ್ಟು ಪ್ರಮಾಣದಲ್ಲಿ ವ್ಯಕ್ತವಾಗಲಿದೆ ಎನ್ನುವುದನ್ನು ಕಾದು ನೋಡ್ತಿದೆ. ಒಂದು ವೇಳೆ ಬಿ.ಎಲ್​ ಸಂತೋಷ್​ ಸಿಎಂ ಆಗುವುದಕ್ಕೆ ಬಿಜೆಪಿ ಶಾಸಕರಲ್ಲಿ ತೀವ್ರ ವಿರೋಧ ಕಂಡು ಬಂದರೆ ಸಂಘ ಪರಿವಾರದ ನಾಯಕ ಅರವಿಂದ್​ ಬೆಲ್ಲದ್​ರನ್ನು ಸಿಎಂ ಮಾಡಲು ಬಿಜೆಪಿ ಹೈಕಮಾಂಡ್​ ತಯಾರಿದೆ. ಆದರೆ ಹಂಗಾಮಿ ಸಿಎಂ ಆಗಿರುವ ಬಿ.ಎಸ್​ ಯಡಿಯೂರಪ್ಪ ಮಾತ್ರ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.

ಲಿಂಗಾಯತ ಪ್ಲೇ ಕಾರ್ಡ್​ ಚಾಲ್ತಿಗೆ ಬಿಟ್ಟ ಬಿಎಸ್​ವೈ..!

ಲಿಂಗಾಯತ ಸಮುದಾಯ ಬಿಜೆಪಿಗೆ ಒಮ್ಮತದ ಬೆಂಬಲ ನೀಡಿದೆ. ಈಗ ನಾನು ರಾಜೀನಾಮೆ ನೀಡಿರುವ ಕಾರಣ ಲಿಂಗಾಯತ ಸಮುದಾಯಕ್ಕೆ ಕೊಂಚ ಬೇಸರವಾಗಿದೆ. ಆ ಸಮುದಾಯದ ನೋವನ್ನು ಮರೆ ಮಾಚುವ ಉದ್ದೇಶ ನಿಮ್ಮದಾಗಿದ್ದರೆ ಈಗಾಗಲೇ ಅನುಭವ ಹೊಂದಿರುವ ಸೌಮ್ಯ ಸ್ವಭಾವದ ನಾಯಕ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಬೇಕು ಎಂದು ಹಠ ಹಿಡಿದಿದ್ದಾರೆ ಎನ್ನಲಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಕಾವೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದ ವೇಳೆಯೂ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಬೇಕು. ಇಲ್ಲದಿದ್ದರೆ ಮುಂದೆ ನಡೆಯಬಹುದಾದ ಘಟನೆಗಳಿಗೆ ನನ್ನನ್ನು ಹೊಣೆ ಮಾಡುವಂತಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎನ್ನಲಾಗಿದೆ.

ಬೊಮ್ಮಾಯಿ ಅವರನ್ನು ಸಿಎಂ ಮಾಡದಿದ್ದರೆ ಶಾಸಕರನ್ನು ನಿಯಂತ್ರಣ ಮಾಡುವುದು ಕಷ್ಟ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿರುವ ಯಡಿಯೂರಪ್ಪ, ಹೈಕಮಾಂಡ್​ ಮುಂದೆ ಮಂಡಿಯೂರಿದರೂ ತನ್ನ ಆಪ್ತರನ್ನೇ ಸಿಎಂ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುತ್ತಿದೆ ಬಿ.ಎಸ್​ ಯಡಿಯೂರಪ್ಪ ಆಪ್ತ ಮೂಲಗಳು. ಇದಕ್ಕೆ ಸಾಕ್ಷಿ ಎನ್ನುವಂತೆ ಶಾಸಕಾಂಗ ಸಭೆಗೂ ಮುನ್ನ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಬಸವರಾಜ ಬೊಮ್ಮಾಯಿಗೆ ಯಡಿಯೂರಪ್ಪ ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ. ವೀಕ್ಷಕರಾಗಿ ಬಂದಿರುವ ಧರ್ಮೇಂದ್ರ ಪ್ರಧಾನ್​ ಕೂಡ ಬೊಮ್ಮಾಯಿ ಜೊತೆಗೆ ಖುಷಿ ಖುಷಿಯಿಂದ ಮಾತನಾಡುತ್ತಿರುವ ಫೋಟೋ ಹೊರಬಂದಿದ್ದು, ಶಾಸಕಾಂಗ ಸಭೆಯಲ್ಲಿ ಎಲ್ಲಾ ಶಾಸಕರು ಬಸವರಾಜ ಬೊಮ್ಮಾಯಿ ಬೆಂಬಲಿಸಬೇಕು ಎಂದು ವಿಜಯೇಂದ್ರ ಸೂಚಿಸಿದ್ದಾರೆ ಎನ್ನಲಾಗಿದೆ.

Related Posts

Don't Miss it !