ಬಸವರಾಜ ಬೊಮ್ಮಾಯಿ ನೂತನ ಸಿಎಂ, ಹೈಕಮಾಂಡ್​ ಆಟಕ್ಕೆ BSY ಬ್ರೇಕ್​..!

ರಾಜ್ಯದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷ ಅನುಮೋದನೆ ಮಾಡಿದೆ. ಸ್ವತಃ ಬಿ.ಎಸ್​ ಯಡಿಯೂರಪ್ಪ ಶಾಸಕಾಂಗ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಪ್ರಸ್ತಾವನೆ ಮಾಡಿದ್ದು, ಮಾಜಿ ಸಚಿವ ಗೋವಿಂದ ಕಾರಜೋಳ ಅನುಮೋದನೆ ಮಾಡಿದ್ದಾರೆ. ಇಡೀ ಸಭೆ ಚಪ್ಪಾಳೆ ತಟ್ಟುವ ಮೂಲಕ ಬಸವರಾಜ ಬೊಮ್ಮಾಯಿ ಅವರ ಆಯ್ಕೆಯನ್ನು ಒಮ್ಮತದಿಂದ ಒಪ್ಪಿಗೆ ಸೂಚಿಸಿದೆ.

ಸೋತು ಗೆದ್ದ ಯಡಿಯೂರಪ್ಪ, ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ..!

ಆರ್​ಎಸ್​ಎಸ್​ ಹಿನ್ನೆಲೆ ಇರುವ ನಾಯಕರನ್ನು ಸಿಎಂ ಮಾಡಬೇಕು ಎನ್ನುವ ಉದ್ದೇಶದಿಂದಲೇ ಬಿಜೆಪಿ ಹೈಕಮಾಂಡ್​ ಸಿಎಂ ಬದಲಾವಣೆ ಮಾಡುವ ಉದ್ದೇಶ ಹೊಂದಿತ್ತು. ಅದೇ ಕಾರಣದಿಂದ ಬಿ.ಎಲ್​ ಸಂತೋಷ್​ ಅಥವಾ ಪ್ರಹ್ಲಾದ್​ ಜೋಷಿ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಬಿ.ಎಲ್​ ಸಂತೋಷ್​ ದೆಹಲಿಯಿಂದ ಬೆಂಗಳೂರಿಗೂ ಬಂದಿದ್ದರು. ಆದರೆ ಅಂತಿಮವಾಗಿ ಹಠ ಹಿಡಿದ ಬಿ.ಎಸ್​ ಯಡಿಯೂರಪ್ಪ, ತನ್ನ ಹಿಂಬಾಲಕನ್ನನ್ನೇ ಸಿಎಂ ಮಾಡುವ ಮೂಲಕ ಹೈಕಮಾಂಡ್​ ಎದುರು ಸಡ್ಡು ಹೊಡೆದು ನಿಂತಿದ್ದಾರೆ. ಜಟ್ಟಿ ಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಗಾಧೆ ಮಾತಿನಂತೆ ಹೈಕಮಾಂಡ್​ ಒತ್ತಡಕ್ಕೆ ಸಿಲುಕಿ ಮುಖ್ಯಮಂತ್ರಿ ಕುರ್ಚಿ ಬಿಟ್ಟರೂ ತನ್ನ ಆಪ್ತನೇ ಅಧಿಕಾರಕ್ಕೆ ಏರುವಂತೆ ಮಾಡುವ ಮೂಲಕ ಅಧಿಕಾರ ಸ್ಥಾಪಿಸಿದ್ದಾರೆ.

ಬಿಎಸ್​ ಯಡಿಯೂರಪ್ಪಗೆ ಹೈಕಮಾಂಡ್​ ಮನ್ನಣೆ ಕೊಟ್ಟಿದ್ದು ಯಾಕೆ..?

ಬಿ.ಎಸ್​ ಯಡಿಯೂರಪ್ಪ ಅವರ ಆಪ್ತರನ್ನೇ ಸಿಎಂ ಮಾಡುವ ಉದ್ದೇಶ ಬಿಹೆಪಿ ಹೈಕಮಾಂಡ್​ಗೆ ಇದ್ದರೆ, ಬಿ.ಎಸ್​ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಆಗಿ ಮುಂದುವರಿಸಬಹುದಾಗಿತ್ತು. ಅದರಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿ ಆಪ್ತನಿಗೆ ಮಣೆ ಹಾಕಿದ್ದು ಯಾಕೆ ಎನ್ನುವ ಸಂಗತಿ ಎಲ್ಲರನ್ನೂ ಕಾಡುವುದು ಸಹಜ. ಇದಕ್ಕೆ ಲಿಂಗಾಯತ ಸಮುದಾಯ ತೋರಿದ ಒಗ್ಗಟ್ಟು ಕಾರಣ ಎನ್ನಲಾಗ್ತಿದೆ. ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಬಾರದು ಎಂದು ಸ್ವಾಮೀಜಿಗಳು ಒಕ್ಕೋರಲಿಂದ ಆಗ್ರಹ ಮಾಡಿದ್ದರು. ಆ ಬಳಿಕ ಯಡಿಯೂರಪ್ಪನನ್ನು ಕೆಟ್ಟದಾಗಿ ನಡೆಸಿಕೊಂಡರೆ ಬಿಜೆಪಿ ಸರ್ವನಾಶ ಆಗಲಿದೆ ಎಂದು ಸ್ವಾಮೀಜಿ ಒಬ್ಬರು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಬಿಎಸ್​ ಯಡಿಯೂರಪ್ಪಗೆ ಅಭಿಮಾನ ಮಾತ್ರ. ಬಿಜೆಪಿ ಬೇಕಿಲ್ಲ ಎನ್ನುವ ಪೋಸ್ಟ್​ಗಳು ಹೆಚ್ಚಾದವು. ಇದೆಲ್ಲಾ ಕಾರಣದಿಂದ ಬಸವರಾಜ ಬೊಮ್ಮಾಯಿ ಆಯ್ಕೆ ಮಾಡಲಾಗಿದೆ.

ಬಸವರಾಜ ಬೊಮ್ಮಾಯಿ ಸಿಎಂ ಆದರೆ ಬಿಎಸ್​ವೈ ಲಾಭವೇನು..?

ಬಸವರಾಜ ಬೊಮ್ಮಾಯಿ ಮಾಸ್​ ಲೀಡರ್​ ಅಲ್ಲ, ಯಾವುದೇ ಕೆಲಸ ಮಾಡುವುದಿದ್ದರೂ ಬಿ.ಎಸ್​ ಯಡಿಯೂರಪ್ಪ ಅವರನ್ನೇ ಕೇಳಿ ಮಾಡ್ತಾರೆ. ಯಡಿಯೂರಪ್ಪ ಮಾತಿಗೆ ಮನ್ನಣೆ ಇರಲಿದೆ. ಒಂದು ವೇಳೆ ಅರವಿಂದ್​ ಬೆಲ್ಲದ್​, ಮುರುಗೇಶ್​ ನಿರಾಣಿ, ಬಿ.ಎಲ್​ ಸಂತೋಷ್​ ಸಿಎಂ ಆಗಿದ್ದರೆ, ಯಡಿಯೂರಪ್ಪ ಕೇವಲ ಶಾಸಕನಾಗಿ ಇರಬೇಕಾಗಿ ಬರುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ಇದೀಗ ಬಸವರಾಜ ಬೊಮ್ಮಾಯಿ ಬಿ.ಎಸ್​ ಯಡಿಯೂರಪ್ಪನೆರಳಾಗಿ ಇದ್ದವರು. ಅದೇ ಕಾರಣದಿಂದ ಹೈಕಮಾಂಡ್​ ಬೇರೆಯವರನ್ನು ಡಿಸಿಎಂ ಮಾಡಿದರೂ ಎರಡನೇ ಸ್ಥಾನವಾದ ಗೃಹ ಸಚಿವ ಸ್ಥಾನ ಕೊಟ್ಟು ಜೊತೆಯಲ್ಲೇ ಇಟ್ಟುಕೊಳ್ಳುವ ಕೆಲಸ ಮಾಡಿದ್ದರು ಯಡಿಯೂರಪ್ಪ. ಇದೀಗ ಬಿಜೆಪಿ ಹೈಕಮಾಂಡ್​ಗೂ ಸಡ್ಡು ಹೊಡೆದು ಬಸವರಾಜ ಬೊಮ್ಮಾಯಿ ಸಿಎಂ ಆಗುವಂತೆ ಮಾಡಿದ್ದಾರೆ.

ನಾಳೆ 3.30ಕ್ಕೆ ಬಸವರಾಜ ಬೊಮ್ಮಾಯಿ ಪ್ರಮಾಣ ಸ್ವೀಕಾರ..!

ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಸೇರಿದಂತೆ ಹಲವಾರು ನಾಯಕರು ಶುಭಾಶಯ ಕೋರುತ್ತಿದ್ದಾರೆ. ಬುಧವಾರ 11 ಗಂಟೆಗೆ ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ. ಆದರೆ ಸಚಿವ ಸಂಪುಟ ವಿಸ್ತರಣೆ ಮಾಡ್ತಾರಾ..? ಅಥವಾ ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡ್ತಾರಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಈಗ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರಿಗೆ ಪ್ರಮಾಣ ವಚನ ಕಾರ್ಯಕ್ರಮದ ಬಗ್ಗೆ ಮನವಿ ಮಾಡಲಿದ್ದಾರೆ.

Related Posts

Don't Miss it !