ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ಸ್ವೀಕಾರ..! ಇವರೆಲ್ಲಾ ಗೈರು ಹಾಜರಿ..

ರಾಜ್ಯದ 30ನೇ ಮುಖ್ಯಮಂತ್ರಿ ಆಗಿ ಶಿಗ್ಗಾಂವಿ ಕ್ಷೇತ್ರದ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ನೂರಾರು ಕಾರ್ಯಕರ್ತರು ಹಾಗೂ ಹಲವಾರು ಗಣ್ಯರ ಸಮ್ಮುಖದಲ್ಲಿ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್​ ಗೌಪ್ಯತವಿಧಿ ಬೋಧಿಸಿದ್ರು. ಪ್ರಮಾಣ ವಚನ ಸ್ವೀಕಾರ ವೇಳೆ ಕೊಂಚ ಗಾಬರಿ ಮಾಡಿಕೊಂಡ ಬಸವರಾಜ ಬೊಮ್ಮಾಯಿ ತೊದಲು ನುಡಿಗಳಿಗೆ ಸಾಕ್ಷಿಯಾದರು. ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ ಬಳಿಕ ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹಾಗೂ ರಾಜ್ಯಪಾಲರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ್ರು.

CM ಕಚೇರಿಯಲ್ಲಿ ಸಕಲ ತಯಾರಿ

ವಿಧಾನಸೌಧದ ಮೂರನೇ ಮಹಡಿಯ ಮುಖ್ಯಮಂತ್ರಿ ಕಚೇರಿಯಲ್ಲಿ ಈಗಾಗಲೇ ನಾಮಫಲಕ ಬದಲಾವಣೆ ಮಾಡಲಾಗಿದೆ. ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಚೇರಿಯಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ಸಚಿವರು ಇಲ್ಲದ ಕಾರಣ ಅಧಿಕಾರಿಗಳ ಸಭೆ ನಡೆಸಿ, ಆಡಳಿತದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಬಳಿಕ ರಾಜ್ಯವನ್ನು ಉದ್ದೇಶಿಸಿ ತನ್ನ ಉದ್ದೇಶ, ಆಡಳಿತ ಹಾಗೂ ಜನಸ್ಪಂದನೆ ಬಗ್ಗೆ ನೂತನ ಮುಖ್ಯಮಂತ್ರಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಲಿದ್ದಾರೆ.

ಅರವಿಂದ್​ ಬೆಲ್ಲದ್​ ಗೈರು ಹಾಜರು

ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿಎಂ ರೇಸ್​ನಲ್ಲಿದ್ದ ಅರವಿಂದ್​ ಬೆಲ್ಲದ್​​ ಅವರು ಗೈರು ಹಾಜರಾಗಿದ್ದರು. ನಿನ್ನೆ ಶಾಸಕಾಂಗ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ನೂತನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ ಬಳಿಕ ಟ್ವಿಟರ್​ ಮೂಲಕ ಸ್ವಾಗತ ಕೋರಿದ್ದರು. ​ನನ್ನ ಹಿತೈಷಿಗಳು ಮತ್ತು ಮಾರ್ಗದರ್ಶಕರೂ ಆದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಆಯ್ಕೆಯಾಗಿರುವುದು ನನಗೆ ವೈಯಕ್ತಿಕವಾಗಿ ಅತ್ಯಂತ ಸಂತೋಷವಾಗಿದೆ. ಈ ವಿಚಾರದಲ್ಲಿ ಪಕ್ಷದ ವರಿಷ್ಠರ ನಿರ್ಧಾರ ಸೂಕ್ತವಾಗಿದೆ ಎಂದು ಬರೆದುಕೊಂಡಿದ್ದರು. ಆದರೆ ಇಂದಿನ ಪದಗ್ರಹಣ ಸಮಾರಂಭದಿಂದ ದೂರ ಉಳಿಯುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ಸಚಿವ ಸ್ಥಾನಕ್ಕೆ ನಿರಾಣಿ ಫೈಟ್​, ಯತ್ನಾಳ್​ ಸುಳಿವಿಲ್ಲ

ಸಿಎಂ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದ ಮುರುಗೇಶ್​ ನಿರಾಣಿ ಸಚಿವ ಸ್ಥಾನಕ್ಕಾಗಿ ಓಡಾಡುತ್ತಿದ್ದಾರೆ. ಬೆಳಗ್ಗೆ ಯಡಿಯೂರಪ್ಪ ಅವನರನ್ನು ಭೇಟಿಯಾಗಿದ್ದ ನಿರಾಣಿ. ಸಿಎಂ ಪದಗ್ರಹಣ ಕಾರ್ಯಕ್ರಮದಲ್ಲೂ ಹಾಜರಿದ್ದರು. ಆದರೆ ಇದೊಂದು ಭ್ರಷ್ಟ ಸರ್ಕಾರ, ಡೀಲ್​ ಮಾಡುವುದೇ ಈ ಸರ್ಕಾರದ ಉದ್ದೇಶ ಎಂದು ಸ್ವಂತ ಪಕ್ಷದ ಸರ್ಕಾರದ ವಿರುದ್ಧ ಗುಡುಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಮಾತ್ರ ಬಸವರಾಜ ಬೊಮ್ಮಾಯಿ ಅವರಿಗೆ ಶುಭವನ್ನೂ ಕೋರಿಲ್ಲ, ಸಿಎಂ ಪ್ರಮಾಣ ವಚನ ಕಾರ್ಯಕ್ರಮಕ್ಕೂ ಹಾಜರಾಗಿಲ್ಲ. ಇನ್ನೂ ಮೂರೂ ಪಕ್ಷಗಳ ಸರ್ಕಾರ ಎಂದು ಜರಿದಿದ್ದ ಸಿ.ಪಿ ಯೋಗೇಶ್ವರ್​ ಮಾತ್ರ ಕದ್ದು ಮುಚ್ಚಿ ಹಿಂಬಾಗಿಲ ಮೂಲಕ ಬೊಮ್ಮಾಯಿ ಮನೆಗೆ ಹೋಗಿದ್ದು, ಮಂತ್ರಿ ಆಗುವ ತವಕದಲ್ಲಿದ್ದಾರೆ.

Related Posts

Don't Miss it !