ಬ್ಯಾಂಕ್​ ಅಕೌಂಟ್‌ನಲ್ಲಿ ಹಣ ಕಟ್​ ಆಗ್ತಿದ್ಯಾ..? ಇನ್ಮುಂದೆ ಈ ಕಾರಣಕ್ಕೂ ಕಟ್​ ಆಗ್ಬಹುದು..!

ಪ್ರಧಾನಿ ನರೇಂದ್ರ ಮೋದಿ ಬ್ಯಾಂಕ್​ ಅಕೌಂಟ್​ ಮಾಡಿಸಿ ಎಂದು ಹೇಳಿ ಎಲ್ಲರಿಗೂ ಅಕೌಂಟ್​ ಮಾಡಿಸಿದ್ರು. ಬಿಜೆಪಿ ಸರ್ಕಾರದಿಂದ 15 ಲಕ್ಷ ಕಪ್ಪು ಹಣ ಬಂದರೂ ಬರಬಹುದು ಎನ್ನುವ ಕಾರಣಕ್ಕೆ ಬಹುತೇಕ ಮಂದಿ ಅಕೌಂಟ್​ ಮಾಡಿಕೊಂಡರು. ಆ ಬಳಿಕ ಅಕೌಂಟ್‌ನಲ್ಲಿ ಹಣ ಇಟ್ಟಿದ್ರೆ ಒಮ್ಮೊಮ್ಮೆ ಹಣ ಕಟ್ ಆಗುತ್ತೆ. ಸಣ್ಣ ಪ್ರಮಾಣದ ಹಣ ಕಟ್ ಆಗಿರೋದು ನಾಲ್ಕೈದು ತಿಂಗಳ ನಂತರ ಗ್ರಾಹಕರಿಗೆ ಗೊತ್ತಾಗುತ್ತೆ. ಆ ಹಣದ ಬಗ್ಗೆ ವಿಚಾರಿಸಲು ಬ್ಯಾಂಕ್‌ಗೆ ಹೋಗುವುದಕ್ಕೆ ಸಮಯ ಆಗೋದಿಲ್ಲ. ಒಂದು ವೇಳೆ ಬ್ಯಾಂಕ್‌ಗೆ ಹೋಗಿ ವಿಚಾರಿಸಿದರೂ ಯಾವುದಾದರೂ ಒಂದು ಸಬೂಬು ಕೊಟ್ಟು ಬ್ಯಾಂಕ್​ನಿಂದ ವಾಪಸ್ ಕಳಿಸೋದು ಕೂಡ ಸಾಮಾನ್ಯ. ಗ್ರಾಹಕರು ಗೊಣಗುತ್ತಾ ಹೊರಕ್ಕೆ ಬರುವುದನ್ನು ನಾವು ನೋಡಬಹುದು. ಇನ್ಮುಂದೆ ಸಣ್ಣ ಪ್ರಮಾಣದ ಮೊತ್ತ ಕಡಿತ ಆಗುವುದಿಲ್ಲ. ದೊಡ್ಡ ಪ್ರಮಾಣದಲ್ಲೇ ಹಣ ಕಡಿತ ಆಗುವುದು ಗ್ಯಾರಂಟಿ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಏಕಾಏಕಿ ಕಡಿತ ಆದರೆ ಅದಕ್ಕೆ ಕಾರಣ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಆಗಿರುತ್ತದೆ.

ಹೊಸ ಟ್ಯಾಕ್ಸ್ ನೀತಿ ಜಾರಿಗೆ ಬಿಬಿಎಂಪಿ ತಯಾರಿ..!

ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಹೊಸ ತೆರಿಗೆ ನಿಯಮ ಜಾರಿ ಮಾಡಲು ಮುಂದಾಗಿದೆ. ಬಿಬಿಎಂಪಿಗೆ ತೆರಿಗೆ ಕಟ್ಟಬೇಕಿರುವ ಜನರಿಂದ ಹಣ ವಸೂಲಿ ಮಾಡುವುದು ಅಧಿಕಾರಿಗಳಿಗೆ ಸಮಸ್ಯೆ ಆಗಿದೆ. ಅದೂ ಅಲ್ಲದೆ ಟ್ಯಾಕ್ಸ್ ಕಟ್ಟಿಸಿಕೊಳ್ಳಲು ಬಾಕಿ ಉಳಿಸಿಕೊಂಡಿರೋ ತೆರಿಗೆದಾರ ಮನೆ ಎದುರು ಕಚೇರಿ ಎದುರು ಸಾಕಷ್ಟು ಸರ್ಕಸ್​ ಮಾಡಿದರೂ ತೆರೆಇಗೆ ಪಾವತಿ ಮಾಡುವುದಿಲ್ಲ. ಸಾಕಷ್ಟು ಬಾರಿ ಬಿಬಿಎಂಪಿ ಲಾಕ್​ಔಟ್​ ಕೂಡ ಮಾಡುತ್ತಾರೆ. ಆದರೂ ಕೋರ್ಟ್​ ಮೊರೆ ಹೋಗಿ ತಮ್ಮ ಪರವಾಗಿ ಆದೇಶ ತರುತ್ತಾರೆ. ಇನ್ನೂ ಕೆಲವರು ಕೋಟಿ ಕೋಟಿ ತೆರಿಗೆ ಪಾವತಿ ಮಾಡಬೇಕಿದ್ದರೂ ಕೆಲವೇ ಲಕ್ಷಗಳ ತೆರಿಗೆಯನ್ನು ಕಟ್ಟಿ ಉಳಿದ ಹಣವನ್ನು ಮುಂದೂಡಿಕೆ ಮಾಡಿಕೊಳ್ತಾರೆ. ಇದಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಅಧಿಕಾರಿಗಳು ಮಾಸ್ಟರ್​ ಪ್ಲ್ಯಾನ್​ ಒಂದನ್ನು ಮಾಡಿದ್ದಾರೆ. ಈ ಕಾನೂನು ಜಾರಿಗೆ ಬಂದರೆ, ನಿಮ್ಮ ಖಾತೆಯಿಂದ ಹಣ ನೇರವಾಗಿ ಬಿಬಿಎಂಪಿ ಅಕೌಂಟ್​ ಸೇರುತ್ತದೆ.

ದೊಡ್ಡ ದೊಡ್ಡ ಕುಳಗಳಿಗೆ ಈ ಬಾರಿ ಬಿಬಿಎಂಪಿ ಶಾಕ್​..!

ಸಾಮಾನ್ಯವಾಗಿ ಸರ್ಕಾರ ಯಾವುದೇ ಕಾನೂನು ಜಾರಿ ಮಾಡಿದರೂ ಬಡವರ ಮೇಲೆ ಬ್ರಹ್ಮಾಸ್ತ್ರ ಎನ್ನುವಂತೆ ಬಡವರ ಮೇಲೆ ಪ್ರಯೋಗ ಮಾಡುವುದೇ ಹೆಚ್ಚು. ಶ್ರೀಮಂತರು ಕಾನೂನುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಈ ಬಾರಿ ಬಿಬಿಎಂಪಿ ಜಾರಿ ಮಾಡುತ್ತಿರುವ KMC ಕಾಯ್ದೆ ಶ್ರೀಮಂತರಿಗೆ ಶಾಕ್​ ಕೊಡಲು ಸಜ್ಜಾಗ್ತಿದೆ. ಲಕ್ಷ ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡು ಬಿಬಿಎಂಪಿಗೆ ಪಾವತಿ ಮಾಡದಿದ್ದರೆ ನಿಮ್ಮ ಬ್ಯಾಂಕ್​ ಖಾತೆಯಿಂದ ನೇರವಾಗಿ ಹಣ ಪಡೆದುಕೊಳ್ಳಲು ಅನುಕೂಲ ಆಗುವಂತೆ ಕಾನೂನು ಬರಲಿದೆ. ಯಾವುದೇ ಒಬ್ಬ ತೆರಿಗೆದಾರನು ನೋಟಿಸ್ ಕೊಟ್ಟ ಬಳಿಕವೂ ಬಿಬಿಎಂಪಿಗೆ ತೆರಿಗೆ ಪಾವತಿ ಮಾಡದಿದ್ದರೆ, ಆ ತೆರಿಗೆದಾರನ ಬ್ಯಾಂಕ್‌ ಖಾತೆ ಇರುವ ಮ್ಯಾನೇಜರ್‌ಗೆ ಪಾಲಿಕೆಯಿಂದ ನೋಟಿಸ್ ಕಳುಹಿಸಲಾಗುತ್ತೆ. ಕಾನೂನು ಪ್ರಕಾರ ಬ್ಯಾಂಕ್‌ ಖಾತೆಯಿಂದ ತೆರಿಗೆ ಕಟ್ಟಬೇಕಿರುವ ಹಣವನ್ನು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಅಕೌಂಟ್‌ಗೆ ವರ್ಗಾವಣೆ ಮಾಡಲಾಗುತ್ತದೆ.

ಬ್ಯಾಂಕ್​ ಖಾತೆಯಲ್ಲಿ ಹಣ ಇದ್ದೇ ಇರುತ್ತೆ, ತೆರಿಗೆ ಬಂದೇ ಬರುತ್ತೆ..!

ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಬಿಬಿಎಂಪಿಗೆ ಕಟ್ಟಬೇಕಿರುವ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ಬ್ಯಾಂಕ್​ ಖಾತೆಯಿಂದ ಹಣ ಪಡೆದುಕೊಳ್ಳಲು ಬಿಬಿಎಂಪಿ ತಯಾರಿ ನಡೆಸಿದೆ, ಎರಡ್ಮೂರು ವಾರಗಳಲ್ಲಿ ಚಾಲ್ತಿಗೂ ಬರಲಿದೆ ಎನ್ನಲಾಗಿದೆ. ಇನ್ನೂ ಈಗಾಗಲೇ 3 ಲಕ್ಷ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಜನರ ಪಟ್ಟಿ ತಯಾರು ಮಾಡಿಕೊಂಡಿದ್ದು, ಮೊದಲಿಗೆ ದೊಡ್ಡ ಕುಳಗಳ ಬಾಕಿ ಪಾವತಿಗೆ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಬಿಬಿಎಂಪಿಗೆ ಒಂದೂವರೆ ಸಾವಿರ ಕೋಟಿ ರೂಪಾಯಿ ಟ್ಯಾಕ್ಸ್ ಬಿಬಿಎಂಪಿಗೆ ಬರಬೇಕಿದೆ. ತೆರಿಗೆ ಸಂಗ್ರಹ ಮಾಡಲು ಹೊಸ ಪ್ಲ್ಯಾನ್​ ಮಾಡಿಕೊಂಡಿದ್ದು, ಜನರು ಅಕೌಂಟ್​ಗಳಿಗೆ ಕನ್ನ ಬೀಳುವುದು ಗ್ಯಾರಂಟಿ. ಇದು ಕೇವಲ ಬಡವರಿಗೆ ಮಾತ್ರ ಮೀಸಲಾಗದೆ ಕೋಟಿ ಕೋಟಿ ಕುಳಗಳಿಗೂ ಬಿಸಿ ಮುಟ್ಟಿಸಬೇಕಿದೆ. ಇಲ್ಲದಿದ್ದರೆ ಎಲ್ಲಾ ಕಾನೂನುಗಳ ಹಾಗೆ ಬಡವರ ರಕ್ತ ಹೀರುವುದಕ್ಕೆ ಮತ್ತೊಂದು ಕಾನೂನು ಎನ್ನುವಂತಾಗುತ್ತದೆ ಅಷ್ಟೆ.

Related Posts

Don't Miss it !