ಲಸಿಕೆ ಜೊತೆಗೆ ಬಿಬಿಎಂಪಿ ಗಿಫ್ಟ್​ ಪೂರಕವೋ..? ಮಾರಕವೋ..?

ಭಾರತದ ಮೆಟ್ರೋ ನಗರಗಳಿಗೆ ಹೋಲಿಕೆ ಮಾಡಿದ್ರೆ ಬೆಂಗಳೂರು ಲಸಿಕೆ ಅಭಿಯಾನದಲ್ಲಿ ಮೊದಲ ಸ್ಥಾನದಲ್ಲಿದೆ. ಆದರೂ ಕೆಲವೊಂದು ಪ್ರದೇಶದಲ್ಲಿ ಲಸಿಕೆ ನಿರೀಕ್ಷಿತ ಗುರಿಯನ್ನು ಮುಟ್ಟಿಲ್ಲ ಎನ್ನುವುದು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಗೆ ತಲೆ ನೋವು ತರಿಸಿದೆ. ಇದೀಗ ಎಲ್ಲರಿಗೂ ಲಸಿಕೆ ಹಾಕುವ ಮೂಲಕ ಶೇಕಡ 100ರಷ್ಟು ಗುರಿ ಮುಟ್ಟಲು ಬಿಬಿಎಂಪಿ ಹೊಸದಾಗಿ ಪ್ಲ್ಯಾನ್​ ಮಾಡಿದೆ. ಲಸಿಕೆ ಹಾಕಿಸಿಕೊಂಡವರಿಗೆ 750 ರೂಪಾಯಿ ಮೌಲ್ಯದ ರೇಷನ್​ ಕಿಟ್​ ಕೊಡಲು ನಿರ್ಧಾರ ಮಾಡಿದೆ.

ಬೆಂಗಳೂರಿನ ಶಿವಾಜಿನಗರ, ಕೆಜೆ ಹಳ್ಳಿ, ಡಿಜೆ ಹಳ್ಳಿ, ಪಾದರಾಯನಪುರ ಪ್ರದೇಶದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಬಿಬಿಎಂಪಿ ಗಿಫ್ಟ್​ ನೀಡಲು ನಿರ್ಧಾರ ಮಾಡಿದೆ. ಮನೆ-ಮನೆಗೆ ತೆರಳಿ ಲಸಿಕೆ ಹಾಕಲು ಮುಂದಾದರೂ ತಿರಸ್ಕಾರ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಲಸಿಕೆ ಹಾಕಿಸಿಕೊಂಡವರಿಗೆ ರೇಷನ್ ಕಿಟ್ ಕೊಡುವ ನಿರ್ಧಾರ ಮಾಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ ರಂದೀಪ್ ಮಾಹಿತಿ ನೀಡಿದ್ದಾರೆ.

ಪೌರಕಾರ್ಮಿಕರಿಗೆ ಲಸಿಕೆ ಹಾಕಿಲ್ಲ..!

ಪ್ರಧಾನಿ ನರೇಂದ್ರ ಮೋದಿ ಮೊದಲ ಅಲೆಯ ಮೊದಲ ಭಾಷಣದಲ್ಲೇ ಪೌರ ಕಾರ್ಮಿಕರನ್ನು ಕೊರೊನಾ ವಾರಿಯರ್ಸ್​ ಎಂದು ಘೋಷಣೆ ಮಾಡಿದ್ದರು. ಬೆಂಗಳೂರಿನಲ್ಲಿ ಅಂದಾಜು 12 ಸಾವಿರ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಇಲ್ಲೀವರೆಗೂ ಕೇವಲ 4 ಸಾವಿರ ಪೌರಕಾರ್ಮಿಕರಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಇನ್ನುಳಿದ ಪೌರಕಾರ್ಮಿಕರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಕಾರಣಕ್ಕೆ ಲಸಿಕೆ ಜೊತೆಗೆ ರೇಷನ್​ ಕಿಟ್​ ಕೊಡುವ ನಿರ್ಧಾರ ಮಾಡಲಾಗಿದೆ.

ಲಸಿಕೆಗಾಗಿ ರೇಷನ್​ ಕಿಟ್​ ಸರೀನಾ..?

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬೆಂಗಳೂರಿನಲ್ಲಿ ನೂರಾರು ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಆದರೆ ಕೆಲವೊಂದು ಏರಿಯಾಗಳ ಜನರು ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕೆ ರೇಷನ್​ ಕಿಟ್​ ಕೊಟ್ಟು ಲಸಿಕೆ ಹಾಕುವುದು ಸರೀನಾ ಎನ್ನುವ ಪ್ರಶ್ನೆ ಉದ್ಬವ ಆಗಿದೆ. ಎಲ್ಲರೂ ರೇಷನ್​ ಕಿಟ್​ ಕೊಟ್ಟು ಲಸಿಕೆ ಹಾಕ್ತಾರೆ ಎಂದು ಲಸಿಕಾ ಕೇಂದ್ರಕ್ಕೆ ತೆರಳದೆ ಮನೆಯಲ್ಲೇ ಕುಳಿತರೆ ಬಿಬಿಎಂಪಿ ಎಲ್ಲರಿಗೂ ರೇಷನ್​ ಕಿಟ್​ ಕೊಟ್ಟು ಲಸಿಕೆ ಹಾಕಲು ಸಾಧ್ಯವಿದೆಯಾ ಎನ್ನುವ ಪ್ರಶ್ನಾರ್ಥಕ ಚಿಹ್ನೆಯೂ ನಮ್ಮ ಕಣ್ಣ ಮುಂದೆ ಬರುತ್ತಿದೆ.

ರೇಷನ್​ ಕಿಟ್​ ಯಾರಿಗಾದರೂ ಕೊಡಲಿ..!

ಕೊರೊನಾ ಸಂಕಷ್ಟದಲ್ಲಿ ಇರುವ ಜನರಿಗೆ ರೇಷನ್​ ಕಿಟ್​ ಕೊಡುವುದು ಸರ್ವೇ ಸಾಮಾನ್ಯ. ಆದರೆ, ಲಸಿಕೆಗಾಗಿ ರೇಷನ್​ ಕಿಟ್​ ಕೊಡುವುದು ತಪ್ಪು. ರೇಷನ್​ ಕಿಟ್​​ ಕೊಡುವುದಾದರೆ ಯಾವ ಏರಿಯಾದ ಜನರಿಗಾದರೂ ಕೊಡಲಿ. ಬಡವರಿಗೆ ಆಹಾರ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಶಿವಾಜಿನಗರ. ಪಾದರಾಯನಪುರ, ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಲಸಿಕೆ ಹಾಕಿಸಿಕೊಳ್ತಿಲ್ಲ ಎನ್ನುವ ಕಾರಣಕ್ಕೆ ಆಮೀಷ ಒಡ್ಡುವುದು ಸರಿಯಲ್ಲ. ನಾಳೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದುಕೊಂಡಿದ್ದ ಜನರು ರೇಷನ್​ ಕಿಟ್​ ಕೊಟ್ಟು ಲಸಿಕೆ ಹಾಕ್ತಾರೆ, ನಾವ್ಯಾಕೆ ಬಿಸಿಲಲ್ಲಿ ಕ್ಯೂ ನಿಲ್ಲಬೇಕು ಎನ್ನುವ ಮನಸ್ಥಿತಿಗೆ ಬಂದರೆ ಮತ್ತಷ್ಟು ಸಮಸ್ಯೆ ಉಲ್ಬಣ ಆಗಲಿದೆ. ಅಥವಾ ಮನೆಯಲ್ಲಿ ಕುಳಿತವರಿಗೆ ರೇಷನ್​ ಕಿಟ್​ ಕೊಟ್ಟು ಲಸಿಕೆ ಹಾಕ್ತೀರಿ, ಲಸಿಕೆ ಬೇಕು ಎಂದು ಸರತಿ ಸಾಲಿನಲ್ಲಿ ನಿಂತವರಿ ಲಸಿಕೆ ಮುಗಿದಿದೆ ಆಸ್ಪತ್ರೆ ಎದುರು ಬೋರ್ಡ್​ ಹಾಕ್ತೀರಿ ಇದ್ಯಾವ ನ್ಯಾಯ ಅಲ್ಲವೇ..?

Related Posts

Don't Miss it !