ನಾಳೆ ಕುರಿ, ಕೋಳಿ ಕಟ್​ ಮಾಡುವ ಮುನ್ನ ಪ್ರಜ್ಞೆ ತಪ್ಪಿಸಬೇಕು..!! ಇದು ಸರ್ಕಾರದ ಆದೇಶ..

ರಾಜ್ಯದಲ್ಲಿ ಹಿಂದೂ – ಮುಸ್ಲಿಂ ಜಟಾಪಟಿ ತಾರಕಕ್ಕೇರಿದೆ. ಇಂದು ರಾಜ್ಯಾದ್ಯಂತ ಯುಗಾದಿ ಹಬ್ಬ ಆಚರಣೆ ಮಾಡುತ್ತಿದ್ದು, ನಾಳೆ ವರ್ಷದ ತೊಡಕು ಮಾಡಲು ಕುರಿ, ಕೋಳಿ, ಮೇಕೆ ಮಾಂಸ ಖರೀದಿ ಮಾಡುವುದುಂಟು. ಆದರೆ ಹಿಂದೂಗಳು ಹಲಾಲ್​ ಕಟ್​ ಮಾಡಿರುವ ಮಾಂಸವನ್ನು ಖರೀದಿ ಮಾಡಬಾರದು ಎಂದು ಹಿಂದೂಪರ ಸಂಘಟನೆಗಳು ಕರೆ ನೀಡುತ್ತಿವೆ. ಜೊತೆಗೆ ಸಾಕಷ್ಟು ಕಡೆಗಳಲ್ಲಿ ಅಭಿಯಾನವನ್ನೂ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಹಿಂದೂಗಳು ಒಂದೇ ಬಾರಿಗೆ ಕುತ್ತಿಗೆ ಕತ್ತರಿಸುವ ವಿಧಾನವಾದ ಜಟ್ಕಾ ಕಟ್​​ ಮಾಂಸಹಾರ ಹೋಟೆಲ್​ಗಳು ಆರಂಭಗೊಂಡಿವೆ. ಇನ್ನೂ ಜಟ್ಕಾ ಕಟ್​​ ಮಾಂಸ ಆನ್​​ಲೈನ್​ನಲ್ಲೂ ಲಭ್ಯವಿದೆ ಎನ್ನುವ ಪ್ರಚಾರ ನಡೆಯುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ಜಟ್ಕಾ ಕಟ್​​ ಹಾಗೂ ಹಲಾಲ್​ ಕಟ್​​ ವಿವಾದ ನಡುವೆ ಹೊಸ ಆದೇಶ ಮಾಡಿದೆ. ಈ ಆದೇಶವನ್ನು ಪಾಲಿಸುವುದು ಹೇಗೆ..? ಎನ್ನುವ ಪ್ರಶ್ನೆಗೆ ಸರ್ಕಾರವೇ ಉತ್ತರ ಕೊಡಬೇಕಿದೆ.

ಹಲಾಲ್​ ಕಟ್​ – ಜಟ್ಕಾ ಕಟ್​​ಗೂ ಮೊದಲು ಪ್ರಜ್ಞೆ ತಪ್ಪಿಸಿ..!

ಹಲಾಲ್ ಕಟ್ ಹಾಗೂ ಜಟ್ಕಾ ಕಟ್​ ವಿಚಾರದ ನಡುವೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಇನ್ಮುಂದೆ ಪ್ರಾಣಿಗಳನ್ನು ಆಹಾರಕ್ಕಾಗಿ ಕೊಲ್ಲುವಾಗ ಹಿಂಸೆ ನೀಡಬಾರದು ಎಂದು ಪಶು ಸಂಗೋಪನಾ ಇಲಾಖೆ ಆದೇಶ ಹೊರಡಿಸಿದೆ. ಪ್ರಾಣಿಗಳಿಗೆ ಹಿಂಸೆ ನೀಡದೆ ವಧೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಬೆಂಗಳೂರಲ್ಲಿ ಇನ್ಮುಂದೆ ಪ್ರಾಣಿ ವಧೆಗೆ ಸ್ಟನ್ನಿಂಗ್​​ Stunning ಕಡ್ಡಾಯ ಎಂದು ಪಶುಸಂಗೋಪನಾ‌ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ. ಪ್ರಾಣಿ ವಧೆ ಮಾಡುವ ಮುನ್ನಾ Stunning ಸ್ಟನ್ನಿಂಗ್​ ಮಾಡಲೇಬೇಕು ಎಂದು ಕೋಳಿ, ಕುರಿ ಕತ್ತರಿಸುವ ಅಂಗಡಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಪಶುಸಂಗೋಪನಾ ಇಲಾಖೆ ಹೊರಡಿಸಿರುವ ಆದೇಶ ಮಾಂಸಪ್ರಿಯರಲ್ಲಿ ಆಕ್ರೋಶದ ಕಟ್ಟೆ ಹೊಡೆಯುವಂತೆ ಮಾಡಿದೆ. 2001 ರ ಕಾಯ್ದೆಯ ಸೆಕ್ಷನ್ 6 ಮತ್ತು 4 ರ ಅಡಿಯಲ್ಲಿ Stunning ನಿಯಮ ಇದೆ. ರೂಲ್ಸ್ ಬ್ರೇಕ್ ಮಾಡಿದವರಿಗೆ 1960 ಆಕ್ಟ್ ಪ್ರಕಾರ 5 ಸಾವಿರದಿಂದ 50 ಸಾವಿರ ತನಕ ದಂಡ ವಿಧಿಸಲಾಗುವುದು ಎನ್ನಲಾಗಿದೆ.

ಸ್ಟನ್ನಿಂಗ್​ ಎಂದರೆ ಏನು..? ಇದರಿಂದ ಆಗುವ ಲಾಭ ಏನು..?

Stunning ಎಂದರೆ, ಪ್ರಾಣಿಗಳನ್ನು ವಧೆ ಮಾಡುವ ಮೊದಲು ಪ್ರಾಣಿಗಳ ತಲೆ ಮೇಲೆ ಗನ್​​ನಿಂದ ಶೂಟ್​ ಮಾಡುವ ಮೂಲಕ ಮೆದುಳು ನಿಷ್ಕ್ರಿಯ ಮಾಡಿ ಪ್ರಜ್ಞೆ ತಪ್ಪಿಸುವ ವಿಧಾನಕ್ಕೆ ಸ್ಟನ್ನಿಂಗ್​ ಎನ್ನುತ್ತಾರೆ. ಪ್ರಾಣಿಗಳನ್ನು ಪ್ರಜ್ಞೆ ತಪ್ಪಿಸುವುದರಿಂದ ಸಾಯಿಸುವಾಗ‌ ನೋವು ತಿಳಿಯೋದಿಲ್ಲ ಎನ್ನುವುದು ಈ ವಿಧಾನದ ಮುಖ್ಯ ಉದ್ದೇಶ. ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಉಮಾಪತಿ ಹೇಳುವ ಪ್ರಕಾರ, ಯಾವುದೇ ಅಂಗಡಿಗಳಲ್ಲಿ ಸ್ಟನ್ನಿಂಗ್​ ವಿಧಾನ ಪಾಲನೆ ಮಾಡುತ್ತಿಲ್ಲ. ಈ ಬಗ್ಗೆ ಪಶು ಸಂಗೋಪನಾ ಇಲಾಖೆಗೆ ಹತ್ತಾರು ದೂರುಗಳು ಬಂದಿವೆ. ಸ್ಟನ್ನಿಂಗ್ ಅಳವಡಿಸಿಕೊಂಡರೆ ಪ್ರಾಣಿಗಳು ನರಳಾಟದಿಂದ ಸಾಯುವುದನ್ನು ತಪ್ಪಿಸಬಹುದು. ಕೋಳಿ, ಕುರಿ, ಮೇಕೆ ಕತ್ತರಿಸುವ ಅಂಗಡಿಗಳಿಗೆ ಇನ್ಮುಂದೆ ಲೈಸೆನ್ಸ್ ನೀಡುವಾಗ Stunning Facility ಸ್ಟನ್ನಿಂಗ್​​ ವಿಧಾನ ಕಡ್ಡಾಯ ಮಾಡಲಾಗುವುದು. Stunning facility ಅಳವಡಿಕೆ ಮಾಡಿಕೊಂಡಿರದಿದ್ದರೆ ಪರವಾನಗಿಯನ್ನೇ ನೀಡಬಾರದು ಎಂದು BBMPಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ. ಒಂದು ವೇಳೆ ಸ್ಟನ್ನಿಂಗ್​ ವಿಧಾನ ಇಲ್ಲದಿದ್ದರೆ ಕಾನೂನು ಪ್ರಕಾರ ಪ್ರಾಣಿ ಹಿಂಸೆ ಮಾಡಿದ ಕೇಸ್ ದಾಖಲು ಮಾಡಿಕೊಳ್ಳಲಾಗುವುದು ಎಂದಿದ್ದಾರೆ.

https://youtube.com/shorts/h2UsStG6VBM?feature=share

ಪ್ರಾಣಿಗಳನ್ನು ಹತ್ಯೆ ಮಾಡಬೇಡಿ ಎನ್ನುವುದೇ ಸೂಕ್ತ..?

ಮಾಂಸಹಾರ ಸೇವನೆಯನ್ನು ಬಿಟ್ಟು ಬಿಡಿ ಎನ್ನುವುದನ್ನು ಸರ್ಕಾರ ಸುತ್ತಿ ಬಳಸಿ ಹೇಳುತ್ತಿದೆ ಎನ್ನುವುದು ಹಲವರ ಅನುಮಾನ. ಹಲಾಲ್​ ಮಾಂಸ, ಜಟ್ಕಾ ಕಟ್​ ಮಾಂಸ ಎನ್ನುವ ಬಗ್ಗೆ ಸಾಕಷ್ಟು ವಿರೋಧ ಮಾಡುತ್ತಿರುವ ಎಲ್ಲರೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಮಾಂಸಹಾರವನ್ನೇ ಸೇವಿಸದ ಜನರು ಹಲಾಲ್​ ಹಾಗು ಜಟ್ಕಾ ಕಟ್​ ಬಗ್ಗೆ ಮಾತನಾಡುವುದು ಎಷ್ಟು ಸರಿ..? ಎನ್ನುವ ಪ್ರಶ್ನೆಗಳೂ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿವೆ. ಮಾಂಸ ತಿನ್ನುವ ವ್ಯಕ್ತಿ ತನಗೆ ಇಷ್ಟ ಬಂದ ಮಾಂಸ ಖರೀದಿ ಮಾಡಲು ಹಿಂದೂ ಸಂಘಟನೆ ಹಣೆಪಟ್ಟಿ ಕಟ್ಟಿಕೊಂಡು ವಿರೋಧ ಮಾಡುತ್ತಿರುವುದು ಏಕೆ.? ಎನ್ನುವ ಪ್ರಶ್ನೆಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ಹುಟ್ಟುಹಾಕಿದೆ. ಈ ಎಲ್ಲಾ ಚರ್ಚೆಗಳ ನಡುವೆ ಸರ್ಕಾರ ಪ್ರಾಣಿಗಳನ್ನು ಕತ್ತರಿಸುವ ಮುನ್ನ ಪ್ರಜ್ಞೆ ತಪ್ಪಿಸುವುದು ಕಡ್ಡಾಯ ಎಂದಿರುವುದು ಅಚ್ಚರಿ ಜೊತೆಗೆ ಆಕ್ರೋಶವನ್ನು ಸೃಷ್ಟಿಸಿದೆ. ಇನ್ನು ಯಾವ ತಿರುವು ಪಡೆಯುತ್ತದೆ..? ಸರ್ಕಾರಕ್ಕೆ ಮಾಂಸಹಾರಿಗಳನ್ನು ನಿಯಂತ್ರಣ ಮಾಡುವ ಉದ್ದೇಶವೇನಾದರೂ ಇದೆಯಾ..? ಎನ್ನುವ ಪ್ರಶ್ನೆಗೂ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.

Related Posts

Don't Miss it !