ಕುಂದಾನಗರಿಯಲ್ಲಿ ಅರಳಿದ ಕಮಲ, ಅಳಿಸಿದ ಹಸ್ತ, ಉದುರಿದ ತೆನೆ..!

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಒಟ್ಟು 58 ವಾರ್ಡ್​ಗಳಲ್ಲಿ ಬಿಜೆಪಿ 36 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಳ ಬಹುಮತ ಪಡೆದುಕೊಂಡಿದೆ. ಎರಡನೇ ಸ್ಥಾನಕ್ಕೆ ಪಕ್ಷೇತರರು ಬಂದಿದ್ದು ಒಟ್ಟು 10 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಇನ್ನೂ ಕಾಂಗ್ರೆಸ್​ ಅಭ್ಯರ್ಥಿಗಳು 9 ವಾರ್ಡ್​ಗಳಲ್ಲಿ ಗೆಲ್ಲುವ ಮೂಲಕ 3ನೇ ಸ್ಥಾನಕ್ಕೆ ಬಂದಿದ್ದಾರೆ. ಎಂಇಎಸ್​ 2 ವಾರ್ಡ್​ಗಳಲ್ಲಿ ಗೆಲ್ಲುವ ಮೂಲಕ ಕಿತಾಪತಿಗೆ ಕುರ್ಚಿ ಕಾಪಾಡಿಕೊಂಡಿದ್ದಾರೆ. ಇನ್ನೂ ಅಸಾದುದ್ದೀನ್​ ಓವೈಸಿ ಪಕ್ಷ ಎಐಎಂಐಎಂ ಕೂಡ ಒಂದು ಸ್ಥಾನದಲ್ಲಿ ಗೆಲುವಿನ ಖಾತೆ ತೆರೆಯುವ ಮೂಲಕ ಕರ್ನಾಟಕಕ್ಕೂ ಪಕ್ಷವನ್ನು ವಿಸ್ತರಣೆ ಮಾಡಿದಂತಾಗಿದೆ.

2019 ರಲ್ಲಿ ಬೆಳಗಾವಿಯಲ್ಲಿ ಪ್ರಾಬಲ್ಯ ಮೆರೆದಿದ್ದ ಮರಾಠಿ ಭಾಷಿಕರ ಬಾರಿ ಮಕಾಡೆ ಮಲಗಿದ್ದಾರೆ. ಕಳೆದ ಬಾರಿ ಭಾಷೆಯ ಆಧಾರದಲ್ಲಿ ಪಾಲಿಕೆ ಚುನಾವಣೆ ನಡೆದಿತ್ತು. ಆಗ ಮರಾಠಿ ಭಾಷಿಕರು 30 ವಾರ್ಡ್​ಗಳಲ್ಲಿ ಕನ್ನಡ ಭಾಷಿಕರು 18 ವಾರ್ಡ್​ಗಳಲ್ಲಿ ಜಯಭೇರಿ ಸಾಧಿಸಿದ್ರೆ, ಉರ್ದು ಭಾಷಿಕರು 8 ವಾರ್ಡ್​ ಹಾಗೂ ಇತರೆ ಇಬ್ಬರು ಗೆಲುವಿನ ಕೇಕೆ ಹಾಕಿದ್ದರು. ಇಷ್ಟು ವರ್ಷಗಳ ಕಾಲ ಭಾಷೆಯ ಆಧಾರದಲ್ಲೇ ಪಾಲಿಕೆಯಲ್ಲಿ ಜಟಾಪಟಿ ನಡೆಸುತ್ತಿದ್ದ ರಾಜಕೀಯ ಪಕ್ಷಗಳು ಈ ಬಾರಿ ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧೆ ಮಾಡುವ ಮೂಲಕ ಎಂಇಎಸ್​ ಕಿರಕಿರಿ ತಪ್ಪಿಸುವ ಯತ್ನ ಮಾಡಲಾಯ್ತು. ಆದರೆ ಈಗಲೂ ಇಬ್ಬರೂ ಎಂಇಎಸ್​ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಪಾಲಿಕೆಯಲ್ಲಿ ಭಾಗವಧ್ವಜ ಹಾರಿಸುವುದೇ ನಮ್ಮ ಉದ್ದೇಶ ಎಂದು ಹೇಳುವ ಮೂಲಕ ಉದ್ಧಟತನ ಮೆರೆಯುವ ಮುನ್ಸೂಚನೆ ಕೊಟ್ಟಿದ್ದಾರೆ.

Read this also;

ಬೆಳಗಾವಿಯಲ್ಲಿ ಪ್ರಾಬಲ್ಯ ಇರುವ ಬಿಜೆಪಿ ನಿರೀಕ್ಷೆಯಂತೆ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಸಮಬಲ ಹೊಂದಿದ್ದ ಕಾಂಗ್ರೆಸ್​ ಮಾತ್ರ 45 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿ, ಕೇವಲ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಹೆಚ್ಚಿನ ಬಂಡಾಯ ಅಭ್ಯರ್ಥಿಗಳು ಅಖಾಡಕ್ಕೆ ಧುಮುಕಿದ್ದು ಕಾಂಗ್ರೆಸ್​ ಸೋಲಿಗೆ ಕಾರಣ ಎನ್ನಲಾಗ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ನೆಲೆಯೇ ಇಲ್ಲದ ಜೆಡಿಎಸ್​ ಪಕ್ಷ 11 ವಾರ್ಡ್​ಗಳಲ್ಲಿ ಸ್ಪರ್ಧೆ ಮಾಡಿತ್ತು. ಆದರೆ ಕುಂದಾನಗರಿಯ ಜನರ ಮನಸ್ಸನ್ನು ಗೆಲ್ಲುವುದು ಪ್ರಾದೇಶಿಕ ಪಕ್ಷವಾದ ಜೆಡಿಎಸ್​ಗೆ ಸಾಧ್ಯವಾಗಿಲ್ಲ. ಶಿವಸೇನೆ, ಎಸ್​ಡಿಪಿಐ, ಆಮ್​ ಆದ್ಮಿ ಪಾರ್ಟಿ, ಉತ್ತಮ್​ ಪ್ರಜಾಕೀಯ ಪಕ್ಷ ಕೂಡ ಖಾತೆ ತೆರೆಯಲು ವಿಫಲ ಆಗಿವೆ.

ಬಿಜೆಪಿ ಗೆಲುವಿನಿಂದ ಸರ್ವೇ ಸಮಾನ್ಯವಾಗಿ ಸಂಭ್ರಮದ ಅಲೆಯಲ್ಲಿ ಕಮಲ ನಾಯಕರಿದ್ದಾರೆ. ಇನ್ನೂ ಕಾಂಗ್ರೆಸ್​ ಸಹಜವಾಗಿ ಸೋಲನ್ನು ಒಪ್ಪಿಕೊಂಡಿದೆ. ಬೆಳಗಾವಿಯಲ್ಲಿ ಗೆಲುವು ಸಾಧಿಸಿದ ಎಲ್ಲಾ ಅಭ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ ಕಾಂಗ್ರೆಸ್​ ಅಭ್ಯರ್ಥಿ ವಾರ್ಡ್​ ಸಂಖ್ಯೆ 38ರ ಅಜೀಮ ಪಟವೇಕರ್​ ಪರ ಘೋಷಣೆ ಕೂಗಿದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಕೇವಲ ಕಾಂಗ್ರೆಸ್​ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ಮಾಡಿದ್ದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​, ಬಿಜೆಪಿ ಪಕ್ಷದಲ್ಲೂ ಮರಾಠಿ ಭಾಷಿಕರಿಗೆ ಮಣೆ ಹಾಕಿರುವ ಕಾರಣ ಪಾಲಿಕೆಯಲ್ಲಿ ಕನ್ನಡ ಪರವಾಗಿ ಇರ್ತಾರಾ..? ಅಥವಾ ಮರಾಠಿ ಭಾಷೆ ವಿಚಾರದಲ್ಲಿ ಕಿರಿಕಿರಿ ಮಾಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Related Posts

Don't Miss it !