ಬೆಳಗಾವಿ ಪಾಲಿಕೆ ಚುನಾವಣೆ; ಭಾಷೆ ಬದಲು ಪಕ್ಷಗಳ ಆಧಾರದ ಆತಂಕ..!

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಿಗದಿಯಾಗಿದ್ದು, ಸೆಪ್ಟೆಂಬರ್​ 3ರಂದು ಮತದಾನ ನಡೆಯಲಿದೆ. 30 ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಿವಿಧ ರಾಜಕೀಯ ಪಕ್ಷಗಳ ಚಿಹ್ನೆ ಆಧಾರದ ಮೇಲೆ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳ ನಾಯಕರು ಕಸರತ್ತು ನಡೆಸಿದ್ದಾರೆ. ಚುನಾವಣೆಯಲ್ಲಿ ಅಖಾಡಕ್ಕೆ ಈಲಿಸಲು ಕಾಂಗ್ರೆಸ್​, ಬಿಜೆಪಿ ಪಕ್ಷಗಳು ಈಗಾಗಲೇ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕೆಲಸ ಮಾಡುತ್ತಿದ್ದಾರೆ. JDS, AAP, MES, ಶಿವಸೇನೆ, MIM ಕೂಡ ಸ್ಪರ್ಧೆ ಬಗ್ಗೆ ​ ಮನಸ್ಸು ಮಾಡಿವೆ. ಹೀಗಾಗಿ ಈ ಬಾರಿ ಪಕ್ಷಗಳ ಚಿಹ್ನೆ ಮೇಲೆ ಚುನಾವಣೆ ನಡೆಯುವುದು ಖಚಿತವಾಗಿದೆ. ಈ ಬೆಳವಣಿಗೆ ಬೆಳಗಾವಿಯಲ್ಲಿ ಕನ್ನಡಿಗರನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಗಳನ್ನು ಹುಟ್ಟುಹಾಕಿದೆ.

ಕನ್ನಡಿಗ ವರ್ಸಸ್​ ಮರಾಠಿ ಭಾಷೆ ಮೇಲೆ ಪೈಪೋಟಿ..!

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ನಗರವಾಗಿರುವ ಬೆಳಗಾವಿಯಲ್ಲಿ, ಮರಾಠಿಗರು ಹಾಗೂ ಕನ್ನಡಿಗರು ಅಧಿಪತ್ಯ ಸಾಧಿಸಲು ಹವಣಿಸುತ್ತಿದ್ದಾರೆ. ಭಾಷಾ ವಿಚಾರದಲ್ಲೂ ಸಾಕಷ್ಟು ಬಾರಿ ಘರ್ಷಣೆಗಳಾಗಿ ಸೂಕ್ಷ್ಮ ನಗರ ಎಂದು ಗುರುತಿಸಿಕೊಂಡಿದೆ. ಈ ಹಿಂದೆ ಇದೇ ಕಾರಣಕ್ಕಾಗಿ ಪಾಲಿಕೆ ಚುನಾವಣೆ ಭಾಷೆಯ ಆಧಾರದ ಮೇಲೆ ಅಭ್ಯರ್ಥಿಗಳ ಹಣಾಹಣಿ ನಡೆಯುತ್ತಿತ್ತು. ಕನ್ನಡ, ಮರಾಠಿ ಭಾಷಾ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರು. ಜೊತೆಗೆ ಮುಸಲ್ಮಾನ ಸಮುದಾಯದ ವತಿಯಿಂದ ಉರ್ದು ಭಾಷಿಕರ ಮತಗಳನ್ನು ಸೆಳೆಯುವ ಕಸರತ್ತೂ ನಡೆಯುತ್ತಿತ್ತು. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಮರಾಠಿ ಭಾಷಿಕರು ಹೇಳಿದ್ರೆ, ಕರ್ನಾಟಕಕ್ಕೆ ಸೇರಬೇಕು ಎಂದು ಕನ್ನಡಿಗರು ಅಬ್ಬರಿಸುತ್ತಿದ್ದರು. ಆದರೆ ಈ ಬಾರಿ ಪಾಲಿಕೆಗೆ ರಾಜಕೀಯ ಪಕ್ಷಗಳ ಪದಾರ್ಪಣೆ ಆಗಿದೆ. ಭಾಷಾ ಪೈಪೋಟಿ ನಿಲ್ಲುತ್ತಾ..? ಅಥವಾ ಮತ್ತೊಂದು ಸ್ವರೂಪದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಾ ಎನ್ನುವ ಅನುಮಾನ ಮೂಡಿಸಿದೆ.

ಇದನ್ನೂ ಓದಿ;

ರಾಜಕೀಯ ನಾಯಕರ ನಿರ್ಧಾರದ ಅನಾಹುತ..!

82 ವಾರ್ಡ್​ಗಳನ್ನು ಹೊಂದಿರುವ ಬೆಳಗಾವಿ ಪಾಲಿಕೆಯಲ್ಲಿ ಕನ್ನಡಿಗರ ಆಯ್ಕೆ ಕಡಿಮೆ ಆಗಿ, ಮರಾಠಿಗರ ಆಯ್ಕೆ ಹೆಚ್ಚಳವಾದರೆ ಕನ್ನಡಿಗರು ಆಡಳಿತ ಹಾಗೂ ಭಾಷಾ ವಿಚಾರದಲ್ಲಿ ಸಂಕಷ್ಟಕ್ಕೆ ಗುರಿ ಆಗಲಿದ್ದಾರೆ. ಒಂದು ವೇಳೆ ಪ್ರಬಲವಾಗಿರುವ ಬಿಜೆಪಿ ಹಾಗೂ ಕಾಂಗ್ರೆಸ್​ ಸರಳ ಬಹುಮತ ಸಾಧಿಸಲು ಸಾಧ್ಯವಾಗದಿದ್ದರೆ, ಎಂಇಎಸ್​ ಬೆಂಬಲ ಪಡೆಯಬೇಕಾಗಬಹುದು. ಈ ಬೆಳವಣಿಗೆ ಮತ್ತಷ್ಟು ಅನಾಹುತಕ್ಕೆ ಕಾರಣವಾಗುವ ಬೆಳವಣಿಗೆ ಆಗಲಿದೆ. ವಿವಿಧ ಪಕ್ಷಗಳ ಕನ್ನಡಿಗ ಅಭ್ಯರ್ಥಿಗಳು ಆಯ್ಕೆಯಾಗದೆ ಮರಾಠಿಗರ ಪ್ರಾಬಲ್ಯ ಹೆಚ್ಚಾಗುವ ಸಾಧ್ಯತೆಯಿದ್ದು, ಬೆಳಗಾವಿ ಪಾಲಿಯಲ್ಲಿ ಪಕ್ಷಬೇಧ ಮರೆತು ಮರಾಠಿ ವಿಚಾರಗಳಲ್ಲಿ ಕೈ ಜೋಡಿಸಿದರೆ ಕನ್ನಡಿಗರ ಅನಿವಾರ್ಯವಾಗಿ ಮರಾಠಿಗರ ಅಡಿಯಾಳು ಆಗಬೇಕಾದ ಪರಿಸ್ಥಿತಿ ನಿರ್ಮಾಣ ಆಗಲಿದೆ ಎನ್ನುತ್ತಾರೆ ಸ್ಥಳೀಯ ನಾಯಕರು.

ಇದನ್ನೂ ಓದಿ;

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಒತ್ತಡ..!

ಬೆಳಗಾವಿ ಪಾಲಿಕೆ ಚುನಾವಣೆಗೂ ಮುನ್ನವೇ ಬೆಳಗಾವಿಯಲ್ಲಿ MES ಭಾಷಾ ವಿಚಾರದಲ್ಲಿ ಕಿರಿಕಿರಿ ಶುರುವಾಗಿದೆ. ಗಡಿ ವಿವಾದ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಪೋಸ್ಟ್ ಕಾರ್ಡ್ ಅಭಿಯಾನ ನಡೆಸಿದ್ದಾರೆ. ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಪತ್ರ ಅಭಿಯಾನ ನಡೆಸಿದ್ದು, ಬೆಳಗಾವಿ ಸೇರಿದಂತೆ ಒಟ್ಟು 865 ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು. ಕರ್ನಾಟಕದಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯ ಆಗುತ್ತಿದೆ. ಗಡಿ ವಿವಾದವನ್ನ ಇತ್ಯರ್ಥಪಡಿಸಬೇಕು ಎಂದು ಪ್ರಧಾನಿ ಕಚೇರಿಗೆ 11 ಸಾವಿರ ಪತ್ರಗಳ ರವಾನೆ ಮಾಡಿದ್ದಾರೆ. ಭಾಷಾವಾರು ಪ್ರಾಂತ್ಯ ರಚನೆಯಾದ 1956 ರಿಂದಲೂ ಗಡಿ ಪ್ರದೇಶಗಳನ್ನ ಮಹಾರಾಷ್ಟ್ರಕ್ಕೆ ಸೇರಿಸುವಂತೆ ಹೋರಾಟ ನಡೆಸುತ್ತಿದ್ದೇವೆ ಎಂದು ಪ್ರಧಾನಿಗೆ ಮನವಿ ಮಾಡಿದ್ದಾರೆ.

ರಾಜಕೀಯ ಪಕ್ಷಗಳ ಆಧಾರದಲ್ಲೇ ಚುನಾವಣೆ ನಡೆದರೆ ಕನ್ನಡಿಗ ಅಭ್ಯರ್ಥಿಗಳು ಆಯ್ಕೆಯಾಗುವಂತೆ ನೋಡಿಕೊಳ್ಳುವುದು ಕಷ್ಟಸಾಧ್ಯ. ವಿವಿಧ ಪಕ್ಷಗಳ ಮೂಲಕ ಆಯ್ಕೆಯಾಗುವ ಜನರೆಲ್ಲರು ರಾಜಕೀಯ ಹಿತಾಸಕ್ತಿಗಾಗಿ ಕೆಲಸ ಮಾಡಿ ಕನ್ನಡಿಗರ ವಿರುದ್ಧವಾದರೂ ಅಚ್ಚರಿಯೇನಿಲ್ಲ ಎನ್ನುವ ಮಾತುಗಳು ಕನ್ನಡಿಗರ ಆತಂಕಕ್ಕೆ ಕಾರಣವಾಗಿದೆ. ಒಟ್ಟಾರೆ ಇಷ್ಟು ದಿನ ಪಾಲಿಕೆ ಎದುರು ಕನ್ನಡ ಬಾವುಟ ಹಾರಿಸಲು ಸಾಧ್ಯವಾಗದ ರಾಜಕಾರಣಿಗಳು ಪಕ್ಷದ ಆಧಾರದಲ್ಲಿ ಚುನಾವಣೆ ನಡೆಸಲು ಮುಂದಾಗಿರುವುದು ದುರಾದೃಷ್ಟಕರ ಎಂದಷ್ಟೇ ಹೇಳಬಹುದು.

Related Posts

Don't Miss it !