ಮರಾಠಿಗರ ಅಟ್ಟಹಾಸ.. ರಾಜಕಾರಣಿಗಳ ಪೀಕಲಾಟ.. ಕನ್ನಡಿಗರದ್ದು ಜಂಜಾಟ..!!

ಕರ್ನಾಟಕದ ಬಾವುಟಕ್ಕೆ ಬೆಂಕಿ ಹಚ್ಚುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದ ಮರಾಠಿ ಭಾಷಿಕರು, ಬೆಳಗಾವಿಯಲ್ಲಿ ಪುಂಡಾಟ ಶುರು ಮಾಡಿಕೊಂಡಿದ್ದಾರೆ. ಕಂಡ ಕಂಡ ಸರ್ಕಾರಿ ವಾಹನಗಳೂ ಸೇರಿದಂತೆ ಖಾಸಗಿ ವಾಹನಗಳ ಮೇಲೂ ದಾಳಿ‌ ನಡೆಸುತ್ತಿದ್ದಾರೆ. ಅಂಗಡಿ ಮುಗ್ಗಟ್ಟುಗಳನ್ನು ಧ್ವಂಸ ಮಾಡಿದ್ದಾರೆ. ಬೆಳಗಾವಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ. ಕೆಲವು ಪುಂಡರನ್ನು ಬೇಟೆಯಾಡಿರುವ ಪೊಲೀಸರು, ಬಂಧಿಸಿ ಕಾನೂನು ರೀತ್ಯ ಜೈಲಿಗಟ್ಟಿದ್ದಾರೆ. ಸದ್ಯದ ಪರಿಸ್ಥಿತಿ ಬೂದಿ ಕೆಂಡದಂತೆ ಭಾಸವಾಗ್ತಿದ್ದು, ಬೆಳಗಾವಿ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರ ಗಡಿಯಂಚಿನಲ್ಲಿ ಖಾಕಿಪಡೆ ಕಣ್ಗಾವಲು ಇಟ್ಟು ಕಾಯುವ ಪರಿಸ್ಥಿತಿ ಎದುರಾಗಿದೆ. ಆದರೆ ನಮ್ಮ ರಾಜಕಾರಣಿಗಳು ಮಾತ್ರ ಬೆಳಗಾವಿಯಲ್ಲಿ ಏನೂ ಆಗಿಲ್ಲವೇನೋ ಎಂಬಂತೆ ಮಾತನಾಡ್ತಿದ್ದಾರೆ. ಭಾಷಾ ಸಾಮರಸ್ಯ ಹಾಳಾಗಿದ್ದರೂ ದುಷ್ಟರನ್ನು ಸದೆ ಬಡಿಯದೆ ಹಾಲುಣಿಸಿ ಸಾಕುವ ಸಂಪ್ರದಾಯಕ್ಕೆ ಮಣೆ ಹಾಕುತ್ತಿದ್ದಾರೆ.

ರಾಜಕಾರಣಿಗಳು ಮರಾಠಿಗಳಿಗೆ ನಡು ಬಗ್ಗಿಸಿದ್ಯಾಕೆ..?

ರಾಜಕಾರಣದಲ್ಲಿ ಅಧಿಕಾರ ಸಿಗುತ್ತೆ ಎನ್ನುವುದಾದರೆ ತನ್ನನ್ನು ನಂಬಿದವರಿಗೂ ದ್ರೋಹ ಬಗೆಯುವ ಮನಸ್ಥಿತಿ ಬಂದು ಬಿಡುತ್ತದೆ ಎನ್ನುವುದು ರಾಜಕಾರಣವನ್ನು ಹತ್ತಿರದಿಂದ ಬಲ್ಲವರ ಮಾತು. ಇದೀಗ ಬೆಳಗಾವಿಯ ರಾಜಕಾರಣಿಗಳು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕನ್ನಡಿಗರನ್ನು ಓಲಿಸಿದರೆ ಮರಾಠಿಗರ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಮರಾಠಿಗರನ್ನು ಓಲೈಸುವ ಕೆಲಸ ಮಾಡಿದರೆ ಇಡೀ ಕರ್ನಾಟಕದಾದ್ಯಂತ ಅಗ್ನಿ ಜ್ವಾಲೆ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಬೆಳಗಾವಿಯಲ್ಲಿ ಎಂಇಎಸ್​ ಎನ್ನುವ ರಾಜಕೀಯ ಪುಡಾರಿಗಳನ್ನು ಬಗ್ಗು ಬಡಿಯುವ ನೆಪದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​ ಹಾಗೂ ಬಿಜೆಪಿ ತನ್ನ ಪಕ್ಷಕ್ಕೆ ಸೇರಿಸಿಕೊಂಡಿವೆ. ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳು ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಅಧಿಕಾರ ಹಿಡಿದಿವೆ. ಆದರೆ ಆ ಎರಡೂ ಪಕ್ಷಗಳಲ್ಲೂ ಇರುವುದು ಅಸಲಿಗೆ ಎಂಇಎಸ್​ ಕಾರ್ಯಕರ್ತರು. ಹೀಗಾಗಿ ಮರಾಠಿಗರನ್ನು ಬೈಯ್ಯುವಂತಿಲ್ಲ, ತೆಗೆಳುವಂತಿಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ ಮರಾಠಿ ಭಾಷಿಕರು.

ಹಿಂದೂ ನಾ ಮುಂದು ಎನ್ನುವ ನಾಯಕರು ಎಲ್ಲಿದ್ದಾರೆ..?

ಎಂಇಎಸ್​ ಮಹಾಮೇಳವ ವಿರೋಧಿಸಿ ಎಂಇಎಸ್​ ನಾಯಕನಿಗೆ ಮಸಿ ಬಳಿದಿದ್ದಕ್ಕೆ ಕನ್ನಡ ನಾಡಿನ ಆಸ್ಮಿತೆಯಾದ ಬಾವುಟಕ್ಕೆ ಬೆಂಕಿ ಹಚ್ಚಲಾಗಿದೆ. ಆ ಬಳಿಕ ಶಿವಾಜಿ ಮಹಾರಾಜರ ಮೂರ್ತಿಗೆ ಮಸಿ ಬಳಿದಿದ್ದಾರೆ ಎಂದು ರಾಯಣ್ಣ ಪ್ರತಿಮೆಯನ್ನು ಭಗ್ನ ಮಾಡಲಾಗಿದೆ. ಇದೀಗ ಬೆಳಗಾವಿಯಲ್ಲಿ ಕನ್ನಡಿಗರು ಜೀವ ಕೈಯ್ಯಲ್ಲಿ ಹಿಡಿದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಕಾನೂನು ಕ್ರಮ ತೆಗೆದುಕೊಳ್ತೇವೆ ಎಂದರೆ, ಸಚಿವ ಸೋಮಣ್ಣ, ಎಂಇಎಸ್​ ನಿಷೇಧ ಮಾಡುವುದಿಲ್ಲ ಎನ್ನುತ್ತಾರೆ. ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಬೆಳಗಾವಿಯಲ್ಲಿ ದಾಂಧಲೆ ಮಾಡಿರುವುದು ಎಂಇಎಸ್​ ಕಾರ್ಯಕರ್ತರು ಅಲ್ಲ, ಯಾರೋ ಪುಂಡರು ಈ ರೀತಿ ಮಾಡಿದ್ದಾರೆ ಎನ್ನುವ ಉಢಾಫೆ ಉತ್ತರ ಕೊಡುತ್ತಾರೆ. ಇನ್ನೂ ರಾಜಕಾರಣಿಗಳನ್ನು ಹಾಗೂ ಜಾತಿಯ ವಿಚಾರವಾಗಿ ಬೀದಿಗೆ ಬರುವ ಮಠಾಧೀಶರು ಕನ್ನಡದ ವಿಚಾರದಲ್ಲಿ ಚಕಾರ ಎತ್ತುತ್ತಿಲ್ಲ. ಮರಾಠಿಗರ ಎದುರು ಎಲ್ಲರೂ ಮಂಡಿಯೂರಿದ್ದಾರೆ. ಹಿಂದೂ ನಾಯಕರು ಎಂದು ಹೇಳಿಕೊಂಡು ಮರಾಠಿಗರ ಹೆಸರನ್ನು ಬೆಂಗಳೂರಿನ ರಸ್ತೆಗಳಿಗೆ ನಾಮಕರಣ ಮಾಡಲು ಕೇಸರಿ ಶಾಲು ಹಾಕಿಕೊಂಡು ಓಡಾಡುವ ನಾಚಿಕೆಯಿಲ್ಲದ ಜನ ಇಂದು ಮನೆಯ ಮೂಲೆ ಸೇರಿಕೊಂಡಿದ್ದಾರೆ.

ಇದನ್ನೂ ಓದಿ:

ಕನ್ನಡಿಗರದ್ದು ಒಗ್ಗಟ್ಟಿಲ್ಲ ಅದೇ ಹೋರಾಟ, ಅಂತ್ಯ ಯಾವಾಗ..?

ಬೆಂಗಳೂರಿನ ಮೇಲ್ಸೇತುವೆಗಳಿಗೆ ಮರಾಠಿಗರ ಹೆಸರನ್ನು ನಾಮಕರಣ ಮಾಡುವಾಗ, ಹಿಂದೂ ಎಂಬ ಲೇಬಲ್​ನಲ್ಲಿ ಕನ್ನಡಿಗರ ಆಸ್ಮಿತೆಯನ್ನು ಪ್ರಶ್ನಿಸುವಾಗ ಜಾಣ ನಿದ್ರೆಯಲ್ಲಿರುವ ಕನ್ನಡಿಗರು ಬುಡಕ್ಕೆ ಬೆಂಕಿ ಬಿದ್ದಾಗ ಎದ್ದು ನಿಲ್ಲುತ್ತಾರೆ. ಇದೀಗ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯಿಂದ ಜ್ಞಾನೋದಯ ಮಾಡಿಕೊಂಡಿರುವ ಕನ್ನಡ ಹೋರಾಟಗಾರರು, ಬೆಳಗಾವಿ ಚಲೋ ಹಮ್ಮಿಕೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಆರಂಭ ಆಗಲಿರುವ ಬೆಳಗಾವಿ ಚಲೋ ಸೋಮವಾರ ಬೆಳಗ್ಗೆ ಬೆಳಗಾವಿ ಸುವರ್ಣಸೌಧ ತಲುಪಲಿದೆ. ಅಲ್ಲೀ ತನಕ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಾ ಸಾಗಲಿದ್ದಾರೆ. ಆದರೆ ಕನ್ನಡಿಗರಲ್ಲಿ ಅದೇ ಒಡಕು, ಹೋರಾಟಕ್ಕೂ ಕನ್ನಡಿಗರಲ್ಲಿ ಒಗ್ಗಟ್ಟು ಇಲ್ಲ ಎಂಬುದನ್ನು ಸಭೆ ಸಾಬೀತು ಮಾಡಿದೆ. ಬೆಳಗಾವಿ ಚಲೋ ಚರ್ಚೆಯ ಸಭೆಗೆ ಕೆಲವರು ಬರ್ತಾರೆ, ಇನ್ನೂ ಕೆಲವರು ಸಭೆಯಿಂದ ದೂರ ಉಳಿಯುತ್ತಾರೆ. ಮರಾಠಿಗರು ಕರ್ನಾಟಕದಲ್ಲಿ ಇದ್ದ ಮೇಲೆ ಕನ್ನಡಿಗರಾಗಿಯೇ ಬಾಳಬೇಕು ಎನ್ನುವುದನ್ನು ಈ ಬಾರಿಯಾದರೂ ಮನಗಾಣಿಸುವ ಕೆಲಸ ಮಾಡಬೇಕಿದೆ. ಮರಾಠಿಗರನ್ನು ದ್ವೇಷ ಮಾಡುವುದು ಬೇಡ, ಆದರೆ ನೀವೂ ಕನ್ನಡಿಗರು ಎನ್ನುವುದನ್ನು ಸಾರಿ ಹೇಳಬೇಕಿದೆ. ಅರ್ಥ ಮಾಡಿಸಬೇಕಿದೆ. ರಾಷ್ಟ್ರೀಯ ಪಕ್ಷಗಳು ಮತಬ್ಯಾಂಕ್​ ನೋಡುತ್ತಾ ಕನ್ನಡಿಗರಿಗೆ ಅನ್ಯಾಯ ಮಾಡುವುದೇ ಆದರೆ, ಕನ್ನಡದ ಜನ ಪರ್ಯಾಯ ನಾಯಕತ್ವವನ್ನು ಬೆಳೆಸುವ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದೆನಿಸುತ್ತದೆ.

Related Posts

Don't Miss it !