ಬೆಂಗಳೂರಲ್ಲಿ ಮಳೆ, ಮಧ್ಯರಾತ್ರಿ ಅಖಾಡಕ್ಕಿಳಿದ ಡಿಸಿಎಂ..

ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಭಾರೀ ಪ್ರಮಾಣದ ಮಳೆಯಾಗಿದ್ದು, ಸಂಜೆಯಿಂದಲೇ ಶುರುವಾದ ಧಾರಾಕಾರ ಮಳೆ ಬೆಂಗಳೂರಿಗರಿಗೆ ತಂಪೆರೆಯುವ ಜೊತೆಗೆ ರಸ್ತೆಗಳು ತುಂಬಿ ಹರಿದ ಪರಿಣಾಮ ಜನರು ಮನೆಗಳಿಗೆ ವಾಪಸ್‌ ಆಗುವುದಕ್ಕೆ ಪರದಾಡುವಂತಾಗಿತ್ತು. ಸಂಜೆ ಬಳಿಕ ಬೆಂಗಳೂರಿನ ಯಲಹಂಕದಲ್ಲಿ 11.4 ಸೆಂ.ಮೀ ಮಳೆ ಆಗಿದೆ. ನಂದಿನಿ ಲೇಔಟ್‌ನಲ್ಲಿ 7.5 ಸೆಂ.ಮೀ. ಹಂಪಿ ನಗರ 8.6 ಸೆಂ.ಮೀ, ಅಗ್ರಹಾರ ದಾಸರಹಳ್ಳಿ 6.2 ಸೆಂ.ಮೀ, ನಾಗಪುರ 8.2 ಸೆಂ.ಮೀ, ಜಕ್ಕೂರು 5.8 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಇದೇ ರೀತಿ ಮುಂದುವರಿಯುತ್ತದೆ ಎಂದು ಎಚ್ಚರಿಸುವ ಕೆಲ ಮಾಡಿದ್ದೀರಿ ಎಚ್ಚರಿಕೆ ನೀಡಿದ್ದಾರೆ.

ಮಳೆಯಿಂದ ಎಲ್ಲೆಲ್ಲಿ ಏನೇನಾಯ್ತು ಗೊತ್ತಾ..?

ಬೆಂಗಳೂರಲ್ಲಿ ಮಳೆ ಅವಾಂತರ ಎದುರಾಗ್ತಿದ್ದಂತೆ ನಾಲ್ಕಾರು ಕಡೆಗಳಲ್ಲಿ ಮರಗಳು ‌ಧರೆಗುರುಳಿವೆ. ಸುಮಾರು 20ಕ್ಕೂ ಹೆಚ್ಚು ಭಾಗದಲ್ಲಿ ಚರಂಡಿ ನೀರು ರಸ್ತೆಗೆ ಹರಿದಿದೆ. ಬೆಂಗಳೂರು ಪೂರ್ವ ವಲಯ, ಮಹದೇವಪುರ ವಲಯ, ಬೆಂಗಳೂರು ದಕ್ಷಿಣದಲ್ಲಿ ಒಟ್ಟು 4 ಮರಗಳು ಧರೆಗುರುಳಿವೆ ಎಂದು ಬಿಬಿಎಂಪಿ ವಾರ್‌ರೂಮ್‌ನಿಂದ ಮಾಹಿತಿ ಲಭ್ಯವಾಗಿದ್ದು, ಮತ್ತಷ್ಟು ಮರಗಳು ಉರುಳಿ ಬಿದ್ದ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ. ಮಳೆಯಿಂದಾಗಿ ಶ್ರೀರಾಂಪುರ ಅಂಡರ್ ಪಾಸ್ ಕೆರೆಯಂತಾಗಿತ್ತು. ರೈಲು ನಿಲ್ದಾಣ, ಮೆಜೆಸ್ಟಿಕ್​​ ಬಸ್​ ನಿಲ್ದಾಣದ ಸುತ್ತಲೂ ಮಳೆ ನೀರು ಸರಾಗವಾಗಿ ಹರಿಯದೇ ವಾಹನ ಸವಾರರು ಪರದಾಟ ನಡೆಸುವಂತಾಯ್ತು.

ಹೆಬ್ಬಾಳ ಭಾಗದಲ್ಲಿ ಸಂಜೆಯಿಂದಲೇ ಭಾರೀ ಮಳೆ ಸುರಿದ ಪರಿಣಾಮ ಹೆಬ್ಬಾಳ ಸಮೀಪದ ಸಿಬಿಐ ಅಂಡರ್ ಪಾಸ್ ಜಲಾವೃತ ಆಗಿತ್ತು. ಚರಂಡಿಗಳೆಲ್ಲಾ ಕಟ್ಟಿಕೊಂಡ ಪರಿಣಾಮ ಮೋರಿ ನೀರು ರಸ್ತೆಗೆ ನುಗ್ಗಿತ್ತು. ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ಗೂ ನೀರು ನುಗ್ಗಿತ್ತು. HRBR ಲೇಔಟ್​ ಅಪಾರ್ಟ್​ಮೆಂಟ್​, ಮಳಿಗೆಗಳಿಗೆ ನುಗ್ಗಿದೆ ಮಳೆಯ ನೀರು. ಮದರ್ ಹುಡ್ ಆಸ್ಪತ್ರೆ ರಸ್ತೆಯೂ ಜಲಾವೃತ ಆಗಿತ್ತು. ಮೆಜೆಸ್ಟಿಕ್​, ಮಾರ್ಕೆಟ್​​, ಹಲಸೂರು ಭಾಗದಲ್ಲೂ ಸುರಿದ ಭಾರೀ ಮಳೆಯಿಂದ ಜನರು ಪರದಾಡಿದ್ರು. ಕೆಂಗೇರಿ, ನಾಗರಭಾವಿ, ತುಮಕೂರು ರಸ್ತೆಯಲ್ಲಿ ನೀರು ಜಲಾವೃತ ಆಗಿತ್ತು. ಮಾಗಡಿ ರಸ್ತೆಯ ಸುಮನಹಳ್ಳಿಯಲ್ಲಿ ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿದ್ದು, ಸುಮನಹಳ್ಳಿ ಕಡೆ ವಾಹನ ಸವಾರರು ಹೋಗದಂತೆ ಪೊಲೀಸರು ಎಚ್ಚರಿಕೆ ನೀಡಿದ್ರು. ಮಳೆ ನೀರು ನಿಂತಿದೆ ಮಾರ್ಗ ಬದಲಿಸಿ ಅಂತ ಸಂಚಾರಿ ಪೊಲೀಸರಿಂದ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದರು.

ಮಳೆಯ ಅಬ್ಬರ, ರಾತ್ರೋರಾತ್ರಿ ಡಿಸಿಎಂ ದೌಡು..!

ಬೆಂಗಳೂರಲ್ಲಿ ಮಳೆ ಅಬ್ಬರದಿಂದ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ರಿಂದ ಮಳೆ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಿದ್ದಾರೆ ಡಿಸಿಎಂ ಡಿ.ಕೆ ಶಿವಕುಮಾರ್ . ಬಿಬಿಎಂಪಿ ವಾರ್ ರೂಮ್‌ಗೆ ಭೇಟಿ ನೀಡಿ ಪರಿಶೀಲಿಸಿದ ಡಿಸಿಎಂ ಡಿ.ಕೆ ಶಿವಕುಮಾರ್‌, ಮಳೆ ಬರುವ ನಿರೀಕ್ಷೆ ಇತ್ತು. ಟ್ರಾಫಿಕ್ ಸಮಸ್ಯೆ ಇರುತ್ತದೆ. ಯಾವುದೇ ಕಡೆ ಹಾನಿಯಾಗದಂತೆ ಎಮರ್ಜೆನ್ಸಿಗೆ ಸಿಬ್ಬಂದಿ ಕರೆಸಿ ಕೆಲಸ ಮಾಡುವಂತೆ ಡಿಸಿಎಂ ಸೂಚನೆ ನೀಡಿದ್ದಾರೆ. ಯಾವ ಚಾನೆಲ್‌ನಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ ಬರ್ತಿದೆ ನೊಡ್ತಿದ್ದೇವೆ. ಜೋನಲ್ ಕಮಿಷನರ್ಸ್ ನೋಡ್ತಿದ್ದಾರೆ. ಏರ್ಪೋರ್ಟ್ ಕಡೆ ಸ್ವಲ್ಪ ನೀರು ಸಂಗ್ರಹ ಆಗಿದೆ. ಆರ್.ಆರ್ ನಗರದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗ್ತಿದೆ. ಕೆ.ಆರ್.ಸರ್ಕಲ್ ನೋಡಿದೆ, ಈ ಹಿಂದೆ ಆದಂತಹ ಅನಾಹುತ ಅಗಬಾರದು ಎಂದು ಡಿ.ಕೆ ಶಿವಕುಮಾರ್‌ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.

Related Posts

Don't Miss it !