ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರಕ್ಕೆ ಮಹಾ ಶಾಕ್..! ಚುನಾವಣೆಗೂ ಮುನ್ನವೇ ಹೊಡೆತ..

ದೇಶದ ಬಹುದೊಡ್ಡ ರಾಜ್ಯ ಆಗಿರುವ ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ಬಿಗ್​ ಶಾಕ್​ ಎದುರಾಗಿದೆ. ಈಗಾಗಲೇ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಸಾಕಷ್ಟು ಸಮೀಕ್ಷೆಗಳು ಹೇಳಿದ್ದರೂ ಪಕ್ಷ ಬಿಟ್ಟು ಹೋಗುತ್ತಿರುವುದು ಕೇಸರಿ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ಸಂಸದರಾಗಿದ್ದು, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕಾಗಿ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ 10ಕ್ಕೂ ಹೆಚ್ಚು ಸಮಾವೇಶಗಳನ್ನು ನಡೆಸಿದ್ದು, ಮತ್ತೊಮ್ಮೆ ಅಧಿಕಾರ ಕೊಡುವಂತೆ ಜನರಲ್ಲಿ ಮತಭಿಕ್ಷೆ ಕೇಳುತ್ತಿದ್ದಾರೆ. ಈ ಸಮಯದಲ್ಲಿ ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿದವರೇ ಪಕ್ಷ ಬಿಟ್ಟು ಎದುರಾಳಿ ಪಡೆಯನ್ನು ಸೇರುತ್ತಿರುವುದು ಬಿಜೆಪಿಗೆ ಸೋಲಿನ ಚಿಹ್ನೆಗಳು ಕಾಣಿಸುವಂತೆ ಮಾಡಿವೆ.

ಸಚಿವ ಸ್ಥಾನಕ್ಕೆ ರಾಜೀನಾಮೆ, ಸಮಾಜವಾದಿ ಸೇರ್ಪಡೆ..!

ಯೋಗಿ ಆದಿತ್ಯನಾಥ್​ ಸರ್ಕಾರಲ್ಲಿ ಪ್ರಮುಖ ಸಚಿವರಾಗಿದ್ದ ಸ್ವಾಮಿ ಪ್ರಸಾದ್​ ಮೌರ್ಯ, ಸಚಿವ ಸ್ಥಾನ ಹಾಗೂ ಬಿಜೆಪಿ ಪಕ್ಷಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಬಳಿಕ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್​ ಅವರನ್ನು ಭೇಟಿ ಮಾಡಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಸ್ವಾಮಿ ಪ್ರಸಾದ್​ ಮೌರ್ಯ ಅವರನ್ನೇ ಹಿಂಬಾಲಿಸಿರುವ ಅವರ ಆಪ್ತ ಶಾಸಕರಾದ ತಿಲ್ಹಾರ್​ ಕ್ಷೇತ್ರದ ಶಾಸಕ ರೋಷನ್​ ಲಾಲ್​ ವರ್ಮಾ, ಬಿಲ್​ಹೌರ್​​ ಕ್ಷೇತ್ರದ ಶಾಸಕ ಭಗವತಿ ಪ್ರಸಾದ್​ ಸಾಗರ್​ ಮತ್ತು ತಿಂಡ್​​ವಾರಿ ಕ್ಷೇತ್ರದ ಶಾಸಕ ಪ್ರಜೇಶ್​ ಪ್ರಜಾಪತಿ, ಹಾಗೂ ವಿನಯ ಶಂಕ್ಯ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಸ್ವಾಮಿ ಪ್ರಸಾದ್​ ಮೌರ್ಯ ಎಲ್ಲಿರುತ್ತಾರೋ ಅಲ್ಲಿ ನಾವಿರುತ್ತೇವೆ ಎನ್ನುವ ಮೂಲ ‘ಸ್ವಾಮಿ’ನಿಷ್ಠೆ ಮೆರೆದಿದ್ದಾರೆ. ಇವರೆಲ್ಲರೂ ಕಳೆದ ಬಾರಿ ಬಿಎಸ್​ಪಿ ಬಿಟ್ಟು ಬಿಜೆಪಿ ಸೇರಿದ್ದರು.

ಯೋಗಿ ಆದಿತ್ಯನಾಥ್​ ಅವರನ್ನು ಸಂತೈಸುವಂತಿದೆ (ಸಾಂಧರ್ಭಿಕ ಚಿತ್ರ)

Read This:

ಸರ್ಕಾರದ ವಿರುದ್ಧ ಗುಡುಗಿರುವ ಸ್ವಾಮಿ ಪ್ರಸಾದ್​ ಮೌರ್ಯ..!

ಯೋಗಿ ಆದಿತ್ಯನಾಥ್​ ಸರ್ಕಾರದಲ್ಲಿ ಅತೃಪ್ತಿ ಹೊಂದಿದ್ದ ಸ್ವಾಮಿ ಪ್ರಸಾದ್​ ಮೌರ್ಯ, ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಿದ್ದರು. ಆದರೆ ಹೈಕಮಾಂಡ್​ ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ. ಇದೀಗ ರಾಜೀನಾಮೆ ಬಳಿಕ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸ್ವಾಮಿ ಪ್ರಸಾದ್​ ಮೌರ್ಯ, ಯೋಗಿ ಆದಿತ್ಯನಾಥ್​ ಸರ್ಕಾರ, ದಲಿತರು, ಬಡವರು, ಹಿಂದುಳಿದ ವರ್ಗ, ರೈತರು, ನಿರುದ್ಯೋಗಿ ಯುವಕ ಯುವತಿಯರು ಹಾಗೂ ಸಣ್ಣ ವ್ಯಾಪಾರಸ್ಥರನ್ನು ಕಡೆಗಣಿಸಿತು. ಇದೇ ಕಾರಣಕ್ಕಾಗಿ ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ. ಇಷ್ಟು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ 12ಕ್ಕೂ ಅಧಿಕ ಶಾಸಕರು ರಾಜೀನಾಮೆ ನೀಡಿ ಪಕ್ಷದಿಂದ ಹೊರ ಬರಲಿದ್ದಾರೆ ಎಂದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸ್ವಾಮಿ ಪ್ರಸಾದ್​ ಮೌರ್ಯ, ನಾನು ಬಿಜೆಪಿ ಬಿಟ್ಟು ಹೊರ ಬಂದಿರುವುದರ ಪರಿಣಾಮ ಏನು ಎನ್ನುವುದು ಚುನಾವಣಾ ಫಲಿತಾಂಶದ ಬಳಿಕ ಗೊತ್ತಾಗಲಿದೆ ಎಂದು ಗುಡುಗಿದ್ದಾರೆ.

ಅಮಿತ್​ ಷಾ ಹಾಗೂ ಕೇಶವ್ ಪ್ರಸಾದ್ ಮೌರ್ಯ

ಸ್ವಾಮಿ ಪ್ರಸಾದ್​ ಮೌರ್ಯ ರಾಜೀನಾಮೆಯಿಂದ ಬೆಚ್ಚಿ ಬಿದ್ದಿದ್ದು ಯಾಕೆ..?

ಸ್ವಾಮಿ ಪ್ರಸಾದ್​ ಮೌರ್ಯ ಹಾಗೂ ನಾಲ್ವರು ಶಾಸಕರಿಗೆ ಟಿಕೆಟ್​ ಸಿಗುವುದು ಅನುಮಾನ ಇತ್ತು. ಅದೇ ಕಾರಣಕ್ಕೆ ಬಿಜೆಪಿಗೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷ ಸೇರ್ಪಡೆ ಆಗಿದ್ದಾರೆ ಎಂದು ಬಿಜೆಪಿಯ ಕೆಲವು ಬೆಂಬಲಿಗರು ವ್ಯಾಖ್ಯಾನ ಮಾಡುತ್ತಿದ್ದಾರೆ. ಆದರೆ ಸ್ವಾಮಿ ಪ್ರಸಾದ್​ ಮೌರ್ಯ, ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕರಾಗಿದ್ದಾರೆ. ಕಳೆದ ಬಾರಿ ಬಿಎಸ್​ಪಿಯಿಂದ ಸ್ವಾಮಿ ಪ್ರಸಾದ್​ ಮೌರ್ಯ ಬಿಜೆಪಿಗೆ ವಲಸೆ ಬಂದ ಕಾರಣದಿಂದಲೇ ಬಿಜೆಪಿ ಅತ್ಯಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಹಾಗೂ ಅಧಿಕಾರ ಹಿಡಿದಿದ್ದು ಎನ್ನುವ ಮಾತುಗಳಿವೆ. ಅಷ್ಟು ಮಾತ್ರವಲ್ಲದೆ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವುದಕ್ಕೆ ತಂತ್ರಗಾರಿಕೆ ಮಾಡಿದ್ದ ಕೇಂದ್ರ ತಂಡದಲ್ಲಿ ಸ್ವಾಮಿ ಪ್ರಸಾದ್​ ಮೌರ್ಯ ಇದ್ದರು. ಆದರೆ ಬದಲಾದ ರಾಜಕೀಯದಲ್ಲಿ ತಂತ್ರಗಾರಿಕೆ ಮಾಡಿದ ಸ್ವಾಮಿ ಪ್ರಸಾದ್​ ಮೌರ್ಯ ಎದುರಾಳಿ ತಂಡ ಸೇರಿದ್ದು ಕೇಸರಿ ಕೆಂಡವಾಗುವಂತೆ ಮಾಡಿದೆ. ಸಮಾಜವಾದಿ ನಾಯಕರೊಬ್ಬರು ಬಿಜೆಪಿ ಕಚೇರಿಗೆ ಅಮೇಜಾನ್​ ಮೂಲಕ ಬೀಗವೊಂದನ್ನು ಖರೀದಿ. ಬಿಜೆಪಿ ಕಚೇರಿಗೆ ಕಳುಹಿಸಿದ್ದು, ಮಾರ್ಚ್​ 10ರ ಬಳಿಕ ಬೀಗ ಹಾಕಬೇಕು ಎಂದು ವ್ಯಂಗ್ಯವಾಡಿದ್ದಾರೆ.

Also Read;

ಸ್ವಾಮಿ ಪ್ರಸಾದ್​ ಮೌರ್ಯ ಸೆಳೆಯಲು ಅಮಿತ್​ ಷಾ ಟಾಸ್ಕ್​..!

ಉತ್ತರ ಪ್ರದೇಶ ಸಿಎಂ ಯೋಗಿ ಆದಿಥ್ಯನಾಥ್​ ವಿರುದ್ಧ ಕೇಂದ್ರ ಗೃಹ ಸಚಿವ aಮಿತ್​ ಷಾ ಬಳಿ ದೂರು ಸಲ್ಲಿಕೆಯಾಗಿತ್ತು ಎನ್ನಲಾಗಿದೆ. ಯೋಗಿ ಆದಿಥ್ಯನಾಥ್​ ವಿರುದ್ಧ ದೂರು ಕೊಟ್ಟರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದರಿಂದ ನೊಂದಿದ್ದ ಸ್ವಾಮಿ ಪ್ರಸಾದ್​ ಮೌರ್ಯ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದರು. ಅದರಂತೆ ಇಂದು ರಾಜೀನಾಮೆ ನೀಡಿದ್ದಾರೆ. ಆದರೆ ದೂರು ನೀಡಿದಾಗ ಗಮನಹರಿಸದ ಅಮಿತ್​ ಷಾ, ಇದೀಗ ಸ್ವಾಮಿ ಪ್ರಸಾದ್​ ಮೌರ್ಯ ಅವರನ್ನು ವಾಪಸ್​ ಪಕ್ಷಕ್ಕೆ ಕರೆತರುವ ಹೊಣೆಯನ್ನು ಉಪಮುಖ್ಯಮಂತ್ರಿ ಕೇಶವ್​ ಮೌರ್ಯ ಅವರಿಗೆ ವಹಿಸಿದ್ದಾರೆ ಎನ್ನಲಾಗಿದೆ. ಬಹಿರಂಗವಾಗಿಯೇ ಟ್ವೀಟ್​ ಮಾಡಿರುವ ಕೇಶವ್​ ಪ್ರಸಾದ್​ ಮೌರ್ಯ, ಪಕ್ಷ ತೊರೆಯಬೇಡಿ, ಕುಳಿತು ಮಾತನಾಡೋಣ. ಎಲ್ಲದಕ್ಕೂ ಪರಿಹಾರ ಸಿಗಲಿದೆ ಎಂದಿದ್ದಾರೆ. ಆದರೆ ಮಾತನಾಡಬೇಕು, ಆದರೆ ಅವರಿಗೆ ಸಮಯವಿಲ್ಲ ಎಂದು ಸ್ವಾಮಿ ಪ್ರಸಾದ್​ ಮೌರ್ಯ ತಿರುಗೇಟು ನೀಡಿದ್ದಾರೆ. ನಾನು ಬೇರೆ ಸಿದ್ಧಾಂತದಿಂದ ಬಂದಿದ್ದರೂ ಸಮರ್ಪಣಾ ಭಾವದಿಂದ ಕೆಲಸ ಮಾಡಿದ್ದೇನೆ. ಆದರೂ ನಿರ್ಲಕ್ಷ್ಯವನ್ನು ಸಹಿಸಲಾರೆ ಎಂದಿದ್ದಾರೆ.

Related Posts

Don't Miss it !