BIGBOSS: ಕೋಟ್ಯಂತರ ಕನ್ನಡಿಗರ ನಿರೀಕ್ಷೆ ಹುಸಿ ಆಗಲಿಲ್ಲ..!

ಬಿಗ್​ಬಾಸ್​ ಕನ್ನಡ ಹಲವಾರು ಏಳುಬೀಳುಗಳ ಜೊತೆಗೆ ತೆರೆ ಬಿದ್ದಿದೆ. ಬಿಗ್​ಬಾಸ್​ ಕಾರ್ಯಕ್ರಮ ಆರಂಭವಾದ ಕೆಲವೇ ದಿನಗಳಲ್ಲಿ ಬಿಗ್​ಬಾಸ್​ ಪಟ್ಟ ಗೆಲ್ಲುವ ಕುದುರೆಗಳನ್ನು ಕರ್ನಾಟಕದ ವೀಕ್ಷಕರು ಕಟ್ಟಿ ಹಾಕಿದ್ದರು. ಆ ಕೋಟ್ಯಂತರ ವೀಕ್ಷಕರ ನಿರೀಕ್ಷೆ ಈ ಬಾರಿ ಹುಸಿಯಾಗಲಿಲ್ಲ. ಕಟ್ಟಿ ಹಾಕಿದ್ದ ಕುದುರೆಗಳನ್ನೇ ಕಿಚ್ಚ ಸುದೀಪ್​ ವೇದಿಕೆ ಮೇಲೆ ಎಳೆದು ತಂದಿದ್ದರು. ಆ ಕುದುರೆಗಳಲ್ಲಿ ಎರಡರ ಬಲಾಬಲ ಒಂದೇ ಆಗಿದ್ದರೂ ಪಂದ್ಯದ ನಿಯಮದ ಪ್ರಕಾರ ಒಬ್ಬರನ್ನು ಮಾತ್ರ ವಿಜೇತರನ್ನಾಗಿ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇತ್ತು. ಅದರಂತೆ ಹಳ್ಳಿಹಕ್ಕಿ ಮಂಜು ಪಾವಗಡ ಬಿಗ್​ಬಾಸ್​ ವಿನ್ನರ್​ ಆಗಿ ಟ್ರೋಫಿಗೆ ಮುತ್ತಿಟ್ಟಿದ್ದಾರೆ.

ಸೋಲಿನಲ್ಲೂ ಗೆಲುವಿನ ನಗೆ ಬೀರಿದ ಕೆ.ಪಿ ಅರವಿಂದ್​..!

ಅಂತಾರಾಷ್ಟ್ರೀಯ ಬೈಕ್​ ರೇಸರ್​​​ ಆಗಿರುವ ಕೆ.ಪಿ ಅರವಿಂದ್​, ಸಾಕಷ್ಟು ವೇದಿಕೆಗಳಲ್ಲಿ ಮಿಂಚಿದ್ದಾರೆ. ಅದರಂತೆ ಕೆ.ಪಿ ಅರವಿಂದ್​ ಬಿಗ್​ಬಾಸ್​ ವೇದಿಕೆಯಲ್ಲೂ ತನ್ನ ಪರಾಕ್ರಮ ಮೆರೆದಿದ್ದಾರೆ. ತನ್ನ ಕಠಿಣ ಪರಿಶ್ರಮದಿಂದ ಜನರ ಮನ ಸೆಳೆದಿದ್ದ ಕೆ.ಪಿ ಅರವಿಂದ್​ ಅಂತಿಮ ಘಟ್ಟ ತಲುಪಿದ್ದರು. ಬಿಗ್​ಬಾಸ್​ ವಿನ್ನರ್​ ಮಂಜು ಪಾವಗಡ ಗೆಲುವಿಗೂ ಅರವಿಂದ್​ ಸ್ಫೂರ್ತಿಯಾಗಿದ್ದಾರೆ. ಸೋಲನ್ನು ಸಮಚಿತ್ತದಿಂದ ಸ್ವೀಕರಿಸಿದ ಕೆ.ಪಿ ಅರವಿಂದ್​, ಕರ್ನಾಟಕದ ಜನರಿಗೇ ಗೊತ್ತಿಲ್ಲದೆ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದರೂ ಕೋಟ್ಯಂತರ ಹೃದಯಗಳಿಗೆ ಹತ್ತಿರ ಆಗಿದ್ದರು. ಸ್ಪರ್ಧೆಯ ನಿಯಮದಂತೆ ಮಂಜು ಪಾವಗಡ ಜನರ ಜನರ ಆಯ್ಕೆಯಂತೆ ಗೆಲುವಿನ ಮಾಲೆ ಧರಿಸಿದ್ದಾರೆ. ಆದರೆ ಗೆಲುವಿನ ಅಂತರ ತೀರ ಕಡಿಮೆ ಅನ್ನೋದು ಕಲರ್ಸ್​ ಕನ್ನಡ ನೀಡಿದ ಅಂಕಿ ಅಂಶ.

ರನ್ನರ್​ ಅಪ್​ ಕೆ.ಪಿ ಅರವಿಂದ್​

ಬಿಗ್​ಬಾಸ್​ ಮನೆ ಮಂದಿಯ ಹೃದಯ ಗೆದ್ದ ಮಂಜು..!

ಗೆಲುವಿಗೆ ಕ್ಷಣಗಣನೆ ಎನ್ನುವ ಸಮಯದಲ್ಲಿ ಕಿಚ್ಚ ಸುದೀಪ್​ ಉಳಿದ ಸ್ಪರ್ಧಿಗಳ ಆಯ್ಕೆ ಕೇಳಿದರು. ಈ ವೇಳೆ ನಿರೀಕ್ಷೆಯನ್ನು ಮೀರಿ ಮಂಜು ಪಾವಗಡ ಅವರಿಗೆ ಉಳಿದ ಸ್ಪರ್ಧಿಗಳ ಬೆಂಬಲ ವ್ಯಕ್ತವಾಯ್ತು. ಕೆ.ಪಿ ಅರವಿಂದ್​ ಅವರಿಗೆ ನಿರೀಕ್ಷೆಯಂತೆ ದಿವ್ಯಾ ಉರುಡುಗ ಬೆಂಬಲಿಸಿದ್ರು. ಇನ್ನು ಬ್ರೋ ಗೌಡ ಶಮಂತ್​ ಕೂಡ ಅರವಿಂದ್​ ಬೆಂಬಲಕ್ಕೆ ನಿಂತಿದ್ದರು. ಇವರಿಬ್ಬರನ್ನೂ ಹೊರತುಪಡಿಸಿದ್ರೆ ಉಳಿದ ಎಲ್ಲಾ ಸ್ಪರ್ಧಿಗಳು ಮಂಜು ಪಾವಗಡ ಅವರನ್ನೇ ಆಯ್ಕೆ ಮಾಡಿದರು. ಅದರಲ್ಲಿ ವಿಶೇಷ ಎನ್ನಿಸಿದು, ಚಕ್ರವರ್ತಿ ಚಂದ್ರಚೂಡ್​ ಹಾಗೂ ಪ್ರಶಾಂತ್​ ಸಂಬರಗಿ ಮಂಜು ಪಾವಗಡ ಬಗ್ಗೆ ಮಾತನಾಡಿದ್ದು. ಬಿಗ್​ಬಾಸ್​ ಮನೆಯೊಳಗೆ ಮಂಜು ವಿರುದ್ಧ ಮಾತನಾಡುತ್ತಿದ್ದ ಈ ಇಬ್ಬರು ಹಿರಿಯರು ಮಾಡಿದ ತಪ್ಪನ್ನು ತಿದ್ದಿಗೊಂಡು ಸೂಕ್ತ ಕಾರಣ ನೀಡಿ ಮನಮಿಡಿಯುವಂತೆ ​ಅಂತಿಮ ಘಟ್ಟದಲ್ಲಿ ಮಾತನಾಡಿ ಶಹಬ್ಬಾಸ್​ ಎನ್ನುವಂತೆ ಮಾಡಿದರು.

ಟಾಸ್​ ನಿರ್ಧಾರ ಮಾಡಿತ್ತು ಗೆಲುವಿನ ಆಯ್ಕೆ..!

ಜನರ ಮತಗಳ ಆಯ್ಕೆ ಪ್ರಕಾರ ಮಂಜು ಪಾವಗಡ ಹಾಗೂ ಕೆ.ಪಿ ಅರವಿಂದ್​ ಇಬ್ಬರು ಹೆಚ್ಚುಕಡಿಮೆ ಸಮಬಲ ಸಾಧಿಸಿದ್ದರು. ಕಿಚ್ಚ ಸುದೀಪ್​ ಎಡ ಹಾಗೂ ಬಲದಲ್ಲಿ ಯಾರು ನಿಲ್ಲಬೇಕು ಎನ್ನುವ ಬಗ್ಗೆ ಈ ಬಾರಿ ಸುದೀಪ್​ ಹೊಸ ಸಂಪ್ರದಾಯ ಹುಟ್ಟು ಹಾಕಿದ್ರು. ಟಾಸ್​ ಹಾಕುವ ಮೂಲಕ ಆಯ್ಕೆ ಮಾಡಲು ಸುದೀಪ್​ ನಿರ್ಧಾರ ಮಾಡಿದರು. ಟಾಸ್​ನಲ್ಲಿ ಹೆಡ್​ ಕೇಳಿಕೊಂಡ ಮಂಜು ಪಾವಗಡ ಮೊದಲ ಆಯ್ಕೆ ಮಾಡಿಕೊಂಡು ಸುದೀಪ್​ ಬಲಭಾಗದಲ್ಲಿ ನಿಂತುಕೊಂಡರು. ಅರವಿಂದ್​ ಕೆ.ಪಿ ಎಡಭಾಗದಲ್ಲಿ ನಿಲ್ಲುವ ಮೂಲಕ ಅದೃಷ್ಟ ಕೈಕೊಟ್ಟಿದ್ದನ್ನು ಖಚಿತ ಮಾಡಿಕೊಂಡರು. ಟಾಸ್​ ಕೊಟ್ಟ ಸುಳಿವಿನಂತೆ ಮಂಜು ಪಾವಗಡ ಅವರ ಕೈ ಎತ್ತುವ ಮೂಲಕ ಸುದೀಪ್​ ಗೆಲುವು ಘೋಷಣೆ ಮಾಡಿದ್ರು. ಈ ಬಾರಿ ಟಾಪ್​​ 5 ಆಟಗಾರರಿಗೂ ಬಿಗ್​ಬಾಸ್​ ವೇದಿಕೆಯಲ್ಲಿ ಕ್ಯಾಷ್​ ಅವಾರ್ಡ್​ ಇದ್ದಿದ್ದು ವಿಶೇಷ.

ಅರವಿಂದ್​ಗೆ ಗೆಲುವಿನ ಶ್ರೇಯ ಕೊಟ್ಟ ಮಂಜು..!

ಗೆಲುವಿನ ಬಳಿಕ ಮಾತನಾಡಿದ ಮಂಜು ಪಾವಗಡ, ಅರವಿಂದ್​ ಕೆ.ಪಿ ಅವರೇ ನನ್ನ ಆಟಕ್ಕೆ ಸ್ಫೂರ್ತಿ, ಅವರನ್ನು ಮೊದಲಿಗೆ ನೋಡುತ್ತಿದ್ದ ಹಾಗೆ ನನ್ನಲ್ಲೂ ಆಟ ಆಡುವ ಛಲ ಹುಟ್ಟಿಕೊಂಡಿತ್ತು. ನನ್ನ ಗೆಲುವಿನಲ್ಲಿ ಅರವಿಂದನ ಪಾತ್ರವೂ ಇದೆ ಎಂದು ಗೆಲುವಿನ ಶ್ರೇಯವನ್ನು ಅರವಿಂದ್​ಗೆ ನೀಡಿದರು.ಇನ್ನೂ ಬಿಗ್​ಬಾಸ್​ ಮನೆಯ 19 ಸ್ನೇಹಿತರು ನನ್ನ ಜೊತೆಗೆ ನಡೆದುಕೊಂಡ ರೀತಿಯೂ ಪ್ರಶಸ್ತಿ ಗೆಲ್ಲುವಲ್ಲಿ ಸಹಕಾರಿಯಾಯ್ತು. ಎಲ್ಲರಿಗೂ ಧನ್ಯವಾದ ಎಂದ ಪಾವಗಡ ಮಂಜು, ಅಂತಿಮವಾಗಿ ಬಿಗ್​ಬಾಸ್​ ಗೆಲುವಿನ ಪ್ರಶಸ್ತಿಯನ್ನು ಮಜಾಭಾರತ ತಂಡಕ್ಕೆ ಸಮರ್ಪಿಸುವ ಮೂಲಕ ನಡೆದು ಬಂದ ಹಾದಿಯನ್ನು ನೆನೆಪು ಮಾಡಿಕೊಳ್ಳುವುದನ್ನು ಮರೆಯಲಿಲ್ಲ. ಮಾತನಾಡಲು ಆಗ್ತಿಲ್ಲ ಎನ್ನುತ್ತಲೇ ಎಲ್ಲವನ್ನೂ ಮಾತನಾಡಿದರು ಮಂಜು ಪಾವಗಡ.

Related Posts

Don't Miss it !