ಬಿಜೆಪಿ ಆರೋಪಗಳಿಗೆ ಬಿಜೆಪಿಯೇ ಉತ್ತರ..! ಕಾಂಗ್ರೆಸ್​, ಜೆಡಿಎಸ್​ ನಿರಾಳ..

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​ ಮೂರು ಪ್ರಮುಖ ರಾಜಕೀಯ ಪಕ್ಷಗಳು ಇವೆ. ಮೂರು ಪಕ್ಷಗಳು ತಮಗೆ ಬೇಕಾದ ಹಾಗೆ ರಾಜಕೀಯ ಮಾಡುವುದು ಸರ್ವೇ ಸಾಮಾನ್ಯ. ಆದರೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ವಿರುದ್ಧ ಬಿಜೆಪಿ ಯಾವಾಗಲೂ ಟೀಕೆ ಮಾಡುತ್ತಿದ ವಿಚಾರ ಇದೀಗ ನಿಲ್ಲುವ ಅನಿವಾರ್ಯತೆ ಎದುರಾಗಿದೆ. ಇನ್ಮುಂದೆ ಬಿಜೆಪಿ ಈ ವಿಚಾರಗಳನ್ನು ಇಟ್ಟುಕೊಂಡು ಯಾವುದೇ ಕಾರಣಕ್ಕೂ ಟೀಕೆ ಮಾಡಲು ಸಾಧ್ಯವಿಲ್ಲ. ಬಸವರಾಜ ಬೊಮ್ಮಾಯಿ ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿ ಆದ ಬಳಿಕ ಈ ವಿಚಾರಗಳು ತನ್ನಿಂದ ತಾನೇ ನಿಲ್ಲಬೇಕಿದೆ.

ಕಾಂಗ್ರೆಸ್​ನಲ್ಲಿ ನಾಯಕರಿಲ್ಲ, ಜೆಡಿಎಸ್​ ಬಳುವಳಿ..!

ಸಿದ್ದರಾಮಯ್ಯ ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರಿದ 10 ವರ್ಷಗಳಲ್ಲಿ ಕಾಂಗ್ರೆಸ್​ನಿಂದ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ್ರು. ಇದನ್ನೇ ಬಿಜೆಪಿ ನಾಯಕರು ಟೀಕಾಸ್ತ್ರವಾಗಿ ಬಳಸಿಕೊಂಡು ಕಾಂಗ್ರೆಸ್​ನಲ್ಲಿ ಸಮರ್ಥ ನಾಯಕರ ಕೊರತೆ ಇದೆ. ಇದೇ ಕಾರಣಕ್ಕೆ ಜಡಿಎಸ್​ನಿಂದ ನಾಯಕರನ್ನು ಎರವಲು ಪಡೆದುಕೊಂಡು ಮುಖ್ಯಮಂತ್ರಿ ಮಾಡಲಾಗಿದೆ ಎಂದು ಟೀಕಿಸುತ್ತಿದ್ದರು. ಇದೀಗ ಬಸವರಾಜ ಬೊಮ್ಮಾಯಿ ಕೂಡ ದೇವೇಗೌಡರ ಅಂಗಳದಲ್ಲಿ ಪಳಗಿರುವ ರಾಜಕಾರಣಿ. ಅವರ ತಂದೆ ಎಸ್​ ಬೊಮ್ಮಾಯಿ ಕೂಡ ಜನತಾದಳದಿಂದ ಮುಖ್ಯಮಂತ್ರಿ ಆಗಿದ್ದು, ಇದೀಗ ಬಿಜೆಪಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕೂಡ ಜನತಾ ಪರಿವಾರದ ಎರವಲು ನಾಯಕನನ್ನು ಎನ್ನುವುದು ವಿಶೇಷ. ಹಾಗಾಗಿ ಕಾಂಗ್ರೆಸ್​ ಪಕ್ಷವನ್ನು ಟೀಕೆ ಮಾಡಲು ಅಸಾಧ್ಯ.

ಅಪ್ಪ ಮಕ್ಕಳ ಪಕ್ಷ ಟೀಕೆಗೂ ಫುಲ್​ ಸ್ಟಾಪ್​..!


ಬಿಜೆಪಿ ನಾಯಕರು ಜೆಡಿಎಸ್​ ವಿರುದ್ಧ ಟೀಕಾಸ್ತ್ರ ಪ್ರಯೋಗ ಮಾಡ್ತಿದ್ದಾರೆ ಎಂದರೆ ಅಪ್ಪ ಮಕ್ಕಳ ಪಕ್ಷ, ಅಪ್ಪ ಮಾಜಿ ಪ್ರಧಾನಿ ಮಗ ಮಾಜಿ ಮುಖ್ಯಮಂತ್ರಿ, ಮನೆ ಮಂದಿಯೆಲ್ಲಾ ಶಾಸಕರು ಎನ್ನುವ ಮಾತುಗಳನ್ನು ಆಡುತ್ತಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ಪುತ್ರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಯಡಿಯೂರಪ್ಪ ಪುತ್ರ ಸಂಸದರಾಗಿದ್ದಾರೆ. ಮತ್ತೋರ್ವ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಕರೆತರುವ ಕೆಲಸ ಮಾಡುತ್ತಿದ್ದಾರೆ. ಈಶ್ವರಪ್ಪ ಪುತ್ರ ಕಾಂತೇಶ್​ ಕೂಡ ಜಿಲ್ಲಾ ಪಂಚಾಯ್ತಿ ಆಯ್ಕೆಯಾಗಿದ್ದರು.

ಅಪ್ಪನ ಹಾಗೆ ನಾನು ರಾಜಕೀಯಕ್ಕೆ ಬರಲ್ಲ..!

ಮಾಜಿ ಮುಖ್ಯಮಂತ್ರಿ ದಿವಂಗತ ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ ಎನ್ನುವುದು ಸತ್ಯ. ಆದರೆ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್​, ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಭರತ್​, ನಾನು ಉದ್ಯಮಿ ಆಗಿ ಗುರುತಿಸಿಕೊಂಡಿದ್ದೇನೆ, ಅದೇ ಕ್ಷೇತ್ರದಲ್ಲಿ ಮುಂದುವರಿಯಲಿದ್ದು, ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದಿದ್ದಾರೆ. ಇದೊಂದು ಆಶಾದಯಕ ವಿಚಾರ ಎನ್ನಬಹುದಾಗಿದೆ. ಅಂತಿಮವಾಗಿ ಎಲ್ಲಾ ಪಕ್ಷಗಳಲ್ಲೂ ಎಲ್ಲವೂ ಇದ್ದಿದ್ದೇ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎನ್ನುವುದನ್ನು ಜನತೆ ಅರಿಯಬೇಕಿದೆ.

Related Posts

Don't Miss it !