‘ಹುಟ್ಟು ಹೋರಾಟಗಾರ’ ರಾಜಕೀಯ ಬಂಧಿಯಾಗಿದ್ದು ಎಷ್ಟು ಸತ್ಯ..?

ಮಂಡ್ಯ ಜಿಲ್ಲೆ ಕೆ.ಆರ್​ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಜನಿಸಿದ ಬಿ.ಎಸ್​ ಯಡಿಯೂರಪ್ಪ ಶಿವಮೊಗ್ಗದ ಶಿಕಾರಿಪುರ ಸೇರಿದ್ರು. ಪದವಿ ಪೂರೈಸಿದ ಬಳಿಕ ರೈಸ್​ ಮಿಲ್​ ಗುಮಾಸ್ತನಾಗಿ ಕೆಲಸಕ್ಕೆ ಸೇರಿದ್ದ ಯಡಿಯೂರಪ್ಪ, ಆರ್​ಎಸ್​ಎಸ್​ ಕಾರ್ಯಕರ್ತನಾಗಿ ತೊಡಗಿಸಿಕೊಂಡರು. 1973 ರಲ್ಲಿ ಪುರಸಭೆ ಸದಸ್ಯನಾದ ಬಳಿಕ ಹೋರಾಟಕ್ಕೆ ಇಳಿದ ಬಿ.ಎಸ್​ ಯಡಿಯೂರಪ್ಪ, ಶಿವಮೊಗ್ಗದಲ್ಲಿ ಭೂರಹಿತ ರೈತರ ಪರವಾಗಿ ಹೋರಾಟ ಶುರು ಮಾಡಿದರು ಅಲ್ಲಿಂದ ಇಲ್ಲೀವರೆಗೂ ಹೋರಾಟದ ಮೂಲಕವೇ ಎಲ್ಲವನ್ನೂ ಪಡೆಕೊಂಡು ಬಂದಿದ್ದ ಮಂಡ್ಯ ಮಣ್ಣಿನ ಮಗ ಇಂದು ಏನನ್ನೂ ಮಾಡದಂತಹ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಹೈಕಮಾಂಡ್​ ಹೇಳಿದನ್ನು ಪಾಲಿಸುತ್ತೇನೆ ಎಂದು ಶರಣಾಗತರಾಗಿದ್ದಾರೆ.

ಕೆಜಿಪಿ ಪಕ್ಷ, ಬಿಜೆಪಿಗೆ ಭಾರೀ ನಷ್ಟ..!

2011ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ಬಿಜೆಪಿ ವಿರುದ್ಧ ಬಿ.ಎಸ್​ ಯಡಿಯೂರಪ್ಪ ಸಿಡಿದೆದ್ದಿದ್ದರು. 2012ರಲ್ಲಿ ಆಪ್ತ ನಾಯಕರನ್ನು ಸೇರಿಕೊಂಡು ಕೆಜೆಪಿ ಪಕ್ಷ ಸ್ಥಾಪನೆ ಮಾಡಿದ್ದರು. ಇದರ ಪರಿಣಾಮ ಎನ್ನುವಂತೆ 2014ರಲ್ಲಿ ಬಿಜೆಪಿ ನೆಲಕಚ್ಚುವಂತೆ ಮಾಡಿತ್ತು. ಲಿಂಗಾಯತ ಸಮುದಾಯ ಬಿ.ಎಸ್​ ಯಡಿಯೂರಪ್ಪ ಪರವಾಗಿ ನಿಂತರೂ ಕೆಜೆಪಿ ಕೂಡ ನಿರೀಕ್ಷೆಯಂತೆ ಗೆಲುವು ಸಾಧಿಸಲಿಲ್ಲ. ಆದರೆ ಬಿಜೆಪಿಯನ್ನು ಬಗ್ಗು ಬಡಿಯುವಲ್ಲಿ ಬಿ.ಎಸ್​ ಯಡಿಯೂರಪ್ಪ ಯಶಸ್ವಿಯಾದರು ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಬಿ.ಎಸ್​ ಯಡಿಯೂರಪ್ಪ ಸ್ಥಾಪಿಸಿದ ಕೆಜೆಪಿ ಕೃಪೆಯಿಂದಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಅವಕಾಶ ಒದಗಿ ಬಂದಿತ್ತು.

ಶತ್ರುವನ್ನು ಸ್ನೇಹದಿಂದ ಸೋಲಿಸುವ ಸೂತ್ರ..!

ಬಿಜೆಪಿಯಿಂದ ಹೊರಕ್ಕೆ ಹೋಗಿದ್ದ ಯಡಿಯೂರಪ್ಪ ಬಿಜೆಪಿಗೆ ಎದುರಾಳಿಯಾಗಿ ನಿಂತಿದ್ದರು. ಲಿಂಗಾಯತ ಸಮುದಾಯ ಕೂಡ ಬಿಜೆಪಿಯಿಂದ ದೂರ ಆಗಿದ್ರಿಂದ ಕಂಗಾಲಾದ ಬಿಜೆಪಿ ಮತ್ತೆ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ತು. ರಾಜ್ಯಾಧ್ಯಕ್ಷ ಸ್ಥಾನವನ್ನೂ ಕೊಡ್ತು. ಕೊನೆಗೆ ಮುಖ್ಯಮಂತ್ರಿ ಪಟ್ಟವನ್ನೂ ಕೊಡ್ತು. ಇದೀಗ ಬಿ.ಎಸ್​ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕುವಂತೆ ಯೋಜನೆ ರೂಪಿಸಿದ ಬಿಜೆಪಿ ಹೈಕಮಾಂಡ್​, ಬಿಜೆಪಿ ಪಕ್ಷವನ್ನೂ ಬಿಡಬಾರದು, ಬೇರೊಂದು ಪಕ್ಷವನ್ನೂ ಕಟ್ಟಬಾರದು ಎನ್ನುವ ಸ್ಥಿತಿಗೆ ತಂದ ಬಳಿಕ ಕಿಕ್​ಔಟ್​ ಮಾಡಿದೆ. ಆದರೂ ಯಡಿಯೂರಪ್ಪ ಏನನ್ನೂ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ಇದರ ಹಿಂದೆ ಏನಿದೆ ಎನ್ನುವುದು ಬಿ.ಎಸ್​ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್​ಗೆ ಮಾತ್ರ ಗೊತ್ತಿರುವ ವಿಚಾರ.

ಅಪ್ಪನ ಅಧಿಕಾರ ಹತ್ಯೆ ಮಾಡಿದ ಮಗ..!

ರೋಗಿ ಬಯಸಿದ್ದು ಹಾಲು ಅನ್ನ ಡಾಕ್ಟರ್​ ಹೇಳಿದ್ದೂ ಹಾಲು ಅನ್ನ ಎನ್ನುವಂತೆ, ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ಯಡಿಯೂರಪ್ಪ ನೆರಳಾಗಿ ಬಿ.ವೈ ವಿಜಯೇಂದ್ರ ಬಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಳಿಕ ಸಂಪೂರ್ಣವಾಗಿ ಪಕ್ಷದ ಚಟುವಟಿಕಯಲ್ಲಿ ತೊಡಗಿಸಿಕೊಂಡ ವಿಜಯೇಂದ್ರ, ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವ ಕೆಲಸ ಶುರು ಮಾಡಿದರು. ಬಿ.ಎಸ್​ ಯಡಿಯೂರಪ್ಪ ಅವರ ಬಳಿ ಯಾವುದೇ ಕೆಲಸ ಕೇಳಿದರೂ ವಿಜಯೇಂದ್ರ ಬಳಿ ಮಾತನಾಡಿ ಎನ್ನುವ ಹಂತಕ್ಕೆ ಬಿ.ವೈ ವಿಜಯೇಂದ್ರ ಆಡಳಿತ ಯಂತ್ರದಲ್ಲಿ ತೊಡಗಿಸಿಕೊಂಡ್ರು. ಇದು ಎಲ್ಲರ ಕಣ್ಣು ಕೆಂಪಾಗುವಂತೆ ಮಾಡಿದ ಜೊತೆಗೆ ಹುಳುಕುಗಳನ್ನು ಹುಡುಕುವಂತೆ ಮಾಡಿಕೊಂಡ್ರು. ಕಿಕ್​ಬ್ಯಾಕ್​ ಎಲ್ಲೆಲ್ಲಿಂದ ಬರುತ್ತಿದೆ ಎನ್ನುವ ಜೊತೆಗೆ ದಾಖಲೆಗಳ ಸಂಗ್ರಹ ಮಾಡಿದ್ರು. ಇದು ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಹುಗ್ಗ ಕೊಟ್ಟಂತಾಯ್ತು.

ಉಸಿರಾಡಲು ಆಗದಂತ ಇಕ್ಕಟ್ಟಿನಲ್ಲಿ BSY..!

ಬಿಎಸ್​ ಯಡಿಯೂರಪ್ಪ ಯಾವ ಮಟ್ಟಕ್ಕೆ ಜರ್ಜರಿತರಾಗಿದ್ದಾರೆ ಎಂದರೆ ಎಲ್ಲವನ್ನೂ ಮನಸ್ಸಲ್ಲೇ ತಡೆದುಕೊಳ್ಳುವ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಇದೇ ಕಾರಣಕ್ಕೆ ತಾನು ಏನನ್ನು ಹೇಳಬೇಕು ಎಂದುಕೊಂಡಿದ್ದರೋ ಅದನ್ನು ತನ್ನ ಕಣ್ಣೀರಿನ ಮೂಲಕ ಕಾರ್ಯಕರ್ತರಿಗೆ ತಲುಪಿಸಿದ್ದಾರೆ. ಈಗಾಗಲೇ ಲಿಂಗಾಯತರಿಗೆ ತಲುಪಬೇಕಾದ ಸಂದೇಶ ಆ ಕಣ್ಣೀರಿನಿಂದಲೇ ತಲುಪಿದೆ. ಹುಟ್ಟು ಹೋರಾಟಗಾರ ಎನ್ನುವ ಹೆಸರು ಪಡೆದಿದ್ದ ಬಿ.ಎಸ್​ ಯಡಿಯೂರಪ್ಪ ತಾತ್ಕಾಲಿಕವಾಗಿ ಏನನ್ನೂ ಹೇಳದ, ಏನನ್ನೂ ಮಾಡಲಾಗದ ಪರಿಸ್ಥಿತಿಯಲ್ಲಿ ಎಲ್ಲವನ್ನೂ ನುಂಗುತ್ತಿದ್ದಾರೆ. ರಾಜಕೀಯ ಚದುರಂಗದಲ್ಲಿ ಯಡಿಯೂರಪ್ಪ ಬಂಧಿಯಾಗಿರುವುದು ಸತ್ಯ. ಆದರೆ ಕೆಲವೇ ದಿನಗಳಲ್ಲಿ ಬಿಜೆಪಿಗೆ ತಿರುಮಂತ್ರ ಹಾಕಲಿದ್ದಾರೆ ಎನ್ನುವುದೂ ಅಷ್ಟೇ ಸತ್ಯ.

Related Posts

Don't Miss it !