ರಾಜ್ಯದಲ್ಲಿ 2 ನಾಟಕ.. ವಿಪಕ್ಷದ ಪಾತ್ರದಲ್ಲಿ ಬಿಜೆಪಿ..! ವಿಪಕ್ಷಗಳೇ ಕಕ್ಕಾಬಿಕ್ಕಿ..

ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಿಜೆಪಿ ಪಕ್ಷ ಎರಡು ವಿಭಿನ್ನ ಪಾತ್ರಗಳಲ್ಲಿ ಅಭಿನಯ ಮಾಡುತ್ತಿದೆ ಎನ್ನುವುದು ಬಯಲಾಗುತ್ತಿದೆ. ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿಲುವನ್ನು ತನ್ನಷ್ಟಕ್ಕೆ ತಾನು ತೆಗೆದುಕೊಳ್ಳುತ್ತಿದೆ. ಇದು ಕಾನೂನು ಕಣ್ಣೊರೆಸುವ ತಂತ್ರದ ಭಾಗವಾಗಿ ಮಾತ್ರ ಕೆಲಸ ಮಾಡುತ್ತದೆ. ಆ ಬಳಿಕ ಬಿಜೆಪಿ ನಾಯಕರೂ ಸೇರಿದಂತೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಮುಗಿಬೀಳ್ತಾರೆ. ವಿರೋಧ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ದಿಕ್ಕು ತೋಚದೆ ಗರ ಬಡಿದಂತೆ ನೋಡುವುದಷ್ಟೇ ಕಾಯಕವಾಗಿದೆ. ಇತ್ತೀಚಿಗೆ ಎರಡು ಪ್ರಕರಣಗಳನ್ನು ಗಮನಿಸಿದಾಗ ಬಿಜೆಪಿಯ ಈ ತಂತ್ರಗಾರಿಕೆ ಬಯಲಾಗುತ್ತಿದೆ. ಇದರ ಉದ್ದೇಶ ಇಷ್ಟೆ, ವಿರೋಧ ಪಕ್ಷಗಳ ಟೀಕೆಯನ್ನು ತಡೆಯುವುದು ಮಾತ್ರ.

ಗಣೇಶೋತ್ಸವಕ್ಕೆ ಅನುಮತಿ ಕೊಡದೆ ನಾಟಕ..!

ಗಣೇಶೋತ್ಸವ ವಿಚಾರದಲ್ಲಿ ಹೈಡ್ರಾಮಾ ಮಾಡಿ ರಾಜ್ಯ ಸರ್ಕಾರ ಇಂತಿಷ್ಟೇ ಜನರು ಗಣೇಶೋತ್ಸವದಲ್ಲಿ ಭಾಗಿಯಾಗಬೇಕು ಎಂದು ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಕೇವಲ 20 ಜನರು ಮಾತ್ರ ಗಣೇಶೋತ್ಸವದಲ್ಲಿ ಭಾಗಿಯಾಗಬೇಕು. ಸಾಮಾಜಿಕ ಅಂತರದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಬೇಕು. ತೀರ್ಥ ಪ್ರಸಾದ ವಿನಿಯೋಗ ಆಗಬಾರದು. ಗಣೇಶನ ಬೃಹತ್​ ಮೆರವಣಿಗೆ ಆಯೋಜನೆ ಮಾಡದೆ ವಿಸರ್ಜನೆ ಮಾಡಬೇಕು. ಅದೂ ಅಲ್ಲದೆ ಮೂರು ದಿನದಲ್ಲಿ ವಿಸರ್ಜನೆ ಕೆಲಸ ಮುಗಿಯಬೇಕು ಎಂದು ಸರ್ಕಾರ ಆದೇಶ ಮಾಡಿತ್ತು. ಮಾರ್ಗಸೂಚಿ ಉಲ್ಲಂಘನೆ ಮಾಡಿದರೆ ಕಾನೂನು ರೀತ್ಯ ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಿತ್ತು. ಆದರೆ ಅದರಲ್ಲಿ ಬಹುತೇಕ ಚಾಲ್ತಿಗೆ ಬಂದಿದ್ದು ಕೇವಲ ಗಣೇಶ ಮೂರ್ತಿಯ ಎತ್ತರದ ಬಗ್ಗೆ ಹೊರಡಿಸಿದ್ದ ಆದೇಶ ಮಾತ್ರ. ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಮೀರದಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎನ್ನುವುದು. ಆದರೆ ಕೆಲವು ಕಡೆ ಗಣೇಶ ಮೂರ್ತಿಯ ಎತ್ತರದ ಆದೇಶ ಕೂಡ ಉಲ್ಲಂಘನೆ ಆಗಿದೆ ಎನ್ನುವುದನ್ನು ಒಪ್ಪಲೇ ಬೇಕು.

Read this also;

ಸರ್ಕಾರದ ಮಾರ್ಗಸೂಚಿಗೆ ಕೇಸರಿ ಕೆಂಡ..!

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡುತ್ತಿದ್ದ ಹಾಗೆ ಭಜರಂಗ ದಳ, ವಿಶ್ವ ಹಿಂದೂ ಪರಿಷತ್​, ಶ್ರೀರಾಮ ಸೇನೆ ಮುಖಂಡರು ಸರ್ಕಾರದ ವಿರುದ್ಧ ಘರ್ಜಿಸಿದರು. ಸರ್ಕಾರ ಹಿಂದೂಗಳ ವಿರುದ್ಧ ನಡೆ ಅನುಸರಿಸುತ್ತಿದೆ ಎಂದೆಲ್ಲಾ ಹೇಳಿದ್ದರು. ಅಂತಿಮವಾಗಿ ಸರ್ಕಾರದ ಮಾರ್ಗಸೂಚಿಯನ್ನು ಪಕ್ಕಕ್ಕೆ ಸರಿಸಿ ಬೃಹತ್​ ಮೆರವಣಿಗೆ ಮೂಲಕವೇ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿದೆ. ಪೊಲೀಸ್​ ಇಲಾಖೆ ಕಂಡು ಕಾಣದಂತೆ ಬೃಹತ್​ ಮೆರವಣಿಗೆಗೆ ಬಂದೋಬಸ್ತ್​ ಮಾಡುವ ಕೆಲಸ ಮಾಡುತ್ತಿದೆ. ಕೊಪ್ಪಳ, ಚಿಕ್ಕಮಗಳೂರಿನಲ್ಲಿ ಸಾವಿರಾರು ಜನರೊಂದಿಗೆ ವಿಸರ್ಜನಾ ಕಾರ್ಯಕ್ರಮ ನಡೆಯುತ್ತಿದೆ. ಸರ್ಕಾರ ಕೇವಲ ಕಾನೂನು ಕಣ್ಣಿಗೆ ಮಣ್ಣೆರೆಚುವ ಉದ್ದೇಶದಿಂದ ಈ ಮಾರ್ಗಸೂಚಿ ಬಿಡುಗಡೆ ಮಾಡಿತ್ತು ಎನ್ನುವುದು ಬಯಲಾಗುತ್ತಿದೆ.

ಧಾರ್ಮಿಕ ಕಟ್ಟಡ ತೆರವಲ್ಲೂ ಡಬಲ್​ ಗೇಮ್​..!

ಧಾರ್ಮಿಕ ಕಟ್ಟಡ ತೆರವು ವಿಚಾರದಲ್ಲೂ ರಾಜ್ಯ ಸರ್ಕಾರವೇ ಆದೇಶ ಮಾಡಿದೆ. ರಾಜ್ಯ ಸರ್ಕಾರದ ಆದೇಶವನ್ನು ಸ್ಥಳೀಯ ಆಡಳಿತಗಳು ಜಾರಿ ಮಾಡಿವೆ. ಆದರೆ ಬಿಜೆಪಿ ಸರ್ಕಾರದಲ್ಲಿ ಭಾಗಿಯಾದ ಶಾಸಕ ಸಂಸದರುಗಳೇ ಅಧಿಕಾರಿಗಳ ಅಂಧ ದರ್ಬಾರ್​ ಎಂದು ವಾಗ್ದಾಳಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇಷ್ಟೆ. ಹಿಂದೂಗಳ ಪರ ಎಂದು ಮತ ಪಡೆದು ಅಧಿಕಾರಕ್ಕೆ ಬಂದಿರುವ ಬಿಜೆಪಿ ಕಾನೂನು ಪ್ರಕಾರ ತಾನು ಮಾಡಬೇಕಿರುವ ವಿಚಾರಗಳು ಹಾಗೂ ತಾನು ಜಾರಿಗೆ ತರಬೇಕಿರುವ ಆದೇಶಗಳನ್ನು ಜಾರಿ ಮಾಡುತ್ತಿದೆ. ಆದರೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧವೇ ವಾಗ್ದಾಳಿ ಮಾಡುವ ಮೂಲಕ ಮತಬ್ಯಾಂಕ್​​ ಕೈಬಿಟ್ಟು ಹೋಗುವ ಭೀತಿ ಪ್ರದರ್ಶನ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷವೊಂದು ವಾಗ್ದಾಳಿ ಮಾಡಿದಾಗ ಆಗುವ ಪರಿಣಾಮವನ್ನು ತಡೆಯುವ ಯತ್ನ ಮಾಡಲಾಗ್ತಿದೆ.

Read this also;

ಮತ ಕಳೆದುಕೊಳ್ಳದಂತೆ ಮಾಸ್ಟರ್​ ಪ್ಲ್ಯಾನ್​..!

ಗಣೇಶೋತ್ಸವ ಹಾಗೂ ಧಾರ್ಮಿಕ ಕಟ್ಟಡಗಳ ತೆರವು ವಿಚಾರದಲ್ಲಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರೆ ಹಿಂದೂಪರ ಮತದಾರರು ಆ ಪಕ್ಷದ ನಿಲುವನ್ನು ಒಪ್ಪಿಕೊಳ್ತಾರೆ. ಬಿಜೆಪಿ ಸರ್ಕಾರದ ನಿಲುವನ್ನು ವಿರೋಧಿಸುತ್ತಾರೆ. ಇದು ಮತ ನಿರೀಕ್ಷೆಗೆ ಪೆಟ್ಟು ಕೊಡುತ್ತದೆ. ಆದರೆ ಬಿಜೆಪಿ ಸರ್ಕಾರವೇ ಜಾರಿ ಮಾಡುವ ಆದೇಶಗಳನ್ನು ತನ್ನದೇ ಮುಖಂಡರಿಂದ ವಾಗ್ದಾಳಿ ಮಾಡಿದರೆ, ಸರ್ಕಾರವನ್ನು ದೂಷಣೆ ಮಾಡಬಹುದು. ಮತಗಳು ಚೆಲ್ಲಾಪಿಲ್ಲಿ ಹಾಗದಂತೆ ಸ್ಥಳೀಯ ನಾಯಕರು ನೋಡಿಕೊಳ್ಳಬಹುದು ಎನ್ನುವ ಮಹಾ ಲೆಕ್ಕಾಚಾರ ಇದರ ಹಿಂದಿರುವ ಎಲ್ಲಾ ಸಾಧ್ಯತೆಗಳು ಇದೆ. ಒಂದು ವೇಳೆ ಯಾವುದೇ ಲೆಕ್ಕಾಚಾರ ಇಲ್ಲ ಎನ್ನುವುದಾದರೆ ರಾಜ್ಯ ಸರ್ಕಾರದ ವಿರುದ್ಧ ಬೀದಿಗೆ ಇಳಿದು ಹೋರಾಟ ಮಾಡಬೇಕು ಅಲ್ಲವೇ..? ಸರ್ಕಾರ ಪದೇ ಪದೇ ಇಂತಹ ಆದೇಶ ಮಾಡುವುದರಿಂದ ಮುಜುಗರ ಆಗ್ತಿದೆ ಎನ್ನುವುದನ್ನಾದರೂ ಬಿಜೆಪಿ ಪಕ್ಷ ಹೇಳಬೇಕು. ಇಲ್ಲದಿದ್ದರೆ ಇದೊಂದು ಮಾಸ್ಟರ್​ ಪ್ಲ್ಯಾನ್​ ಎನ್ನುವುದು ಜನರಿಗೆ ಮನವರಿಕೆ ಆಗಲಿದೆ.

Related Posts

Don't Miss it !