ಸಿಎಂ ಬಿ.ಎಸ್​ ಯಡಿಯೂರಪ್ಪಗೆ ದಿಲ್ಲಿಗೆ ಬುಲಾವ್..! ಯತ್ನಾಳ್​ ಪ್ಲ್ಯಾನ್​ ವರ್ಕೌಟ್..!?

ಬಿಜೆಪಿಯಲ್ಲಿ ರಾಜಕೀಯ ಗೊಂದಲು ಮುಗಿಯುವ ಹಂತಕ್ಕೆ ಬದಿರುವ ಎಲ್ಲಾ ಸಾಧ್ಯತೆಗಳು ಇವೆ. ದೆಹಲಿಯಿಂದ ಬಿಜೆಪಿ ಹೈಕಮಾಂಡ್​​ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬುಲಾವ್​ ಕೊಟ್ಟಿದ್ದು, ನಾಳೆ ಮುಖ್ಯಮಂತ್ರಿ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ನಾಳೆ ಮಧ್ಯಾಹ್ನ 2.30ಕ್ಕೆ ವಿಶೇಷ ವಿಮಾನದಲ್ಲಿ ದೆಹಲಿ ಹೊರಡಲಿರುವ ಸಿಎಂ ಯಡಿಯೂರಪ್ಪ, ನಾಳೆ ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಶನಿವಾರ ಸಂಜೆ ಅಥವಾ ಭಾನುವಾರ ಬೆಳಗ್ಗೆ ಬೆಂಗಳೂರಿಗೆ ವಾಪಸ್​ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

6 ತಿಂಗಳ ನಂತರ ಸಿಎಂ ದಿಲ್ಲಿ ಪ್ರವಾಸ..!

ಕಳೆದ ಜನವರಿ 10 ರಂದು ದೆಹಲಿಗೆ ಹೋಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಅಮಿತ್​ ಷಾ ಭೇಟಿ ಮಾಡಲು ಹರಸಾಹಸ ಮಾಡಿದ್ರು. ಬಳಿಕ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆದು ಬಂದಿದ್ರು. ಇದೀಗ ಮತ್ತೆ ದೆಹಲಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದು, ಆರು ತಿಂಗಳ ಬಳಿಕ ಯಡಿಯೂರಪ್ಪ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಈ ಬಾರಿ ಸಿಎಂ ಬಿ.ಎಸ್​ ಯಡಿಯೂರಪ್ಪಗೆ ಹೈಕಮಾಂಡ್​ ಬುಲಾವ್​ ಕೊಟ್ಟಿದೆ ಎನ್ನಲಾಗ್ತಿದೆ. ಇದೀಗ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಒಪ್ಪಿಗೆ ಪಡೆಯುವುದು, ರಾಜ್ಯಕ್ಕೆ ಹೆಚ್ಚುವರಿ ಲಸಿಕೆ ಬೇಡಿಕೆ ಸಲ್ಲಿಸುವುದು, ಕೇಂದ್ರದಿಂದ ಬಾಕಿ ಇರುವ ಅನುದಾನ ಬಿಡುಗಡೆ ಸಂಬಂಧ ಚರ್ಚೆ ನಡೆಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಸಚಿವರ ಭೇಟಿಗೂ ಸಿಎಂ ಯಡಿಯೂರಪ್ಪ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ಹೇಳುತ್ತಿವೆ.

ವಾರದಿಂದ ದಿಲ್ಲಿಯಲ್ಲೇ ಯತ್ನಾಳ್​ ಠಿಕಾಣಿ..!

ನಾಯಕತ್ವ ಬದಲಾವಣೆ ಪ್ರಯತ್ನದಲ್ಲಿ ಬಲವಾದ ಹೆಜ್ಜೆ ಇಟ್ಟಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಕಳೆದ ಒಂದು ವಾರದಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ನೂತನ ಕೇಂದ್ರ ಮಂತ್ರಿಗಳಿಗೆ ಶುಭ ಕೋರುವ ನೆಪದಲ್ಲಿ ದೆಹಲಿ ಪ್ರವಾಸ ಕೈಗೊಂಡಿರುವ ಬಸನಗೌಡ ಪಾಟೀಲ್​ ಯತ್ನಾಳ್​, ಬಿಎಸ್​ ಯಡಿಯೂರಪ್ಪ ಹಾಗೂ ಪುತ್ರ ಬಿ,ವೈ ರಾಘವೇಂದ್ರ ವಿರುದ್ಧ ಪುರಾವೆಗಳ ಜೊತೆಗೆ ದೂರು ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ. ದೆಹಲಿಗೆ ತೆರಳುವ ಮುನ್ನ ಮೈಸೂರಿಗೆ ಭೇಟಿ ನೀಡಿದ್ದ ಯತ್ನಾಳ್​, ವಿಶ್ವನಾಥ್​ ಹಾಗೂ ಚಾಮರಾಜನಗರ ಸಂಸದ ಶ್ರೀನಿವಾಸ್​ ಪ್ರಸಾದ್​ರನ್ನು ಭೇಟಿ ಮಾಡಿದ್ದರು. ಅದಕ್ಕೂ ಮೊದಲೇ ವಿಜಯಪುರದಲ್ಲಿ ಸಿಪಿ ಯೋಗೇಶ್ವರ್​ ಜೊತೆಗೆ ಗೌಪ್ಯವಾಗಿ ಚರ್ಚೆ ನಡೆಸಿದ್ದರು. ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಯತ್ನಾಳ್​, ಶೀಘ್ರದಲ್ಲೇ ದಾಖಲೆ ಬಿಡುಗಡೆ ಆಗುತ್ತವೆ ಕಾಯಿರಿ ಎಂದಿದ್ದರು. ದಾಖಲೆಗಳನ್ನು ತೋರಿಸುವ ಎದೆಗಾರಿಕೆ ಮಾಧ್ಯಮಗಳಿಗೆ ಇದೆಯಾ ಎಂದು ಸವಾಲು ಕೂಡ ಹಾಕಿದ್ದರು.

ಕೇಂದ್ರ ಸಚಿವ ರಾಜನಾಥ್ ಸಿಂಗ್, ಶೋಭಾ ಕರಂದ್ಲಾಜೆ, RSS ನಾಯಕರನ್ನ ಭೇಟಿ ಮಾಡಿರುವ ಯತ್ನಾಳ್, ಜೆ.ಪಿ.ನಡ್ಡಾ, ಅಮಿತ್ ಶಾ ಭೇಟಿಗೂ ಪ್ರಯತ್ನ ನಡೆಸಿದ್ದರು. ಇದೀಗ ದಾಖಲೆಗಳನ್ನು ಹೈಕಮಾಂಡ್​ ನಾಯಕರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಸಿಎಂ ಯಡಿಯೂರಪ್ಪ ಅವರಿಗೆ ಬುಲಾವ್​ ಬಂದಿದೆ ಎಂದೇ ಹೇಳಲಾಗ್ತಿದೆ. ಇಂದು ಸಚಿವ ಸಂಪುಟ ಸಭೆ ಬಳಿಕ ದೆಹಲಿ ಪ್ರವಾಸದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದರೂ ಸಿಎಂ ಬಿ.ಎಸ್​ ಯಡಿಯೂರಪ್ಪ ಯಾವುದೇ ಉತ್ತರ ನೀಡದೆ ತೆರಳಿದ್ದಾರೆ. ನಾಯಕತ್ವ ಬದಲಾವಣೆ ಚರ್ಚೆ ಅಂತಿಮ ಘಟ್ಟ ತಲುಪಿದ್ದು, ಮುಕ್ತಾಯವಾಗುತ್ತಾ..? ಅಥವಾ ಇನ್ನೊಂದು ರೀತಿಯಲ್ಲಿ ರಾಜಕೀಯ ಮೇಲಾಟ ಆರಂಭವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Related Posts

Don't Miss it !