ಖಾತೆ ಹಂಚಿಕೆ ತಡವಾಗಲು ಕಾರಣ ಎರಡು.. ಸಿಎಂಗೆ ಇಲ್ಲದಾದ ಪರಮಾಧಿಕಾರ..!!

ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಯ್ತು. ಆ ಬಳಿಕ ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆಯೂ ಆಯ್ತು. ಖಾತೆ ಹಂಚಿಗೆ ಬಗ್ಗೆ ಶುಕ್ರವಾರವೇ ಫೈನಲ್​ ಆಗುತ್ತೆ ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ರು. ಅದರಂತೆ ರಾಜ್ಯಪಾಲರಿಗೆ ಸಚಿವರಿಗೆ ಹಂಚಿಕೆ ಮಾಡಿದ್ದ ಖಾತೆಗಳ ಪಟ್ಟಿಯನ್ನು ರವಾನೆ ಮಾಡಿದ್ದರು. ಆದರೆ ರಾಜ್ಯಪಾಲರ ಮುದ್ರೆಯೊಂದಿಗೆ ಖಾತೆ ಹಂಚಿಕೆ ಅಂತಿಮ ಆಗಲಿಲ್ಲ. ಖಾತೆ ಹಂಚಿಕೆ ಬಗ್ಗೆ ಸಾಕಷ್ಟು ಮಾಧ್ಯಮಗಳಲ್ಲಿ ನಾನಾ ರೀತಿಯ ವರದಿಗಳು ಬಂದರೂ ಅಧಿಕೃತ ಮಾತ್ರ ಆಗಲಿಲ್ಲ. ಇದಕ್ಕೆ ಕಾರಣ ಎರಡು. ಆ ಎರಡು ಕಾರಣಗಳು ಹೈಕಮಾಂಡ್​ ಕಿವಿಗೆ ಮುಟ್ಟುತ್ತಿದ್ದ ಹಾಗೆ ರಾಜ್ಯಪಾಲರ ಅಂಗಳದಲ್ಲಿದ್ದ ಲಿಸ್ಟ್​ ದೆಹಲಿಗೆ ಪ್ರಯಾಣ ಬೆಳೆಸಿತ್ತು.

ಮಾಜಿ ಸಿಎಂ ತಂತ್ರಗಾರಿಕೆ ಬಗ್ಗೆ ದೂರು..!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ಬಿಗಿ ಹಿಡಿಯುವಷ್ಟು ಇನ್ನೂ ಶಕ್ತರಾಗಿಲ್ಲ. ಅದೂ ಅಲ್ಲದೆ ಬಿಎಸ್​ ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಿರುವ ಕಾರಣ ಯಡಿಯೂರಪ್ಪ ಅವರನ್ನು ಬಿಟ್ಟು ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಸಾಧ್ಯ. ಅದೇ ಕಾರಣಕ್ಕೆ ಯಾವುದೇ ಒಂದು ನಿರ್ಧಾರ ಮಾಡುವ ಮುನ್ನ ಯಡಿಯೂರಪ್ಪ ಅವರಿಗೆ ಸಲಹೆ ರೂಪದಲ್ಲಿ ಆದೇಶ ಪಡೆಯುವ ಪದ್ದತಿ ಚಾಲ್ತಿಗೆ ಬಂದಿದೆ. ಸಚಿವ ಸ್ಥಾನ ವಿಚಾರದಲ್ಲೂ ಮೂಗು ತೂರಿಸಿದ್ದ ಯಡಿಯೂರಪ್ಪ ಇದೀಗ ಖಾತೆ ಹಂಚಿಕೆಯಲ್ಲೂ ತನ್ನ ಚಾಣಕ್ಯ ನಡೆಯನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಈ ಕಾರಣ ಕೂಡ ಹೈಕಮಾಂಡ್​ ಲಿಸ್ಟ್​ ತರಿಸಿಕೊಂಡಿದೆ ಎನ್ನಲಾಗ್ತಿದೆ.

ಖಾತೆಗಾಗಿ ಪಟ್ಟು ಹಿಡಿದಿರುವ ಸಚಿವರು..!

ನೂತನ ಸಚಿವರು ನನಗೆ ಇಂತಹದ್ದೇ ಖಾತೆ ಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ. ಅದರಲ್ಲಿ ಬಹುತೇಕ ಸಚಿವರು ತಾವು ಈ ಹಿಂದೆ ನಿರವಹಿಸುತ್ತಿದ್ದ ಖಾತೆಯನ್ನೇ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೇವಲ 6 ಮಂದಿಯನ್ನು ಹೊರತು ಪಡಿಸಿ ಉಳಿದ ಎಲ್ಲರೂ ಸಚಿವರಾಗಿರುವ ಕಾರಣ ಸಿಎಂ ಬಸವರಾಜ ಬೊಮ್ಮಾಯಿ ಖಾತೆ ಬದಲಾವಣೆ ಮಾಡಲು ಹರಸಾಹಸ ಮಾಡಬೇಕಿದೆ. ಈ ಹಿಂದೆ ನಿರ್ವಹಿಸಿ ಖಾತೆಗಳಲ್ಲಿ ಕೆಲವರು ಹೆಸರು ಕೆಡಿಸಿಕೊಂಡಿರುವ ಕಾರಣ ಖಾತೆ ಬದಲಾವಣೆ ಅನಿವಾರ್ಯ ಎನ್ನುವುದು ಸಿಎಂ ಬಸವರಾಜ ಬೊಮ್ಮಾಯಿ ಅವರ ಅಭಿಮತ. ಆದರೆ ಈ ಹಿಂದೆ ನಿರ್ವಹಿಸಿದ ಖಾತೆಯಲ್ಲಿ ಹೇಗೆ..? ಎಂತ..? ಒಳಗೆ ಹೊರಗೆ ಎಲ್ಲವನ್ನೂ ಬಲ್ಲವರಾಗಿದ್ದು, ಅದೇ ಖಾತೆಯನ್ನು ಪಡೆಯಬೇಕು ಎನ್ನುವ ಛಲದಲ್ಲಿ ಸಚಿವರು ಹೈಕಮಾಂಡ್​ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ರಾಜಭವನದಿಂದ ದೆಹಲಿ ತಲುಪಿದ್ದು ಹೇಗೆ..?

ರಾಜಭವನಕ್ಕೆ ಸಚಿವರ ಖಾತೆಯ ಪಟ್ಟಿಯನ್ನು ಸಿಎಂ ಕಾರ್ಯಾಲಯದಿಂದ ಕಳುಹಿಸಿಕೊಡಲಾಯ್ತು. ಆದರೆ ಅಷ್ಟರಲ್ಲಿ ಅಸಮಾಧಾನಿತ ಸಚಿವರು ದೆಹಲಿಗೆ ಹಲೋ ಎಂದಿದ್ದರು. ಆ ಕಡೆಯಿಂದ ಫೋನ್​ ರಿಂಗಣಿಸಿ ಪಟ್ಟಿ ಕಳುಹಿಸಿಕೊಡಿ ಎನ್ನುವ ಸೂಚನೆ ಬಂದಿತ್ತು. ದೆಹಲಿಯಿಂದ ಖಾತೆ ಹಂಚಿಕೆಗೆ ಕೈ ಹಾಕಿದ ಬಳಿಕ ಸಿಎಂ ನೇರವಾಗಿ ತುಮಕೂರಿನ ಸಿದ್ಧಗಂಗಾ ಮಠದ ಕಡೆಗೆ ತೆರಳಿದರು ಎನ್ನಲಾಗಿದೆ. ಇಂದು ಖಾತೆ ಹಂಚಿಕೆ ಮಾಡಿ ದೆಹಲಿಯಿಂದ ಪಟ್ಟಿ ರವಾನೆ ಮಾಡಲಿದ್ದಾರೆ ಎನ್ನಲಾಗ್ತಿದೆ. ಆದರೆ ಇಂದೇ ಬರುತ್ತದೆಯೋ..? ಅಥವಾ ಇನ್ನೂ ಸ್ವಲ್ಪ ಸಮಯಾವಾಕಾಶ ಕೊಡಲಾಗುತ್ತದೆಯೋ ಎನ್ನುವ ಬಗ್ಗೆ ಅನುಮಾನಗಳು ಕಾಡುತ್ತಿದೆ. ಆದರೆ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ವಿಚಾರ ಸಿಎಂ ಪರಮಾಧಿಕಾರ ಎನ್ನುವುದು ಕೇವಲ ಬೂಟಾಟಿಕೆಯ ಮಾತು ಎನ್ನುವುದು ಸ್ಪಷ್ಟ.

Related Posts

Don't Miss it !