ಬಿಜೆಪಿ ಹೈಕಮಾಂಡ್​ ರಾಜ್ಯದಲ್ಲಿ ಹಿಡಿತ ಕಳೆದುಕೊಂಡಿದ್ಯಾ..?

ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಈ ರೀತಿಯ ಪ್ರಶ್ನೆಗಳು ಉದ್ಬವ ಆಗುವುದು ಸರ್ವೇ ಸಾಮಾನ್ಯ. ಬಿಜೆಪಿಯಲ್ಲಿ ಎರಡು ಬಣಗಳಾಗಿದ್ದು, ಯಾರ ಬಲ ಎಷ್ಟು ಎನ್ನುವುದು ಅರುಣ್​ ಸಿಂಗ್​ ರಾಜ್ಯ ಪ್ರವಾಸದ ವೇಳೆ ಬಟಾಬಯಲಾಗಿತ್ತು. 65 ಮಂದಿ ಶಾಸಕರು ಬಿಎಸ್​ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು ಎಂದು ಸಹಿ ಹಾಕಿದ್ದರು. ಅಂದರೆ ಒಟ್ಟು 119 ಶಾಸಕರನ್ನು ಹೊಂದಿರುವ ಬಿಜೆಪಿಯಲ್ಲಿ 65 ಶಾಸಕರು ಯಡಿಯೂರಪ್ಪ ಅವರನ್ನು ಬೆಂಬಲಿಸಿದ್ದಾರೆ. ಇನ್ನುಳಿದ 54 ಮಂದಿ ಶಾಸಕರು ಯಡಿಯೂರಪ್ಪ ಮುಂದುವರಿಯುವುದು ಬೇಕಿಲ್ಲ ಎಂದೇ ಅರ್ಥ. ಪರಿಸ್ಥಿತಿ ಹೀಗಿರುವಾಗ ಹೈಕಮಾಂಡ್​ ಮಧ್ಯಪ್ರವೇಶ ಮಾಡಿ ಒಮ್ಮತದ ನಾಯಕನ ಆಯ್ಕೆ ಮಾಡಬೇಕಿತ್ತು. ಆದರೆ ಬಿಜೆಪಿ ಹೈಕಮಾಂಡ್​ ಅಳೆದು ತೂಗುವ ಕೆಲಸ ಮಾಡುತ್ತಿದೆ.

ಯಡಿಯೂರಪ್ಪ ಪರವಾಗಿ ಬಹುಮತ ಇದೆಯಾ..?

ಬಿಜೆಪಿ ಸರ್ಕಾರ ಎಂದು ಬಂದಾಗ ಖಂಡಿತವಾಗಿಯೂ ಬಿಜೆಪಿ ಸರ್ಕಾರಕ್ಕೆ ಬಹುಮತ ಇದ್ದೇ ಇದೆ. 119 ಶಾಸಕರು ಬಿಜೆಪಿ ಪಕ್ಷದ ಚಿಹ್ನೆ ಮೇಲೆ ಆಯ್ಕೆಯಾಗಿ ಬಂದಿದ್ದಾರೆ. ಪಕ್ಷ ಸೂಚಿಸಿದ ವ್ಯಕ್ತಿಯನ್ನು ಬೆಂಬಲಿಸಬೇಕಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ವ್ಯಕ್ತಿಗತವಾಗಿ ನೋಡುವುದಾದರೆ ಬಿ.ಎಸ್​ ಯಡಿಯೂರಪ್ಪ ಅವರಿಗೆ ಬಹುಮತವಿಲ್ಲ ಎಂಬುದು ಅವರ ಸಹಿ ಸಂಗ್ರಹದಲ್ಲೇ ಪತ್ತೆಯಾಗಿದೆ. ಇಷ್ಟೇ ಅಲ್ಲದೆ ಬಿಜೆಪಿ ಪಕ್ಷದ ಶಾಸಕರೇ ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ನಿರತರಠಾಗಿದ್ದಾರೆ, ಸಿಎಂ ಅಧಿಕೃತ ನಿವಾಸದ ಗೆಸ್ಟ್​ಹೌಸ್​ನಲ್ಲೇ ಎಲ್ಲಾ ಡೀಲ್​ಗಳು ನಡೆಯುತ್ತಿವೆ. ದಿನವೊಂದಕ್ಕೆ 100 ಕೋಟಿ ರೂಪಾಯಿ ಅವ್ಯವಹಾರ ನಡೆಯುತ್ತಿದೆ ಎಂದು ನೇರಾನೇರ ಆರೋಪ ಮಾಡಿದ್ದಾರೆ. ಆದರೂ ಸರ್ಕಾರ ಏನೂ ಆಗಿಲ್ಲ ಎನ್ನುವಂತೆ ಕಣ್ಮುಚ್ಚಿಕುಳಿತಿದೆ. ಬಿಜೆಪಿ ಹೈಕಮಾಂಡ್​ ಕೇಳಿಸಿಕೊಂಡರೂ ಕೇಳದಂತೆ ನಟನೆ ಮಾಡುತ್ತಿದೆ.

ಹೈಕಮಾಂಡ್​ಗೆ ಯಾರ ಭಯ ಇದೆ..?

ಯಾವುದೇ ಪಕ್ಷದ ಹೈಕಮಾಂಡ್​ ಪಕ್ಷದ ಒಳಿತಿಗಾಗಿ ಕಠಿಣ ನಿಲುವುಗಳನ್ನು ತೆಗೆದುಕೊಳ್ಳುವ ಶಕ್ತಿ ಹೊಂದಿರುತ್ತದೆ. ಪಕ್ಷದ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಕೆಲವೊಂದು ಬಾರಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದೀಗ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪ ಮಾಡಿದ ಮೇಲೆ ಬಿಜೆಪಿ ಪಕ್ಷದ ಮೇಲೆ ಪರಿಣಾಮ ಬೀರುವುದು ಖಂಡಿತ. ಮುಂದಿನ ಬಾರಿ ಚುನಾವಣೆಯಲ್ಲಿ ಇದೇ ಆರೋಪಗಳು ವಿರೋಧ ಪಕ್ಷಗಳ ಬಾಯಿಗೆ ಆಹಾರವಾಗುವುದು ಶತಸಿದ್ಧ. ಇದರ ಪರಿಣಾಮ ಬೀರದಂತೆ ಮಾಡಲು ನಾಯಕತ್ವ ಬದಲಾವಣೆ ಮಾಡಬೇಕು. ಆದರೆ ನಾಯಕತ್ವ ಬದಲಾವಣೆ ಆದರೆ ಬಿ.ಎಸ್​ ಯಡಿಯೂರಪ್ಪ ಬೆನ್ನಿಗೆ ಇರುವ ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ಮುನಿಸಿಕೊಳ್ಳುವ ಭಯ ಇರಬಹುದು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಯಡಿಯೂರಪ್ಪ, ಸ್ವಾಮೀಜಿಗಳ ಮೂಲಕ ಹೈಕಮಾಂಡ್​ಗೆ ಸಂದೇಶ ರವಾನೆಯಲ್ಲಿ ತೊಡಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬಂಡಾಯ ಶಾಸಕರ ಬಾಯಿ ಮುಚ್ಚಿಸಿಲ್ಲ ಯಾಕೆ..?

ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಮಾಡಿದರೆ ಲಿಂಗಾಯತ ಸಮುದಾಯ ತಿರುಗಿ ಬೀಳುವ ಭಯವಿದ್ದರೆ ಯಡಿಯೂರಪ್ಪ ಅವರನ್ನೇ ಮುಂದುವರಿಸಬೇಕು. ಆದರೆ ಸರ್ಕಾರದ ಎದುರು ಬಂಡಾಯ ಎದ್ದಿರುವ ಶಾಸಕರು ಬಾಯಿಗೆ ಬಂದ ಹಾಗೆ ಸರ್ಕಾರದ ವಿರುದ್ಧ ಮಾತನಾಡುವುದನ್ನಾದರೂ ತಡೆಯಬೇಕು. ಈ ಮೂಲಕ ಆದರೂ ಪಕ್ಷದ ವರ್ಚಸ್ಸಿಗೆ ಆಗುವ ತೊಂದರೆಯನ್ನು ತಡೆಯಬಹುದು. ಅದನ್ನೂ ಬಿಜೆಪಿ ಹೈಕಮಾಂಡ್​ ಮಾಡುತ್ತಿಲ್ಲ. ಸ್ವತಃ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಯಾರೊಬ್ಬರೂ ನಾಯಕತ್ವ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡಬಾರದು ಎಂದು ವಾರ್ನಿಂಗ್​ ಕೊಟ್ಟ ಬಳಿಕವೂ ಸರ್ಕಾರ ಹಾಗೂ ಯಡಿಯೂರಪ್ಪ ವಿರುದ್ಧ ಯೋಗೇಶ್ವರ್​, ಹೆಚ್​ ವಿಶ್ವನಾಥ್​, ಬಸನಗೌಡ ಪಾಟೀಲ್​ ಯತ್ನಾಳ್​ ವಾಗ್ದಾಳಿ ಮಾಡುತ್ತಲೇ ಇದ್ದಾರೆ. ಪರಿಸ್ಥಿತಿ ಇಷ್ಟೊಂದು ಹದಗೆಟ್ಟು ಹೋಗುತ್ತಿದ್ದರೂ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ತಮ್ಮ ಅಸಮರ್ಥತೆಯನ್ನು ಸಾಬೀತು ಮಾಡುತ್ತಿದ್ದಾರೆ.

ರಾಜ್ಯದ ಮೇಲೆ ಹೈಡ್ರಾಮಾ ಪರಿಣಾಮ ಬೀರುತ್ತಾ..?

ಬಿಜೆಪಿ ಪಕ್ಷದ ಒಳಗೆ ಉದ್ಬವ ಆಗಿರುವ ಈ ಹೈಡ್ರಾಮಾ ರಾಜ್ಯದ ಅಭಿವೃದ್ಧಿ ಮೇಲೆ ಪರಿಣಾಮ ಬೀರುವುದು ಸಹಜ. ಮುಖ್ಯವಾಗಿ ಅಧಿಕಾರಿ ವರ್ಗ ಸಿಎಂ ಬದಲಾಗುತ್ತಾರೆ ಎನ್ನುವ ಮಾತಿನ ಆಧಾರದ ಮೇಲೆ ಕೆಲಸಗಳನ್ನು ತಡೆ ಹಿಡಿಯುವ ಕೆಲಸ ಮಾಡುತ್ತಾರೆ. ಇಷ್ಟು ಮಾತ್ರವಲ್ಲ ಓರ್ವ ಶಾಸಕ ಸರ್ಕಾರ ಲೂಟಿ ಮಾಡುತ್ತಿದೆ. ದಿನವೊಂದಕ್ಕೇ 100 ಕೋಟಿ ರೂಪಾಯಿ ಅವ್ಯವಹಾರ ಆಗುತ್ತಿದೆ ಎಂದ ಮೇಲೆ ಸರ್ಕಾರ ತನಿಖೆ ಮಾಡಬೇಕು. ಈ ಆರೋಪದಿಂದ ರಾಜ್ಯದಲ್ಲಿ ಮತ್ತಷ್ಟು ಭ್ರಷ್ಟಾಚಾರ ಹೆಚ್ಚಾಗುವುದು ನಿಶ್ಚಿತ. ಈ ಬಗ್ಗೆ ಬಿಜೆಪಿ ಹೈಕಮಾಂಡ್​ ಸೂಕ್ತ ನಿರ್ಧಾರವನ್ನು ಅತೀ ಶೀಘ್ರದಲ್ಲಿ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನಹುದು.

Related Posts

Don't Miss it !