ಬಿಜೆಪಿ ಪಾಳಯದಲ್ಲಿ ರಾತ್ರಿ ಪೂರ್ತಿ ಬೆಳವಣಿಗೆ.. ಔತಣಕೂಟದ ಬಳಿಕ ರಾಜೀನಾಮೆ..?

ರಾಜ್ಯ ಬಿಜೆಪಿ ಅಂಗಳದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ರಾಜ್ಯಕ್ಕೆ ಅಮಿತ್ ಷಾ ಈಗಾಗಲೇ ಆಗಮಿಸಿದ್ದು, ಅಮಿತ್ ಷಾ ಆಗಮನಕ್ಕೂ ಮೊದಲೇ ಸಾಕಷ್ಟು ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಬದಲಾವಣೆ ಆಗುತ್ತಾ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಇಂದು ಮುಖ್ಯಮಂತ್ರಿ ಅರುಣ್ ಸಿಂಗ್ ಭೇಟಿ ಮಾಡಿ, ಚರ್ಚೆ ನಡೆಸಿದ್ದು, ಆ ಬಳಿಕ ಬಿ.ಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ಅರುಣ್ ಸಿಂಗ್ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದಿರುವುದು ಮತ್ತಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಅಮಿತ್ ಷಾ ಪ್ರಯಾಣಕ್ಕೂ‌ ಮುನ್ನ ದಿಲ್ಲಿಯಲ್ಲಿ ಮೀಟಿಂಗ್..!!

ಅಮಿತ್ ಷಾ ದೆಹಲಿಯಿಂದ ಬೆಂಗಳೂರಿನ ಕಡೆಗೆ ತೆರಳುವ ಮುನ್ನ ಜೆ.ಪಿ‌ ನಡ್ಡಾ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದ್ದು, ಕರ್ನಾಟಕದಲ್ಲಿ ತೆಗೆದುಕೊಳ್ಳಬೇಕಿರುವ ಕ್ರಮಗಳು ಹಾಗೂ ಹೊಸ ನಾಯಕತ್ವದ ಬಗ್ಗೆ ನಾಯಕರು ಚರ್ಚೆ ನಡೆಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರಿಂದ ನಾಯಕತ್ವ ಹಿಂಪಡೆದುಕೊಂಡ ಬಳಿಕ ರಾಜ್ಯದಲ್ಲಿ ಆಗುವ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೂ ಕರೆ ಮಾಡಿರುವ ಜೆ.ಪಿ ನಡ್ಡಾ ಹೈಕಮಾಂಡ್ ಸಂದೇಶವನ್ನು ರವಾನೆ ಮಾಡಿದ್ದಾರೆ ಎನ್ನಲಾಗಿದೆ.

ಸಿಎಂ ಔತಣಕೂಟ ಏರ್ಪಡಿಸಿರುವ ಉದ್ದೇಶ ಆದ್ರೂ ಏನು..?

ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಲಿದ್ದಾರೆ ಎನ್ನುವ ವಿಚಾರಕ್ಕೆ ಔತಣಕೂಟ ಕೂಡ ಸಾಥ್ ಕೊಡ್ತಿದೆ. ಇಂದು ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಔತಣಕೂಟದ ಬಳಿಕ ಸಿಎಂ ನೇರವಾಗಿ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಮುಖ್ಯಮಂತ್ರಿ ರಾಜೀನಾಮೆ ನೀಡುವುದರಲ್ಲಿ ಏನಾದರೂ ಬೆಳವಣಿಗಳು ಆಗುತ್ತಾ ಎನ್ನುವ ಬಗ್ಗೆಯೂ ಹೈಕಮಾಂಡ್ ಆಲೋಚನೆ ಮಾಡಿದೆ. ಈಗಾಗಲೇ ಹೈಕಮಾಂಡ್ ನಿರ್ಧಾರ ತಿಳಿಸಿದ್ದು, ಬಿ.ಎಸ್ ಯಡಿಯೂರಪ್ಪ ನಿರ್ಧಾರದ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ ಎನ್ನಲಾಗಿದೆ.

ಸಿಎಂ ಸ್ಥಾನ ಬದಲಾವಣೆ ಆಗದಿದ್ದರೆ ಮೂವರು ಡಿಸಿಎಂ..!?

ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಬಿಜೆಪಿ ಬಗ್ಗೆ ಜನಸಾಮಾನ್ಯರಲ್ಲಿ ಕೆಟ್ಟ ಅಭಿಪ್ರಾಯ ಮೂಡಲಿದೆ. ಕಳೆದ ಭಾರಿಯೂ ಇದೇ ರೀತಿ ಮೂವರು ಮುಖ್ಯಮಂತ್ರಿ ಮಾಡಿದ್ದರಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಕಾರಣವಾಯ್ತು ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಕೂಡ ನಡೆಯುತ್ತಿದೆ. ಇನ್ನು ಒಂದು ಸುತ್ತಿನ ಸಭೆ ಬೆಂಗಳೂರಿನಲ್ಲಿ ನಡೆದ ಬಳಿಕ ಅಂತಿಮ‌ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ರಾಜ್ಯ ನಾಯಕರ ಅಭಿಪ್ರಾಯದ ಬಳಿಕ ಮುಖ್ಯಮಂತ್ರಿ ಬದಲಾವಣೆಗೆ ವಿರೋಧ ವ್ಯಕ್ತವಾದರೆ‌ ಮುಂದಿನ ಚುನಾವಣೆಗೆ ಅನುಕೂಲ ಆಗುವ ಹಾಗೆ ಮೂವರು ಡಿಸಿಎಂಗಳ ನೇಮಕ ಮಾಡಲು ಹೈಕಮಾಂಡ್ ನಿರ್ಧಾರ ಮಾಡಿದೆ ಎನ್ನುವುದು ಬಿಜೆಪಿ ಮೂಲಗಳ ಮಾಹಿತಿ. ಮೂರು ಪ್ರಮುಖ ಸಮುದಾಯಗಳ ಪ್ರಮುಖ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಚುನಾವಣೆ ರಣತಂತ್ರ ರೂಪಿಸಲು ನಿರ್ಧಾರ ಮಾಡಲಾಗ್ತಿದೆ ಎನ್ನಲಾಗಿದೆ.

Related Posts

Don't Miss it !