ಆಡಳಿತ ಪಕ್ಷ BJP ಎದುರು ಕಾಂಗ್ರೆಸ್​​ ಕಾಲು ಜಾರಿ ಬಿದ್ದಿದ್ದು ಯಾಕೆ..?

‘ಕಾಂಗ್ರೆಸ್ ಪಕ್ಷಕ್ಕೆ ಹಾರುವುದಕ್ಕೆ ಕೆಲವು ವಲಸಿಗರು ಈಗಾಗಲೇ ಟಿಕೆಟ್​ ಬುಕ್​ ಮಾಡಿಕೊಂಡಿದ್ದಾರೆ’ ಸಚಿವ ಸ್ಥಾನ ಯಾರಿಗೆ ಕೊಡಬೇಕು, ಯಾರಿಂದ ವಾಪಸ್​ ಪಡೆಯಬೇಕು ಎನ್ನುವುದನ್ನು ನಾಯಕರು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಇಲ್ಲಿ ಅಧಿಕಾರ ಅನುಭವಿಸಿ ಚಂಗನೆ ಅಲ್ಲಿಗೆ ಹಾರಿಬಿಡ್ತಾರೆ. ಈಗಾಗಲೇ ಟಿಕೆಟ್​ ಬುಕ್​ ಆಗಿದೆ’ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಹಲವಾರು ಬಿಜೆಪಿ ಸಚಿವರು ಯತ್ನಾಳ್​ ವಿರುದ್ಧ ವಾಕ್ಸಮರ ಮಾಡಿದ್ದರು. ನಾವು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ವಲಸೆ ಸಚಿವರೇ ತಿರುಗೇಟು ಕೊಟ್ಟಿದ್ರು. ಈ ಬಗ್ಗೆ ಕಾಂಗ್ರೆಸ್​ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ಕೂಡ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು. ನಮ್ಮ ಜೊತೆಗೆ ಸಂಪರ್ಕದಲ್ಲಿ ಇರುವುದು ಸತ್ಯ. ಆದರೆ ಯಾರೆಲ್ಲಾ ಚರ್ಚೆ ಮಾಡಿದ್ದಾರೆ. ಯಾರು ಕಾಂಗ್ರೆಸ್​​ಗೆ ಬರ್ತಾರೆ ಎನ್ನುವುದನ್ನು ಹೇಳುವುದಿಲ್ಲ ಎಂದಿದ್ದರು. ಆದರೆ ಇದೀಗ ಮಾತಿನ ಗೇರ್​ ರಿವರ್ಸ್​ ಹಾಕಿದ್ದಾರೆ.

Read This: ಮಂಡ್ಯದಲ್ಲಿ ಕಾಮುಕ LIC ಏಜೆಂಟ್​ ಅವಂತಾರ..! ಸತ್ತ ಅಪ್ಪ, ಮಗನೇ ಮೂರ್ಖರು..!

ರಮೇಶ್​ ಜಾರಕಿಹೊಳಿ ಮಾತಿಗೆ ಸಿದ್ದರಾಮಯ್ಯ ಶಾಕ್​..!!

ಬಿಜೆಪಿ ಹಲವು ಮಿನಿಸ್ಟರ್​ಗಳು ಹೋಗ್ತಾರೆ ಎಂದಿದ್ದನ್ನು ಲಾಭಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಬಸನಗೌಡ ಪಾಟೀಲ್​ ಹೇಳಿಕೆಯನ್ನು ಕಾಂಗ್ರೆಸ್​ ನಾಯಕರು ಯಥಾವತ್ತಾಗಿ ಸ್ವೀಕಾರ ಮಾಡಿದ್ದರು. ವಲಸೆ ಬಂದವರು ವಾಪಸ್​ ಹೋಗ್ತಾರೆ ಎಂದು ಯತ್ನಾಳ್​ ಹೇಳಿಕೆಯನ್ನು ಒಪ್ಪಿಕೊಳ್ತಿದ್ದ ಹಾಗೆ ರಮೇಶ್​ ಜಾರಕಿಹೊಳಿ ಕಾಂಗ್ರೆಸ್​ ನಾಯಕರ ಬಗ್ಗೆ ಕಟುವಾಗಿ ಟೀಕಿಸಿದ್ದರು. ವಿಧಾನಸೌಧದಲ್ಲಿ ಮೇಜು ಕುಟ್ಟಿ ಮಾತನಾಡಿದ್ದ ಸಿದ್ದರಾಮಯ್ಯಗೆ ಈಗ ನಮ್ಮವರ ಅವಶ್ಯತೆ ಬಿದ್ದಿದ್ಯಾ..? ಈಗ ಯಾಕೆ ಕರೆದುಕೊಳ್ತಾರೆ ಎಂದು ಟೀಕಿಸಿದ್ದರು. ಬುಧವಾರ ತಮ್ಮದೇ ಹೇಳಿಕೆಯಿಂದ ಹಿಂದೆ ಸರಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷಾಂತರಿಗಳನ್ನು ನಾವು ಕಾಂಗ್ರೆಸ್​ಗೆ ಕರೆದುಕೊಳ್ತೇವೆ ಎಂದು ನಾನು ಹೇಳಿಲ್ಲ, ಕಾಂಗ್ರೆಸ್​ ಪಕ್ಷದ ಸಿದ್ದಾಂತವನ್ನು ಒಪ್ಪಿ ಬಂದವರಿಗೆ ಸ್ವಾಗತ. ನಾನು ಯಾರ ಜೊತೆಗೂ ಚರ್ಚೆ ಮಾಡುವುದಕ್ಕೂ ಹೋಗಲ್ಲ, ಅವರಾಗಿಯೇ ಬಂದರೆ ಚರ್ಚೆ ಮಾಡ್ತೇನೆ ಎನ್ನುವ ಮೂಲಕ ಯೂ ಟರ್ನ್​ ತೆಗೆದುಕೊಂಡರು.

ಸಿದ್ದರಾಮಯ್ಯ – ಡಿ.ಕೆ ಶಿವಕುಮಾರ್​ ಕಚ್ಚಾಟವೇ ಕಾರಣ..!

ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿರುವ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಮಾತನಾಡಿರೋದು ದೊಡ್ಡ ಸುಳ್ಳು. ಯಾರು ಬರ್ತಾರೆ ಅನ್ನೋ ಪತ್ರಕರ್ತದ ಪ್ರಶ್ನೆಗೆ ಉತ್ತರ ಇಲ್ಲ. ಈ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ನಡುವೆ ಅಂತರಿಕ ಫೈಪೋಟಿ ನಡೆಯುತ್ತಿದೆ. ಡಿ.ಕೆ ಶಿವಕುಮಾರ್​​ ಸುದ್ದಿಗೋಷ್ಠಿ ಮಾಡಿ, ಅವರು ಬರ್ತಾರೆ, ಇವರು ಬರ್ತಾರೆ ಅಂತಾರೆ. ಇದನ್ನು ನೋಡಿದ ಸಿದ್ದರಾಮಯ್ಯ ಅಭದ್ರೆತೆಯಿಂದ ಅವರು ಬರ್ತಾರೆ, ಇವರು ಬರ್ತಾರೆ ಅಂತಾರೆ. ಇವರ ತಿಕ್ಕಾಟದಿಂದ ಬಹಳ ಜನರು ಕಾಂಗ್ರೆಸ್ ಬಿಟ್ಟು ಹೊರಕ್ಕೆ ಹೋಗ್ತಾರೋ ವಿನಃ, ಕಾಂಗ್ರೆಸ್ ಪಕ್ಷಕ್ಕೆ ಯಾರೂ ಸೇರಲ್ಲ ಎಂದು ಕಾಲೆಳೆದಿದ್ದಾರೆ. ಇನ್ನೂ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ನೆಲೆಯಿಲ್ಲ, ಪಂಜಾಬ್​ನನ್ನೂ ಅಧಿಕಾರ ಕಳೆದುಕೊಳ್ತಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ ಅಪ್ರಸ್ತುತ, ಫಲಿತಾಂಶದ ಬಳಿಕ ರಾಜ್ಯದಲ್ಲೂ ಕಾಂಗ್ರೆಸ್​ ಅಪ್ರಸ್ತುತ ಎಂದು ಭವಿಷ್ಯ ನುಡಿದಿದ್ದಾರೆ.

Also Read: ಐವರು ಕನ್ನಡಿಗರು ಸೇರಿ ದೇಶದ 128 ಗಣ್ಯರಿಗೆ ಪದ್ಮ ಗೌರವ..! ಪ್ರಮುಖರ ಪಟ್ಟಿ..

ಬಿಜೆಪಿ ಉರುಳಿಸಿದ ದಾಳಕ್ಕೆ ಬಲಿಯಾದ ಕಾಂಗ್ರೆಸ್​..!!

ಬೆಳಗಾವಿಯಲ್ಲಿ ರಮೇಶ್​ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರನ್ನು ಬಿಟ್ಟು ಉಮೇಶ್​ ಕತ್ತಿ ಅಂಡ್​ ಟೀಂ ರಹಸ್ಯ ಸಭೆ ನಡೆಸಿದ್ದರು. ಆ ಬಳಿಕ ರಮೇಶ್​ ಜಾರಕಿಹೊಳಿ ಬಗ್ಗೆ ವಲಸೆ ಸಚಿವರು ಯಾವುದೇ ಮಹತ್ವ ಕೊಡುತ್ತಿಲ್ಲ. ಬಾಂಬೆ ಟೀಂ ಎನ್ನುವ ಸೌಜನ್ಯಕ್ಕೂ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಅಥವಾ ಹೈಕಮಾಂಡ್​ಗೆ ಒತ್ತಾಯ ಮಾಡುವ ಕೆಲಸ ಮಾಡ್ತಿಲ್ಲ. ಇದೇ ಕಾರಣದಿಂದ ಬಸನಗೌಡ ಪಾಟೀಲ್​ ಯತ್ನಾಳ್​ ಜೊತೆಗೆ ಸಭೆ ನಡೆಸಿದ ರಮೇಶ್​ ಜಾರಕಿಹೊಳಿ, ಉದ್ದೇಶ ಪೂರ್ವಕವಾಗಿಯೇ ಯತ್ನಾಳ್​ ಮೂಲಕ ಈ ಮಾತನ್ನು ಹೇಳಿಸಿದ್ದಾರೆ ಎನ್ನಲಾಗ್ತಿದೆ. ಕಾಂಗ್ರೆಸ್​ ನಾಯಕರು ಹಿಂದೂ ಮುಂದು ನೋಡದೆ ಹೌದು ಎಂದು ತಲೆ ಅಲ್ಲಾಡಿಸಿದ ಬಳಿಕ ಕಾಂಗ್ರೆಸ್​ ನಾಯಕರೇ ನನ್ನ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎನ್ನುವ ಮೂಲಕ ಕಾಂಗ್ರೆಸ್​ಗೆ ತಿರುಗೇಟು ನೀಡಿದ್ದರು. ಜೊತೆಗೆ ಅಧಿವೇಶನದಲ್ಲಿ ಪಕ್ಷಾಂತರಿಗಳನ್ನು ಕಾಂಗ್ರೆಸ್​​ ವಾಪಸ್​ ಸೇರಿಸಿಕೊಳ್ಳುವುದಿಲ್ಲ ಎನ್ನುವ ಸಿದ್ದರಾಮಯ್ಯ ಮಾತನ್ನು ನೆನಪಿಗೆ ಬರುವಂತೆ ಮಾತನಾಡಿ ಮುಜುಗರ ಸೃಷ್ಟಿಸಿದರು ಅಷ್ಟೆ ಎನ್ನುವುದು ವಿಧಾನಸೌಧದ ಪಡಸಲೆಯ ಮಾತು.

ನೀತಿ: ಎದುರಾಳಿ ಬಿಟ್ಟ ಬಾಣ ಎಲ್ಲವನ್ನೂ ಎದುರಿಸಬಾರದು. ಕೆಲವೊಮ್ಮೆ ತಪ್ಪಿಸಿಕೊಳ್ಳುವುದೇ ಜಾಣತನ

ಕಮೆಂಟ್ ಮಾಡಿ ನಿಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರಾದ ನೀವೇ ನಮ್ಮ ಮಾರ್ಗದರ್ಶಕರು

Related Posts

Don't Miss it !