ಬಿಜೆಪಿಯಲ್ಲಿ ಭಿನ್ನಮತ ಬಹಿರಂಗ, ಕುರ್ಚಿಗೆ ಕಂಟಕ..!?

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಿಜೆಪಿ ಭಿನ್ನಮತ ಶಮನ ಮಾಡುವ ಉದ್ದೇಶದಿಂದ ನಿನ್ನೆಯಿಂದ ಸರಣಿ ಸಭೆ ನಡೆಸುತ್ತಿದ್ದಾರೆ. ನಿನ್ನೆ ಸಚಿವರ ಸಭೆ ನಡೆಸಿ ಮೌಲ್ಯಮಾಪನ ಮಾಡಿದ ಅರುಣ್ ಸಿಂಗ್ ಇಂದು ಶಾಸಕರ ಜೊತೆಗೆ ಚರ್ಚೆ ನಡೆಸುತ್ತಿದ್ದಾರೆ. ಈ ನಡುವೆ ಬಣ ರಾಜಕೀಯ ಮಾಡುವಂತಿಲ್ಲ, ಗುಂಪು ಗುಂಪಾಗಿ ಭೇಟಿಗೆ ಬರುವಂತಿಲ್ಲ ಎನ್ನುವ ಸೂಚನೆ ನಡುವೆಯೂ ಬಿ.ಎಸ್ ಯಡಿಯೂರಪ್ಪ ಆಪ್ತಬಣ ಬೆಳಗ್ಗೆ ಉಪಾಹಾರ ಸೇವನೆ ನೆಪದಲ್ಲಿ ಒಗ್ಗಟ್ಟು ಪ್ರದರ್ಶನ ನಡೆಸಿದೆ. ಬಳಿಕ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಆಪ್ತ ಬಣದ ಮುಂದಾಳತ್ವವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ವಹಿಸಿಕೊಂಡಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ಸಿಎಂ ಪಟ್ಟ..?

ಅರುಣ್ ಸಿಂಗ್ ಭೇಟಿಗೆ ಒಬ್ಬೊಬ್ಬರೇ ನಾಯಕರು ಆಗಮಿಸುತ್ತಿದ್ದು, ಜೆಡಿಎಸ್‌ನಿಂದ ಶಾಸಕರಾಗಿ ಆಪರೇಷನ್ ಕಮಲ ಮೂಲಕ ಬಿಜೆಪಿ ಸೇರಿದ್ದ ಹೆಚ್ ವಿಶ್ವನಾಥ್ ಬಹಿರಂಗವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಯಡಿಯೂರಪ್ಪ ಬದಲಾವಣೆಗಾಗಿ ಅರುಣ್ ಸಿಂಗ್ ಎದುರು ಬೇಡಿಕೆ ಇಟ್ಟಿದ್ದೇನೆ. ಯಡಿಯೂರಪ್ಪ ಮಾರ್ಗದರ್ಶಕರಾಗಿ ಇರಲಿ, ಪಂಚಮಸಾಲಿ ಸಮುದಾಯದವರಿಗೆ ಅವಕಾಶ ಕೊಟ್ಟು ಒಂದು ಉತ್ತಮ ತಂಡವನ್ನ ಕಟ್ಟಲಿ ಎಂದಿದ್ದಾರೆ. ಯಡಿಯೂರಪ್ಪ ಜಾಗಕ್ಕೆ ಮತ್ತೊಬ್ಬ ನಾಯಕರು ಬರಲಿ, ಎಲ್ಲರನ್ನು ಒಟ್ಟುಗೂಡಿಸಿಕೊಂಡು ಹೋಗಲಿ. ಪಂಚಮಸಾಲಿಯಲ್ಲಿ ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಇದ್ದಾರೆ, ಯಂಗ್ ಸ್ಟರ್ ಬೇಕಾದರೆ ಅರವಿಂದ ಬೆಲ್ಲದ್ ಅವರನ್ನೆ ಸಿಎಂ ಮಾಡಿ, ಮಧ್ಯಮ ವಯಸ್ಸು ಬೇಕಿದ್ದ ನಿರಾಣಿಯವರನ್ನ ಮಾಡಿ, ಎಲ್ಲದಕ್ಕೂ ಬೇಕು ಅಂದ್ರೆ ಯತ್ನಾಳ್ ಅವರನ್ನ ಸಿಎಂ ಮಾಡಿ ಎಂದಿದ್ದಾರೆ.

ಆಡಳಿತದಲ್ಲಿ ಹಸ್ತಕ್ಷೇಪ, ಭ್ರಷ್ಟಚಾರ ಹೆಚ್ಚಾಗಿದೆ. ಸರ್ಕಾರದ ಮೇಲೆ ಸಾರ್ವಜನಿಕ ಅಭಿಪ್ರಾಯ ಹೋಗಿದೆ ಎಂದಿರುವ ವಿಶ್ವನಾಥ್, ಬಿಜೆಪಿ ಹಾಗೂ ಮೋದಿ ಮೇಲೆ ನಂಬಿಕೆ ಹೋಗ್ತಿದೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಬಿಜೆಪಿ ವಿಧಾನಪರಿಷತ್​ ಸದಸ್ಯರಾಗಿರುವ ಹೆಚ್ ವಿಶ್ವನಾಥ್ ನೇರ ಆರೋಪ ಮಾಡಿದ್ದು, ಸಿಎಂ ಪುತ್ರ ಬಿ.ವೈ ವಿಜಯೇಂದ್ರ ನೀರಾವರಿ ಇಲಾಖೆಯಲ್ಲಿ 16 ಸಾವಿರ ಕೋಟಿ ಟೆಂಡರ್​ಗೆ ಕೈ ಹಾಕಿದ್ದಾರೆ. ಫೈನಾನ್ಸ್ ಡಿಪಾರ್ಟ್​ಮೆಂಟ್ ಒಪ್ಪಿಗೆ ಪಡೆದಿಲ್ಲ.
ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆಯೂ ಅರುಣ್ ಸಿಂಗ್ ಬಳಿ ಹೇಳಿದ್ದೇನೆ. ನಾಯಕತ್ವ ಬದಲಾವಣೆ ಆಗಲೇಬೇಕು
ಎಂದು ಕಾರಣ ಕೊಟ್ಟಿದ್ದೇನೆ. ಅರುಣ್ ಸಿಂಗ್ ಕೂಡ ಪಾಸಿಟಿವ್ ರೆಸ್ಪಾನ್ಸ್ ಮಾಡಿದ್ದಾರೆ ಎನ್ನುವ ಮೂಲಕ ಬಿಜೆಪಿಯಲ್ಲಿ ಬೆಂಕಿಯ ಕಿಡಿ ಹೊತ್ತಿಸಿದ್ದಾರೆ.

ಹಳ್ಳಿ ಹಕ್ಕಿ ಏಟಿಗೆ ಆಪ್ತಬಣ ತಿರುಗೇಟು..!

ಸಿಎಂ ಆಪ್ತಬಣದ ಮುಂದಾಳತ್ವ ವಹಿಸಿರುವ ಎಂ.ಪಿ ರೇಣುಕಾಚಾರ್ಯ, ಬಿಎಸ್​ವೈ ನಾಯಕತ್ವದಲ್ಲಿ ನಮಗೆ ವಿಶ್ವಾಸ ಇದೆ.ಯಡಿಯೂರಪ್ಪ ವಿರುದ್ಧ ಮಾತನಾಡಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ ಮಾಡ್ತೇವೆ. ಯಡಿಯೂರಪ್ಪನವರಿಗೆ ವಯಸ್ಸಾದ್ರು ಅವರು ಹಗಲಿರುಳು ಕೆಲಸ ಮಾಡ್ತಿದ್ದಾರೆ. ವಿಶ್ವನಾಥ್ ಅವ್ರೆ ನಿಮಗೆ ವಯಸ್ಸು ಎಷ್ಟು..? ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ, ಎಸ್.ಎಂ ಕೃಷ್ಣ ವಿರುದ್ಧ ಏನೆಲ್ಲಾ ಮಾತಾಡಿದ್ರಿ, ಜೆಡಿಎಸ್​​ನಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟ, ದೇವೇಗೌಡ, ಕುಮಾರಸ್ವಾಮಿಗೆ ಮೋಸ ಮಾಡಿದ್ರಿ. ನಮ್ಮ ಪಕ್ಷಕ್ಕೆ ನೀವು ಬಂದಾಗ ಕೋರ್ಟ್​ನಲ್ಲಿ ‌ನಿಮ್ಮ ವಿರುದ್ಧ ಆದೇಶ ಇದ್ದರೂ ನಿಮ್ಮನ್ನ ಸಿಎಂ ಎಂಎಲ್​ಸಿ ಮಾಡಿದ್ರು ಎಂದು ಟೀಕಿಸಿದ್ದಾರೆ.

ಹೆಚ್​. ವಿಶ್ವನಾಥ್​ಗೆ ಅರಳು‌ ಮರಳು..!

ರೇಣುಕಾಚಾರ್ಯ ಹೇಳಿಕೆ ಬೆನ್ನಲ್ಲೇ ಮಾತನಾಡಿರುವ ಸೊರಬ ಶಾಸಕ ಹರತಾಳು ಹಾಲಪ್ಪ, ವಿಶ್ವನಾಥ್​ ಅವರಿಗೆ ಅರಳು ಮರಳು ಎನ್ನುವ ವಯಸ್ಸು, ಅವರಿಗೆ ಮನಸ್ಥಿತಿಯೇ ಸರಿ ಇಲ್ಲ ಎಂದಿದ್ದಾರೆ. ಇನ್ನೂ ವಿಶ್ವನಾಥ್​ಗೆ ಒಂದು ಗುಣ ಇದೆ. ಅದೇನಂದ್ರೆ ಇದ್ದ ಮನೆಯಲ್ಲಿ ಮದ್ದು ಅರೆಯೋದು. ನಿಜವಾಗಿಯೂ ಇವರದ್ದು ಹುಚ್ಚಾಟ ಎಂದಿದ್ದಾರೆ. ಹೆಚ್ ವಿಶ್ವನಾಥ್ ಒಬ್ಬ ಮಾನಸಿಕ ಅಸ್ವಸ್ಥ, ಅವರನ್ನು ಮೊದಲು ಆಸ್ಪತ್ರೆಗೆ ಸೇರಿಸಬೇಕು ಎಂದು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಉಂಡ ಮನೆಗೆ ಎರಡು ಬಗೆಯೋ ಬುದ್ಧಿ ಅವರದ್ದು, ಯಡಿಯೂರಪ್ಪನವರಿಗೆ ವಯೋ ಸಹಜ ಆಗಿರಬಹುದು, ಆದರೆ ಮಾನಸಿಕ ನಿರ್ಧಾರಗಳು ದೃಢವಾಗಿವೆ ಎಂದಿದ್ದಾರೆ.

ಹಿರಿಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ನಾನು 1994ರಿಂದ ನಿರಂತರವಾಗಿ ಶಾಸಕನಾಗಿದ್ದೇನೆ . ಪಕ್ಷದ ಗೊಂದಲ ನೋಡಿ ನೋವಾಗುತ್ತಿದೆ. ಮುಂದಿನ ಬಾರಿ ಅಧಿಕಾರಕ್ಕೆ ಬರಬೇಕೆಂದರೆ ಗೊಂದಲ ನಿವಾರಣೆ ಆಗಬೇಕು. ನಾಯಕತ್ವ ಬದಲಾವಣೆ ವಿಚಾರದಲ್ಲಿ ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಬದ್ಧ ಎಂದಿದ್ದಾರೆ. ಪಕ್ಷದ ಆದೇಶವನ್ನು ಯಡಿಯೂರಪ್ಪ ಕೇಳಬೇಕು, ಮೋದಿ ಕೂಡ ಕೇಳಬೇಕು. ಅರುಣ್ ಸಿಂಗ್‌ ಮುಂದೆ ನನ್ನ ಅಭಿಪ್ರಾಯ ತಿಳಿಸುವೆ, ಮುಂದಿನ‌ ಸಂಪುಟದಲ್ಲಿ ನನಗೆ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ. ಇನ್ನೂ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರದ ಆರೋಪ ಬಗ್ಗೆ ಮಾತನಾಡಿ ಹೆಚ್.ವಿಶ್ವನಾಥ್ ನನಗೆ ಹಳೆಯ ಸ್ನೇಹಿತರು. ಅವರು ಯಾವುದೇ ಮುಚ್ಚುಮರೆ ಮಾಡಲ್ಲ, ನೇರವಾಗಿ ಮಾತನಾಡುತ್ತಾರೆ ಎಂದಿದ್ದಾರೆ.

ಬಿಜೆಪಿ ಭಿನ್ನಮತದ ಬಗ್ಗೆ ಇಷ್ಟು ದಿನಗಳ ಕಾಲ ಮುಚ್ಚಿಡಲು ಪ್ರಯತ್ನಿಸಿದ್ದ ಬಿಜೆಪಿ ನಾಯಕರು ಇಂದು ಕಂಗಾಲಾಗಿದ್ದಾರೆ. ಬಹಿರಂಗವಾಗಿ ಮಾತನಾಡಿ ಬೇಡಿ ಎಂದು ಸೂಚಿಸಿದ್ದರೂ ಅಸಮಾಧಾನ ಬಹಿರಂಗವಾಗಿದೆ. ಈಗಲೂ ತೇಪೆ ಹಾಕಲು ಹಲವು ನಾಯಕರು ಟೊಂಕ ಕಟ್ಟಿದ್ದಾರೆ. ಅಸಮಾಧಾನಗೊಂಡಿರುವ ಶಾಸಕರ ಸಮಾಧಾನ ಮಾಡುವ ಕೆಲಸವೂ ನಡೆಯುತ್ತಿದೆ. ಇದೀಗ ವಿಶ್ವನಾಥ್​ ಸಿಡಿಸಿರುವ ವಿಜಯೇಂದ್ರ ಭ್ರಷ್ಟಾಚಾರ ವಿಚಾರ ರಾಜಕೀಯ ಮೇಲಾಟ ಶುರು ಮಾಡುವುದು ನಿಶ್ಚಿತವಾಗಿದೆ.

Related Posts

Don't Miss it !