ದಿನಕ್ಕೆ ₹100 ಕೋಟಿ ಡೀಲ್​; CM ಮನೆ ಹಿಂದಿನ ಗೆಸ್ಟ್​ಹೌಸ್​ ಸ್ಪಾಟ್​..!

ಸಿಸಿಬಿ ಟೀಂ ಯಾಕೆ ರೇಡ್​ ಮಾಡ್ತಿಲ್ಲ..? ದುಷ್ಟರ ಸಂಹಾರಕ್ಕಾಗಿದೆ ಚಾಮುಂಡಿಗೆ ಪೂಜೆ..! ವಿರೋಧ ಪಕ್ಷಗಳಿಗೂ ಸರ್ಕಾರದಿಂದ ಮಾಮೂಲು..! ದಕ್ಷಿಣೆ ಕಾಸಿಗಾಗಿ ಸ್ವಾಮೀಜಿಗಳ ಬೆಂಬಲ..! ಮಾಧ್ಯಮಗಳಿಗೂ ಯತ್ನಾಳ್​ ನೇರ ಸವಾಲು..!

ಮೈಸೂರು: ರಾಜ್ಯ ಬಿಜೆಪಿ ಸರ್ಕಾರ ಹೇಗೆ ಭ್ರಷ್ಟಾಚಾರ ಮಾಡುತ್ತಿದೆ ಎನ್ನುವುದನ್ನು ಬಯಲಿಗೆ ಎಳೆಯುವ ಕೆಲಸವನ್ನು ಯಾವುದೇ ವಿರೋಧ ಪಕ್ಷಗಳು ಮಾಡುತ್ತಿಲ್ಲ. ಕೇವಲ ಬಿಜೆಪಿ ಶಾಸಕರೇ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡುತ್ತಿದ್ದಾರೆ. “ರಾಜ್ಯ ಬಿಜೆಪಿ ಸರ್ಕಾರ ದಿನವೊಂದಕ್ಕೆ 100 ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡುತ್ತಿದೆ” ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಆರೋಪಿಸಿದ್ದಾರೆ. ಅನ್​ಲಾಕ್​ 3.O ಪ್ರಯುಕ್ತ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದ ಬಳಿಕ ಮಾತನಾಡಿದ ಬಸನಗೌಡ ಪಾಟೀಲ್​ ಯತ್ನಾಳ್, ವಿಜಯೇಂದ್ರ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದ್ದಾರೆ.

ಸಿಸಿಬಿ ಟೀಂ ಯಾಕೆ ರೇಡ್​ ಮಾಡ್ತಿಲ್ಲ..?

ವಿಜಯೇಂದ್ರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಯತ್ನಾಳ್, ಸಿಎಂ ಬಿ.ಎಸ್​ ಯಡಿಯೂರಪ್ಪ ಸರ್ಕಾರಿ ನಿವಾಸ ಕಾವೇರಿ ಹಿಂಭಾಗದ ಗೆಸ್ಟ್‌ಗೌಸ್‌ ಮೇಲೆ ಸಿಸಿಬಿ ಪೊಲೀಸರು ಯಾಕೆ ದಾಳಿ ಮಾಡ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಸರ್ಕಾರದ ಎಲ್ಲಾ ಡೀಲ್‌ಗಳು ನಡೆಯೋದೆ ಅಲ್ಲಿ. ಹಾಗಾಗಿ ಸಿಸಿಬಿ ಪೊಲೀಸರು ಅಲ್ಲೂ ರೈಡ್ ಮಾಡಬೇಕು. ವಿಜಯೇಂದ್ರ ಡೀಲ್ ಮಾಡೋದೆ ಆ ಸ್ಥಳದಲ್ಲಿ ಎಂದು ಮೈಸೂರಿನಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ನೇರ ಆರೋಪ ಮಾಡಿದ್ದಾರೆ. ಆಗಸ್ಟ್ 15 ರಂದು ನೂತನ ಸಿಎಂ ಧ್ವಜಾರೋಹಣ ಮಾಡುವ ಚರ್ಚೆ ಬಗ್ಗೆ ಮಾತನಾಡಿರುವ ಯತ್ನಾಳ್​, ಅಲ್ಲಿವರೆಗೂ ಯಾಕೆ ಮುಂದುವರೆಸಬೇಕು. ಶೀಘ್ರದಲ್ಲೇ ಸಿಎಂ ಬದಲಾವಣೆ ಮಾಡಬೇಕು‌. ದಿನಕ್ಕೆ ನೂರು ಕೋಟಿ ಲೂಟಿ ಹೊಡೆಯುತ್ತಿದ್ದಾರೆ ಎಂದು ದೂರಿದ್ದಾರೆ.

ದುಷ್ಟರ ಸಂಹಾರಕ್ಕಾಗಿದೆ ಚಾಮುಂಡಿಗೆ ಪೂಜೆ..!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧವೂ ಗುಡುಗಿರುವ ಬಸನಗೌಡ ಪಾಟೀಲ್​ ಯತ್ನಾಳ್, ರಾಜ್ಯವನ್ನು ಲೂಟಿ ಮಾಡುತ್ತಿರುವ ದುಷ್ಟರ ಸಂಹಾರ ಆಗಬೇಕು. ರಾಜ್ಯದಲ್ಲಿ ಅನ್‌ಲಾಕ್ ಶುರುವಾದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಬಂದಿದ್ದೇನೆ. ದುಷ್ಟರ ಸಂಹಾರ ಮಾಡು ಅಂತ ತಾಯಿ ಚಾಮುಂಡಿ ಬಳಿ ಬೇಡಿಕೊಂಡಿದ್ದೇನೆ. ಯಾರು ಅಪಾರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೋ, ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೋ, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೋ ಅವರೆಲ್ಲರೂ ದುಷ್ಟರು. ಅತಿ ಶೀಘ್ರದಲ್ಲೇ ದುಷ್ಟ ಸಂಹಾರ ಆಗುವ ವಿಶ್ವಾಸವೂ ಇದೆ ಎಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷಗಳಿಗೂ ಸರ್ಕಾರದಿಂದ ಮಾಮೂಲು..!

ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಹೈಕಮಾಂಡ್ ನಾಯಕರೇ ಯತ್ನಾಳ್‌ಗೆ ಮಾಹಿತಿ ನೀಡುತ್ತಿದ್ದಾರೆ ಎನ್ನುವ ಕಾಂಗ್ರೆಸ್​ ನಾಯಕರ ಮಾತಿಗೆ ಉತ್ತರಿಸಿದ ಬಸನಗೌಡ ಪಾಟೀಲ್​ ಯತ್ನಾಳ್​, ಕಾಂಗ್ರೆಸ್‌ನವ್ರು ಏನು ಕತ್ತೆ ಕಾಯ್ತ ಇದ್ದಾರ..? ಎಂದು ಪ್ರಶ್ನಿಸಿದ್ದಾರೆ. ಭ್ರಷ್ಟರ ಜೊತೆ ವಿಪಕ್ಷಗಳು ಕೈ ಜೋಡಿಸಿವೆ. ವಿಪಕ್ಷದವರು ಕೂಡ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ. ವಿಪಕ್ಷಗಳಿಗೆ ಮಾಮೂಲಿ ಹೋಗ್ತಿದೆ ಎಂದು ನೇರ ಆರೋಪ ಮಾಡಿದ್ದಾರೆ. ಜೊತೆಗೆ ಶೋಭ ಡೆವಲಪರ್ಸ್‌‌ನಲ್ಲಿ ಯಾಱರು ಪಾಲುದಾರರು ಎಂಬುದನ್ನು ಮಾದ್ಯಮಗಳೇ ತನಿಖೆ ಮಾಡಬೇಕು. ರಾಜ್ಯದಲ್ಲಿ ವಿರೋಧ ಪಕ್ಷಗಳು ಸತ್ತು ಹೋಗಿವೆ. ಬಿ ಎಸ್ ಯಡಿಯೂರಪ್ಪ ಜೊತೆ ಎಲ್ಲರೂ ಶಾಮೀಲಾಗಿದ್ದಾರೆ. ಅವರಿಗೂ ಭ್ರಷ್ಟಾಚಾರದಲ್ಲಿ ಪಾಲಿದೆ. ಈಗಾಗಿ ಅವಱರು ಯಡಿಯೂರಪ್ಪ ವಿರುದ್ಧ ಮಾತಾನಾಡುತ್ತಿಲ್ಲ. ಅವರಿಗೂ ಯಡಿಯೂರಪ್ಪ ಮುಂದುವರಿಯಬೇಕು ಎಂದು ವಿರೋಧ ಪಕ್ಷಗಳ ಬಗ್ಗೆ ಕೆಂಡಕಾರಿದ್ದಾರೆ.

ದಕ್ಷಿಣೆ ಕಾಸಿಗಾಗಿ ಸ್ವಾಮೀಜಿಗಳ ಬೆಂಬಲ..!

ಸಿಎಂ ಬಿ.ಎಸ್​ ಯಡಿಯೂರಪ್ಪ ಪರವಾಗಿ ಮಾತನಾಡುತ್ತಿರುವ ಸ್ವಾಮೀಜಿಗಳ ಬಗ್ಗೆಯೂ ಖಾರವಾಗಿ ಮಾತನಾಡಿರುವ ಬಸನಗೌಡ ಪಾಟೀಲ್​ ಯತ್ನಾಳ್​, ದಕ್ಷಿಣೆ ಕಾಸಿಗೆ ಆಸೆಗೆ ಬಿದ್ದು ಕೆಲವು ಮಠಾಧೀಶರು ಸಿಎಂ ಯಡಿಯೂರಪ್ಪ ಪರವಾಗಿ ಮಾತನಾಡುತ್ತಿದ್ದಾರೆ. ಲವ್ ಜಿಹಾದ್‌ ತಡೆಯಲು ಮಠಾಧೀಶರು ಮುಂದಾಗಬೇಕು. ಕೆಟ್ಟವರಿಗೆ ಬುದ್ಧಿ ಹೇಳುವ ಕೆಲಸ ಮಾಡಬೇಕು. ಅದನ್ನ ಬಿಟ್ಟು ಸಿಎಂ ಯಡಿಯೂರಪ್ಪ ಬದಲಾವಣೆ ಮಾಡಿದ್ರೆ ಬೀದಿಗೆ ಬರ್ತೀವಿ ಅನ್ನೋದು ಸರಿಯಲ್ಲ. ಸಿಎಂ ಬಿ.ಎಸ್‌ ಯಡಿಯೂರಪ್ಪ ಕುಟುಂಬದಿಂದ ಲಿಂಗಾಯತ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ. ಇದರ ಬಗ್ಗೆ ಮಾತನಾಡುವ ಬದಲು ಭ್ರಷ್ಟರ ಪರವಾಗಿ ಮಠಾಧೀಶರು ಮಾತನಾಡುತ್ತಿದ್ದಾರೆ. ನಿಮಗೆ ಅಷ್ಟೋಂದು ರಾಜಕೀಯ ಹುಚ್ಚು ಇದ್ರೆ ಖಾವಿ ತೆಗೆದು ಖಾದಿ ಧರಿಸಿ ರಾಜಕೀಯಕ್ಕೆ ಬನ್ನಿ ಎಂದು ಆಹ್ವಾನ ಕೊಟ್ಟಿದ್ದಾರೆ.

ಮಾಧ್ಯಮಗಳಿಗೂ ಯತ್ನಾಳ್​ ನೇರ ಸವಾಲು..!

ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಇನ್ನೆರಡು ದಿನಗಳಲ್ಲಿ ನಾನು ದಾಖಲೆ ಬಿಡುಗಡೆ ಮಾಡ್ತೇನೆ. ಮಾಧ್ಯಮಗಳಿಗೆ ರಾಜ್ಯದ ಮೇಲೆ ಏನಾದರೂ ಕಾಳಜಿ ಇದ್ದರೆ ಭ್ರಷ್ಟಾಚಾರದ ಬಗ್ಗೆ ಪ್ರಸಾರ ಮಾಡಿ ಎಂದು ನೇರವಾಗಿ ಸವಾಲು ಹಾಕಿದ್ದಾರೆ. ಯಾವುದರ ಬಗ್ಗೆ ಎಂಬುದನ್ನೂ ಬಹಿರಂಗ ಮಾಡದ ಯತ್ನಾಳ್​ ದೊಡ್ಡ ಹಗರಣದ ದಾಖಲೆಗಳೇ ಇವೆ. ಮಾಧ್ಯಮಗಳ ಎದುರು ಕೊಡ್ತೇನೆ ಎಷ್ಟರ ಮಟ್ಟಿಗೆ ಪ್ರಸಾರ ಮಾಡ್ತೀರಿ ಎಂಬುದನ್ನು ನೋಡೋಣ ಎಂದಿದ್ದಾರೆ.

Related Posts

Don't Miss it !