ಬಿಜೆಪಿಯಲ್ಲಿ ಮತ್ತೆ ಶುರುವಾಯ್ತು ನಾಯಕತ್ವದ ಪರ ವಿರುದ್ಧ ವಾರ್​..!

ರಾಜ್ಯ ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಪ್ರಶ್ನಾತಿತ ನಾಯಕ ಎನ್ನುವ ಸಮಯವಿತ್ತು. ಆ ನಿಲುವು ಕೆಲವೇ ದಿನಗಳ ಹಿಂದೆ ಬದಲಾಗಿತ್ತು. ಬಿಜೆಪಿ ಶಾಸಕರೇ ಸಿಎಂ ಆಗಿದ್ದ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ಶುರು ಮಾಡಿದ್ದರು. ಆ ಬಳಿಕ ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿ ಸ್ಥಾನವನ್ನು ಕಸಿದುಕೊಳ್ಳಲಾಯ್ತು. ಆದರೂ ತನ್ನ ಪರಮಾಪ್ತನನ್ನೇ ಮುಖ್ಯಮಂತ್ರಿ ಮಾಡುವ ಮೂಲಕ ನಾನೇ ಸುಪ್ರೀಂ ಎನ್ನುವುದನ್ನು ಮತ್ತೆ ಸಾಬೀತು ಮಾಡಿದ್ದರು. ಇದರ ವಿರುದ್ಧ ಕಳೆದೊಂದು ವಾರದಿಂದ ಕೊತಕೊತನೆ ಕುದಿಯುತ್ತಿದ್ದ ಅತೃಪ್ತಿ ಹೊರಹೊಮ್ಮಿದೆ. ವಿಜಯಪುರದಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ವಾಗ್ದಾಳಿ ನಡೆಸಿದ್ದಾರೆ.

ಪ್ರಾಣ ಹೋದರು ಯತ್ನಾಳ್​ ಸಿಎಂ ಆಗಬಾರದು..!

ಒಳ್ಳೆಯ ಮಂತ್ರಿಗಳನ್ನು, ಪ್ರಾಮಾಣಿಕರನ್ನು, ಹಿಂದುತ್ವ ಉಳ್ಳವರನ್ನು, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಶಕ್ತಿಯುಳ್ಳವರನ್ನು ಮಂತ್ರಿ ಮಾಡಬೇಕು ಎಂದು ಬಸನಗೌಡ ಪಾಟೀಲ್​ ಯತ್ನಾಳ್​ ಆಗ್ರಹಿಸಿದ್ದಾರೆ. ಮಂತ್ರಿಗಿರಿಗಾಗಿ ದೆಹಲಿಗೆ ಹೋಗಿ ಲಾಬಿ ಮಾಡುವ ಅವಶ್ಯಕತೆ ಇಲ್ಲ. ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ ಎಂದಿರುವ ಯತ್ನಾಳ್​, ಯಡಿಯೂರಪ್ಪನವರು ಹೇಳಿದ್ದು ಎಲ್ಲವೂ ಆಗೋದಿಲ್ಲ. ಅವರು ಹೇಳಿದ್ದೇ ಆಗೋದಿದ್ರೆ ಮುಖ್ಯಮಂತ್ರಿ ಸ್ಥಾನದಿಂದ ತೆಗೆಯುವ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ. ಈಗಾಗಲೇ ಬಿ.ಎಸ್ ಯಡಿಯೂರಪ್ಪ ಹೇಳಿದವರನ್ನೇ ಮುಖ್ಯಮಂತ್ರಿ ಮಾಡಿದ್ದಾರೆ. ಪ್ರಾಣ ಹೋದರೂ ಪರವಾಗಿಲ್ಲ, ಯತ್ನಾಳನನ್ನು ಸಿಎಂ ಮಾಡಬಾರದು ಎಂದು ಬಿ.ಎಸ್ ಯಡಿಯೂರಪ್ಪ ಕಂಡೀಷನ್ ಇತ್ತು. ಹಾಗಾಗಿ ಯತ್ನಾಳ ಸಿಎಂ ಆಗಲಿಲ್ಲ ಎಂದು ರಹಸ್ಯ ಬಹಿರಂಗ ಮಾಡಿದ್ದಾರೆ.

ಅನಾನುಭವಿ ಆಯ್ಕೆ ಮುಂದಿನ ದಿನದಲ್ಲಿ ಫಲಿತಾಂಶ..!

ಸಚಿವ ಸಂಪುಟದಲ್ಲಿ ನಿಷ್ಠಾವಂತರು, ಪಕ್ಷದ ಕಾರ್ಯಕರ್ತರು, ಬಿಜೆಪಿ ಕಟ್ಟಿ ಬೆಳೆಸಿದವರು, ಹಿಂದುತ್ವ ಹಿನ್ನೆಲೆ ಉಳ್ಳವರನ್ನು ಮಾಡಬೇಕು ಎಂದು ನನ್ನ ಆಗ್ರಹವಿದೆ. ಸಚಿವ ಸಂಪುಟದಲ್ಲಿ ವಿಜಯಪುರ ಜಿಲ್ಲೆಯನ್ನು ಕಡೆಗಣಿಸಿದ್ರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಗಂಭೀರ ಆಗುತ್ತದೆ ಎನ್ನುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದಿಂದ ಬಸನಗೌಡ ಪಾಟೀಲ್​ ಯತ್ನಾಳ್​ ಹಾಗೂ ಮುರುಗೇಶ್​ ನಿರಾಣಿಗೆ ಹಿನ್ನೆಡೆ ಆಯ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ್​, ಜಾತಿಗೂ ಇದಕ್ಕೂ ಸಂಬಂಧವಿಲ್ಲ, ಅವರವರ ಜನಪ್ರಿಯತೆ, ಅನುಭವದ ಮೇಲೆ ಅಳೆಯಬೇಕು. ಅನುಭವ ಇಲ್ಲದವರನ್ನು ತಂದು ಏನೋ ಮಾಡಿದ್ರೆ ಪಕ್ಷ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ನನಗೆ ಇರುವ ಸೀನಿಯಾರಿಟಿ ಯಾರಿಗೆ ಇದೆ..?

ಬಸನಗೌಡ ಪಾಟೀಲ್​ ಯತ್ನಾಳನನ್ನು ಮುಗಿಸಬೇಕು ಎಂದು ಯಾವನೋ ಅನಾನುಭವಿಯನ್ನು ಅಧಿಕಾರಕ್ಕೆ ತಂದರೆ ಆಗುತ್ತಾ..? ಎಂದು ಪ್ರಶ್ನಿಸಿರುವ ಯತ್ನಾಳ್​, ಯತ್ನಾಳ್​ಗೆ ಇರುವಂತಹ ಸಿನಿಯಾರಿಟಿ ಬಿಜೆಪಿಯಲ್ಲಿ ಯಾರಿಗಾದರೂ ಇದೆಯಾ ..? ಅನಂತಕುಮಾರ, ಯಡಿಯೂರಪ್ಪ, ಈಶ್ವರಪ್ಪ ಬಿಟ್ಟರೆ ಬೇರೆ ಯಾರಿದ್ದಾರೆ..? ಎಂದು ಕೇಳಿದ್ದಾರೆ. ಇನ್ನೂ ನಾವು ಅಟಲ್​ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾದವರು, ಐದು ಬಾರಿ ಜನರಿಂದ ಆರಿಸಿ ಬಂದವರು. ಯತ್ನಾಳ್​ ಬಿಜೆಪಿ ಬಿಟ್ಟು ಹೋಗಿದ್ದರು ಎಂಬ ವಿಚಾರಕ್ಕೆ ತಿರುಗೇಟು ಕೊಟ್ಟಿರುವ ಯತ್ನಾಳ್​, ಯಡಿಯೂರಪ್ಪ ಹೋಗಿರಲಿಲ್ಲವಾ..? ಬೊಮ್ಮಾಯಿ ಮೂಲ ಬಿಜೆಪಿಗರಾ..? ಅಥವಾ RSSನ ಧ್ವಜ ಪ್ರಣಾಮ ಮಾಡಿದ್ದಾರಾ..? ಅದೆಲ್ಲಾ ನೆಪಮಾತ್ರ, ನೆಪದಿಂದ ಏನೂ ಅಗೋದಿಲ್ಲ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ, ಹಿಂದುತ್ವ ಉಳಿಯಬೇಕಾದರೆ, ನಿಷ್ಠಾವಂತರು ಉಳಿಯಬೇಕಾದರೆ ಪಕ್ಷ ನಿರ್ಣಯ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಮಠಾಧೀಶರ ವರ್ತನೆಗೆ ಯತ್ನಾಳ್​ ಚಾಟಿ ಏಟು..?

ಮಠಾಧೀಶರನ್ನು ಹಿಡಿದು ಮಂತ್ರಿಯಾಗಬೇಕಾದ ಪರಿಸ್ಥಿತಿ ಹಿರಿಯ ನಾಗರಿಕರಿಗೂ ಬಂದಿದೆ. ಬಿಜೆಪಿಯಲ್ಲಿ ಹೈಕಮಾಂಡ್​​ ಇಲ್ಲವಾ? ಎಂದು ಪ್ರಶ್ನಿಸಿದ್ದಾರೆ. ಹಾಗಿದ್ದ ಮೇಲೆ ಹೈಕಮಾಂಡ್ ಯಾಕೆ ಬೇಕು..? ದೆಹಲಿಗೆ ಯಾಕೆ ಹೋಗಬೇಕು..? ಚಿತ್ರದುರ್ಗ ಸ್ವಾಮಿಜಿ ಬಳಿ ಸೇರಿದಂತೆ ಮಠಾಧೀಶರ ಬಳಿ ಹೋದರೆ ಸಾಕು ಮಂತ್ರಿ ಆಗಬಹುದು. ದಿಂಗಾಲೇಶ್ವರ ಸ್ವಾಮೀಜಿ ಮಠದಲ್ಲಿ ಕುಳಿತು ಬಿಜೆಪಿ ನಾಶವಾಗುತ್ತೆ ಎಂದು ಹೇಳ್ತಾರೆ. ಮಠದಲ್ಲಿ ಕುಳಿತು ಧರ್ಮ ಭೋದನೆ ಮಾಡಬೇಕು, ಲವ್ ಜಿಹಾದ್​, ಗೋ ಹತ್ಯೆ ಬಗ್ಗೆ ಮಾತಾಡಬೇಕು. ಸಮಾನ ನಾಗರಿಕತೆಗಾಗಿ, ಎರಡು ಮಕ್ಕಳು ಇದ್ದವರಿಗೆ ಸಬ್ಸಿಡಿ ಕೊಡುವ ಪರವಾಗಿ ಅರಮನೆ ಮೈದಾನದಲ್ಲಿ ಮಠಾಧೀಶರು ಹೋರಾಟ ಮಾಡಲಿ. ಕೆಲ ಮಠಾಧೀಶರೇ ಯಡಿಯೂರಪ್ಪನವರ ಚೇಲಾಗಳಾಗಿ ಕೆಲಸ ಮಾಡ್ತೀರಾ..? ಎಂದು ಟೀಕಿಸಿದ್ದಾರೆ.

ಸ್ವಾಮೀಜಿಗಳಿಗೆ ಕೊಟ್ಟ ಕವರ್​ನಲ್ಲಿ ಕತ್ತರಿ..!

ಯಡಿಯೂರಪ್ಪ ಮನೆಯಲ್ಲಿ ಸ್ವಾಮೀಜಿಗಳಿಗೆ ಹತ್ತು ಸಾವಿರ ರೂಪಾಯಿ ಪ್ಯಾಕೇಟ್​ನಲ್ಲಿ ಹಾಕಿ ಕೊಟ್ಟರು. ಅದರಲ್ಲಿ ಎರಡು ಸಾವಿರ ಹಣವನ್ನು ಒಬ್ಬ ಲೀಡರ್ ಕತ್ತರಿಸಿದ. ಇನ್ನೊಬ್ಬ ಸ್ವಾಮೀ ಅದನ್ನು ಹಂಚುತ್ತೇನೆ ಎಂದು ಮತ್ತೆ ಎರಡು ಸಾವಿರ ಕತ್ತರಿಸಿದ. ಕೊನೆಗೆ ಮಠಾಧೀಶರಿಗೆ ಹೋಗಿದ್ದು ಕೇವಲ ಆರು ಸಾವಿರ ರೂಪಾಯಿ ಮಾತ್ರ ಎಂದಿದ್ದಾರೆ. ಕತ್ತರಿಸುವ ಕಂಪನಿಯೇ ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಯಡಿಯೂರಪ್ಪನವರ ಚಾಕರಿ ಮಾಡೋರು, ವಿಜಯೇಂದ್ರಗೆ ರಾತ್ರಿ ವ್ಯವಸ್ಥೆ ಮಾಡೋರು, ಬಿಜೆಪಿ ಕಟ್ಟದವರು, ಇವತ್ತು ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಇದೇ ರೀತಿ ಮುಂದುವರಿದರೆ ನಾವೇ ಕಾಂಗ್ರೆಸ್​ಗೆ ತಾಂಬೂಲ ಕೊಟ್ಟು ಮುಖ್ಯಮಂತ್ರಿ ಆಗಿ ಬನ್ನಿ ಎನ್ನುವ ಅನಿವಾರ್ಯ ಪರಿಸ್ಥಿತಿ ಉಂಟಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಯತ್ನಾಳ್​ಗೆ ಯಡಿಯೂರಪ್ಪ ಅತ್ಯಾಪ್ತ ಶಿಷ್ಯ ಎನಿಸಿಕೊಂಡಿರುವ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಸಾಮರ್ಥ್ಯ, ನಾಯಕತ್ವ, ಹೋರಾಟ ದೊಡ್ಡದು. ನೂರಾರು ಪಾದಯಾತ್ರೆ, ಸಾವಿರಾರು ಹೋರಾಟ ಮಾಡಿದ್ದಾರೆ. ಅನೇಕ ಬಾರಿ ಜೈಲಿಗೆ ಹೋದವರು. ಯಾರೋ ಒಬ್ಬರು ಮಾತಾಡಿದರೆ ಗೌರವ‌ ಕಡಿಮೆ‌ ಆಗಲ್ಲ. ಯಡಿಯೂರಪ್ಪ ಬಗ್ಗೆ ಬಿಜೆಪಿಗೆ ಅಪಾರ ಗೌರವ ಇದೆ. ಯಡಿಯೂರಪ್ಪ ಹೋರಾಟದ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇಬ್ಬರಿದ್ದಾಗ ಯಡಿಯೂರಪ್ಪ ಯೋಚಿಸಲಿಲ್ಲ, ಈಗ 120 ಸಂಖ್ಯೆ ತಲುಪಿದೆ. ಯಡಿಯೂರಪ್ಪ ಕೈಕಾಲು ಹಿಡಿದು ಯತ್ನಾಳ್ ಪಕ್ಷಕ್ಕೆ ಬಂದಿದ್ದಾರೆ. ರಾಷ್ಟ್ರೀಯ ನಾಯಕರಿಗೆ ಗೌರವಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಯಡಿಯೂರಪ್ಪ ಮೋಜು ಮಸ್ತಿಗಾಗಿ ಅಧಿಕಾರದಲ್ಲಿ ಇರಲಿಲ್ಲ. ಹೈಕಮಾಂಡ್ ಹಾಗೂ ಸಂಘ ಪರಿವಾರದವರು ಯಡಿಯೂರಪ್ಪ ಅವರನ್ನು ಶ್ಲಾಘಿಸಿದ್ದಾರೆ. ಯತ್ನಾಳ್​ ಯಡಿಯೂರಪ್ಪ ಬಗ್ಗೆ ಮಾತನಾಡುವುದು ಎಷ್ಟು ಸೂಕ್ತ ಎಂದು ವಾಗ್ದಾಳಿ ಮಾಡಿದ್ದಾರೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಸಂಘ ಪರಿವಾರಕ್ಕೆ ಯಡಿಯೂರಪ್ಪ ಸಡ್ಡು ಹೊಡೆದಿದ್ದಾರೆ ಎನ್ನುವುದು ಬಹಿರಂಗ ಆಗಿತ್ತು. ಆ ಬಳಿಕ ಸಂಘ ಪರಿವಾರದ ಆಯ್ಕೆ ಆಗಿದ್ದವರು ಮೌನಕ್ಕೆ ಶರಣಾಗಿದ್ದರು. ಆದರೆ ನಿಧಾನವಾಗಿ ಎಲ್ಲವೂ ಬಹಿರಂಗ ಆಗುತ್ತಿದೆ. ಅನಾನುಭವಿ ಆಯ್ಜೊಕೆ ಬಿಜೆಪಿ ಪಕ್ಷದ ಮೇಲೆ ಪರಿಣಾಮ ಬೀರಲಿದೆ ಎನ್ನುವ ಮೂಲಕ ಪರೋಕ್ಷವಾಗಿ ಬಸವರಾಜ ಬೊಮ್ಮಾಯಿ ಆಯ್ಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ನಾಯಕತ್ವದ ಪರ ವಿರೋಧವಾಗಿ ವಾಗ್ದಾಳಿಯೂ ಶುರುವಾಗಿದೆ.

Related Posts

Don't Miss it !