S.R ವಿಶ್ವನಾಥ್​ ಹತ್ಯೆಗೆ ಸಂಚು ರೂಪಿಸಿದ್ದು ನಿಜಾನಾ..? ಅಥವಾ ವಿಶ್ವನಾಥ್​ ಸುಳ್ಳು ಹೇಳಿದ್ರಾ..?

ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್​.ಆರ್​ ವಿಶ್ವನಾಥ್​ ಅವರ ಕೊಲೆಗೆ ಸ್ಕೆಚ್​ ಹಾಕಿದ್ದಾರೆ ಎನ್ನುವ ವೀಡಿಯೋ ರಿಲೀಸ್​ ಆಗಿತ್ತು. ಪೊಲೀಸ್​ ಆಯುಕ್ತರು ತನಿಖೆ ಮಾಡುತ್ತೇವೆ ಎನ್ನುವ ಹೇಳಿಕೆಯನ್ನೂ ನೀಡಿದ್ರು. ಈ ನಡುವೆ ವಿಧಾನಸೌಧದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಎಸ್​.ಆರ್​ ವಿಶ್ವನಾಥ್​, ನನ್ನ ಏಳ್ಗೆಯನ್ನು ಸಹಿಸದೆ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ. ಈ ಬಗ್ಗೆ ಕೂಲಂಕಷ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದಿದ್ದಾರೆ. ಇನ್ನೂ ಕಾಂಗ್ರೆಸ್​ನ ಗೋಪಾಲಕೃಷ್ಣ ನನ್ನ ವಿರುದ್ಧ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದೆ ಹತ್ಯೆ ಮಾಡಲು ಮುಂದಾಗಿದ್ದಾರೆ. ಆಂಧ್ರ ಹಾಗೂ ಕಡಪ ಮೂಲದ ಹಂತಕರಿಗೆ ಸುಪಾರಿ ಕೊಟ್ಟಿರುವ ಬಗ್ಗೆಯೂ ವೀಡಿಯೋದಲ್ಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ಈ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ. ಚುನಾವಣೆಯಲ್ಲಿ ಗೆಲುವು ಸಾಧಿಸಲಾಗದೆ ಈ ರೀತಿ ಸುಪಾರಿ ಕೊಟ್ಟು ಹತ್ಯೆ ಮಾಡಿಸಲು ಮುಂದಾಗುವ ಸಂಸ್ಕೃತಿ ಸರಿಯಲ್ಲ ಎಂದು ವಾಗ್ದಾಳಿ ಮಾಡಿದ್ದರು. ಇನ್ನೂ ಕುಳ್ಳ ದೇವರಾಜ್​ ನನ್ನ ಆಪ್ತನಲ್ಲ, ನಾನು ಹೋಗುವ ಕಾರ್ಯಕ್ರಮಗಳಲ್ಲಿ ಆತ ಕಾಣಿಸಿಕೊಂಡಿರಬಹುದು. ಇದೊಂದೇ ಕಾರಣದಿಂದ ಆಪ್ತ ಎನ್ನುವುದು ಸರಿಯಲ್ಲ ಎಂದಿದ್ದರು. ಕಾಂಗ್ರೆಸ್​ ನಾಯಕ ಗೋಪಾಲಕೃಷ್ಣ ನನಗೆ ಚುನಾವಣಾ ಎದುರಾಳಿಯೇ ಅಲ್ಲ ಎಂದು ಗುಡುಗಿದ್ರು.

ಕಾಂಗ್ರೆಸ್ ನಾಯಕ ಗೋಪಾಲಕೃಷ್ಣ ಹೇಳೋದು ಏನು..?

ವಿಶ್ವನಾಥ್​ ಆರೋಪ ಮಾಡಿದ ಬೆನ್ನಲ್ಲೇ ಅಖಾಡಕ್ಕೆ ಬಂದ ಕಾಂಗ್ರೆಸ್​ ಮುಖಂಡ ಗೋಪಾಲಕೃಷ್ಣ, ಯಲಹಂಕ ಶಾಸಕ ಎಸ್​.ಆರ್​ ವಿಶ್ವನಾಥ್​ ಮಾಡಿರುವ ಎಲ್ಲಾ ಆರೋಪಗಳು ನಿರಾಧಾರ. ನಾನು ಯಾವುದೇ ಕೊಲೆಗೆ ಸುಪಾರಿ ಕೊಟ್ಟಿಲ್ಲ, ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ವೀಡಿಯೋ ಎಡಿಟ್​ ಮಾಡಿ ಆರೋಪ ಮಾಡಲಾಗಿದೆ. ಶಾಸಕ ಎಸ್​.ಆರ್​ ವಿಶ್ವನಾಥ್​ ಜೊತೆಗೆ ಸೇರಿಕೊಂಡು ನನ್ನ ತೇಜೋವಧೆ ಮಾಡಿರುವ ಕುಳ್ಳ ದೇವರಾಜ್​ ವಿರುದ್ಧ ಪ್ರಕರಣ​ ದಾಖಲಿಸ್ತೀನಿ. ಸಿಸಿಬಿ ವಿಚಾರಣೆ ಆಗಿದೆ, ಅಧಿಕಾರಿಗಳು ಮತ್ತೆ ವಿಚಾರಣೆಗೆ ಕರೆದರೆ ಹೋಗ್ತೀನಿ. ಕುಳ್ಳ ದೇವರಾಜ್​, ಯಲಹಂಕ ಶಾಸಕ ವಿಶ್ವನಾಥ್ ಬಲಗೈ ಬಂಟ, ಪರಿಷತ್​ ಚುನಾವಣೆಗಾಗಿ ನಡೀತಿರೋ ಹುನ್ನಾರ ಇದು ಎಂದಿದ್ದಾರೆ. ಕಾನೂನು ಬದ್ಧವಾಗಿ ತನಿಖೆ ನಡೆಯಲಿ, ಸಹಕಾರ ಕೊಡ್ತೀನಿ ಎಂದಿದ್ದಾರೆ. ಇನ್ನೂ 8 ಎಕರೆ ಜಮೀನಿನ ವಿವಾದ ಬಗೆಹರಿಸುವ ಬಗ್ಗೆ ಚರ್ಚೆ ಮಾಡಿದ್ದೆವು. ಆದರೆ ಕುಳ್ಳ ದೇವರಾಜ್ ರೆಕಾರ್ಡ್​ ಮಾಡಿ ಎಡಿಟ್​ ಮಾಡಿದ್ದಾರೆ. ಕಾರ್ಯಕರ್ತರಂತೆ ಮನೆಗೆ ಬಂದು ಮೋಸ ಮಾಡಿದ್ದಾನೆ. ವಿಡಿಯೋ, ಆಡಿಯೋ ಎಲ್ಲವೂ ಬೋಗಸ್​ ಆಗಿದ್ದು, ಅದರಲ್ಲಿ ಕೆಲವೊಂದು ವಿಚಾರಗಳನ್ನು ಎಡಿಟ್​ ಮಾಡಲಾಗಿದೆ. ದಿನ ಬೆಳಗಾದರೆ ನಾವು ಮುಖ ನೋಡಿಕೊಳುವ ಜನ. ಕೊಲೆಗೆ ಸಂಚು ಮಾಡೋರಲ್ಲ. ಯಾವ ರೌಡಿ ಪಟಾಲಂ ಜೊತೆಗೂ ನನಗೆ ನಂಟಿಲ್ಲ ಎಂದು ಕಾಂಗ್ರೆಸ್​​ನ ಗೋಪಾಲಕೃಷ್ಣ ಸ್ಪಷ್ಟನೆ ನೀಡಿದ್ದಾರೆ.

ಎಡಿಟ್ ಮಾಡಿರೋ ವಿಡಿಯೋ – ಪೊಲೀಸರ ಸ್ಪಷ್ಟನೆ..!

ಬಿಜೆಪಿ ಶಾಸಕ S.R ವಿಶ್ವನಾಥ್ ದೂರಿನ ಸಂಬಂಧ NCR ದಾಖಲು ಮಾಡಿಕೊಂಡಿದ್ದ ರಾಜಾನುಕುಂಟೆ ಪೊಲೀಸರು, ರಾತ್ರಿ ವಿಶ್ವನಾಥ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಬಳಿಕ FIR ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಬೆಂಗಳೂರು ಗ್ರಾಮಾಂತರ ಎಸ್‌ಪಿ ವಂಶಿಕೃಷ್ಣ, ಶಾಸಕ ಎಸ್ ಆರ್ ವಿಶ್ವನಾಥ್ ಒಂದು ಲಿಖಿತ ದೂರು ಕೊಟ್ಟಿದ್ದಾರೆ. ದೂರಿನಲ್ಲಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದಿದ್ದಾರೆ. ನನ್ನನ್ನು ಕೊಲೆ ಮಾಡಲು ಸಂಜು ರೂಪಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೆವೆ. ಸದ್ಯ ನಮಗೆ ಸಿಕ್ಕಿರುವುದು ಎಡಿಟ್ ಅಗಿರುವಂತಹ ವಿಡಿಯೋ. ನಾವು ಕೇಸ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತೆವೆ ಎಂದಿದ್ದರು. ಆದರೆ ಸಿಎಂ ಭೇಟಿ ಮಾಡಿ ಹೊರಕ್ಕೆ ಬಂದ ಎಸ್.ಆರ್ ವಿಶ್ವಾನಾಥ್ ಮತ್ತೆ ಬೆಳಗ್ಗೆ 8 ಗಂಟೆಗೆ ಬಂದು ಭೇಟಿ ಮಾಡಲು ತಿಳಿಸಿದ್ದಾರೆ ಎಂದಿದ್ದರು. ಅದಾದ ಕೆಲವೇ ಕ್ಷಣಗಳಲ್ಲಿ ಎಫ್‌ಐಆರ್ ದಾಖಲಾಗಿದೆ.

ಕೊಲೆಗೆ ಸುಪಾರಿ ಕೇಸ್‌ನಲ್ಲಿ ಕಾಡುವ ಹಲವು ಪ್ರಶ್ನೆಗಳು..!

ವೀಡಿಯೋ ಪೊಲೀಸರ ಗಮನಕ್ಕೆ ಬರುತ್ತಿದ್ದ ಹಾಗೆ ವೀಡಿಯೋದಲ್ಲಿ ಇರುವ ಕಾಂಗ್ರೆಸ್ ನಾಯಕ ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟಿದ್ದಾರೆ. ಇನ್ನೂ ದೂರು ನೀಡುತ್ತಿದ್ದ ಹಾಗೆ ಎಫ್‌ಐಆರ್ ಮಾಡದ ಪೊಲೀಸರು ಗಂಭೀರವಲ್ಲದ ಪ್ರಕರಣವೆಂದು ಎನ್‌ಸಿಆರ್ ಮಾಡಿದ್ದರು. ಆ ಬಳಿಕ ಮಾಧ್ಯಮಗಳ ಮೂಲಕ ರಾಜಕೀಯ ಮೇಲಾಟ ನಡೆದಿದ್ದರಿಂದ ಎಫ್‌ಐಆರ್ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಸುಪಾರಿ ಕೊಟ್ಟಿದ್ದು ನಿಜವೇ ಆಗಿದ್ದರೆ ಮೊದಲೇ ಎಫ್‌ಐಆರ್ ಮಾಡಿಕೊಂಡು ಬಂಧಿಸಬೇಕಿತ್ತು. ಇನ್ನೂ ಎಸ್.ಆರ್ ವಿಶ್ವಾನಾಥ್ ಅವರಿಗೆ ಕುಳ್ಳ ದೇವರಾಜ್ ಕ್ಷಮಾಪಣಾ ಪತ್ರ ಬರೆದಿದ್ದ ಎಂದಿದ್ದಾರೆ. ಆದರೆ ಸಿಸಿಬಿ ಕಸ್ಟಡಿಯಲ್ಲಿ ಇದ್ದಾಗ ಕ್ಷಮಾಪಣೆ ಪತ್ರ ಬರೆದಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಇರಲಿಲ್ಲ. ಇದರಲ್ಲಿ ಪರಿಷತ್ ಚುನಾವಣೆ ಗಿಮಿಕ್ ಅಡಗಿದೆ ಎನ್ನುವುದು ಬಹುತೇಕ ಖಚಿತ ಮೂಲಗಳ ಮಾಹಿತಿ. ಪೊಲೀಸರು ನಿಗೂಢ ಸತ್ಯವಿದ್ದರೆ ಬಯಲು ಮಾಡಬೇಕಿದೆ.

Related Posts

Don't Miss it !