ಬಿಜೆಪಿ ಶಾಸಕರ ಮನೆ ಮೇಲೆ ಕಿಡಿಗೇಡಿಗಳಿಂದ ದಾಳಿ, ವರ್ಷಾಚರಣೆ ಮಾಡಿದ್ರಾ ದುಷ್ಕರ್ಮಿಗಳು..?

ಕಳೆದ ವರ್ಷ ಆಗಸ್ಟ್​ 11 ರಂದು ಕಾಂಗ್ರೆಸ್​ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸದ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದರು. ವಾಹನಗಳಿಗೆ ಬೆಂಕಿ ಇಟ್ಟಿದ್ದರು. ಪೊಲೀಸ್​ ಸ್ಟೇಷನ್​ ಧ್ವಂದ ಮಾಡಿದ್ದರು. ಶಾಸಕರ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಆ ಘಟನೆ ನಡೆದು ನಿನ್ನೆಗೆ ಒಂದು ವರ್ಷ ಪೂರ್ಣ. ಆ ಘಟನೆ ನೆನಪಿಗೆ ಬಂದ ಕೂಡಲೇ ಅದೇ ರೀತಿಯ ಮತ್ತೊಂದು ಘಟನೆಗೆ ಬೆಂಗಳೂರು ಸಾಕ್ಷಿಯಾಗಿದೆ. ಬಿಜೆಪಿ ಶಾಸಕರ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಾಕಲಾಗಿದೆ. ಮಧ್ಯರಾತ್ರಿ ಆಗಮಿಸಿದ್ದ ಕಿಡಿಗೇಡಿಗಳು ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾರೆ. ಎರಡು ಐಶಾರಾಮಿ ಕಾರುಗಳು ಸುಟ್ಟು ಭಸ್ಮವಾಗಿವೆ. ಇದೀಗ ಬೆಂಗಳೂರು ಪೊಲೀಸರು ಮೂರು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಪರಿಚಿತರೇ ಕೃತ್ಯ ಎಸಗಿರುವ ಬಗ್ಗೆಯೂ ಪೊಲೀಸರಿಗೆ ಅನುಮಾನ ಮೂಡಿಸಿದೆ.

ಮಧ್ಯರಾತ್ರಿ 1.30ರ ಆಸುಪಾಸಿನಲ್ಲಿ ಹಿಂಬದಿ ಗೇಟ್​ ಮೂಲಕ ಬಂದಿರುವ ಕಿಡಿಗೇಡಿಗಳು, ಸಿಸಿಟಿವಿಯಲ್ಲಿ ಸೆರೆ ಸಿಗದ ಹಾಗೆ ಎಚ್ಚರಿಕೆ ವಹಿಸಿದ್ದಾರೆ. ಮುಂದಿನ ಗೇಟ್​ನಲ್ಲಿ ಪೊಲೀಸರು ಹಾಗೂ ಸೆಕ್ಯೂರಿಟಿಗಳು ಇದ್ದ ಕಾರಣ ಹಿಂಬದಿ ಗೇಟ್​ ಮೂಲಕ ಎಂಟ್ರಿಯಾಗಿದ್ದಾರೆ. ಕೆಲವೇ ನಿಮಿಷಗಳಲ್ಲಿ ಕೆಲಸ ಮುಗಿಸಿರುವ ದುಷ್ಕರ್ಮಿಗಳು, ಅಲ್ಲಿಂದ ಪರಾರಿಯಾಗಿದ್ದಾರೆ. ಕಿಡಿಗೇಡಿಗಳು ಶಾಸಕ ಸತೀಶ್​ ರೆಡ್ಡಿ ಮನೆ ಬಳಿ ನಿಲ್ಲಿಸಿದ್ದ 7 ಐಶಾರಾಮಿ ಕಾರುಗಳ ಮೇಲೆ ಕಣ್ಣೀಟ್ಟಿದ್ದರು ಎನ್ನಲಾಗಿದೆ. ಆದರೆ ಅದೃಷ್ಟವಶಾತ್​ ಕೇವಲ ಎರಡು ಕಾರುಗಳು ಮಾತ್ರ ಸುಟ್ಟು ಹೋಗಿವೆ. ಅದರಲ್ಲಿ ಫಾರ್ಚೂನರ್​ ಕೂಡ ಸೇರಿದೆ. ಮಹಿಂದ್ರಾ ಥಾರ್ ಸೇರಿದಂತೆ ಇನ್ನುಳಿದ ಐದು ಕಾರುಗಳಿಗೆ ಯಾವುದೇ ಹಾನಿಯಾಗಿಲ್ಲ. ಈ ಬಗ್ಗೆ ಮಾತನಾಡಿರುವ ಬೊಮ್ಮನಹಳ್ಳಿ ಶಾಸಕ ಸತೀಶ್​ ರೆಡ್ಡಿ ನನಗೆ ರಾಜಕೀಯ ದ್ವೇಷ ಯಾವುದೂ ಇಲ್ಲ. ಪೊಲೀಸ್​ ಇಲಾಖೆ ಈಗಾಗಲೇ ತನಿಖೆ ಶುರು ಮಾಡಿದೆ. ಇದನ್ನು ರಾಜಕೀಯವಾಗಿ ತೆಗೆದುಕೊಳ್ಳುವುದಿಲ್ಲ. ಯಾರ ಮನೆಯಲ್ಲಿ ಏನು ಬೇಕಾದರೂ ಮಾಡಬಲ್ಲೆವು ಎಂಬುದನ್ನು ತೋರಿಸಲು ಈ ಕೃತ್ಯ ಎಸೆಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:

ಬೆಂಗಳೂರಿನಲ್ಲಿ ಇತ್ತೀಚಿಗೆ ಹತ್ತಾರು ಕೊಲೆಗಳು ನಡೆದಿವೆ. ಹಾಡಹಗಲೇ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ. ರೌಡಿಗಳನ್ನು ಅಟ್ಟಾಡಿಸಿಕೊಂಡು ಕೊಲೆ ಮಾಡಿದ್ದಾರೆ. ಪೊಲೀಸ್​ ಠಾಣೆ ಪಕ್ಕದಲ್ಲೇ ಕೊಲೆ ನಡೆದಿರುವ ಉದಾಹರಣೆಗಳೂ ಇವೆ. ಕಳೆದ ವರ್ಷ ಅಖಂಡ ಶ್ರೀನಿವಾಸ ಮೂರ್ತಿ ನಿವಾಸದ ಮೇಲೆ ದಾಳಿ ನಡೆದು ಒಂದು ವರ್ಷ ಆಗಿರುವ ಹಿನ್ನೆಲೆಯಲ್ಲಿ ಮತ್ತೊಬ್ಬ ಶಾಸಕನ ಮನೆ ಮೇಲೆ ದಾಳಿ ಮಾಡಿರುವ ಸಾಧ್ಯತೆಯೂ ಇದೆ. ಇನ್ನೂ ಇತ್ತೀಚಿಗಷ್ಟೇ ಕೊರೊನಾ ಬೆಡ್​ ಬ್ಲಾಕಿಂಗ್​ ಪ್ರಕರಣದಲ್ಲಿ ಸತೀಶ್​ ರೆಡ್ಡಿ ಹೆಸರು ಕೇಳಿ ಬಂದಿತ್ತು. ಅದಕ್ಕೂ ಮೊದಲು ಸಂಸದ ತೇಜಸ್ವಿ ಸೂರ್ಯ ಜೊತೆಗೂಡಿ ಬಿಬಿಎಂಪಿ ಕೊರೊನಾ ವಾರ್​ ರೂಂಗೆ ಸತೀಶ್​ ರೆಡ್ಡಿ ಭೇಟಿ ನೀಡಿದ್ದರು. ಅಲ್ಲಿ ಒಂದು ಸಮುದಾಯದ ವಿರುದ್ಧ ಸಂಸದರ ಮಾತನಾಡಿದ್ದರು ಎನ್ನುವ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಯಾವ ವಿಚಾರದಲ್ಲಿ ದಾಳಿಯಾಗಿದೆ ಎನ್ನುವ ಬಗ್ಗೆ ಪೊಲೀಸರ ತಂಡಗಳು ತನಿಖೆ ಮಾಡುತ್ತಿವೆ.

ಇದನ್ನೂ ಓದಿ

ಅಖಂಡ ಶ್ರೀನಿವಾಸ ಮೂರ್ತಿ ನಿವಾಸದ ಮೇಲೆ ದಾಳಿ ನಡೆದಾಗಲು ಗೃಹ ಸಚಿವರಾಗಿ ಬಸವರಾಜ ಬೊಮ್ಮಾಯಿ ಅವರಿದ್ದರು. ಇದೀಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಬಸವರಾಜ ಬೊಮ್ಮಾಯಿ ಕಠಿಣ ನಿಲುವು ತೆಗೆದುಕೊಳ್ಳಲಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಇದೀಗ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಠಿಣ ನಿಲುವು ವ್ಯಕ್ತಪಡಿಸಬೇಕಿದೆ. ಕೇವಲ ರೌಡಿಗಳ ನಿವಾಸದ ಮೇಲೆ ದಾಳಿ ಮಾಡಿ ಪೆರೇಡ್​ ಮಾಡಿದರೆ ಸಾಲದು ಎಂಬುದನ್ನು ಪೊಲೀಸ್​ ಪಡೆಗೆ ಅರ್ಥ ಮಾಡಿಸಬೇಕಿದೆ. ರೌಡಿಗಳ ಜೊತೆಗೆ ಶಾಮೀಲಾಗಿ ಕೆಲಸ ಮಾಡುವ ಅದೆಷ್ಟೋ ಪೊಲೀಸರನ್ನು ಪತ್ತೆ ಮಾಡಿ ಜಾಗ ಖಾಲಿ ಮಾಡಿಸಬೇಕಿದೆ. ಇನ್ನೂ ಗೃಹ ಸಚಿವ ಅರಗ ಜ್ಞಾನೇಂದ್ರ ಶಾಸಕ ಸತೀಶ್​ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕರ ಜೊತೆಗೂ ಮಾತನಾಡಿದ್ದಾರೆ. ಪೊಲೀಸ್​ ಇಲಾಖೆ ಸಚಿವರಾಗಿರುವ ಅರಗ ಜ್ಞಾನೇಂದ್ರ ತಮ್ಮ ನಿಲುವುಗಳ ಮೂಲಕ ಗೃಹ ಇಲಾಖೆಯನ್ನ ಮತ್ತಷ್ಟು ಬಿಗಿ ಮಾಡಬೇಕಿದೆ. ಇನ್ನಾದರೂ ಬೆಂಗಳೂರಿನ ಜನ ನೆಮ್ಮದಿಯ ಜೀವನ ಮಾಡುವಂತೆ ನೋಡಿಕೊಳ್ಳಬೇಕಿದೆ.

Related Posts

Don't Miss it !