ನಡ್ಡಾ ನಾಮಕಾವಸ್ತೆ..! ಅಮಿತ್​ ಷಾ ಅಂತಿಮ ಮುದ್ರೆ..! ಮಧ್ಯಾಹ್ನ ಪ್ರಮಾಣ ವಚನ..

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇದ್ದಾರೆ. ಆದರೆ ಬಿಜೆಪಿ ಯಾವುದೇ ಕೆಲಸಗಳು ಆಗಬೇಕಿದ್ದರೂ ಅಮಿತ್​ ಷಾ ಒಪ್ಪಿಗೆ ಇರಬೇಕು ಎನ್ನುವುದು ಅಲಿಖಿತ ನಿಯಮ ಎನ್ನುವಂತೆ ಆಗಿರುವ ಅನುಮಾನಗಳು ದಟ್ಟವಾಗಿದೆ. ಈ ಹಿಂದೆ ಅಮಿತ್​ ಷಾ ಕೂಡ ರಾಷ್ಟ್ರೀಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಯಲ್ಲಿ ಗೃಹ ಸಚಿವನಾಗಿ ಕೆಲಸ ಮಾಡುವ ಉದ್ದೇಶದಿಂದ ಅಧ್ಯಕ್ಷ ಸ್ಥಾನವನ್ನು ಜೆಪಿ ನಡ್ಡಾ ಅವರಿಗೆ ವಹಿಸಿ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಆದರೂ ಜೆಪಿ ನಡ್ಡಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಕೇವಲ ನಾಮಕಾವಸ್ತೆಗೆ ಅಧ್ಯಕ್ಷರಾಗಿ ಮುಂದುವರಿದಿದ್ದು, ಅಮಿತ್​ ಷಾ ಎಲ್ಲವನ್ನೂ ನಿಭಾಯಿಸುತ್ತಿದ್ದಾರಾ..? ಎನ್ನುವ ಅನುಮಾನ ಮೂಡುವಂತೆ ಮಾಡಿದೆ.

ಅಮಿತ್​ ಷಾ ಭೇಟಿ ಬಳಿಕ ಅಂತಿಮ ಮುದ್ರೆ..!

ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ ಮಾಡುವ ಉಮೇದಿನಲ್ಲಿದ್ದಾರೆ. ಸಚಿವ ಸಂಪುಟಕ್ಕೆ ಯಾರನ್ನೆಲ್ಲಾ ಸೇರಿಕೊಳ್ಳಬೇಕು ಎಂದು ಹೈಕಮಾಂಡ್​ ನಾಯಕರ ಬಳಿ ಒಪ್ಪಿಗೆ ಪಡೆಯಲು ತೆರಳಿದ್ದರು. ಮೊದಲಿಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​ ಸಂತೋಷ್​ ಬಳಿ ಚರ್ಚೆ ನಡೆಸಿದ ಬಳಿಕ ಅಮಿತ್​ ಷಾ ಬಳಿ ಚರ್ಚೆ ನಡೆಸಿದ್ದರು. ಅಂತಿಮವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬಳಿ ಚರ್ಚೆ ನಡೆಸಿ ಪಟ್ಟಿ ಅಂತಿಮ ಮಾಡಿದ್ದರು. ಕೊನೆಯಲ್ಲಿ ಮತ್ತೆ ಸಚಿವರಾಗುವ ಅಂತಿಮ ಪಟ್ಟಿಯನ್ನು ಅಮಿತ್​ ಷಾ ಬಳಿಕಗೆ ತೆಗೆದುಕೊಂಡು ಹೋಗಿ ಸಂಸತ್​ ಭವನದಲ್ಲಿ ಅಂತಿಮ ಮುದ್ರೆ ಒತ್ತಿಸಲಾಯ್ತು.

ಎರಡೆರಡು ಬಾರಿ ವಿಮಾನ ಪ್ರಯಾಣ ಪೋಸ್ಟ್​ಪೋನ್​..!!

ಮುಖ್ಯಮಂತ್ರಿ ಮಂಗಳವಾರ ಸಂಜೆ 7.15ರ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್​ ಆಗಲು ಎಲ್ಲಾ ತಯಾರಿ ಆಗಿತ್ತು. ಜೆಪಿ ನಡ್ಡಾ ಬಳಿ ಪಟ್ಟಿ ಫೈನಲ್​ ಆದ ಬಳಿಕ ಮತ್ತೆ ಸಂಸತ್​ ಭವನದಲ್ಲಿ ಅಮಿತ್​ ಷಾ ಭೇಟಿ ಮಾಡಲು ತೆರಳಾಯ್ತು. 7.15ರ ವಿಮಾನಕ್ಕೆ ತೆರಳಲು ಸಾಧ್ಯವಿಲ್ಲ ಎನ್ನುವುದು ಗೊತ್ತಾಗುತ್ತಿದ್ದ ಹಾಗೆ ಮತ್ತೆ ರಾತ್ರಿ 9.15ರ ವಿಮಾನಕ್ಕೆ ತೆರಳಲು ಸಮಯ ನಿಗದಿಯಾಗಿತ್ತು. ಅಮಿತ್​ ಷಾ ಭೇಟಿ ಮಾಡಿ ಪಟ್ಟಿಗೆ ಅಂತಿಮ ಮುದ್ರೆ ಪಡೆಯುವಲ್ಲಿ ತಡವಾದ ಕಾರಣ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಪ್ರವಾಸವನ್ನು ಬುಧವಾರ ಬೆಳಗ್ಗೆಗೆ ಮುಂದೂಡಿಕೆ ಮಾಡುವ ಅನಿವಾರ್ಯತೆ ಎದುರಾಯ್ತು. ಒಟ್ಟಾರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೇ ಆಗಿದ್ದರೂ ಅಂತಿಮ ಮುದ್ರೆ ಅಮಿತ್​ ಷಾ ಬಳಿ ಆಗಬೇಕು ಎನ್ನುವುದು ಅರ್ಥವಾಯ್ತು.

ರಾತ್ರಿ ಪ್ರಯಾಣ ಮುಂದೂಡಿಕೆ ಮಾಡಿದ ಸಿಎಂ..!

ನಿನ್ನೆ ತಡರಾತ್ರಿ ಎಷ್ಟು ಹೊತ್ತಾದರೂ ಬೆಂಗಳೂರಿಗೆ ಬರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಜ್ಜಾಗಿದ್ದರು. ಅಮಿತ್​ ಷಾ ಭೇಟಿ ಮಾಡಿ ಹೊರಡುವುದು ತಡ ಆದ ಕಾರಣ ಇಂದಿಗೆ ಪ್ರವಾಸ ಮುಂದೂಡಿಕೆ ಮಾಡಲಾಯ್ತು. ಅಂತಿಮವಾಗಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ ಆಯೋಜನೆ ಮಾಡಿದ್ದ ಔತಣ ಕೂಟದಲ್ಲಿ ಭಾಗಿಯಾಗಿ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ 6 ಗಂಟೆ ವಿಮಾನ ಹತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 8.50ಕ್ಕೆ ಆಗಮಿಸಲಿದ್ದಾರೆ. ಬಳಿಕ 9.30ಕ್ಕೆ ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ನೂತನ ಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಎಷ್ಟು ಮಂದಿ ಮಂತ್ರಿ ಆಗಲಿದ್ದಾರೆ ಎನ್ನುವ ಮಾಹಿತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗೋಷ್ಟಿಯಲ್ಲಿ ನೀಡುವ ಸಾಧ್ಯತೆ ಇದೆ.

Related Posts

Don't Miss it !