ಬಿಜೆಪಿ ಸರ್ಕಾರದ ವಿರುದ್ಧ ತಿರುಗಿ ಬಿದ್ದ ಕೇಸರಿ ಕಲಿ..! ಗಂಡಸುತನದ ಜೊತೆಗೆ HDK ಸಿಡಿಮಿಡಿ..!

ರಾಜ್ಯದಲ್ಲಿ ಹಿಜಾಬ್​ ಆದ ಬಳಿಕ ಸಾಕಷ್ಟು ವಿಚಾರಗಳು ಚಾಲ್ತಿಗೆ ಬಂದಿದ್ದು, ಯುಗಾದಿ ಹಬ್ಬದ ವರ್ಷದ ತೊಡಕು ಸಂಭ್ರಮಕ್ಕೆ ತೊಡಕು ಎದುರಾಗಿದೆ. ಹಲಾಲ್​ ಮಾಂಸವನ್ನು ಖರೀದಿ ಮಾಡಬಾರದು ಎನ್ನುವ ಅಭಿಯಾನ ನಡೆಯುತ್ತಿದೆ. ಇದರ ಜೊತೆಗೆ ಒಂದೇ ಬಾರಿಗೆ ಪ್ರಾಣಿಗಳನ್ನು ವಧಿಸುವ ಜಟ್ಕಾ ಕಟ್​​ ಮಾಂಸಕ್ಕೆ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ. ಸಮುದಾಯಗಳ ನಡುವೆ ದ್ವೇಷ ಭಾವನೆ ಬಿತ್ತಲಾಗ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಗಂಡಸುತನ ಇದ್ದರೆ ಈ ರೀತಿಯ ಬೆಳವಣಿಗೆಯನ್ನು ತಡೆಯಬೇಕು ಎಂದು ಸವಾಲು ಹಾಕಿದ್ದಾರೆ. ಈ ಮಾತಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದರೂ ಕುಮಾರಸ್ವಾಮಿ ಸರಿಯಾಗಿಯೇ ಹೇಳಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಈ ನಡುವೆ ಸ್ವಪಕ್ಷೀಯರಿಂದಲೇ ಸರ್ಕಾರಕ್ಕೆ ಬಿಸಿ ಮುಟ್ಟಿದೆ.

ಧರ್ಮಗಳ ನಡುವೆ ಕಂದಕ ಸೃಷ್ಟಿಗೆ ಯತ್ನ. ಟಿಪ್ಪು ಎನ್ನುವುದು ಇತಿಹಾಸ..!

ಜೆಡಿಎಸ್​ ಪಕ್ಷದಿಂದ ಶಾಸಕರಾಗಿದ್ದರೂ ಪಕ್ಷಾಂತರ ಮಾಡಿ ಬಿಜೆಪಿ ಸೇರ್ಪಡೆಯಾಗಿದ್ದ ಹೆಚ್. ವಿಶ್ವನಾಥ್ ಸ್ವಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ನಾನು ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಆದರೆ ಇಂದು ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳಿಂದ ಬೇಸರವಾಗಿದೆ ಎಂದಿದ್ದಾರೆ. ನಾನು ಬಿಜೆಪಿ ಪಕ್ಷವನ್ನು ಪ್ರತಿನಿಧಿಸುತ್ತೇನೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಬೆಳವಣಿಗೆಯನ್ನೂ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಹಿರಿಯ ನಾಯಕರು ಧರ್ಮ, ಜಾತಿ ಆಧಾರದ ಮೇಲೆ ಮಾತನಾಡುತ್ತಿದ್ದಾರೆ. ನಾವು ಹೀಗೆ ಮಾತನಾಡಿದರೆ ಯುವ ಪೀಳಿಗೆಗೆ ಯಾರು ಮಾರ್ಗದರ್ಶನ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಟಿಪ್ಪು ಬಗ್ಗೆ ವಿವಾದ ಸೃಷ್ಟಿಸಿರುವುದಕ್ಕೂ ಹಳ್ಳಿಹಕ್ಕಿ ಚಾಟಿ ಬೀಸಿದ್ದಾರೆ. ಪಠ್ಯಪುಸ್ತಕವನ್ನೇ ತಿರುಚಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಒಂಟಿ ಮಹಿಳೆ ಮನೆಗೆ ನುಗ್ಗಿ ಮೈ ಕೈ ಕಚ್ಚಿದ ಕಾಮುಕ.. ಖಾಕಿ ಮಾಡಿದ ಎಡವಟ್ಟು..!!

ರೋಹಿತ್​ ಚಕ್ರತೀರ್ಥ ಅರ್ಹತೆ ಪ್ರಶ್ನಿಸಿದ ಹಳ್ಳಿಹಕ್ಕಿ..!

ಟಿಪ್ಪು ಪಠ್ಯದ ಬಗ್ಗೆ ವಿವಾದ ಸೃಷ್ಟಿಸಿರುವ ರೋಹಿತ್ ಚಕ್ರತೀರ್ಥ ಹಿನ್ನಲೆ ಪ್ರಶ್ನೆ ಮಾಡಿರುವ ಹೆಚ್​. ವಿಶ್ವನಾಥ್​, ಚಕ್ರತೀರ್ಥ ಎಷ್ಟು ವರ್ಷ ಪಾಠ ಮಾಡಿದ್ದಾರೆ..? ಇತಿಹಾಸದ ಬಗ್ಗೆ ರೋಹಿತ್ ಚಕ್ರತೀರ್ಥಗೆ ಎಷ್ಟು ಗೊತ್ತಿದೆ..? ಎಂದಿದ್ದಾರೆ. ರೋಹಿತ್​ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ನೇಮಿಸಿದ್ದಾರೆ. ಟಿಪ್ಪು ಸುಲ್ತಾನ್ ಒಂದು ಇತಿಹಾಸ, ಸೂರ್ಯ, ಚಂದ್ರ ಇರುವವರೆಗೂ ಟಿಪ್ಪು ಹೆಸರು ಇರುತ್ತೆ. ಟಿಪ್ಪು ಸುಲ್ತಾನ್​, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ್ದವರು. ಅವರನ್ನು ಇತಿಹಾಸದ ಪುಟಗಳಿಂದ ಅಳಿಸಲು ಸಾಧ್ಯವಿಲ್ಲ ಎಂದು ಸ್ವಂತ ಪಕ್ಷದ ವಿರುದ್ಧವೇ ಕಿಡಿಕಾರಿದ್ದಾರೆ. ಇನ್ನೂ ದೇವಸ್ಥಾನ ಬಳಿ ವ್ಯಾಪಾರ ಮಾಡಬೇಡಿ, ಹಲಾಲ್ ಮಾಡಬೇಡಿ ಎನ್ನುವುದು ಸರಿಯಲ್ಲ. ಇದು ಒಂದು ಸಮುದಾಯವನ್ನು ಘಾಸಿ ಮಾಡುತ್ತದೆ. ಕೆಲವು ಸಂಘಟನೆಗಳು ಸಂವಿಧಾನವನ್ನೇ ಮೀರಿ ವರ್ತಿಸುತ್ತಿವೆ ಎಂದು ಕಿಡಿಕಾರಿದ್ದಾರೆ.

ಸರ್ಕಾರ ಮಧ್ಯ ಪ್ರವೇಶ ಮಾಡ್ಬೇಕು, ಇಲ್ಲದಿದ್ದರೆ ಕಷ್ಟ..!

ಜನರಿಂದ ಆಯ್ಕೆಯಾದ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ನಾನು ಸರ್ಕಾರಕ್ಕೆ ಆಗ್ರಹಕ್ಕೆ ಮಾಡುತ್ತೇನೆ ಎಂದು ಹೆಚ್​. ವಿಶ್ವನಾಥ್​ ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕ್ರಮ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಬೇಕು. ಕ್ರಿಯೆಗೆ ಪ್ರತಿಕ್ರಿಯೆ ಎಂದು ಸರ್ಕಾರ ಹೇಳಬಾರದು. ಇದು ಸರ್ಕಾರದ ಉತ್ತರ ಅಲ್ಲ. ಕರ್ನಾಟಕದಲ್ಲಿರುವುದು ಬಿಜೆಪಿ ಸರ್ಕಾರ, ಆರ್​ಎಸ್ಎಸ್, ವಿಶ್ವ ಹಿಂದೂ ಪರಿಷತ್, ಭಜರಂಗದಳದ ಸರ್ಕಾರ ಅಲ್ಲ ಎಂದು ಸಂಘಟನೆಗಳ ವಿರುದ್ಧ ಗುಡುಗಿದ್ದಾರೆ. ಯಡಿಯೂರಪ್ಪ ಕಾಲದಲ್ಲಿ ಈ ರೀತಿ ಇರಲಿಲ್ಲ. ಟಿಪ್ಪು ವೇಷವನ್ನು ಬಿ.ಎಸ್​ ಯಡಿಯೂರಪ್ಪ ತೊಟ್ಟಿದ್ದರು. ಯಡಿಯೂರಪ್ಪ ಕೂಡ ಹಿರಿಯ ನಾಯಕರು, ಈ ಬಗ್ಗೆ ಗಮನ ಹರಿಸಬೇಕು. ರಾಜಕೀಯ ನೀತಿ, ತಂತ್ರಗಾರಿಕೆ ಮಾರಕವಾಗಿರಬಾರದು. ಬಿಜೆಪಿ ಸ್ವತಂತ್ರವಾಗಿ ಇನ್ನು ಗೆಲ್ಲಬೇಕಿದೆ, ಸದ್ಯಕ್ಕೆ ನಮ್ಮಿಂದ ಸರ್ಕಾರ ಬಂದಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Related Posts

Don't Miss it !