‘ಮುಂದಿನ ಮುಖ್ಯಮಂತ್ರಿ ಮುರುಗೇಶ್​ ನಿರಾಣಿ’ ಫೋಸ್ಟರ್​ ಅಭಿನಂದನೆ..!

Murugesh Nirani The Public Spot

ಮಾಧುಸ್ವಾಮಿ ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್​ಮೆಂಟ್​ ಕೆಲಸ ಮಾಡುತ್ತ 8 ತಿಂಗಳು ಮುಗಿಸುವ ಕೆಲಸ ಮಾಡ್ತಿದ್ದೇವೆ ಎಂದು ಹೇಳಿಕೆಯಿಂದ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದ ರಾಜ್ಯ ಬಿಜೆಪಿ ಸರ್ಕಾರ ಇದೀಗ ಮತ್ತೊಂದು ಮುಜುಗರಕ್ಕೆ ಒಳಗಾಗಿದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದರೂ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎನ್ನುತ್ತಲೇ ಬೇರೇ ಬೇರೆ ಚಟುವಟಿಕೆಗಳು ನಡೆಯುತ್ತಲೇ ಇವೆ. ಮುಖ್ಯಮಂತ್ರಿ ಬದಲಾಗ್ತಾರಾ..? ಎಂದರೆ ಇಲ್ಲ ಎನ್ನುವ ಬಿಜೆಪಿ ಮುಂದಿನ ಮುಖ್ಯಮಂತ್ರಿ ಎಂದು ಪೋಸ್ಟ್​ ಹಾಕಿದರೆ ಏನರ್ಥ ಎನ್ನುವುದನ್ನು ಬಿಜೆಪಿ ನಾಯಕರೇ ಸ್ಪಷ್ಟವಾಗಿ ಹೇಳಬೇಕಿದೆ. ಆದರೆ ಬಿಜೆಪಿ ಹಿಡಿತವಿಲ್ಲದ ಕುರುಡು ಕುದುರೆಯಂತೆ ಓಡುತ್ತಿದೆ ಎನ್ನುವುದನ್ನು ರಾಜ್ಯದ ಜನ ಅರ್ಥ ಮಾಡಿಕೊಳ್ಳಲಿದ್ದಾರೆ.

ಸಿದ್ದರಾಮಯ್ಯನನ್ನು ಬಾದಾಮಿಯಲ್ಲಿ ಗೆಲ್ಲಿಸಿದ್ದು ಯಾರು..!?

ಸಚಿವ ಮಾಧುಸ್ವಾಮಿ ನೇರವಾಗಿ ಸರ್ಕಾರ ಕುಂಟುತ್ತಾ ಸಾಗುತ್ತಿದೆ ಎನ್ನುವುದನ್ನು ಹೇಳಿದ್ದರು. ಅದರ ಬೆನ್ನಲ್ಲೇ ಬಳ್ಳಾರಿಯಲ್ಲಿ ಮಾತನಾಡಿದ್ದ ಸಚಿವ ಶ್ರೀರಾಮುಲು, ಸಿದ್ದರಾಮಯ್ಯ ಬಾದಾಮಿಯಲ್ಲಿ ಹೇಗೆ ಗೆದ್ದರು ಎನ್ನುವುದನ್ನು ಒಮ್ಮೆ ಕಿವಿಯಲ್ಲಿ ಕೇಳಿ ನೋಡಿ ನಿಮಗೆ ಗೊತ್ತಾಗುತ್ತದೆ. ಹಿಂದುಳಿದ ನಮ್ಮ ನಾಯಕರುಗಳನ್ನು ಯಾವುದೇ ಕಾರಣಕ್ಕೂ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದ ಶ್ರೀರಾಮುಲು, ಸಿದ್ದರಾಮಯ್ಯ ಅವರಿಗೆ ಅವಕಾಶ ಸಿಕ್ಕರೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಮಾಜಿ ಸಿಎಂ ಪರವಾಗಿ ಬ್ಯಾಟಿಂಗ್​ ಮಾಡಿದ್ದಾರೆ. ನಾವು ರಾಜಕೀಯವಾಗಿ ಮಾತ್ರ ಮಾತನಾಡುತ್ತೇವೆ. ಆದರೆ ನಾವಿಬ್ಬರು ಸ್ನೇಹಿತರು ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಕಳೆದ ಬಾರಿ ಸಿದ್ದರಾಮಯ್ಯ ಬಾದಾಮಿಯಲ್ಲಿ ಗೆಲುವು ಕಾಣಲು ಬಿಜೆಪಿಯೇ ಪರೋಕ್ಷವಾಗಿ ಸಪೋರ್ಟ್​ ಮಾಡಿತು ಎನ್ನುವ ರೀತಿಯಲ್ಲಿ ಶ್ರೀರಾಮುಲು ಮಾತನಾಡಿದ್ದಾರೆ.; ಈ ಎರಡರ ನಡುವೆ ಇದೀಗ ಮುರುಗೇಶ್​ ನಿರಾಣಿ ಪೋಸ್ಟರ್​ ವಿವಾದ ಶುರುವಾಗಿದೆ.

ಹುಟ್ಟುಹಬ್ಬದ ಪೋಸ್ಟರ್​ನಲ್ಲಿ ಮುಂದಿನ ಮುಖ್ಯಮಂತ್ರಿ..!

ಮುರುಗೇಶ್ ನಿರಾಣಿ ಮುಂದಿನ ಮುಖ್ಯಮಂತ್ರಿ ಎಂದು ಕೆ.ಎಸ್​ ಈಶ್ವರಪ್ಪ ಸಚಿವರಾಗಿದ್ದಾಗಲೇ ಈ ಹಿಂದೆ ಒಂದು ಹೇಳಿಕೆ ನೀಡಿದ್ದರು. ಆ ಮಾತಿನಿಂದ ಸಾಕಷ್ಟು ಊಹಾಪೋಹಗಳು ಶುರುವಾಗಿದ್ದವು. ಇದೀಗ ಮುರುಗೇಶ್​ ನಿರಾಣಿ ಹುಟ್ಟಹಬ್ಬದ ಪ್ರಯುಕ್ತ ಸಿದ್ಧ ಮಾಡಿರುವ ಪೋಸ್ಟರ್​ಗಳಲ್ಲೂ ಮುಂದಿನ ಮುಖ್ಯಮಂತ್ರಿ ಎಂದು ಹಾಕಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಪೋಸ್ಟರ್ ವೈರಲ್ ಆಗಿದೆ. ಆಪ್ತ ಸಹಾಯಕ ಕಿರಣ್​ ಬಡಿಗೇರ ಅವರ ಹೆಸರಿನಲ್ಲಿ ಪೋಸ್ಟರ್​ ಇದ್ದು, ಮುಂದಿನ ಮುಖ್ಯಮಂತ್ರಿ ಎಂದರೆ ಮುಂದಿನ ಚುನಾವಣೆ ಬಳಿಕವೋ..? ಅಥವಾ ಇದೇ ಸರ್ಕಾರದಲ್ಲಿ ಮೂರನೇ ಮುಖ್ಯಮಂತ್ರಿ ಆಗಲಿದ್ದಾರೆಯೋ ಎನ್ನುವುದನ್ನು ಸಚಿವರೇ ಸ್ಪಷ್ಟಪಡಿಸಬೇಕಿದೆ. ಆಗಸ್ಟ್ 18 ರಂದು ಮುರುಗೇಶ್ ನಿರಾಣಿ ಹುಟ್ಟು ಹಬ್ಬ ಕಾರ್ಯಕ್ರವಿದ್ದು, 57ನೇ ಜನ್ಮ ದಿನದ ಶುಭಾಶಯಗಳು ಎನ್ನುವುದರ ಜೊತೆಗೆ ಮುಂದಿನ ಮುಖ್ಯಮಂತ್ರಿ ಎಂದು ಬರೆಸಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸಾರಿ ಹೇಳುತ್ತಿದೆ.

ಇದನ್ನು ಓದಿ: ರಾಜೀನಾಮೆ ನೀಡೋಕೆ ಸಿದ್ಧನಿದ್ದೇನೆ, ಕೊಟ್ಟುಬಿಡಿ ಎಂದ ಮಿನಿಸ್ಟರ್ಸ್​..!!

ರಾಜ್ಯಾಧ್ಯಕ್ಷರು ರಾಂಗ್​.. ಮುಖ್ಯಮಂತ್ರಿಗಳು ಮಂಕು..!

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಆದರೆ ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿದರುವುದು ದಕ್ಷಿಣ ಕನ್ನಡ ಸಂಸದ ನಳೀನ್​ ಕುಮಾರ್​ ಕಟೀಲ್​. ಕೇವಲ ನರೇಂದ್ರ ಮೋದಿ ಅವರ ಮುಖ ತೋರಿಸಿಕೊಂಡು ಬರುತ್ತಿದ್ದ ನಳೀನ್​ ಕುಮಾರ್​ ಕಟೀಲ್​ ಅಧ್ಯಕ್ಷರಾಗುವ ತನಕ ಬಹುತೇಕ ಮಂದಿಗೆ ಮುಖ ಪರಿಚಯವೇ ಇರಲಿಲ್ಲ. ಆದರೆ ಸಂಘಪರಿವಾರ ಹೇಳಿದ ಮಾತನ್ನು ಚಾಚೂ ತಪ್ಪದೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಎಲ್ಲವೂ ದೆಹಲಿಯಿಂದಲೇ ನಿಯಂತ್ರಣ ಆಗುತ್ತದೆ. ಒಂದು ರೀತಿಯಲ್ಲಿ ಮ್ಯಾನೇಜರ್​ ರೀತಿಯಲ್ಲಿ ನಳೀನ್​ ಕುಮಾರ್​ ಕಟೀಲ್​ ಕೆಲಸ ಮಾಡುತ್ತಿದ್ದಾರೆ. ಇನ್ನೂ ಬಸವರಾಜ ಬೊಮ್ಮಾಯಿ ಕಳೆದ ಬಿಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದರು. ಆಗಲೇ ಸಚಿವನಾಗಿ ಹೆಚ್ಚು ಕಡಿಮೆ ವಿಫಲರಾಗಿದ್ದರು, ಸರ್ಕಾರಕ್ಕೆ ಮುಜುಗರ ಆಗುವ ರೀತಿಯ ಬೆಳವಣಿಗೆ ಬಡೆದಿದ್ದರೂ ಬಿ.ಎಸ್​ ಯಡಿಯೂರಪ್ಪ ಅವರಿಗೆ ಆಪ್ತ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಆಗಿ ನೇಮಕ ಆಗಿದ್ದರು. ಇದೀಗ ಪಕ್ಷ ಹಾಗು ಯಡಿಯೂರಪ್ಪ ಇಬ್ಬರನ್ನು ಸರಿದೂಗಿಸಿಕೊಂಡು ಹೋಗುವ ಹೊಣೆಗಾರಿಕೆ ಇದೆ. ಹೀಗಾಗಿ ಸರ್ಕಾರದ ಮೇಲೆ ಬಸವರಾಜ ಬೊಮ್ಮಾಯಿ ಅವರಿಗೆ ಹಿಡಿತವಿಲ್ಲ. ಪಕ್ಷದ ಮೇಲೆ ನಳೀನ್​ ಕುಮಾರ್​ ಕಟೀಲ್​ ಅವರಿಗೆ ಹಿಡಿತವಿಲ್ಲ ಎನ್ನುವಂತಾಗಿದೆ.

Related Posts

Don't Miss it !