ಸಿಎಂ ಬದಲಾವಣೆ..? ಹೊಸ ನಾಯಕತ್ವ ಹುಡುಕಾಟದಲ್ಲಿ ಬಿಜೆಪಿ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭ ಆಗಿದ್ದವು. ಆ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಸೇರಿದಂತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಸ್ಪಷ್ಟನೆ ನೀಡಿ ಬಸವರಾಜ ಬೊಮ್ಮಾಯಿ ಅವಧಿ ಸಂಪೂರ್ಣ ಮಾಡುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆ ಬಳಿಕ ಕೇವಲ ಸಂಪುಟ ವಿಸ್ತರಣೆ ಬಗ್ಗೆ ಮಾತ್ರ ಮಾತುಗಳು ಆರಂಭವಾಗಿದ್ದವು. ಇದೀಗ ಸಂಪುಟ ವಿಸ್ತರಣೆಗೆ ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ದೆಹಲಿಗೆ ತೆರಳಲು ನಿರ್ಧಾರ ಮಾಡಿದ್ದಾರೆ. ಈ ನಡುವೆ ಕೇವಲ ಸಂಪುಟ ವಿಸ್ತರಣೆ ಮಾಡುವುದು ಬೇಡ, ಸಂಪುಟ ಪುನಾರಚನೆ ಮಾಡಬೇಕು ಎನ್ನುವ ಆಗ್ರಹ ಕೇಳಿಬಂದಿದೆ. ಈ ನಡುವೆ ಮುಮದಿನ ಚುನಾವಣೆ ಎದುರಿಸಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಬೇಕು ಎನ್ನುವುದಾದರೆ ಹೊಸ ನಾಯಕತ್ವ ಬೇಕು ಎನ್ನುವ ಕೂಗು ಕೇಳಿಬಂದಿದೆ. ಬಿ.ಎಸ್​ ಯಡಿಯೂರಪ್ಪ ಸರ್ಕಾರದ ವಿರುದ್ಧ ಗುಡುಗಿ ಕೆಂಡವಾಗಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಬಸವರಾಜ ಬೊಮ್ಮಾಯಿ ಅವರಿಂದ ನಾಯಕತ್ವ ವಾಪಸ್​ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ ಎನ್ನುವ ಸುಳಿವು ನೀಡಿದ್ದಾರೆ.

ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಎರಡನೇ ನಾಯಕತ್ವ ಬೇಕಿದೆ..!

ಬೆಳಗಾವಿಯಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಈ ಬಗ್ಗೆ ಮಾತನಾಡಿದ್ದು, ಕ್ರಿಯಾಶೀಲರಾಗಿ ಕೆಲಸ ಮಾಡಲು, ಎರಡನೇ ನಾಯಕತ್ವ ಕರ್ನಾಟಕಕ್ಕೆ ಬೇಕಾಗಿದೆ. ಯಡಿಯೂರಪ್ಪ ಅವರ ಯುಗ ಮುಗಿದಿದೆ. ಬಿಜೆಪಿಯಲ್ಲಿ ಇನ್ನೂ ಮೂರ್ನಾಲ್ಕು ಜನರ ಯುಗವೂ ಮುಗಿಯಲು ಬಂದಿದೆ. ವಾಜಪೇಯಿ ನಂತರ ನರೇಂದ್ರ ಮೋದಿ ನಾಯಕತ್ವಕ್ಕೆ ಬಂದ ಹಾಗೇ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅವಶ್ಯಕತೆ ಇದೆ. ಅನಿವಾರ್ಯ ಕೂಡ ಎಂದಿರುವ ಯತ್ನಾಳ್, ಬಸವರಾಜ ಬೊಮ್ಮಾಯಿ ಬದಲಾವಣೆ ಆಗುತ್ತಾರೆ ಅಂತಾ ನಾನು ಹೇಳಿಲ್ಲ. ಆದರೆ ಎರಡನೇ ನಾಯಕತ್ವ ಪಕ್ಷಕ್ಕೆ ಬೇಕು ಅಂತಾ ಹೇಳಿದ್ದೀನಿ. ಇದಕ್ಕಾಗಿ ಪ್ರಕ್ರಿಯೆಯನ್ನು ಮಾಡುತ್ತಿದ್ದಾರೆ. ಮುಂದಿನ ಚುನಾವಣೆಗೆ ಒಳ್ಳೆ ಟೀಮ್ ಮಾಡಿ ಮತ್ತೆ ಬಿಜೆಪಿ ಸರ್ಕಾರ ತರುವ ಯೋಜನೆ ನಡೆದಿದೆ ಎನ್ನುವ ಮೂಲಕ ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ.

Read This: ವಸಂತ ಋತುವಿಗೆ ಮೂಕಹಕ್ಕಿಗಳ ಗಾಯನ..! ಸಂಸಾರದಲ್ಲಿ ಸಂಧಾನ ಸಫಲ

ಸಂಪುಟ ವಿಸ್ತರಣೆ ಬೇಡ, ಪುನಾರಚನೆಯೇ ಆಗ್ಬೇಕು..!

ಚಿತ್ರದುರ್ಗದಲ್ಲಿ ಮಾತನಾಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ, ಸಂಪುಟ ವಿಸ್ತರಣೆ ಆದರೆ ಪ್ರಯೋಜನ ಇಲ್ಲ, ಸಂಪುಟ ಪುನಾರಚನೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇತ್ತೀಚಿಗಷ್ಟೇ 15 ಮಂದಿ ಅಯೋಗ್ಯ ಮಂತ್ರಿಗಳಿದ್ದಾರೆ ಎಂದು ಬಹಿರಂಗವಾಗಿ ಟೀಕೆ ಮಾಡಿದ್ದ ರೇಣುಕಾಚಾರ್ಯ ಇದೀಗ ಪುನಾರಚನೆ ಆಗ್ರಹ ಮಾಡಿದ್ದಾರೆ. ಅಲಕ್ಷ್ಯತನ, ಸೋಮಾರಿತನ ತೋರುವ ಸಚಿವರ ಬಗ್ಗೆ ನಾಯಕರಿಗೆ ತಿಳಿಸಿದ್ದೇನೆ. ಕೆಲವು ಸಚಿವರು ದುರಹಂಕಾರ ತೋರುತ್ತಿದ್ದು ಶಾಸಕರಿಗೆ ನೋವಿದೆ. ಹೊಸಬರಿಗೆ ಆದ್ಯತೆ ನೀಡುವ ಮೂಲಕ ಪಕ್ಷ ಬಲಪಡಿಬೇಕು ಎಂದಿದ್ದಾರೆ. ಇತ್ತ ಮೈಸೂರಿನಲ್ಲಿ ಮಾತನಾಡಿರುವ ಬಿಜೆಪಿ ಪರಿಷತ್​ ಬಿಜೆಪಿ ಸದಸ್ಯ ಹೆಚ್​. ವಿಶ್ವನಾಥ್​ ಕೂಡ ಸಂಪುಟ ವಿಸ್ತರಣೆ ಆದರೆ ಇರುವ ನಾಲ್ಕು ಸ್ಥಾನಗಳಿಗೆ ಸಚಿವರನ್ನು ನಿಯೋಜನೆ ಮಾಡಲಾಗುತ್ತದೆ. ಆದರೆ ಸಂಪುಟ ಪುನಾರಚನೆ ಮಾಡುವ ಮೂಲಕ ಹೊಸ ಮುಖಗಳಿಗೆ ಅವಕಾಶ ಕೊಡಬೇಕು ಎಂದು ಆಗ್ರಹ ಮಾಡಿದ್ದಾರೆ.

Also Read: ಶಾಲೆ ಮುಂದೆ ಸ್ಕೆಚ್​, ಮನೆ ಬೀಗ ತೆಗೆದು ಕಳವು.. ಕಳ್ಳನಲ್ಲ ಈತ ಮೆಕಾನಿಕ್..!!

ವಿಸ್ತರಣೆಯೋ.. ಪುನಾರಚನೆಯೋ ಸಿಎಂಗೂ ಗೊತ್ತಿಲ್ಲ..!!

ಆಪರೇಷನ್​ ಕಮಲದ ಮೂಲಕ ಬಿಜೆಪಿಗೆ ಬಂದು ಸಚಿವರಾಗಿರುವ ಬಹುತೇಕ ಮಂದಿಗೆ ಈ ಬಾರಿ ಕೊಕ್​ ನೀಡಲಾಗುತ್ತದೆ ಎನ್ನಲಾಗಿದೆ. ಈಗಾಗಲೇ ಬಿಜೆಪಿಯಿಂದ ಕಾಂಗ್ರೆಸ್​ ಕಡೆಗೆ ಹೋಗಲು ತಯಾರಿ ಮಾಡಿಕೊಳ್ತಿರೋ ಸಚಿವರನ್ನು ಪಕ್ಷದಲ್ಲಿ ಇಟ್ಟುಕೊಳ್ಳುವ ಬದಲು ಅಧಿಕಾರ ಕಿತ್ತುಕೊಳ್ಳಬೇಕು ಎನ್ನುವ ಚಿಂತನೆ ನಡೆದಿದೆ ಎನ್ನುವ ಮಾಹಿತಿ ಇದೆ. ಇರುವುದಾದರೆ ಇರಬಹುದು. ಕಾಂಗ್ರೆಸ್​ಗೆ ಮರಳುವುದಾದರೆ ಮರಳಬಹುದು ಎನ್ನುವ ಸಂದೇಶ ನೀಡಲು ಬಿಜೆಪಿ ತಯಾರಿ ನಡೆಸಿದೆ. ಈ ನಡುವೆ ಸಂಪುಟ ಪುನಾರಚನೆ ಬಗ್ಗೆ ಕೇಳಿದ ಪ್ರಶ್ನೆಗೆ ಯಾರು ಇರ್ತಾರೆ, ಯಾರು ಹೋಗ್ತಾರೆ ಎನ್ನುವ ಬಗ್ಗೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಗೊತ್ತಿಲ್ಲ, ದೆಹಲಿಗೆ ಹೋಗಿ ವಾಪಸ್​ ಆದ ಬಳಿಕ ಅಷ್ಟೇ ಗೊತ್ತಾಗಲಿದೆ ಎಂದಿದ್ದಾರೆ ಸಚಿವ ಕೆ.ಎಸ್​ ಈಶ್ವರಪ್ಪ.

ಡಿಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದ ಶ್ರೀರಾಮುಲು..!

ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ಶ್ರೀರಾಮುಲು ಡಿಸಿಎಂ ಆಗುತ್ತಾರೆ ಎಂದು ಬಿ.ಎಸ್​ ಯಡಿಯೂರಪ್ಪ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದರು. ಆದರೆ 5 ವರ್ಷ ಅಧಿಕಾರ ಮುಗಿಯುವ ಹಂತಕ್ಕೆ ಬಂದಿದ್ದರೂ ಶ್ರೀರಾಮುಲು ಡಿಸಿಎಂ ಆಗುವುದಕ್ಕೆ ಸಾಧ್ಯವಾಗಿಲ್ಲ. ಈ ಬಾರಿ ಉಪಮುಖ್ಯಮಂತ್ರಿ ಪಟ್ಟ ಪಡೆದುಕೊಳ್ಳದಿದ್ದರೆ ಇನ್ನೊಮ್ಮೆ ಅವಕಾಶ ಸಿಗುವುದು ಕಷ್ಟ ಎನ್ನುವುದನ್ನು ಅರಿತ ಸಚಿವ ಶ್ರೀರಾಮುಲು ಡಿಸಿಎಂ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದಾರೆ. ಈಗಾಗಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಹಲವಾರು ನಾಯಕರನ್ನು ಭೇಟಿ ಮಾಡಿ ಲಾಬಿ ಮಾಡುತ್ತಿದ್ದಾರೆ. ಸಿಎಂ ಕೂಡ ಈ ಹಿಂದೆಯೇ ಅಧಿಕಾರ ಶಾಶ್ವತವಲ್ಲ, ನಾನು ಅಧಿಕಾರಕ್ಕೆ ಅಂಟಿಕೊಂಡು ಕೂರುವವನಲ್ಲ ಎನ್ನುವ ಸುಳಿವು ಕೊಟ್ಟಿದ್ದರು. ಇನ್ನೂ 6 ತಿಂಗಳ ಅಧಿಕಾರ ಪೂರೈಸಿದ್ದನ್ನು ವರ್ಷಾಚರಣೆ ರೀತಿಯಲ್ಲೇ ಆಚರಣೆ ಮಾಡಿ ಪುಸ್ತಕವನ್ನೂ ಬಿಡುಗಡೆ ಮಾಡಿದ್ದಾರೆ. ಇದೆಲ್ಲವೂ ನಾಯಕತ್ವ ಬದಲಾವಣೆ ಸುಳಿವು ನೀಡುತ್ತಿದೆ ಎನ್ನಬಹುದು.

Related Posts

Don't Miss it !