ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸೋಲಿಗೆ ಒಂದೊಂದೇ ಮೆಟ್ಟಿಲು..! ನಿನ್ನೆ ಭಾರೀ ಬೆಳವಣಿಗೆ..

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವುದು ಬಿಜೆಪಿ ಹೈಕಮಾಂಡ್​ ಕನಸು. ಇದೇ ಕಾರಣಕ್ಕೆ ಬಿಎಸ್​ ಯಡಿಯೂರಪ್ಪ ಅವರನ್ನು ಪ್ರಕ್ಷದ ಪ್ರಮುಖ ಹುದ್ದೆ ಸಂಸದೀಯ ಸ್ಥಾನಕ್ಕೂ ನೇಮಕ ಮಾಡಿತ್ತು. ಆದರೆ ಬಿಜೆಪಿಯಲ್ಲಿ ದಿನೇ ದಿನೇ ನಡೆಯುತ್ತಿರುವ ಬೆಳವಣಿಗೆ ಬಿಜೆಪಿ ಸೋಲಿಗೆ ಒಂದೊಂದೇ ಮೆಟ್ಟಿಲುಗಳು ಆಗುತ್ತಿವೆಯಾ ಅನ್ನೋ ಅನುಮಾನವನ್ನು ಮೂಡಿಸುತ್ತಿದೆ. ಇದೀಗ 2023ರ ವಿಧಾನಸಭಾ ಚುನಾವಣೆಗೆ ಬಿಜೆಪಿಗೆ ಎದುರಾಗಿರುವ ಸಂಕಷ್ಟಗಳು ಮೂರು. ಒಂದನೆಯದ್ದು ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ, ಬಳ್ಳಾರಿ ಭಾಗದಲ್ಲಿ ಎಸ್​ಟಿ ಸಮುದಾಯದ ಮೀಸಲಾತಿ ಹೋರಾಟ.

ಪಂಚಮಸಾಲಿ ಮೀಸಲಾತಿ ಹೋರಾಟದ ಕಿಚ್ಚು ತೀವ್ರ..!

ಲಿಂಗಾಯತ ಪಂಚಮಸಾಲಿ ಸ್ವಾಮೀಜಿಗಳು ಹಾಗು ಬಿಜೆಪಿ, ಕಾಂಗ್ರೆಸ್​ ಸೇರಿದಂತೆ ಸಮುದಾಯದ ಎಲ್ಲಾ ಶಾಸಕರ ನಿನ್ನೆ ಸಂಜೆ ಜೊತೆಗೂಡಿ ಸರ್ಕಾರದ ವಿರುದ್ಧ ತಿರುಗಿ ಬೀಳುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಭೆ ಬಳಿಕ ಮಾತನಾಡಿರುವ ಜಯಮೃತ್ಯುಂಜಯ ಸ್ವಾಮೀಜಿ, ಸೆಪ್ಟೆಂಬರ್​ 20ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿ ನಿವಾಸಕ್ಕೆ 1 ಲಕ್ಷ ಜನರ ಜೊತೆಗೆ ಮುತ್ತಿಗೆ ಹಾಕಲಿದ್ದು, ಇತ್ತ ಕಲಾಪದಲ್ಲಿ ಸಮುದಾಯದ ಶಾಸಕರೂ ಪ್ರತಿಭಟನೆ ಮಾಡಲಿದ್ದಾರೆ ಎಂದಿದ್ದಾರೆ. ಇನ್ನೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗದಿದ್ರೆ ನವೆಂಬರ್​ನಲ್ಲಿ 20 ಲಕ್ಷ ಜನರನ್ನು ಸೇರಿಸಿ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಸ್ವಾಮೀಜಿ ಮಾತಿನ ಬಳಿಕ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, 4 ಸಲ ಭರವಸೆ ಕೊಟ್ಟು ಯಾಮಾರಿಸಿದ್ದೀರಾ ಈ ಸಲ ಸುಮ್ಮನಿರಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸಭೆಯಲ್ಲಿ ಬಸವನಗೌಡ ಯತ್ನಾಳ್, ವಿನಯ್ ಕುಲಕರ್ಣಿ, ಅರವಿಂದ್ ಬೆಲ್ಲಾದ್, ಲಕ್ಷ್ಮೀ ಹೆಬ್ಬಾಳ್ಕರ್, ವಿಜಯನಂದ ಕಾಶಪ್ಪನವರ್ ಹಾಜರಿದ್ದರು.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ..!

ಹಳೇ ಮೈಸೂರು ಭಾಗದಲ್ಲಿ ಆಪರೇಷನ್​ ಕಮಲ ಮಾಡುವ ಮೂಲಕ ಭದ್ರ ಬುನಾದಿ ಹಾಕಬೇಕು ಎಂದುಕೊಂಡಿದ್ದ ಕಮಲ ಪಾಳಯದ ಕನಸು ಭಗ್ನವಾಗುವ ಎಲ್ಲಾ ಲಕ್ಷಗಳು ಗೋಚರಿಸುತ್ತಿವೆ. ಹೆಚ್​. ವಿಶ್ವನಾಥ್​ ಅವರನ್ನು ಆಪರೇಷನ್​ ಕಮಲದ ಮೂಲಕ ಕರೆದುಕೊಂಡು ಬಂದು ಪರಿಷತ್​ ಸದಸ್ಯ ಸ್ಥಾನ ಸಿಕ್ಕರೂ, ಹಳ್ಳಿಹಕ್ಕಿ ಕಾಂಗ್ರೆಸ್​ ಪಕ್ಷಕ್ಕೆ ಭಾರೀ ಸನಿಹದಲ್ಲಿ ಹಾರಾಡುತ್ತಿದೆ. ತಮ್ಮ ಮಗನನ್ನೇ ಕಾಂಗ್ರೆಸ್​ಗೆ ಕಳುಹಿಸಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ಸೇರುವ ಸಾಧ್ಯತೆಗಳಿವೆ. ಇನ್ನೂ ನಿನ್ನೆ ರಾತ್ರಿ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ ಸಿಟಿ ರವಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಹಳೆ ಮೈಸೂರಿಗೆ ಭಾಗದಲ್ಲಿ ಓಡಾಡುತ್ತಿದ್ದ ಮಾಜಿ ಸಚಿವ ಸಿಪಿ ಯೋಗೇಶ್ವರ್ ಸಭೆಯಿಂದ ದೂರ ಉಳಿದ್ದಾರೆ. ದೊಡ್ಡಬಳ್ಳಾಪುರದ ಸಾಧನಾ ಸಮಾವೇಶದಿಂದಲೂ ದೂರ ಉಳಿದಿದ್ದರು ಎನ್ನುವುದು ವಿಶೇಷ. ಅಕ್ಟೋಬರ್​ನಲ್ಲಿ ಮೈಸೂರಿನಲ್ಲಿ ಎಸ್ಸಿ ಸಮಾವೇಶ ನಡೆಸಿ ಪಕ್ಷ ಬಲವರ್ಧನೆಗೆ ಚಿಂತನೆ ನಡೆದಿದೆ.

ಬಳ್ಳಾರಿಯಲ್ಲಿ ಎಸ್​ಟಿ ಸಮೇಶಕ್ಕೆ ಅಡ್ಡಿ ಸಾಧ್ಯತೆ..!

ಸೆಪ್ಟೆಂಬರ್​ ‌23ರಂದು ಬಳ್ಳಾರಿಯಲ್ಲಿ ಬಿಜೆಪಿ ಎಸ್​ಟಿ ಸಮಾವೇಶ ನಡೆಸಲು BJP ನಾಯಕರು ಯೋಜನೆ ಹಾಕಿಕೊಂಡಿದ್ದಾರೆ. ನಳೀನ್​ ಕುಮಾರ್​ ಕಟೀಲ್​ ನೇತೃತ್ವದಲ್ಲಿ ಸಮಾವೇಶ ಸಿದ್ಧತಾ ಸಭೆ ಮಾಡಲಾಗಿದ್ದು, ಎಸ್​ಟಿ ಸಮಾವೇಶಕ್ಕೂ ಮೊದಲು ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಬಗ್ಗೆ ಸರ್ಕಾರದಿಂದ ಸ್ಪಷ್ಟ ಮಾಹಿತಿ ಬರಬೇಕು ಎಂದು ವಾಲ್ಮೀಕಿ ನಾಯಕರು ಒತ್ತಡ ಹೇರಿದ್ದಾರೆ. ಸಮಾವೇಶಕ್ಕೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್​ ಕರೆದುಕೊಂಡು ಬರಲು ಸಿದ್ಧತೆಗಳು ನಡೆದಿರುವಾಗ ಬಿಜೆಪಿ ನಾಯಕರಿಗೆ ವಾಲ್ಮೀಕಿ ಸಮುದಾಯದ ಮೀಸಲಾತಿ ವಿಚಾರ ತಲೆಬಿಸಿ ಉಂಟು ಮಾಡಿದೆ.

Related Posts

Don't Miss it !