ವಿಜಯೇಂದ್ರ ರಹಸ್ಯ ಭೇಟಿಯ ಹಿಂದಿದ್ಯಾ ರಹಸ್ಯ..?

ಸಿಎಂ ಬದಲಾವಣೆ ಮಾತು ಕೇಳಿಬರುತ್ತಿದ್ದ ಹಾಗೆ ಲಿಂಗಾಯತ ಸ್ವಾಮೀಜಿಗಳನ್ನು ಭೇಟಿ ಮಾಡ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದರು. ಆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಇಂದು ದಿಢೀರ್ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಎರಡು ಪ್ರಮುಖ ಅಜೆಂಡ ಹಿಡಿದುಕೊಂಡು ದೆಹಲಿಗೆ ಭೇಟಿ ನೀಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆಗಳು ನಡೆಯುತ್ತಿವೆ. ಅದರಲ್ಲಿ ಪ್ರಮುಖವಾದದ್ದು ಸಿಎಂ ಬದಲಾವಣೆ ಚರ್ಚೆ ಹುಟ್ಟುಹಾಕಿದ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಹೈಕಮಾಂಡ್ ನಾಯಕರಿಗೆ ದೂರು ನೀಡುವುದು. ಇನ್ನೊಂದು ಜಿಂದಾಲ್‌ಗೆ ಸರ್ಕಾರ ಭೂಮಿ ಮಾರಾಟ ಮಾಡುವುದಕ್ಕೆ ತಡೆ ನೀಡಿದ್ದ ಹೈಕಮಾಂಡ್ ನಾಯಕರ ಮನಸು ಓಲೈಸುವುದು ಎನ್ನಲಾಗಿದೆ.

ಯೋಗೇಶ್ವರ್ ವಿರುದ್ಧ ಹೈಕಮಾಂಡ್‌ಗೆ ದೂರು..!

ಸಿ.ಪಿ ಯೋಗೇಶ್ವರ್ ಸರ್ಕಾರದ ವಿರುದ್ಧ ಬಹಿರಂಗವಾಗಿ ಮಾತನಾಡಿದರೂ ಆ ಹೇಳಿಕೆ ಹಿಂದೆ ಒಂದು ಪ್ರತ್ಯೇಕ ಗುಂಪಿದೆ ಎನ್ನುವುದು ಸಿಎಂ ಬಿ.ಎಸ್ ಯಡಿಯೂರಪ್ಪಗೆ ಗೊತ್ತಿರುವ ಸಂಗತಿ. ಇದೇ ಕಾರಣಕ್ಕೆ ವಿರೋಧಿ ಬಣಕ್ಕೆ ಬಿಸಿ ಮುಟ್ಟಿಸಲು ಮುಂದಾಗಿರುವ ಬಿ.ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿಯಾಗಿ ದೂರು ನೀಡಲಿದ್ದಾರೆ ಎನ್ನಲಾಗಿದೆ. ಸಚಿವ ಸಿ.ಪಿ ಸಿ.ಪಿ. ಯೋಗೇಶ್ವರ್ ಅನಾವಶ್ಯಕವಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ಬದಲಾವಣೆ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಸರ್ಕಾರದಲ್ಲಿ ಸಚಿವರಾಗಿ ಇದ್ದುಕೊಂಡು ಸರ್ಕಾರದ ವಿರುದ್ಧವೇ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗಲೂ ಮೂರು ಪಕ್ಷಗಳ ಸರ್ಕಾರ ಎಂದು ಟೀಕೆ ಮಾಡುತ್ತಾರೆ. ಕೊರೊನಾ ಸಮಯದಲ್ಲಿ ಯೋಗೇಶ್ವರ್ ರಾಜಕೀಯ ಪ್ರಸ್ತಾಪ ಮಾಡುತ್ತಿರುವ ಕಾರಣ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂದು ದೂರಲಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿರುವ ವಿಚಾರ.

ಯೋಗೇಶ್ವರ್ ರಾಜೀನಾಮೆಗೆ ಹಲವು ಶಾಸಕರು ಒತ್ತಾಯಿಸುತ್ತಿದ್ದಾರೆ. ಸೋತವರನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ ಎಂದು ಹೈಕಮಾಂಡ್‌ಗೆ ವರದಿ ಸಲ್ಲಿಸಲಿರುವ ವಿಜಯೇಂದ್ರ, ಸಚಿವ ಸಿ.ಪಿ. ಯೋಗೇಶ್ವರ್‌ಗೆ ಖಡಕ್ ಸೂಚನೆ ನೀಡಿ ಅಥವಾ ಸಂಪುಟದಿAದ ಕೈಬಿಡಲು ಅನುಮತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಜಯೇಂದ್ರ ಮೂಲಕ ಆಪ್ತ ಶಾಸಕರು ಸಹಿ ಮಾಡಿರುವ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನೆ ಮಾಡುವ ಮೂಲಕ ಎದುರಾಳಿ ಶಾಸಕರು ಹಾಗೂ ಬಿಜೆಪಿ ಹೈಕಮಾಂಡ್‌ಗೂ ಬಿ.ಎಸ್ ಯಡಿಯೂರಪ್ಪ ತನ್ನ ಶಕ್ತಿಯ ಬಲಾಬಲ ಪ್ರದರ್ಶನ ಮಾಡಿದ್ದಾರೆ.

ಬಿ.ಎಸ್ ಯಡಿಯೂರಪ್ಪ ಬೆಂಬಲಕ್ಕೆ 65 ಶಾಸಕರು..!

ಬಿಜೆಪಿ ಹೈಕಮಾಂಡ್‌ಗೆ ಬಿಎಸ್ ಯಡಿಯೂರಪ್ಪ ಪರ ಶಾಸಕರ ಸಹಿ ಹೊಂದಿರುವ ಪತ್ರ ರವಾನೆ ಬಗ್ಗೆ ಒಪ್ಪಿಕೊಂಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, 65 ಜನ ಶಾಸಕರು ಸೇರಿ ಸಿ.ಪಿ ಯೋಗೇಶ್ವರ್ ವಜಾ ಮಾಡೋಕೆ ಒತ್ತಾಯಿಸಿದ್ದೇವೆ ಎಂದಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿರುವ ರೇಣುಕಾಚಾರ್ಯ ಯೋಗೇಶ್ವರ್‌ಗೆ ರಾಮನಗರ ಉಸ್ತುವಾರಿ ಬೇಕು, ಇಂಧನ ಖಾತೆ ಬೇಕು, ಬೃಹತ್ ನೀರಾವರಿ ಖಾತೆ ಬೇಕಂತೆ. ಅವನಿಗೆ ತನ್ನ ಸ್ವಂತ ಚಿಕ್ಕೇರಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಗೆಲ್ಲಿಸೋಕೆ ಆಗಿಲ್ಲ. ಪಕ್ಷ ಸಂಘಟನೆ ಮಾಡ್ತೀನಿ ಅಂತ ಕೊಚ್ಕೊಳ್ತಾನೆ ಆತನ ಕೊಡುಗೆ ಏನಿದೆ..? ಎಂದು ಪ್ರಶ್ನಿಸಿದ್ದಾರೆ. ಸಿ.ಪಿ ಯೋಗೇಶ್ವರ್ ಮೇಲೆ ಕ್ರಮ ಕೈಗೊಳ್ಳಲು ಸಿಎಂಗೆ ಯಾವುದೇ ಹೆದರಿಕೆ ಇಲ್ಲ. ಸಿಎಂ ರೆಡಿಮೇಡ್ ಫುಡ್ ಅಲ್ಲ. ಪಕ್ಷ ಸಂಘಟನೆ, ಹೋರಾಟದಿಂದ ಬೆಳೆದು ಬಂದವರು. ಯಡಿಯೂರಪ್ಪ ಆಲದ ಮರ ನಾವು ಅವರ ನೆರಳಲ್ಲಿ ಇರೋರು. ಅವರ ಬೆನ್ನಿಗೆ ಚೂರಿ ಹಾಕಿದ್ರೆ ನಾವು ಬಿಡಲ್ಲ ಎನ್ನುವ ಮೂಲಕ ಸಿ.ಪಿ ಯೋಗೇಶ್ವರ್ ಬೆಂಬಲಕ್ಕಿರುವ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

ಕಾಂಗ್ರೆಸ್ ಆರೋಪಕ್ಕೂ ರಹಸ್ಯ ಭೇಟಿಗೂ ಲಿಂಕ್ ಇದ್ಯಾ..?

ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಮಾಡುವ ವಿಚಾರದಲ್ಲಿ ಯಡಿಯೂರಪ್ಪ ದೊಡ್ಡ ಮಟ್ಟದ ಕಿಕ್‌ಬ್ಯಾಕ್ ಪಡೆಯಲು ಮುಂದಾಗಿದ್ದರು. ಈ ಅವ್ಯವಹಾರದಲ್ಲಿ ಹೈಕಮಾಂಡ್‌ಗೆ ಸಲ್ಲಬೇಕಾದ ಪಾಲು ಸರಿಯಾಗಿ ತಲುಪಿಲ್ಲ ಎಂದು ಕಾಣುತ್ತದೆ. ಅದೇ ಕಾರಣಕ್ಕೆ ಹೈಕಮಾಂಡ್ ಮಧ್ಯಪ್ರವೇಶ ಮಾಡಿ, ಜಿಂದಾಲ್‌ಗೆ ಭೂಮಿ ನೀಡದಂತೆ ತಡೆ ಹಿಡಿದಿದೆ ಎಂದು ಕಾಂಗ್ರೆಸ್ ನಾಯಕ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಆರೋಪ ಮಾಡಿದ್ದರು. ಇದೀಗ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ವತಃ ಹೈಕಮಾಂಡ್ ನಾಯಕ ಭೇಟಿ ಮಾಡಿದ್ದಾರೆ. ಆದರೆ ಬಿಜೆಪಿ ಅಧಿಕೃತ ಕಚೇರಿ ಅಥವಾ ಬಿಜೆಪಿ ನಾಯಕರ ನಿವಾಸದಲ್ಲಿ ಅಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ದೆಹಲಿಯ ಐಶಾರಾಮಿ ಹೋಟೆಲ್‌ನಲ್ಲಿ ರಹಸ್ಯವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರಣ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಪಕ್ಷದ ಹಾಗೂ ಯೋಗೇಶ್ವರ್ ವಿರುದ್ಧ ದೂರು ನೀಡುವುದರಲ್ಲಿ ರಹಸ್ಯ ಸಭೆ ಯಾಕೆ ಎನ್ನುವುದು ಕೌತುಕಕ್ಕೆ ಕಾರಣವಾಗಿದೆ.

Related Posts

Don't Miss it !