ರಾಷ್ಟ್ರೀಯ ಪಕ್ಷಗಳು ಜನರ ನಂಬಿಕೆ ಕಳೆದುಕೊಳ್ತಿವೆ..!

‘ಕಾಂಗ್ರೆಸ್​ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು’

ಮಾಜಿ ಸಿಎಂ ಕುಮಾರಸ್ವಾಮಿ ಇಂದು ಸುದ್ದಿಗೋಷ್ಟಿ ನಡೆಸಿ ಕಾಂಗ್ರೆಸ್​ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇವತ್ತು ಇಡೀ ದೇಶದಲ್ಲಿ ರಾಷ್ಟ್ರೀಯ ಪಕ್ಷಗಳು ಪತನವಾಗ್ತಿವೆ, ಪಶ್ಚಿಮ ಬಂಗಾಳದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಮಂಡಿಯೂರಿದ್ದು, ಈಗ ಪ್ರಾದೇಶಿಕ ಪಕ್ಷಗಳತ್ತ ಜನ ಒಲವು ತೋರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಕಾಂಗ್ರೆಸ್​ಗೂ ಶಕ್ತಿ ಇಲ್ಲ, ಜೆಡಿಎಸ್ ಕಾರ್ಯದಿಂದ ಅಂದು ಬಿಜೆಪಿ ಮೂರು ಭಾಗ ಆಗಿತ್ತು. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. 2013 ರಲ್ಲಿ ಮುಖ್ಯಮಂತ್ರಿ ಆದರು. ನನಗೆ ಇದೇ ಕೊನೆ ಚುನಾವಣೆ ಎಂದಿದ್ದರು. ಈಗ ಅವರೆ ಮುಂದಿನ ಸೀಟು ಹುಡುಕ್ತಾವ್ರೆ ಎಂದು ಸಿದ್ದರಾಮಯ್ಯ ಹೆಸರು ಹೇಳದೆ ಚಾಟಿ ಬೀಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಸಮಯವಿದೆ. ಆದರೆ ಇವರಿಗೆ ಈಗಲೇ ಅಧಿಕಾರದ ಅಸೆ ಶುರುವಾಗಿದೆ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

17 ಮಂದಿ ನನ್ನ ಶತ್ರುಗಳಲ್ಲ, ಪ್ರಾಣ ಉಳಿಸಿದ ದೇವರು..!

ಬಿಜೆಪಿಯ ಆಪರೇಷನ್​ ಕಮಲದಲ್ಲಿ ಕಾಂಗ್ರೆಸ್​ ಹಾಗೂ ಜೆಡಿಎಸ್​​ನಿಂದ ಪಕ್ಷಾಂತರ ಮಾಡಿದ್ದ 17 ಮಂದಿ ಶಾಸಕರ ಪರವಾಗಿ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಅಧಿಕಾರದಿಂದ ನನ್ನನ್ನು ತೆಗೆದಿದ್ದು ಆ ದೇವರು. ಈ ಹದಿನೇಳು ಜನ ಸರ್ಕಾರ ತೆಗೆಸಿದ್ದಲ್ಲ, ಅವರು ನನ್ನ ಜೀವ ಉಳಿಸಿದ ಪುಣ್ಯಾತ್ಮರು. ನನಗೆ ಅವ್ರ ಬಗ್ಗೆ ಯಾವುದೇ ಬೇಜಾರಿಲ್ಲ ಎನ್ನುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ. ಜೆಡಿಎಸ್ ಕಥೆ ಮುಗಿದು ಹೋಯ್ತು ಎಂದುಕೊಂಡಿದ್ರು. ಕೊರೊನಾ ಸಾವಿನ ಮನೆಯಲ್ಲಿ ರಾಜಕೀಯ ಮಾಡಬಾರದು ಎಂದು ಸುಮ್ಮನಿದ್ದೆವು. ಆದ್ರೆ ಜೆಡಿಎಸ್ ಇನ್ನೂ ಏನು ಎನ್ನುವುದು ತೋರಿಸುತ್ತೇವೆ ಎಂದು ಗುಡುಗಿದ್ದಾರೆ.

ಸದ್ಯಕ್ಕೆ ಭ್ರಷ್ಟಾಚಾರ ನಿಲ್ಲಿಸಿ, ಜನ ಬುದ್ಧಿ ಕಲಿಸ್ತಾರೆ..!

ನಾನೇ ಮುಂದಿನ ಎರಡು ವರ್ಷ ಮುಖ್ಯಮಂತ್ರಿ, ನನ್ನ ನಾಯಕತ್ವದಲ್ಲೆ ಮುಂದಿನ ಚುನಾವಣೆ ಎಂದಿದ್ದಾರೆ. 130 ಸೀಟು ಗೆಲ್ತೇವೆ ಅಂತಾನು ಹೇಳಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ನಿಮ್ಮ ಭ್ರಷ್ಟಾಚಾರ ನಿಲ್ಲಿಸಿ, ಮುಂದಿನ ದಿನಗಳಲ್ಲಿ ಜನರೇ ನಿಮಗೆ ಬುದ್ದಿ ಕಲಿಸ್ತಾರೆ ಎನ್ನುವ ಮೂಲಕ ಬಿ.ಎಸ್​ ಯಡಿಯೂರಪ್ಪ ವಿರುದ್ಧವೂ ಕಿಡಿಕಾರಿದ್ದಾರೆ. ಇನ್ನೂ ಯಡಿಯೂರಪ್ಪ ಪರವಾಗಿ ಮಾತನಾಡಿದ್ದ ಸಿದ್ದಗಂಗಾ ಶ್ರೀಗಳು, ಆದಿಚುಂಚನಗಿರಿ ಶ್ರೀಗಳ ವಿರುದ್ಧ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳ ಹೆಸರು ಹೇಳದೆ ಕಿಡಿಕಾರಿರುವ ಕುಮಾರಸ್ವಾಮಿ, ಕೆಂಪೇಗೌಡ ಜಯಂತಿಯಂದು ಯಡಿಯೂರಪ್ಪ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಯಡಿಯೂರಪ್ಪ ಉತ್ತಮ ಕೆಲಸ ಮಾಡ್ತಿದ್ದಾರೆ. ರಾಜ್ಯದಲ್ಲಿ ಹೇಗೆ ಅಧಿಕಾರ ಮಾಡಬೇಕು ಅನ್ನೋದಕ್ಕೆ ಯಡಿಯೂರಪ್ಪ ಮಾದರಿ ಎಂದಿದ್ದಾರೆ, ಅದ್ಯಾಕೆ ಸ್ವಾಮೀಜಿಗಳು ಅವ್ರೆ ಬೇಕು ಅಂತಿದ್ದಾರೋ ಗೊತ್ತಿಲ್ಲ. ಜನರಿಗೆ ಅದೇನು ಒಳ್ಳೆಯದು ಮಾಡಿದ್ದಾರೋ ಗೊತ್ತಿಲ್ಲ. ಇವರೆಲ್ಲ ಜೆಸಿಬಿಯಲ್ಲಿ ಬಾಚುತ್ತಿದ್ದಾರೆ. ಆದರೂ ಅವ್ರೆ ಬೇಕು ಅಂತಿದ್ದಾರೆ ಎಂದು ಕುಟುಕಿದ್ದಾರೆ.

ಕಾಂಗ್ರೆಸ್​ ಬಿಜೆಪಿ ಸಮಾನ ಪಾಲುದಾರರು..!

ದೇಶದಲ್ಲಿ ಪೆಟ್ರೋಲ್, ಡಿಸೇಲ್ ಹೆಚ್ಚಳ ಆಗಲು ಪ್ರಧಾನಿ ನರೇಂದ್ರ ಮೋದಿ ಮಾತ್ರ ಕಾರಣರಲ್ಲ. ಕಾಂಗ್ರೆಸ್ ಕೂಡ ಇದಕ್ಕೆ ಕಾರಣ ಕರ್ತ. ಡಾ ಮನಮೋಹನ್ ಸಿಂಗ್ ಅಧಿಕಾರವಧಿಯಲ್ಲಿ ನೀಡಿದ್ದ ಬಾಂಡ್​ಗಳು ಅವಧಿ ಮೀರಿವೆ. ಈಗ ಆ ದುಡ್ಡನ್ನ ಕೊಡಬೇಕು. ಎರಡು ರಾಷ್ಟ್ರೀಯ ಪಕ್ಷಗಳು ಸೇರಿ ಈ ಸ್ಥಿತಿಗೆ ತಂದಿಟ್ಟಿವೆ. ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ ಕಟ್ಟಿಸಿದ ಖಜಾನೆಗೆ ದರಿದ್ರ ಬಂದಿಲ್ಲ., ಅದು ಸಮೃದ್ದವಾಗಿದೆ. ಆದರೆ ದರಿದ್ರ ಬಂದಿರುವು ರಾಜಕಾರಣಿಗಳಿಗೆ, ಬರಿ ಕೈಯಲ್ಲಿ ಈಗ ಖಜಾನೆಯನ್ನ ಬಾಚ್ತಾ ಇಲ್ಲ, ಬದಲಾಗಿ ಜೆಸಿಬಿಯಲ್ಲಿ ಬಾಚ್ತಾ ಇದ್ದಾರೆ ಎಂದು ರಾಜಕಾರಣಿಗಳ ಧನದಾಹಿತನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಕೃಷಿಕ ಮಾತ್ರವಲ್ಲ, ಜನರ ಬಗ್ಗೆ ಕಾಳಜಿ ಇದೆ..!

ನಾನು ಸದ್ಯಕ್ಕೆ ಬಿಡದಿ ನಿವಾಸದಲ್ಲಿ ಇದ್ದೇನೆ, ಇನ್ನೂ ಮುಂದೆ ಕೊನೆಯವರೆಗೂ ಅದೇ ನಿವಾಸದಲ್ಲಿ ಇರುತ್ತೇನೆ. ನಾನು ಅಲ್ಲೆ ಇರುತ್ತೇನೆ. ನಾನು ಅಲ್ಲಿ ಬರೀ ಕೃಷಿ ಮಾಡ್ತಾ ಇಲ್ಲ, ಕರ್ನಾಟಕದ ರಾಜಕೀಯ ಕೃಷಿಯನ್ನ ನಾನು ಅಲ್ಲಿ ಮಾಡ್ತಾ ಇದ್ದೀನಿ. ಐದು ಅಂಶಗಳ ಕಾರ್ಯಕ್ರಮ‌ ಮಾಡಿಕೊಂಡಿದ್ದೇನೆ, ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ರಾಜ್ಯದ ಜನರಿಗೆ ನೀಡ್ತೇನೆ. ನಿಮಗೆ ನಿಮ್ಮ ಮಕ್ಕಳ ಭವಿಷ್ಯದ ಕಾಳಜಿ ಇದ್ದರೆ 2023ರಲ್ಲಿ ಬೆಂಬಲ ನೀಡಿ, ಇಲ್ಲ ಬೇಡ ಎಂದರೆ ಹಾಗೆ ಇರಿ. ಸ್ವಾತಂತ್ರ್ಯ ಬಂದು 75 ವರ್ಷ ಸವೆಸಿದ್ದೀರಿ. ಇನ್ನೂ ಹಾಗೇ ಇರಬೇಕಾ ಎಂದು ಜನರನ್ನೇ ಪ್ರಶ್ನಿಸಿದ್ದಾರೆ. ಕಳೆದ ಅವಧಿಯಲ್ಲಿ ಮೀಟರ್ ಬಡ್ಡಿ ದಂಧೆಯಿಂದ ಬೀದಿ ವ್ಯಾಪಾರಿಗಳಿಗೆ ಆಗುವ ಸಂಕಷ್ಟ ತಪ್ಪಿಸಲು ಋಣ ಮುಕ್ತ ಕಾಯ್ದೆ ತಂದಿದ್ದೆ. ಆದರೆ ಮೀಟರ್ ಬಡ್ಡಿ ದಂಧೆ ಕೋರರ ಜೊತೆ ಸೇರಿ ಸ್ಟೇ ತಂದ್ರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಜನರು ಆಯ್ಕೆ ಮಾಡಿಕೊಳ್ಳುತ್ತಾರೆ. ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ ಪ್ರಾದೇಶಿಕ ಪಕ್ಷಗಳನ್ನು ಕಡೆಗಣಿಸುವ ಯಾವುದೇ ರಾಷ್ಟ್ರೀಯ ಪಕ್ಷ ಇಲ್ಲೀವರೆಗೂ ಬಂದಿಲ್ಲ, ಮುಂದೆಯೂ ಬರೋದಿಲ್ಲ. ಪ್ರಾದೇಶಿಕ ಪಕ್ಷಗಳನ್ನು ಆಡಳಿತ ಪಕ್ಷಗಳು ಓಲೈಸುವ ಕಾರಣ ಪ್ರಾದೇಶಿಕ ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲಿ ಅಭಿವೃದ್ಧಿ ಉತ್ತಮವಾಗಿ ಇರುತ್ತದೆ ಎಂದರೆ ತಪ್ಪಲ್ಲ. ಆದರೆ ಕರ್ನಾಟಕದ ಜನರ ಕನಸು ಬೇರೆಯದ್ದೇ ಆಗಿರುವ ಕಾರಣ ಪ್ರಾದೇಶಿಕ ಪಕ್ಷ ಅಧಿಕಾರ ಬರದಂತೆ ಆಗಿದೆ. ಮುಂದಿನ ದಿನಗಳಲ್ಲಿ ಜನ ಯಾವ ರೀತಿ ಆಯ್ಕೆ ಮಾಡ್ತಾರೆ ಎನ್ನುವುದರ ಮೇಲೆ ಕುಮಾರಸ್ವಾಮಿ ರಾಜಕೀಯ ಭವಿಷ್ಯ ಅಡಗಿದೆ.

Related Posts

Don't Miss it !