ಗಂಡು ಮಕ್ಕಳ ಮದುವೆಗೆ ಹೆಣ್ಣು ಸಿಗದೆ ಪರದಾಟ..! ಕಾರಣ ಕಣ್ಣ ಮುಂದಿದೆ..

ಕಾಲ ಬದಲಾಗಿದೆ. ಹೆಣ್ಣು ಹೆತ್ತವರು ಮದುವೆ ಮಾಡುವುದೇ ದುಸ್ತರ ಎನ್ನುವ ಕಾಲ ಹೊರಟು ಹೋಗಿದೆ. ಹೆಣ್ಣು ಮಕ್ಕಳಿದ್ದರೆ, ಉತ್ತಮ ವರನಿಗೆ ಕೊಟ್ಟು ಮದುವೆ ಮಾಡಬಹುದು. ಗಂಡು ಮಕ್ಕಳಿಗೆ ಹೆಣ್ಣು ಹುಡುಕುವ ಶಾಪ ಯಾರಿಗೂ ಬೇಡಪ್ಪ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅದರಲ್ಲೂ ಐದಾರು ವರ್ಷಗಳ ಈಚೆಗೆ ಹೆಣ್ಣುಗಳೇ ಇಲ್ಲವೇನೋ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅದರಲ್ಲೂ ಅಳಿದುಳಿದ ಹೆಣ್ಣು ಮಕ್ಕಳನ್ನು ನಗರ ಪ್ರದೇಶದಲ್ಲಿ ವಾಸವಾಗಿರುವ ಹುಡುಗರು ಹಾಗೂ ಸರ್ಕಾರಿ ಕೆಲಸದಲ್ಲಿ ಇರುವ ಜನರು ಮದುವೆ ಆಗುತ್ತಿದ್ದಾರೆ. ಹೀಗಾಗಿ ರೈತರ ಮಕ್ಕಳ ಪಾಡು ಹೇಳ ತೀರದಾಗಿದೆ. ಸರ್ಕಾರಕ್ಕೂ ಗಂಡು ಮಕ್ಕಳು ಮನವಿ ಕೊಟ್ಟಿದ್ದಾರೆ.

ದಯಮಾಡಿ ನಮಗೂ ಮದುವೆ ಮಾಡಿಸಿ..!

ನಮ್ಮನ್ನ ಮದುವೆ ಆಗೋಕೆ ಯಾರೂ ಮುಂದೆ ಬರ್ತಿಲ್ಲ, ನಮಗೆ ಮದುವೆ ಮಾಡಿಸಿ ಎಂದು ಯುವ ರೈತರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಹೀಗೊಂದು ಮನವಿ ತುಮಕೂರು ಜಿಲ್ಲಾಧಿಕಾರಿಗಳಿಗೆ ತಲುಪಿದೆ. ನಮ್ಮ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಲಾಗಿದೆ. ನಾವು ರೈತರಾಗಿ ಇರುವ ಕಾರಣ ನಮಗೆ ಎಲ್ಲೂ ವಧು ಸಿಗುತ್ತಿಲ್ಲ. ರೈತ ಯುವಕರನ್ನ ಮದುವೆಯಾಗಲು ಹೆಣ್ಣು ಮಕ್ಕಳು ಮುಂದೆ ಬರುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ನಮ್ಮ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಿ ಎಂದು ಕೋರಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಲಕ್ಮಗೊಂಡನಹಳ್ಳಿ, ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದ ರೈತ ಯುವಕರು ಪತ್ರ ಬರೆದು ಸಹಿ ಮಾಡಿ ಕಳುಹಿಸಿದ್ದಾರೆ. ಆದರೆ ಈ ಸಮಸ್ಯೆಗೆ ಅವರ ಪೋಷಕರೇ ಆಗಿದ್ದಾರೆ.

Read this;

ಹೆಣ್ಣು ಮಕ್ಕಳು ಸಿಗದೆ ಇರುವುದಕ್ಕೆ ಕಾರಣವೇ ಇದು..!

ಕಳೆದ 10 ರಿಂದ 15 ವರ್ಷಗಳ ಹಿಂದೆ ಹೆಣ್ಣು ಭ್ರೂಣ ಹತ್ಯೆ ಅಧಿಕವಾಗಿತ್ತು. ಬಹುತೇಕ ದಂಪತಿ ಗಂಡು ಮಗುವಿನ ಮೇಲಿನ ಆಸೆಯಿಂದ ಗರ್ಭದಲ್ಲೇ ಲಿಂಗಪತ್ತೆ ಮಾಡಿಸುವ ಮೂಲಕ ಹೆಣ್ಣು ಭ್ರೂಣವನ್ನು ಗರ್ಭಪಾತ ಮಾಡಿಸುತ್ತಿದ್ದರು. ಇದರ ಬಗ್ಗೆ ಸರ್ಕಾರ ಸಾಕಷ್ಟು ಜಾಗೃತಿ ಮೂಡಿಸಿದರೂ ಪ್ರಯೋಜನಕ್ಕೆ ಬಂದಿರಲಿಲ್ಲ. ಆ ನಂತರ ಕಠಿಣ ಕಾನೂನು ರೂಪಿಸಿದ ಬಳಿಕ ಇತ್ತೀಚಿನ ದಿನಗಳಲ್ಲಿ ಭ್ರೂಣ ಹತ್ಯೆ ನಿಯಂತ್ರಣಕ್ಕೆ ಬಂದಿದೆ ಎನ್ನಬಹುದು. ಗಂಡು ಮಕ್ಕಳ ಆಸೆಯಿಂದ ಹೆಣ್ಣುಮಕ್ಕಳ ಭ್ರೂಣವನ್ನೇ ಹತ ಮಾಡಿದ್ದರ ಪರಿಣಾಮವೇ ಈಗ ಹೆಣ್ಣುಗಳ ಅಭಾವಕ್ಕೆ ಕಾರಣ ಎನ್ನುತ್ತಾರೆ ಹಿರಿಯರು. ಇನ್ನೂ ನಗರ ಪ್ರದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡಿದ್ದರೂ ಹಳ್ಳಿ ಪ್ರದೇಶದ ಹೆಣ್ಣು ಮಕ್ಕಳನ್ನು ನಗರಕ್ಕೆ ಸೇರಿಸುವ ಮನಸ್ಸು ಮಾಡುತ್ತಿರುವ ಕಾರಣ ರೈತರ ಮಕ್ಕಳಿಗೆ ಹೆಣ್ಣು ಸಿಗದಂತಾಗಿದೆ.

Read this;

ಅಂದಿನ ಭ್ರೂಣ ಹತ್ಯೆ ಅನಾಹುತಗಳು ಯಾವುವು..?

ಅಂದು ಹೆಣ್ಣು ಮಕ್ಕಳನ್ನು ನಿರ್ಲಕ್ಷಿಸಿ ಗಂಡು ಮಕ್ಕಳನ್ನು ಪಡೆದವರಿಗೆ ಹೆಣ್ಣು ಮಕ್ಕಳನ್ನು ಹುಡುಕುವುದು ದೊಡ್ಡ ಸಮಸ್ಯೆ ಆಗಿದೆ. ಅದೆಷ್ಟೋ ಗಂಡು ಮಕ್ಕಳು ಮದುವೆ ಇಲ್ಲದೆ ಜೀವನ ಕಳೆಯುವ ಪರಿಸ್ಥಿತಿ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಎಲ್ಲಾ ಕಡೆಗೂ ಹೆಚ್ಚಾಗುತ್ತಿರುವುದೂ ಇದೇ ಕಾರಣದಿಂದ ಎನ್ನಬಹುದು. ಮದುವೆಯಾಗಿರುವ ಮಹಿಳೆಯರನ್ನು ಕರೆದೊಯ್ಯುವುದು, ಮದುವೆಯಾದ ಮಹಿಳೆ ಗಂಡ ಮಕ್ಕಳನ್ನು ಬಿಟ್ಟು ಬೇರೊಬ್ಬ ಯುವಕನ ಆಕರ್ಷಣೆಗೆ ಒಳಗಾಗುವುದು ಸರ್ವೇ ಸಾಮಾನ್ಯವಾಗುತ್ತಿದೆ. ಅದೆಷ್ಟೋ ಸಂಸಾರದಲ್ಲಿ ಬಿರುಕು ಬಿಟ್ಟು ಕೌಟುಂಬಿಕ ಕಲಹಗಳಿಗೆ ಕಾರಣವಾಗುತ್ತಿವೆ. ಗಂಡು ಮಕ್ಕಳ ಮೇಲಿನ ಆಸೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿ ಆಗಿದೆ. ಈಗಾಗಲೇ ಹಳ್ಳಿ ಯುವಕರು ಮದುವೆ ಆಗುವ ಉದ್ದೇಶದಿಂದಲೇ ಕೃಷಿ ತೊರೆದು ಸಣ್ಣ ಪುಟ್ಟ ಕೆಲಸ ಮಾಡುವ ಉದ್ದೇಶದಿಂದ ನಗರ, ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಇನ್ನೂ ರೈತರ ಮಕ್ಕಳಿಗೆ ಹೆಣ್ಣು ಸಿಗದೆ ಇದೇ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಮುಂದುವರಿದರೆ ಹಳ್ಳಿಗಳು ಹಳ್ಳದಲ್ಲಿ ಸಮಾಧಿ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ ಎಂದರೆ ತಪ್ಪಾಗಲಾರದು

Related Posts

Don't Miss it !