ಬೆಂಗಳೂರು ಅಂದಕ್ಕೆ ಕೊನೆಯಲ್ಲಿ ಕಪ್ಪು ಚುಕ್ಕೆ ಇಟ್ಟ ಯಡಿಯೂರಪ್ಪ..!

ಮುಖ್ಯಮಂತ್ರಿ ಸ್ಥಾನದಿಂದ ಇಳಿದಿರುವ ಬಿ,ಎಸ್​ ಯಡಿಯೂರಪ್ಪ ಕೊನೇ ಕ್ಷಣದಲ್ಲಿ ಬೆಂಗಳೂರಿನ ಅಂದಕ್ಕೆ ಕಪ್ಪು ಚುಕ್ಕಿ ಯಾಕೆ ಇಟ್ಟರು ಎನ್ನುವ ಪ್ರಶ್ನಾರ್ಥಕ ಚಿಹ್ನೆ ಬೆಂಗಳೂರಿನ ನಿವಾಸಿಗಳನ್ನು ಕಾಡುವುದಕ್ಕೆ ಶುರುವಾಗಿದೆ. ವಿಧಾನಸೌಧದ ಮೂರನೇ ಮಹಡಿಯ ಅಧಿಕಾರದಿಂದ ಇಳಿಯುವ ಮುನ್ನ ಬೆಂಗಳೂರಿನಲ್ಲಿ ಜಾಹಿರಾತು ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ. ಬಿಬಿಎಂಪಿ 2019ರಲ್ಲಿ ಜಾರಿ ಮಾಡಿದ್ದ ಜಾಹಿರಾತು ನಿಯಮ ಈ ಮೂಲಕ ನಿಷ್ಕ್ರಿಯವಾಗಿದೆ. ಅಂದರೆ ಬೆಂಗಳೂರಿನಲ್ಲಿ ವಾಣಿಜ್ಯ ಜಾಹಿರಾತು ಪ್ರದರ್ಶನಕ್ಕೆ ಒಪ್ಪಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಇನ್ಮುಂದೆ ಜಾಹಿರಾತು ರಾರಾಜಿಸಲಿವೆ.

ಮೂರು ವರ್ಷಕ್ಕೆ ಒಮ್ಮೆ ಲೈಸೆನ್ಸ್​ ನವೀಕರಣ..!

ಹೊಸ ನಿಯಮದ ಪ್ರಕಾರ ಜಾಹಿರಾತು ಕಂಪನಿಗಳು ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು. ಪರವಾನಗಿಯನ್ನು ಮೂರು ವರ್ಷಕ್ಕೊಮ್ಮೆ ನವೀಕರಣ ಮಾಡಿಸಿಕೊಳ್ಳಬೇಕು. ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಮೂರು ವರ್ಷಗಳ ಅವಧಿಯ ಪರವಾನಗಿಗೆ 50 ಸಾವಿರ ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಖಾಸಗಿ ನಿವೇಶನ, ಖಾಸಗಿ ಕಟ್ಟಡ ಅಥವಾ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಒಡೆತನದ ಜಾಗದಲ್ಲಿ ಜಾಹಿರಾತು ಪ್ರದರ್ಶಿಸಲು ಆ ಸಂಸ್ಥೆ ಅಥವಾ ಮಾಲೀಕರಿಂದ ನಿರಾಕ್ಷೇಪಣಾ (NOC ) ಪ್ರಮಾಣಪತ್ರ ಪಡೆದಿರುವುದು ಕಡ್ಡಾಯ ಮಾಡಲಾಗಿದೆ. ನಿರಾಪೇಕ್ಷಣ ಪತ್ರ ಪಡೆಯದಿದ್ದಲ್ಲಿ ಶೇಕಡ 150 ರಷ್ಟು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

ಬಿಬಿಎಂಪಿ ಮಾಡಿದ್ದ ಕಾನೂನು ನಿಷ್ಕ್ರಿಯ..!

ಸರ್ಕಾರದ ಆದೇಶದಿಂದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಇರುಸು ಮುರುಸು ತಂದಂತಾಗಿದೆ. ಬಿಬಿಎಂಪಿ ಜಾರಿ ಮಾಡಿದ್ದ ಜಾಹಿರಾತು ನೀತಿ ಬಿ.ಎಸ್​ ಯಡಿಯೂರಪ್ಪ ಅವರ ಆದೇಶದಿಂದ ಅನೂರ್ಜಿತವಾಗಿದೆ. ಆದರೂ ನಗರಾಭಿವೃದ್ಧಿ ಇಲಾಖೆ ಅನುಮತಿ ಕೊಟ್ಟರೂ ಜಾಹಿರಾತು ಅಳವಡಿಸಲು ಬಿಬಿಎಂಪಿ ಆಯುಕ್ತರ ಒಪ್ಪಿಗೆ ಅನಿವಾರ್ಯ. ಪಾಲಿಕೆ ಪರವಾನಿಗೆ ಇಲ್ಲದೆ ಹೋರ್ಡಿಂಗ್ಸ್ ಅಥವಾ ಜಾಹಿರಾತು ಪ್ರದರ್ಶನ ಅಸಾಧ್ಯ. ಹೀಗಾಗಿ ಸರ್ಕಾರ ಅನುಮೋದನೆ ಮಾಡಿರುವ ನಿಯಮಗಳಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಿದ ಬಳಿಕ ನಗರದ ಸೌಂದರ್ಯಕ್ಕೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಬಿಎಂಪಿ ‌ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

ಈ ಸ್ಥಳಗಳಲ್ಲಿ ಜಾಹಿರಾತು ಹಾಕುವಂತಿಲ್ಲ..!

ಹೊಸ ನಿಯಮದ ಪ್ರಕಾರ ಬೆಂಗಳೂರಿನ ಕುಮಾರಕೃಪಾ ರಸ್ತೆ, ವಿಂಡ್ಸರ್ ಮ್ಯಾನರ್, ಶಿವಾನಂದ ಸರ್ಕಲ್​, ರಾಜಭವನ ರಸ್ತೆ, ಹೈಗ್ರೌಂಡ್ಸ್​ನಿಂದ ಮಿನ್ಸ್ಕ್ ಚೌಕ್​, ಸ್ಯಾಂಕಿ ಟ್ಯಾಂಕ್​ ರಸ್ತೆ, ಹೈಗ್ರೌಂಡ್ಸ್​ನಿಂದ ವಿಂಡ್ಸರ್‌ ಮ್ಯಾನರ್​ ಸಿಗ್ನಲ್, ಅಂಬೇಡ್ಕರ್ ವೀದಿ, ಕೆ.ಆರ್ ಸರ್ಕಲ್​ನಿಂದ ಇನ್​ಫೆಂಟ್ರಿ ರಸ್ತೆ, ಅಂಚೆ ಕಚೇರಿ ರಸ್ತೆ, ಕೆ.ಆರ್ ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತ, ಚಾಲುಕ್ಯ ಸರ್ಕಲ್​, ಮಹಾರಾಣಿ ಕಾಲೇಜು ರಸ್ತೆ, ಕೆ.ಆರ್ ಸರ್ಕಲ್​, ಕಬ್ಬನ್ ಪಾರ್ಕ್, ಲಾಲ್ ಬಾಗ್, ನೃಪತುಂಗ ರಸ್ತೆ, ವಿಧಾನ ಸೌಧ ಸುತ್ತಮುತ್ತಲ ಪ್ರದೇಶದಲ್ಲಿ ಜಾಹಿರಾತು ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಬೆಂಗಳೂರು ‌ನಗರದ ಅಂದ, ಚೆಂದಕ್ಕೆ ಧಕ್ಕೆಯಾಗದಂತೆ ಜಾಹಿರಾತು ಫಲಕ ಪ್ರದರ್ಶನ ಮಾಡಬೇಕು ಎನ್ನುವ ನಿಯಮ ಹಾಕಲಾಗಿದೆ.

ಕಿಕ್​ಬ್ಯಾಕ್​ ಬಂದಿದ್ಯಾ..? ಅಂದವಂತು ಕೆಡುತ್ತೆ..!

ಬೆಂಗಳೂರಿನಲ್ಲಿ ಜಾಹಿರಾತು ಬೆಂಗಳೂರಿನ ಅಂದಕ್ಕೆ ಮಾರಕವಾಗಿದೆ ಎನ್ನುವ ಕಾರಣಕ್ಕೇ ನಿಷೇಧ ಮಾಡಲಾಗಿತ್ತು. ಆದರೆ ಜಾಹಿರಾತು ಮಾಫಿಯಾ ಅಂದಿನಿಂದಲೂ ಸರ್ಕಾರದ ಮೇಲೆ ಒತ್ತಡ ಹಾಕುತ್ತಲೇ ಸಾಗಿತ್ತು ಎನ್ನುವುದು ಎಲ್ಲರಿಗೂ ತಿಳಿದಿದ್ದ ಸಂಗತಿಯೇ ಆಗಿತ್ತು. ಹೈಕೋರ್ಟ್​ ಕೂಡ ನಗರದ ಅಂದಕ್ಕೆ ಜಾಹಿರಾತು ಮಾರಕ ಎನ್ನುವುದನ್ನು ಒತ್ತಿ ಹೇಳಿತ್ತು. ಆದರೆ ಇದೀಗ ಅಧಿಕಾರದಿಂದ ಕೆಳಕ್ಕೆ ಇಳಿಯುವ ಕೆಲವೇ ದಿನಗಳು ಎಂಬುದು ಗೊತ್ತಾಗುತ್ತಿದ್ದ ಹಾಗೆ ಬಿ.ಎಸ್​ ಯಡಿಯೂರಪ್ಪ ಜಾಹಿರಾತು ಪ್ರದರ್ಶನಕ್ಕೆ ಅನುಮತಿ ನೀಡಿದ್ದಾರೆ. ಈ ಆದೇಶದಿಂದ ಯಾರಿಗೆ ಲಾಭ ಆಗಿದ್ಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಆದೇಶ ನಗರದ ಅಂದಕ್ಕೆ ಕಪ್ಪು ಚುಕ್ಕೆ ಎಂದರೆ ತಪ್ಪಗಾಲಾರದು.

Related Posts

Don't Miss it !