ಯಡಿಯೂರಪ್ಪನವರೇ BJP ಕಾರ್ಯಕರ್ತನದ್ದು ಮಾತ್ರ ಜೀವವೇ..? ಯಾಕೀ ತಾರತಮ್ಯ..?

ಬಿ.ಎಸ್​ ಯಡಿಯೂರಪ್ಪ ಶುಕ್ರವಾರ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಅಭಿಮಾನಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಆಗಮಿಸುತ್ತಿದ್ದಾರೆ. ಮೃತ ರವಿ ಮನೆಗೆ ಭೇಟಿ ನೀಡಲಿರುವ ಯಡಿಯೂರಪ್ಪ, ರವಿ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಯುವಕ ರವಿ ಯಡಿಯೂರಪ್ಪ ಸಿಎಂ ಸ್ಥಾನ ತೊರೆದ ದಿನ ಆತ್ಮಹತ್ಯೆಗೆ ಶರಣಾಗಿದ್ದನು.

ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ನಾಳೆ ಬೆಳಗ್ಗೆ 10 ಗಂಟೆಗೆ ಗುಂಡ್ಲುಪೇಟೆಗೆ ಆಗಮಿಸಲಿರುವ ಯಡಿಯೂರಪ್ಪರನ್ನು ಬೈಕ್ ಱಲಿ ಮೂಲಕ ಬಿಜೆಪಿ ಕಾರ್ಯಕರ್ತರು ಬೊಮ್ಮಲಾಪುರ ಗ್ರಾಮಕ್ಕೆ ಕರೆದೊಯ್ಯಲಿದ್ದಾರೆ. ಅಭಿಮಾನಿ ಸಾವನಪ್ಪಿದ ವೇಳೆ ಕುಟುಂಬಸ್ಥರ ಜೊತೆಗೆ ಮಾತನಾಡಿದ್ದ ಯಡಿಯೂರಪ್ಪ, ಶೀಘ್ರದಲ್ಲೇ ಮನೆಗೆ ಬಂದು ಭೇಟಿ ಮಾಡ್ತೇನೆ ಎಂದಿದ್ದರು. ಇದೀಗ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ. ಆದರೆ ಯಡಿಯೂರಪ್ಪ ತೆಗೆದುಕೊಂಡಿರುವ ಇಬ್ಬಗೆಯ ನಿಲುವು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಮೃತ ರವಿ (35)

ಅಭಿಮಾನಿ ಸಾವಿಗೆ ಗೌರವ, ಜನಸಾಮಾನ್ಯರಿಗೆ ಯಾಕಿಲ್ಲ..?

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳುವುದು ಸರಿ. ಧನ ಸಹಾಯ ನೀಡಿದರೂ ಸಮಸ್ಯೆ ಏನಿಲ್ಲ. ಆದರೆ ತಮ್ಮದೇ ಸರ್ಕಾರದ ತಪ್ಪಿನಿಂದ ಚಾಮರಾಜನಗರದಲ್ಲಿ ಒಂದೇ ದಿನ 36 ಜನರು ಸಾವನ್ನಪ್ಪಿದ್ದರು. ಅವರನ್ನು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಸಂಕಷ್ಟ ಕೇಳಲಿಲ್ಲ. ಆ ಕುಟುಂಬಸ್ಥರ ಜೊತೆಗೆ ಮಾತನಾಡಿ ಸಾಂತ್ವನ ಹೇಳಲಿಲ್ಲ. ಒಬ್ಬ ಜನನಾಯಕ ಆದವನು ತನ್ನ ಅಭಿಮಾನಿಗಳಿಗೆ ಒಂದು ನ್ಯಾಯ, ಜನ ಸಾಮಾನ್ಯ ಜನರಿಗೆ ಒಂದು ನ್ಯಾಯ ಮಾಡುವುದು ಸರಿಯೇ ಎನ್ನುವುದನ್ನು ಮಾನ್ಯ ಯಡಿಯೂರಪ್ಪ ಚಿಂತಿಸಬೇಕಿದೆ.

ಆಕ್ಸಿಜನ್​ ಇಲ್ಲದೆ ಸಾವನ್ನಪ್ಪಿದ್ದರು 36 ಜನ..!

ಮೇ 2, 2021ರ ರಾತ್ರಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್​ ಖಾಲಿಯಾಗಿ ಒಬ್ಬರಾದ ಮೇಲೆ ಒಬ್ಬರಂತೆ ಬೆಳಗಾಗುವ ವೇಳೆಗೆ 36 ಜನರು ಸಾವನ್ನಪ್ಪಿದ್ದರು. ಅಂದು ಸಿಎಂ ಆಗಿದ್ದ ಯಡಿಯೂರಪ್ಪ ಮೂಢನಂಬಿಕೆಗೆ ಜೋತು ಬಿದ್ದು ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಕ್ಷುಲ್ಲಕ ವಿಚಾರಕ್ಕಾಗಿ ಜವಾಬ್ದಾರಿ ಸ್ಥಾನದಲ್ಲಿ ಇದ್ದರೂ ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಮೂಢನಂಬಿಕೆಗೆ ಅಂಟಿಕೊಂಡರೂ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಈಗ ಅಧಿಕಾರ ಹೋಗಿದೆ. ಈಗಲಾದರೂ ಆ ನತದೃಷ್ಟ 36 ಜನರ ಕುಟುಂಬಕ್ಕೆ ಸಾಂತ್ವನ ಹೇಳಬಹುದು. ಆದರೆ ಈಗಲೂ ಚಾಮರಾಜನಗರಕ್ಕೆ ಭೇಟಿ ನೀಡದೆ ಕೇವಲ ಗುಂಡ್ಲುಪೇಟೆಯ ಕಾರ್ಯಕರ್ತನ ಮನೆಗೆ ಭೇಟಿ ನೀಡಿ ವಾಪಸ್​ ಆಗ್ತಿದ್ದಾರೆ.

ಚಾಮರಾಜನಗರಕ್ಕೆ ಬರಬೇಕಿದ್ದ ಕೇಡು ತಪ್ಪಿತ್ತು..!

ಮೇ 2 ರಂದು ಆ ಘಟನೆ ನಡೆದ ಬಳಿಕ ಯಡಿಯೂರಪ್ಪ ಭೇಟಿ ನೀಡಿದ್ದರೆ..! ಮೂಢನಂಬಿಕೆ ಇನ್ನೂ ಗಟ್ಟಿಯಾಗಿ ಉಳಿದುಕೊಳ್ತಿತ್ತು. ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಕಾರಣಕ್ಕೇ ಯಡಿಯೂರಪ್ಪ ಅಧಿಕಾರದಿಂದ ಇಳಿಯಬೇಕಾಯ್ತು ಎಂದು ಹೇಳುತ್ತಿದ್ದರು. ಚಾಮರಾಜನಗರಕ್ಕೆ ಅಂಟಿಕೊಂಡಿದ್ದ ಶಾಪ ಇನ್ನೂ ಗಟ್ಟಿಯಾಗ್ತಿತ್ತು. ಆದ್ರೆ ಚಾಮರಾಜನಗರಕ್ಕೆ ಭೇಟಿ ನೀಡದೆ ಅಧಿಕಾರ ಕಳೆದುಕೊಂಡಿದ್ದಾರೆ. ಚಾಮರಾಜನಗರಕ್ಕೆ ಸಾಕಷ್ಟು ಸಲ ಭೇಟಿ ನೀಡಿ ಸಿದ್ದರಾಮಯ್ಯ 5 ವರ್ಷ ಅಧಿಕಾರ ಪೂರೈಸಿದ್ದಾರೆ. ಈಗಲಾದರೂ ತಮ್ಮ ಮೂಢನಂಬಿಕೆನ್ನು ಬದಿಗಿಟ್ಟು, ಜನಸಾಮಾನ್ಯರ ಬಗೆಗಿನ ನಿರ್ಲಕ್ಷ್ಯವನ್ನು ಕಡಿಮೆ ಮಾಡಿಕೊಳ್ಳಲಿ. ಆಗಿರುವ ತಪ್ಪನ್ನು ತಿದ್ದಿಕೊಳ್ಳಲು ಶುಕ್ರವಾರ ಅವಕಾಶವಿದೆ. ನಾಳೆ ಕಾರ್ಯಕರ್ತನನ್ನು ಭೇಟಿ ಮಾಡಿ ವಾಪಸ್​ ಬರುವ ಬದಲು 36 ಜನರ ಕುಟುಂಬಸ್ಥರನ್ನೂ ಭೇಟಿ ಮಾಡಬಹುದು. ಆದರೆ ಕಾರ್ಯಕರ್ತನನ್ನು ಭೇಟಿ ವಾಪಸ್​ ಆದರೆ ಜನಸಾಮಾನ್ಯರ ಬಗ್ಗೆ ಇರುವ ನಿರ್ಲಕ್ಷ್ಯ ಜಗಜ್ಜಾಹೀರು ಆಗಲಿದೆ.

Related Posts

Don't Miss it !