ಅಧಿಕಾರ ತ್ಯಜಿಸಲು ಬಿಎಸ್​ವೈ ತಯಾರಿ ಜೊತೆಗೆ ಉಳಿಸಿಕೊಳ್ಳಲು ಅಂತಿಮ ಕಸರತ್ತು..!?

ಮುಖ್ಯಮಂತ್ರಿ ಬದಲಾವಣೆ ಖಚಿತ ಎನ್ನುತ್ತಿದೆ ಬಿಜೆಪಿ ಮೂಲಗಳು. ಈ ನಡುವೆ ದೆಹಲಿ ಪ್ರವಾಸ ಹಾಗೂ ದೆಹಲಿಯಿಂದ ವಾಪಸ್​ ಬಂದ ಬಳಿಕ ಸಿಎಂ ಯಡಿಯೂರಪ್ಪ, ಅಧಿಕಾರ ಬದಲಾವಣೆ ಬಗ್ಗೆ ಹೈಕಮಾಂಡ್​ ನಾಯಕರು ನನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದಿದ್ದರು. ಒಂದು ವೇಳೆ ಹೈಕಮಾಂಡ್​ ನಾಯಕರು ಹೇಳಿದರೆ ಸಿಎಂ ಸ್ಥಾನ ಬಿಡಲು ನಾನು ಸಿದ್ಧ ಎಂದೂ ಹೇಳಿದ್ದರು. ಆ ಬಳಿಕ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಸಿಎಂ ಯಡಿಯೂರಪ್ಪ ಅವರನ್ನು ಬೆಂಬಲಿಸಿ ಕಾಂಗ್ರೆಸ್​ ನಾಯಕರು ಮಾತನಾಡುತ್ತಿದ್ದಾರೆ. ಹತ್ತಾರು ಸ್ವಾಮೀಜಿಗಳು ಬಂದು ಭೇಟಿ ನೀಡುತ್ತಿದ್ದಾರೆ. ಆದರೂ ಸಿಎಂ ಯಡಿಯೂರಪ್ಪ ಅಧಿಕಾರ ಬದಲಾವಣೆ ನಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡುವ ಗೋಜಿಗೆ ಹೋಗಿಲ್ಲ.

ಅಧಿಕಾರದಿಂದ ಕೆಳಗಿಳಿಯಲು ಸಿದ್ಧತೆ..!

ಜುಲೈ 26ಕ್ಕೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ಪೂರ್ಣವಾಗಲಿದೆ. ಬಿ.ಎಸ್​ ಯಡಿಯೂರಪ್ಪ ಮುಖ್ಯಮಂತ್ರಿ 2 ವರ್ಷ ಪೂರೈಸಿದ ಬಳಿಕ ಅಧಿಕಾರ ಹಸ್ತಾಂತರಕ್ಕೆ ಪ್ರಕ್ರಿಯೆ ಶುರುವಾಗಲಿದೆ ಎನ್ನಲಾಗಿದೆ. ಈ ಮುನ್ಸೂಚನೆ ಸಿಎಂ ಯಡಿಯೂರಪ್ಪ ಅವರಿಗೂ ಸಿಕ್ಕಿದ್ದು, ಅಧಿಕಾರದಿಂದ ಕೆಳಕ್ಕೆ ಇಳಿಯಲು ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ರಾಜ್ಯ ಮುಖ್ಯ ಕಾರ್ಯದರ್ಶಿ ಕಚೇರಿಗೆ ಮೌಖಿಕ ಸಂದೇಶ ರವಾನೆ ಮಾಡಿದ್ದು, ಜುಲೈ 26ರ ಒಳಗಾಗಿ ಪ್ರಮುಖ ಕೆಲಸಗಳ ಫೈಲ್​ಗಳನ್ನು ವಿಲೇವಾರಿ ಮಾಡಬೇಕು ಎಂದು ತಿಳಿಸಲಾಗಿದೆ ಎನ್ನಲಾಗಿದೆ.

ಸ್ವಾಮೀಜಿಗಳ ಮೂಲಕ ಅಂತಿಮ ಕಸರತ್ತು..!

ಬಿ.ಎಸ್​ ಯಡಿಯೂರಪ್ಪ ಅವರಿಗೆ ಪ್ರಮುಖ ಶಕ್ತಿ ಎಂದರೆ ನಾಡಿನ ಮಠಾಧೀಶರುಗಳು. ಅಧಿಕಾರಕ್ಕೆ ಬಂದ ವೇಳೆ ಮಠ ಮಾನ್ಯಗಳಿಗೆ ಅನುದಾನ ನೀಡುವ ಮೂಲಕ ಮಠಾಧೀಶರ ಮೆಚ್ಚುಗೆಗೆ ಯಡಿಯೂರಪ್ಪ ಕಾರಣರಾಗಿದ್ದಾರೆ. ಇದೀಗ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುತ್ತಾರೆ ಎನ್ನುವ ವಿಚಾರ ಖಚಿತವಾಗುತ್ತಿದ್ದ ಹಾಗೆ 35ಕ್ಕೂ ಹೆಚ್ಚು ಸ್ವಾಮೀಜಿಗಳು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಇಲ್ಲ ಎಂದರೂ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಭೇಟಿ ಮಾಡಿದ್ದಾರೆ.

ಕಾಂಗ್ರೆಸ್​ ಬಹಿರಂಗ, ಬಿಜೆಪಿ ಅಂತರಂಗ..!

ಸಿಎಂ ಯಡಿಯೂರಪ್ಪ ಬದಲಾವಣೆಗೆ ಲಿಂಗಾಯತ ಸಮುದಾಯದ ವಿರೋಧ ಇದೆ ಎಂದಿರುವ ಅಭಿನವ ಸ್ವಾಮೀಜಿ, ಸರ್ಕಾರ ರಚನೆಯಲ್ಲಿ ಸಿಎಂ ಯಡಿಯೂರಪ್ಪ ಪಾತ್ರ ದೊಡ್ಡದಿದೆ. ಇಳಿ ವಯಸ್ಸಿನಲ್ಲೂ ಯಡಿಯೂರಪ್ಪ ಯುವಕರು ನಾಚುವಂತೆ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಲಿಂಗಾಯತ ಸಮಾಜವನ್ನು ಒಡೆಯಲು ಕಾಂಗ್ರೆಸ್​ ಹುನ್ನಾರ ಮಾಡಿತ್ತು. ಕಾಂಗ್ರೆಸ್​ ಬಹಿರಂಗವಾಗಿ ಸಮಾಜವನ್ನು ಒಡೆಯಲು ಮುಂದಾಗಿತ್ತು. ಇದೀಗ ಬಿಜೆಪಿ ಒಳಗಿಂದಲೇ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ದೂರಿದ್ದಾರೆ.

ಯಡಿಯೂರಪ್ಪ ಅಧಿಕಾರದಿಂದ ಇಳಿಯಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಆದರೆ ಅಧಿಕಾರದಿಂದ ಇಳಿಯುವ ಮುನ್ನ ಎಷ್ಟು ಲಾಭವಾಗುತ್ತದೆಯೋ ಅಷ್ಟನ್ನು ಪಡೆದುಕೊಳ್ಳುವ ಮನಸ್ತಿತಿಯಲ್ಲಿ ಇದ್ದಾರೆ. ಆದರೂ ಅಧಿಕಾರ ಉಳಿದರೆ ಉಳಿಯಲಿ ಎನ್ನುವಂತೆ ಆಪ್ಗತರ ಮೂಲಕ ಸ್ವಾಮೀಜಿಗಳನ್ನು ಭೇಟಿ ಮಾಡಿಸಿ, ಇದೀಗ ಬಹಿರಂಗವಾಗಿ ಸ್ವಾಮೀಜಿಗಳು ಬೆಂಬಲಿಸುವಂತೆ ಮಾಡಿದ್ದಾರೆ. ಇದೀಗ ಬಿಜೆಪಿ ಹೈಕಮಾಂಡ್​ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

Related Posts

Don't Miss it !