ಸಿಎಂ ಯಡಿಯೂರಪ್ಪಗೆ ಪಕ್ಷದಲ್ಲಿ ಬಲವಿಲ್ಲ, ಕಾಂಗ್ರೆಸ್​ನಲ್ಲಿ ಭಾರೀ ಬಲ..!

ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡ್ತಾರೆ ಎನ್ನುವ ಸುದ್ದಿ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಲೇ ಸಾಗಿದೆ. ಜುಲೈ 26ಕ್ಕೆ ಯಡಿಯೂರಪ್ಪ ಸಿಎಂ ಆಗಿ 2 ವರ್ಷ ಪೂರೈಸಲಿದ್ದು, ಆ ಬಳಿಕ ಅಧಿಕಾರದಿಂದ ಇಳಿಯುವುದು ಖಚಿತ ಎನ್ನಲಾಗ್ತಿದೆ. ಇದರ ಬೆನ್ನಲ್ಲೇ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಮಾತನಾಡಿದ್ದಾರೆ ಎನ್ನುವ ಆಡಿಯೋ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಇದರ ಬೆನ್ನಲ್ಲೇ ಲಿಂಗಾಯತ ಸಮುದಾಯದ ಕಾಂಗ್ರೆಸ್​ ನಾಯಕರು ಸಿಎಂ ಯಡಿಯೂರಪ್ಪ ಪರವಾಗಿ ಬ್ಯಾಟಿಂಗ್​ ಮಾಡಿದ್ದಾರೆ. ಕಾಂಗ್ರೆಸ್​ ಪಕ್ಷದ ಪರವಾಗಿ ಅಲ್ಲದಿದ್ದರೂ ಲಿಂಗಾಯತ ಸಮುದಾಯದ ಪರವಾಗಿ ಯಡಿಯೂರಪ್ಪ ಬೆನ್ನಿಗೆ ನಿಲ್ಲುವ ಕೆಲಸ ಮಾಡಿದ್ದಾರೆ.

ಬಿಜೆಪಿಯಲ್ಲಿ ಬಿಎಸ್​ವೈ ನಡೆಸಿಕೊಳ್ತಿರೋದು ಸರಿಯಲ್ಲ..!

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರ ಕೊಡುಗೆ ಅಪಾರ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರೇ ಕಾರಣ ಎಂದಿರುವ ಎಂ.ಬಿ ಪಾಟೀಲ್​, ಸಿಎಂ ಸ್ಥಾನದಲ್ಲಿ ಯಡಿಯೂರಪ್ಪ ಅವರನ್ನು ಮುಂದುವರಿಸುವುದು ಅಥವಾ ಬದಲಾವಣೆ ಮಾಡುವುದು ಅವರ ಪಕ್ಷಕ್ಕೆ ಸೇರಿದ ವಿಚಾರ. ಆದರೆ ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ ಅವರನ್ನು ನಡೆಸಿಕೊಳ್ತ್ತಿರುವ ರೀತಿ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿಗೆ ಹೋದಾಗ ದೆಹಲಿ ಮಾಧ್ಯಮಗಳಲ್ಲಿ ಸುದ್ದಿ ಮಾಡಿಸಿ ಅವರನ್ನ ವೀಕ್ ಮಾಡುವ ಪ್ರಯತ್ನ ಮಾಡಲಾಯ್ತು. ಇದೀಗ ರಾಜ್ಯದಲ್ಲಿ ಆಡಿಯೋ ಬಿಡುಗಡೆ ಮಾಡಿ ಮತ್ತಷ್ಟು ವೀಕ್ ಮಾಡಲು ಮುಂದಾಗಿದ್ದಾರೆ. ಅವರು ನಮ್ಮ ಸಮುದಾಯದ ನಾಯಕ, ಹಾಗಾಗಿ ನನಗೆ ನೋವಾಗಿದೆ. ನಮ್ಮ ಸಮುದಾಯದ ಜನತೆಗೂ ಸಹ ನೋವಾಗಿದೆ. ಅವರ ಪಕ್ಷದಲ್ಲಿ ಇರೋ ಸಮುದಾಯ ನಾಯಕರು ಅವರ ಪರವಾಗಿ ನಿಂತಿಲ್ಲ. ಅದು ಅವರ ನಿಲುವು ಆಗಿರಬಹುದು. ಇದು ನನ್ನ ನಿಲುವು, ನನ್ನ ಪಕ್ಷದ ನಿಲುವಲ್ಲ ಎಂದಿದ್ದಾರೆ.

ಎಂಬಿ ಪಾಟೀಲ್​ ಬೆನ್ನಲ್ಲೇ ಶಾಮನೂರು – ಸಿಎಂ ಭೇಟಿ..!

ಕಾಂಗ್ರೆಸ್ ನಾಯಕ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಸಿಎಂ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಿಎಂ ಬಿಎಸ್​ ಯಡಿಯೂರಪ್ಪ ಅವರ ಪುತ್ರರಾದ ವಿಜಯೇಂದ್ರ ಮತ್ತು ರಾಘವೇಂದ್ರ ಸಹ ಕಾವೇರಿ ನಿವಾಸದಲ್ಲಿ ಹಾಜರಿದ್ದರು ಎನ್ನಲಾಗಿದೆ. ಸಿಎಂ ಭೇಟಿ ಬಳಿಕ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ಹಿಂದೆ ವೀರಶೈವ ಲಿಂಗಾಯತ ಸಮುದಾಯ ಇದೆ. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದ್ರೆ ಇತಿಹಾಸ ಮುಗೀತು ಎಂದೇ ಅರ್ಥ ಎಂದಿದ್ದಾರೆ. ಕೇಂದ್ರದ ನಾಯಕರು ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಎತ್ತಂಗಡಿ ಮಾಡಿದ್ರೆ ಇತಿಹಾಸ ಮರುಕಳಿಸುತ್ತೆ. ಜೆ. ಹೆಚ್ ಪಟೇಲ್, ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಎಸ್.ಆರ್ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡಿದ ಸಂದರ್ಭದಲ್ಲಿ ಏನಾಗುತ್ತೋ ಮತ್ತೆ ಇತಿಹಾಸ ಮರುಕಳಿಸುತ್ತೆ. ಒಂದು ವೇಳೆ ಸಿಎಂ ಬದಲಾವಣೆಗೆ ಕೈ ಹಾಕಿದ್ರೆ ನಿರ್ನಾಮ ಆಗ್ತಾರೆ ಎಂದು ಎಚ್ಚರಿಸಿದ್ದಾರೆ.

ಲಿಂಗಾಯತ ನಾಯಕ ಪಟ್ಟಕ್ಕಾಗಿ ಫೈಟಿಂಗ್​..?

ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಪರವಾಗಿ ನಿಲ್ಲಬೇಕಿದ್ದ ಬಿಜೆಪಿ ಶಾಸಕರು, ನಾಯಕರು ಸೈಲೆಂಟ್​ ಆಗಿದ್ದಾರೆ. ಆದರೆ ಕಾಂಗ್ರೆಸ್​ ನಾಯಕರು ಸಿಎಂ ಯಡಿಯೂರಪ್ಪ ಪರವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದ್ದಕ್ಕೆ ಕಾರಣ ಎಂದರೆ ಲಿಂಗಾಯತ ಸಮುದಾಯದ ಮೇಲಿನ ಹಿಡಿತ. ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಆಗಿರುವ ಬಿ.ಎಸ್​ ಯಡಿಯೂರಪ್ಪ ವಯಸ್ಸಿನ ಆಧಾರದ ಮೇಲೆ ಸಿಎಂ ಸ್ಥಾನ ತ್ಯಜಿಸುವುದು ಬಹುತೇಕ ಖಚಿತ. ಆ ಬಳಿಕ ಲಿಂಗಾಯತ ಸಮುದಾಯವನ್ನು ಹಿಡಿತಕ್ಕೆ ಪಡೆಯುವ ನಾಯಕ ಪ್ರವರ್ದಮಾನಕ್ಕೆ ಬರುತ್ತಾರೆ. ಅವಕಾಶ ಸಿಕ್ಕರೆ ಸಿಎಂ ಕೂಡ ಆಗುವ ಸಾಧ್ಯತೆ ಹೆಚ್ಚು. ಇದೇ ಕಾರಣದಿಂದ ಮಾಜಿ ಸಚಿವ ಎಂ.ಬಿ ಪಾಟಡೀಲ್​ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಶಾಮನೂರು ಶಿವಶಂಕರಪ್ಪಗೆ ಸಿಎಂ ಸ್ಥಾನದ ಮೇಲೆ ಆಸೆ ಇಲ್ಲದಿದ್ದರೂ ಲಿಂಗಾಯತ ಸಮುದಾಯದ ನಾಯಕನಾಗಿರುವ ಕಾರಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರು ಯಾಕೆ ಸಿಎಂ ಬೆಂಬಲಿಸುತ್ತಿಲ್ಲ..!

ಲಿಂಗಾಯತ ಸಮುದಾಯದ ಬಿಜೆಪಿ ನಾಯಕರು ಬಿ.ಎಸ್​ ಯಡಿಯೂರಪ್ಪ ಬೆನ್ನಿಗೆ ನಿಲ್ಲುವ ಸ್ಥಿತಿಯಲ್ಲಿ ಇಲ್ಲ. ಒಂದು ವೇಳೆ ನಾಯಕತ್ವ ಬದಲಾದರೆ ಬೇರೆ ನಾಯಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ, ಮುಂದೆ ಆಯ್ಕೆಯಾಗುವ ಸಿಎಂ ಸಂಪುಟದಲ್ಲಿ ಸ್ಥಾನ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವುದು ಒಂದು ಕಾರಣವಾದರೆ, ಮತ್ತೊಂದು ಕಾರಣ ಸಿಎಂ ಸ್ಥಾನದ ರೇಸ್​ನಲ್ಲಿ ಓಡಾಡುತ್ತಿರುವುದು. ಸಚಿವ ಮುರುಗೇಶ್​ ನಿರಾಣಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿರುವ ಯಡಿಯೂರಪ್ಪನನ್ನು ಬದಲಾವಣೆ ಮಾಡಿದ್ರೆ, ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಇದೇ ಕಾರಣದಿಂದ ಮತ್ತೋರ್ವ ಲಿಂಗಾಯತ ನಾಯಕನನ್ನೇ ಸಿಎಂ ಮಾಡುವ ಇಂಗಿತ ಹೈಕಮಾಂಡ್​ ನಾಯಕರದ್ದು ಆಗಿದೆ ಎನ್ನಲಾಗಿದೆ. ಹೀಗಾಗಿ ಮುರುಗೇಶ್​ ನಿರಾಣಿ ಸಿಎಂ ಸ್ಥಾನ ಪಡೆಯುವ ಕಸರತ್ತು ನಡೆಸಿದ್ದಾರೆ ಎನ್ನಲಾಗ್ತಿದೆ.

Related Posts

Don't Miss it !