ತಮಿಳುನಾಡಲ್ಲಿ ಹೆದರುವ ಕೇಂದ್ರ.. ಕನ್ನಡಿಗರ ವಿರುದ್ಧ ಧಿಮಾಕು.. ಯಾಕೆ..?

ಕೇಂದ್ರ ಸರ್ಕಾರ ಕರ್ನಾಟಕವನ್ನು ಪ್ರಯೋಗಾಲಯ ಮಾಡಿಕೊಂಡಂತೆ ವರ್ತಿಸುತ್ತಿದೆ. ಕೇಂದ್ರ ಹಾಗು ರಾಜ್ಯ ಎರಡರಲ್ಲೂ ಬಿಜೆಪಿ ಸರ್ಕಾರವಿದ್ದು, ಅಭಿವೃದ್ಧಿಯಲ್ಲಿ ಉಳಿದ ರಾಜ್ಯಗಳಿಗಿಂತಾ ಭಿನ್ನವಾಗಿ ಏನಿಲ್ಲ. ಆದರೆ ತನ್ನ ಪಕ್ಷದ ಅಜೆಂಡಾವನ್ನು ಜಾರಿ ಮಾಡಲು ಕರ್ನಾಟಕವನ್ನು ಕೇಂದ್ರದ ಬಿಜೆಪಿ ನಾಯಕರ ಟೀಂ ಬಳಸಿಕೊಳ್ತಿದ್ಯಾ..? ಅನ್ನೋ ಅನುಮಾನ ಕಾಡುವುದಕ್ಕೆ ಶುರುವಾಗಿದೆ. ಯಾಕಂದ್ರೆ ದೇಶದ ಯಾವುದೇ ಭಾಗದಲ್ಲಿ ವಿರೋಧ ವ್ಯಕ್ತವಾದರೂ ಕರ್ನಾಟಕದಲ್ಲಿ ಮಾತ್ರ ಸುಖಾಸುಮ್ಮನೆ ತನ್ನ ಅಜೆಂಡಾವನ್ನು ಜಾರಿ ಮಾಡುತ್ತದೆ. ಇತ್ತೀಚಿಗೆ ಹಿಂದಿ ಹೇರಿಕೆ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅದರಲ್ಲೂ ದಕ್ಷಿಣ ಭಾರತದಲ್ಲಿ ಜನರು ಕಿಡಿಕಾರಿದ್ದರು. ಆದರೂ ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ಹಿಂದಿ ಹೇರಿಕೆ ಕರ್ನಾಟಕದ ಮಟ್ಟಿಗೆ ನಿಲ್ಲುವ ಲಕ್ಷಣ ಕಾಣಿಸಿಲ್ಲ. ಯಾಕೆಂದ್ರೆ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಹಿಂದಿ ರಾರಾಜಿಸುತ್ತಿತ್ತು.

ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾದ ಕಾರ್ಯಕ್ರಮ..!

ಕೇಂದ್ರ ಗೃಹ ಸಚಿವ ಅಮಿತ್​ ಷಾ ಕರ್ನಾಟಕ ಪ್ರವಾಸದಲ್ಲಿದ್ದು, ನಿನ್ನೆ ಬೆಂಗಳೂರಿನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಸಿಐಐ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ “ಸಂಕಲ್ಪದಿಂದ ಸಿದ್ಧಿ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸ್ಕೃತಿ ಸಚಿವರ ಜೊತೆಗೆ ಅಮಿತ್​ ಷಾ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಕಿಂಚಿತ್ತು ಜಾಗವೇ ಇರಲಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿಗಳು ಮಾಡಿದ ಟ್ವೀಟ್​ಗೆ ಭಾರೀ ಆಕ್ರೋಶ ವ್ಯಕ್ತವಾಯ್ತು. ಕರ್ನಾಟಕದಲ್ಲಿ ಮಾಡಿದ ಕಾರ್ಯಕ್ರಮವೋ ಉತ್ತರ ಭಾರತದಲ್ಲಿ ಮಾಡಿದ ಕಾರ್ಯಕ್ರಮವೋ ಎಂದು ಪ್ರಶ್ನಿಸಿಲಾಯ್ತು. ಅಮಿತ್​ ಷಾ ಅವರು ಈ ಹಿಂದೆ ಶಿವಮೊಗ್ಗದ ಭದ್ರಾವತಿಯಲ್ಲಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲೂ ಹಿಂದಿಗೆ ಮಾತ್ರ ಆದ್ಯತೆ ಕೊಡಲಾಗಿತ್ತು. ಆ ಬಳಿಕ ಅದು ಕೇಂದ್ರ ಸರ್ಕಾರದ ಕಾರ್ಯಕ್ರಮ ಎಂದು ಸಮರ್ಥಿಸಲಾಗಿತ್ತು. ಇದೀಗ ಮತ್ತೆ ಅಮಿತ್​ ಷಾ ಅವರ ಕಾರ್ಯಕ್ರಮದಲ್ಲೇ ಹಿಂದಿಮಯ ಮಾಡಲಾಗಿದೆ. ಆದರೆ ಮೋದಿ ಕಾರ್ಯಕ್ರಮದಲ್ಲಿ ಹಿಂದಿಗೆ ಬ್ರೇಕ್​ ಬಿದ್ದಿದೆ.

ಮೋದಿ ಕಾರ್ಯಕ್ರಮದಲ್ಲಿ ಹಿಂದಿ ಸುಳಿಯಲೇ ಇಲ್ಲ..! ಯಾಕೆ..?

ವಾರದ ಹಿಂದೆ ತಮಿಳುನಾಡಿನ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಚೆಸ್​ ಒಲೆಂಪಿಯಾಡ್​ ಸೇರಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಆದರೆ ಅಲ್ಲೆಲ್ಲೂ ಹಿಂದಿಯ ಸಣ್ಣದೊಂದು ಅಕ್ಷರವೂ ಸುಳಿಯಲು ಸಾಧ್ಯವಾಗಲಿಲ್ಲ. ಅದರಲ್ಲೂ ಮತ್ತೊಂದು ವಿಶೇಷ ಏನೆಂದರೆ ಪ್ರಧಾನಿ ನರೇಂದ್ರ ಮೋದಿ ಕೂಡ ಹಿಂದಿಯಲ್ಲಿ ಭಾಷಣ ಮಾಡಲಿಲ್ಲ. ಇಂಗ್ಲಿಷ್​ನಲ್ಲಿ ಭಾಷಣ ಮಾಡಿದ ಪ್ರಧಾನಿ ನಮೋ ತಮಿಳು ಭಾಷೆಯಲ್ಲಿ ನಮಸ್ಕಾರ ಎಂದು ಹೇಳಿದ್ರು. ಎಲ್ಲಾ ಕಾರ್ಯಕ್ರಮದ ವೇದಿಕೆ ಮೇಲೆ ತಮಿಳು ಅಕ್ಷರಗಳು ರಾರಾಜಿಸುತ್ತಿದ್ದವು. ಅದೇ ಕರ್ನಾಟಕದಲ್ಲಿ ಅಮಿತ್​ ಷಾ ಸೇರಿದಂತೆ ಕಾರ್ಯಕ್ರಮ ಬಿಜೆಪಿ ದೆಹಲಿ ನಾಯಕರ ಕಾರ್ಯಕ್ರಮದಲ್ಲಿ ಹಿಂದಿಗೆ ಪ್ರಧಾನ ಸ್ಥಾನ ನೀಡಲಾಗುತ್ತದೆ. ಇದು ಕೇಂದ್ರದ ಬಿಜೆಪಿ ನಾಯಕರೇ ಸೂಚನೆ ಕೊಟ್ಟು ಹಿಂದಿ ಹೇರಿಕೆ ಮಾಡುತ್ತಿದ್ದಾರೆಯೋ..? ಅಥವಾ ಕರ್ನಾಟಕದ ಬಿಜೆಪಿ ನಾಯಕರು ಮೆಚ್ಚಿಸಲು ಮಾಡುತ್ತಿರುವ ನಾಡದ್ರೋಹ ಕೆಲಸವೋ ಎನ್ನುವ ಜಿಜ್ಞಾಸೆ ಕನ್ನಡಿಗರನ್ನು ಕಾಡುತ್ತಿದೆ.

ತಮಿಳುನಾಡಿನಲ್ಲಿ ಬೆನ್ನು ಬಗ್ಗಿಸಿ ಬಿಜೆಪಿ ನಿಲ್ಲೋದ್ಯಾಕೆ..?

ದ್ರಾವಿಡರ ನಾಡು ತಮಿಳುನಾಡಿನಲ್ಲಿ ಭಾಷಾಭಿಮಾನ ತುಸು ಹೆಚ್ಚು ಎಂದೇ ಹೇಳಬಹುದು. ನೀವು ತಮಿಳುನಾಡಿನಲ್ಲಿ ಹೋಗಿ ವಿಳಾಸ ಕೇಳಿದರೂ ಅವರು ತಮ್ಮ ತಮಿಳು ಭಾಷೆಯಲ್ಲೇ ಉತ್ತರ ಕೊಡುತ್ತಾರೆ. ಆದರೆ ಕನ್ನಡಿಗರು ಯಾವುದೇ ಭಾಷಿಕರಾದರೂ ಅವರಿಗೆ ತಿಳಿಯುವಂತೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳನ್ನು ಹೊರತುಪಡಿಸಿ ರಾಷ್ಟ್ರೀಯ ಪಕ್ಷಗಳನ್ನು ಯಾವುದೇ ಕಾರಣಕ್ಕೂ ಗೆಲ್ಲಿಸುವುದಕ್ಕೆ ಹೋಗುವುದಿಲ್ಲ. ಸ್ವಾಯತ್ತತೆ ಕಾಪಾಡಿಕೊಂಡಿರುವ ತಮಿಳುನಾಡಿನ ಜನರು, ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದರೂ ಎದೆಯುಬ್ಬಿಸಿ ನಿಂತು ಎಲ್ಲಾ ಯೋಜನೆಗಳನ್ನೂ ಜಾರಿಗೆ ತರುತ್ತಾರೆ. ಎಲ್ಲಾ ರಾಜ್ಯಗಳಿಗಿಂತಲೂ ಹೆಚ್ಚಿನ ಅನುದಾನವನ್ನು ಕೊಳ್ಳೆ ಹೊಡೆಯುತ್ತಾರೆ. ಕೇಂದ್ರ ಸರ್ಕಾರದಲ್ಲಿ ಅಧಿಕಾರ ಹಿಡಿಯುವ ಪಕ್ಷವನ್ನು ಬೆಂಬಲಿಸಿ ತಮಗೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವ ಚಾಕಚಕ್ಯತೆ ಪ್ರಾದೇಶಿಕ ಪಕ್ಷಗಳಲ್ಲೂ ಇದೆ. ಇದೇ ಕಾರಣಕ್ಕೆ ತಮಿಳುನಾಡಿನಲ್ಲಿ ಯಾರೇ ಹೋದರೂ ಹಿಂದಿ ಬಗ್ಗೆ ಸೊಲ್ಲೆತ್ತುವುದಿಲ್ಲ. ಕರ್ನಾಟಕದಲ್ಲಿ ಮಾತ್ರ ಹಿಂದಿ ಅಟ್ಟಹಾಸ ನಿಲ್ಲುವುದಿಲ್ಲ. ಇದಕ್ಕೆ ಕನ್ನಡಿಗರೇ ದಿಟ್ಟ ಉತ್ತರ ಕೊಡಬೇಕಿದೆ.

Related Posts

Don't Miss it !