ಕೇಂದ್ರದಲ್ಲಿ‌ ಕರ್ನಾಟಕ ಕೋಟದಲ್ಲಿ ನಾಲ್ವರಿಗೆ ಮಂತ್ರಿ ಸ್ಥಾನ..! ಮಾನದಂಡದ ಲೆಕ್ಕಚಾರ..!

ಶೋಭಾ ಕರಂದ್ಲಾಜೆಗೆ ಅದೃಷ್ಟ ಒಲಿದಿದ್ದು ಹೇಗೆ..? - ಎ ನಾರಾಯಣಸ್ವಾಮಿಗೆ ವರದಾನವಾಯ್ತು ಚುನಾವಣೆ..! - ಭಗವಂತ ಖೂಬಾ ಗಡಿ ಭಾಗದ ಸಂಸದನೆಂಬ ಕೋಟ - ರಾಜ್ಯದ ಕೋಟ ಅಷ್ಟೆ.. ಅದೇ ಕಾರಣಕ್ಕೆ ಕೊಟ್ಟಿಲ್ಲ ಮಂತ್ರಿಸ್ಥಾನ..!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಷನೆ ಮಾಡಲಾಗಿದೆ. 12 ಮಂದಿ ಹಾಲಿ ಸಚಿವರು ರಾಜೀನಾಮೆ ನೀಡಿದ್ದಾರೆ. 43 ಮಂದಿ ಸಚಿವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದರಲ್ಲಿ 28 ಸಚಿವರು ಹೊಸದಾಗಿ ಸೇರ್ಪಡೆ ಆಗಿದ್ದಾರೆ. ಇದೀಗ ಕೇಂದ್ರ ಸಂಪುಟದ ಗಾತ್ರ 81ಕ್ಕೆ ಏರಿಕೆ ಆಗಿದೆ. ಕರ್ನಾಟಕ ಕೋಟದಿಂದ ರಾಜ್ಯಸಭಾ ಸದಸ್ಯ ರಾಜೀವ್​ ಚಂದ್ರಶೇಖರ್​, ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗ ಶಾಸಕ ಆನೇಕಲ್​ ನಾರಾಯಣಸ್ವಾಮಿ, ಬೆಳಗಾವಿ ಸಂಸದ ಭಗವಂತ ಖೂಬಾ ನೂತರ ಸಂಪುಟಕ್ಕೆ ರಾಜ್ಯ ಸಚಿವರಾಗಿ ಸೇರ್ಪಡೆ ಆಗಿದ್ದಾರೆ. ಆದರೆ ರಾಜ್ಯದವರೇ ಆಗಿದ್ದ ರಾಸಾಯಾನಿಕ ಮತ್ತು ಗೊಬ್ಬರ ಖಾತೆ ಸಚಿವರಾಗಿದ್ದ ಡಿ.ವಿ ಸದಾನಂದಗೌಡರನ್ನು ಕೈಬಿಡಲಾಗಿದೆ.

ಶೋಭಾ ಕರಂದ್ಲಾಜೆಗೆ ಅದೃಷ್ಟ ಒಲಿದಿದ್ದು ಹೇಗೆ..?

ಕರ್ನಾಟಕ ಮಾಜಿ ಇಂಧನ ಖಾತೆ ಸಚಿವರಾಗಿರುವ ಶೋಭಾ ಕರಂದ್ಲಾಜೆ ಪ್ರಭಾವಿ ವ್ಯಕ್ತಿತ್ವವುಳ್ಳ ಮಹಿಳೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಬಿ.ಎಸ್​ ಯಡಿಯೂರಪ್ಪ ಆಪ್ತ ಬಣದಲ್ಲಿ ಗುರ್ತಿಸಿಕೊಂಡಿದ್ದ ಶೋಭಾ ಕರಂದ್ಲಾಜೆಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್​ ಸಿಗದ ಹಾಗೆ ಕೆಲವರು ವ್ಯವಸ್ಥಿತವಾಗಿ ನೋಡಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿದ್ದ ಶೋಭಾ ಕರಂದ್ಲಾಜೆ, ವಿಧಾನಸಭಾ ಟಿಕೆಟ್​ ಸಿಗದ ನಂತರ ಸಿಎಂ ಯಡಿಯೂರಪ್ಪ ಆಪ್ತ ಬಣದಿಂದ ಹೊರನಡೆದಿದ್ದೂ ಎಲ್ಲರಿಗೂ ಗೊತ್ತಿರುವ ಸಂಗತಿ. ಆ ಬಳಿಕ ತಾನಾಯ್ತು ತನ್ನ ಪಾಡಾಯ್ತು ಎಂಬಂತೆ ಇದ್ದಿದ್ದಕ್ಕೆ ಕೊಡುಗೆಯಾಗಿ ಕೃಷಿ ಹಾಗೂ ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಸ್ಥಾನಮಾನ ಸಿಕ್ಕಿದೆ. ​ಯಡಿಯೂರಪ್ಪ ಆಪ್ತ ಬಣದಲ್ಲಿ ಗುರುತಿಸಿಕೊಳ್ಳದೆ ಇದ್ದದ್ದೇ ವರದಾನವಾಗಿದೆ ಎಂದರೆ ಸುಳ್ಳಲ್ಲ.

ಎ ನಾರಾಯಣಸ್ವಾಮಿಗೆ ವರದಾನವಾಯ್ತು ಚುನಾವಣೆ..!

ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿ ರಾಜ್ಯ ಖಾತೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ನಾರಾಯಣಸ್ವಾಮಿ ಅವರಿಗೆ ಸಚಿವಗಿರಿ ಸಿಗುವುದಕ್ಕೆ ಪ್ರಮುಖ ಕಾರಣ ಮುಂದಿನ 2 ವರ್ಷದಲ್ಲಿ ರಾಜ್ಯದಲ್ಲಿ ಎದುರಾಗುವ ವಿಧಾನಸಭಾ ಚುನಾವಣೆ ಎನ್ನುವ ವಿಶ್ಲೇಷಣೆ ನಡೆಯುತ್ತಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾಗಿರುವ ನಾರಾಯಣಸ್ವಾಮಿಯನ್ನೇ ಮುಂದೆ ಇಟ್ಟುಕೊಂಡು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವುದು ಇದರ ಉದ್ದೇಶ. ದಲಿತ ಸಮುದಾಯದ ಮತಬ್ಯಾಂಕ್​ಗೆ ಕೈ ಹಾಕುವ ಉದ್ದೇಶ ಬಿಜೆಪಿ ಹೈಕಮಾಂಡ್​ಗೆ ಇದೆ ಎನ್ನಲಾಗಿದೆ. ಅಹಿಂದ ಮತಗಳನ್ನೇ ನಂಬಿಕೊಂಡಿರುವ ಕಾಂಗ್ರೆಸ್​​ಗೆ ಪಂಗನಾಮ ಹಾಕುವುದರಲ್ಲಿ ಯಶಸ್ಸು ಸಾಧಿಸುತ್ತಾ ಎನ್ನುವುದನ್ನು ಕಾದು ನೋಡಬೇಕು.

ಭಗವಂತ ಖೂಬಾ ಗಡಿ ಭಾಗದ ಸಂಸದನೆಂಬ ಕೋಟ

ಬೀದರ್ ಕ್ಷೇತ್ರದ ಸಂಸದ ಆಗಿರುವ ಭಗವಂತ ಖೂಬ ಲಿಂಗಾಯತ ಕೋಟದ ಮೇಲೆ ಸಚಿವರನ್ನಾಗಿ ಮಾಡಲಾಗಿದೆ. ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ‌ ಕೂಡ ಲಿಂಗಾಯತ ಸಮುದಾಯಕ್ಕೆ‌ ಸೇರಿದ್ದು ಉತ್ತರ ಕರ್ನಾಟಕದವರು ಆಗಿದ್ದರು. ಇದೀಗ ಭಗವಂತ ಖೂಬ ಕೂಡ ಉತ್ತರ ಕರ್ನಾಟಕ ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಜೊತೆಗೆ ರಾಸಾಯನಿಕ ಮತ್ತು ಗೊಬ್ಬರ ಖಾತೆಯನ್ನು ಡಿ.ವಿ ಸದಾನಂದ ಗೌಡ ನಿರ್ವಹಿಸುತ್ತಿದ್ದರು. ಇದೀಗ ಗೊಬ್ಬರ ಖಾತೆಯ ರಾಜ್ಯ ಸಚಿವರನ್ನಾಗಿ ಭಗವಂತ ಖೂಬ ಅವರನ್ನು ಮಾಡಲಾಗಿದೆ. ಇಷ್ಟೇ ಅಲ್ಲದೆ ಬೀದರ್ ಕ್ಷೇತ್ರ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಗಡಿ ಜೊತೆಗೆ ಹೊಂದಿಕೊಂಡಿದೆ. ಈ ಎರಡು ರಾಜ್ಯಗಳಲ್ಲಿ ಪಕ್ಷದ ಬೆಳವಣಿಗೆಗೆ ಭಗವಂತ ಖೂಬ ಬಳಕೆ ಅಗಲಿದ್ದಾರೆ ಎನ್ನುವುದು ಬಿಜೆಪಿ‌ ಲೆಕ್ಕಾಚಾರ.

ರಾಜ್ಯದ ಕೋಟ ಅಷ್ಟೆ.. ಅದೇ ಕಾರಣಕ್ಕೆ ಕೊಟ್ಟಿಲ್ಲ ಮಂತ್ರಿಸ್ಥಾನ..!

ಮೂಲತಃ ಉದ್ಯಮಿಯಾಗಿರುವ ಕೇರಳ ಮೂಲದ ರಾಜೀವ್​ ಚಂದ್ರಶೇಖರ್​‌ ಅವರನ್ನು ಕೌಶ್ಯಲ್ಯಾಭಿವೃದ್ಧಿ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ. ಕರ್ನಾಟಕದಿಂದ ರಾಜ್ಯ ಸಭೆಗೆ‌ ಆಯ್ಕೆಯಾಗಿದ್ದಾರೆ ಎನ್ನುವ ಕಾರಣಕ್ಕೆ ಕರ್ನಾಟಕ ಕೋಟದಲ್ಲೇ ಮಂತ್ರಿ ಮಾಡಲಾಗಿದೆ. ಆದರೆ ಕೇರಳದಲ್ಲಿ ಪಕ್ಷ ಬಲಪಡಿಸುವ ಉದ್ದೇಶ ಬಿಜೆಪಿಯದ್ದಾಗಿದೆ. ಇದೇ ರೀತಿ ಈ ಹಿಂದೆ ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕ ಕೋಟದಿಂದ ಕೇಂದ್ರ ಹಣಕಾಸು‌ ಸಚಿವರನ್ನಾಗಿ ಮಾಡಲಾಗಿತ್ತು. ಆದರೆ ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡು ಹಾಗೂ ದೆಹಲಿಗೆ ಸೀಮಿತವಾಗಿದ್ದರು. ರಾಜೀವ್ ಚಂದ್ರಶೇಖರ ಕೂಡ ಅದೇ ರೀತಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Related Posts

Don't Miss it !