DK ರವಿ ಪಾತ್ರಕ್ಕೆ ಚಕ್ರವರ್ತಿ ಕಂಡೀಷನ್ಸ್​ ಯಾಕೆ..?

ಮೈಸೂರು ಜಿಲ್ಲಾಧಿಕಾರಿಯಾಗಿ ಇತ್ತೀಚಿಗೆ ವಿವಾದ ಮಾಡಿಕೊಂಡು ವರ್ಗಾವಣೆ ಆಗಿರುವ IAS ಅಧಿಕಾರಿ ರೋಹಿಣಿ ಸಿಂಧೂರಿ ಜೀವನಾಧಾರಿತ ಕಥೆ ತೆರೆಮೇಲೆ ಬರೋದು ಖಚಿತವಾಗಿದೆ. ಈ ಸಿನಿಮಾದ ಶೀರ್ಷಿಕೆ ಭಾರತ ಸಿಂಧೂರಿ ಆಗಿದ್ದು, ಅಕ್ಷತಾ ಪಾಂಡವಪುರ IAS ಅಧಿಕಾರಿ ರೋಹಿಣಿ ಸಿಂಧೂರಿ ಪಾತ್ರಧಾರಿ ಆಗಲಿದ್ದಾರೆ ಎಂದು ಘೋಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಮೈಸೂರಿನಲ್ಲಿ ಮಾಜಿ ಸಚಿವ ಜೆಡಿಎಸ್ ಶಾಸಕ ಸಾ.ರಾ ಮಹೇಶ್​ ಕೂಡ ಚಿತ್ರ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದಾರೆ. ಆದರೆ ಬಡ ರೈತ ಕುಟುಂಬದಿಂದ ಐಎಎಸ್​ ಅಧಿಕಾರಿಯಾಗಿ ಜನಮಾನಸದಲ್ಲಿ ಹೆಸರಾದ ದಿವಂಗತ ಐಎಎಸ್​ ಅಧಿಕಾರಿ ಡಿ.ಕೆ ರವಿ ಸಾವಿನ ಕಥೆಯಾಧಾರಿತ ಚಿತ್ರ ಎಂದು ತಿಳಿಸಿದ್ದಾರೆ. ಈ ಚಿತ್ರದಲ್ಲಿ DK ರವಿ ಪಾತ್ರಕ್ಕೆ ಬಿಗ್​ಬಾಸ್​ ವೈಲ್ಡ್​ಕಾರ್ಡ್​ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಚಿತ್ರದಲ್ಲಿ ನಟಿಸಲು ಚಕ್ರವರ್ತಿ ಎರಡು ಷರತ್ತುಗಳನ್ನು ವಿಧಿಸಿದ್ದಾರೆ.

ಚಕ್ರವರ್ತಿಗೆ ಆಫರ್ ಕೊಟ್ಟ ಡೈರೆಕ್ಟರ್ ಮಂಜುನಾಥ್..!

ಈಗಾಗಲೇ ನಟ, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್​ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವ ಚಿತ್ರ ನಿರ್ದೇಶಕ ಮಂಜುನಾಥ್, ಚಿತ್ರದಲ್ಲಿ ನಟಿಸಲು ಮುಂಗಡ (Advance) ಹಣ ಕೂಡ ಪಾವತಿ ಮಾಡಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಡಿ.ಕೆ ರವಿ ಪಾತ್ರ ಮಾಡುವ ಮುನ್ನ ನಿರ್ದೇಶಕ ಮಂಜುನಾಥ್ ಬಳಿ ಎರಡು ಷರತ್ತು‌ ಹಾಕಿದ್ದಾರೆ. ಈ ಷರತ್ತುಗಳಿಗೆ ಒಪ್ಪಿಕೊಂಡರೆ ಚಿತ್ರಕಥೆ ತಯಾರಿ ಜೊತೆಗೆ ನಟನೆ ಮಾಡೋದಕ್ಕೆ ನಾನು ಸಿದ್ಧವಿದ್ದೇನೆ ಎಂದಿದ್ದಾರೆ. ಷರತ್ತು ಪಾಲಿಸಲು ಚಿತ್ರತಂಡದ ಪರವಾಗಿ ನಿರ್ದೇಶಕರು ಒಕೆ ಎಂದಿದ್ದು ಮುಂಗಡ ಹಣ ಕೊಟ್ಟು ತೆರಳಿದ್ದಾರೆ. ಇದೀಗ ನಟ, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಹಾಕಿರುವ ಆ ಷರತ್ತುಗಳು ಯಾವುದು ಎನ್ನುವ ಬಗ್ಗೆ ಗಾಂಧಿನಗರ ಮಾತನಾಡ್ತಿದೆ.

ಷರತ್ತುಗಳ ಬಗ್ಗೆ ಚಂದ್ರಚೂಡ್ ಹೇಳಿದ್ದೇನು..?

ದಿ ಪಬ್ಲಿಕ್ ಸ್ಪಾಟ್ ಜೊತೆ ಷರತ್ತು ವಿಚಾರವಾಗಿ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್, “ನಾನು ಯಾವುದೇ ಅಧಿಕಾರಿ ವಿರುದ್ಧವಾಗಿ ಚಿತ್ರ ಮಾಡುವುದಾದರೇ ನಟಿಸೋದಕ್ಕೆ ತಯಾರಿಲ್ಲ. ಚಿತ್ರ ಒಂದು ಮಾಧ್ಯಮವಾಗಿದ್ದು ನಡೆದಿರುವ ಎಲ್ಲಾ ಸಂಪೂರ್ಣ ವಿಚಾರಗಳನ್ನು ಜನರ ಮುಂದಿಡಬೇಕು. ಡಿ.ಕೆ ರವಿ ಅವರು ಕೋಲಾರ ಜಿಲ್ಲಾಧಿಕಾರಿ ಸ್ಥಾನದಿಂದ ಏಕಾಏಕಿ ವರ್ಗಾವಣೆ ಆಗಿದ್ದು ಯಾಕೆ..? ಅನ್ನೋ ಬಗ್ಗೆ ಅಂದಿನ ಡಿಸಿಪಿ ರೋಹಿಣಿ ಕಟೋಚ್ ಸಪೇಟ್ ಕೊಟ್ಟ ವರದಿ, ಸಿಬಿಐ ತನಿಖೆಯಲ್ಲಿ ಕೊಟ್ಟ ವರದಿ, ರೋಹಿಣಿ ಸಿಂಧೂರಿ ಜೊತೆಗಿನ ಸ್ನೇಹ, ರಿಯಲ್ ಎಸ್ಟೇಟ್ ಮಾಫಿಯಾ, ಮರಳು ಮಾಫಿಯಾ ಸೇರಿದಂತೆ ಸಾವಿಗೆ ಏನೆಲ್ಲಾ ಕಾರಣಗಳು ಎಂಬುದನ್ನು ಮುಚ್ಚುಮರೆ ಇಲ್ಲದೆ ಚಿತ್ರಿಸಬೇಕು” ಎನ್ನುವುದು ನಟ, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರ ನಿಲುವು.

ಡಿ.ಕೆ ರವಿ ಜೀವನದಲ್ಲಿ ಮೂರು ಹೆಣ್ಣು..!

ಡಿ.ಕೆ ರವಿ ಹುಟ್ಟಿನಿಂದ ಅಂತ್ಯದ ತನಕ ಮೂವರು ಹೆಣ್ಣುಗಳ ಸಾಂಗತ್ಯವಿದೆ. ಮೊದಲು ಡಿ.ಕೆ ರವಿ ತಾಯಿ ಗೌರಮ್ಮ, ಮಗನನ್ನು ಸಾಕಿ ಐಎಎಸ್ ಮಾಡಿದ್ದಾರೆ. ಅವರಿಗೆ ಡಿ.ಕೆ ರವಿ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ. ಅದೇ ರೀತಿ ರೋಹಿಣಿ ಸಿಂಧೂರಿ ತರಬೇತಿ ಸಮಯದಲ್ಲಿ ಸ್ನೇಹ, ಅಧಿಕಾರಿಗಳು ಆಗಿ ಬಂದ ಬಳಿಕ ಅವರ ಸ್ನೇಹದ ಬಗ್ಗೆ ಹಾಗೂ ಸಿಬಿಐ ಉಲ್ಲೇಖಿಸಿರುವ ಸಂದೇಶದ ಸಾರ ಸಿನಿಮಾದಲ್ಲಿ ಬರಬೇಕು ಎಂದಿದ್ದಾರೆ. ಇನ್ನುಳಿದಂತೆ ಡಿ.ಕೆ ರವಿ ಅವರ ಬಾಳ ಸಂಗಾತಿ ಆಗಿದ್ದ ಕುಸುಮಾ ಹನುಮಂತಪ್ಪ ಗಂಡ ರವಿ ಬಿಟ್ಟು ತವರಿಗೆ ಬಂದಿದ್ದು ಯಾಕೆ ಎನ್ನುವ ಅಂಶ ಕೂಡ ಸಿನಿಮಾದಲ್ಲಿ ಬರುವ ಮೂಲಕ ಒಟ್ಟಾರೆ ಡಿ.ಕೆ ರವಿ ಜೀವನ ಚಿತ್ರೀಕರಣ ಆಗಿ ಜನತೆಯ ಮುಂದಿಡಬೇಕು. ಜೊತೆಗೆ ಡಿ.ಕೆ ರವಿ ಉನ್ನತ ಹುದ್ದೆಗೆ ಹೋಗಿದ್ದರೂ ಸಾಕಷ್ಟು ಹಣ ಗಳಿಸಿರಲಿಲ್ಲ, ಅವರ ಬಳಿ ಸ್ವಂತ ಕಾರೂ ಇರಲಿಲ್ಲ. ಇಷ್ಟೆಲ್ಲ ವಿಚಾರಗಳನ್ನು ಜನರ ಮುಂದಿಡುವ ಕೆಲಸ ಮಾಡಬೇಕಿದೆ. ಯಾವುದು ತಪ್ಪು ಯಾವುದು ಸರಿ ಎನ್ನುವುದನ್ನು ಜನರೇ ನಿರ್ಧಾರ ಮಾಡಲಿ ಎಂದಿದ್ದಾರೆ.

ಡಿ.ಕೆ ರವಿ ಸಿನಿಮಾ ಅಲ್ಲ ಅದೊಂದು ಡಾಕ್ಯುಮೆಂಟರಿ..!

ಐಎಎಸ್​ ಅಧಿಕಾರಿ ಆಗಿದ್ದ ಡಿ.ಕೆ ರವಿ ಸಾಕಷ್ಟು ಯುವ ಮನಸುಗಳಿಗೆ ಸ್ಫೂರ್ತಿ. ಆ ಮುಗ್ದ ಮನಸುಗಳಿಗೆ ರವಿ ಸಾವು ಅರಗಿಸಿಕೊಳ್ಳಲಾಗದ ಕಹಿ ಘಟನೆ ಆಗಿದೆ. ದಕ್ಷ ಅಧಿಕಾರಿ ಆಗಿದ್ದ ಡಿ.ಕೆ ರವಿ ಸಾಯುವಂತಹ ಕೆಟ್ಟ ನಿರ್ಧಾರ ಮಾಡಿದರೇ..! ಎನ್ನುವ ಕುತೂಹಲದ ಜೊತೆಗೆ ಅಧಿಕಾರಿ ಆಗಿ ಮಾಡಿದ ಕೆಲಸ, ರಾಜಕಾರಣಿಗಳ ಒತ್ತಡ, ಸಾಂಸಾರಿಕ ಜೀವನದಲ್ಲಿ ಆಗಿದ್ದ ಏರುಪೇರು ಎಲ್ಲವನ್ನೂ ಜನತೆ ಮುಂದೆ ತೆರೆದಿಡಬೇಕು ಎನ್ನುವ ವಿಚಾರ ಮೆಚ್ಚುವಂತಹದ್ದೇ ಆಗಿದೆ. ಚಿತ್ರ ನಿರ್ಮಾಣ ಆಗಲಿ, ಆ ಬಳಿಕ ಯಾರು ಯಾರು ಡಿ.ಕೆ ರವಿ ಜೀವನದಲ್ಲಿ ಹೇಗೆಲ್ಲಾ ಬಂದು ಹೋಗಿದ್ದಾರೆ ಎನ್ನುವುದನ್ನು ಜನರೇ ನಿರ್ಧಾರ ಮಾಡಲಿ. ಗಾಳಿ ಸುದ್ದಿ, ಕಾಗಕ್ಕ ಗೂಬಕ್ಕ ಕಥೆಗಳಿಗಿಂತಾ ಒಂದು ಡಾಕ್ಯುಮೆಂಟರಿ ರೀತಿಯಲ್ಲೇ ಬಂದರೆ ಉತ್ತಮ ಎನ್ನಬಹುದಾಗಿದೆ.

Related Posts

Don't Miss it !