ಮುಖ್ಯಮಂತ್ರಿ ಬದಲಾವಣೆ ಗುಸುಗುಸು, ಸಿಎಂ ಭಾವನಾತ್ಮಕ ಭಾಷಣ, ಮುಂದಿನ ಸಿಎಂ ಯಾರು..!?

ಬಿಜೆಪಿ ಮುಖ್ಯಮಂತ್ರಿ ಬದಲಾವಣೆ ಆಗ್ತಾರೆ ಎನ್ನುವುದನ್ನು ಮೊದಲು ಬಹಿರಂಗ ಮಾಡಿದ್ದು ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​​. ಬಿ.ಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೇ ಈ ರೀತಿಯ ಹೇಳಿಕೆ ನೀಡಿ ರಾಜಕೀಯ ಸಂಚಲನಕ್ಕೆ ಕಾರಣರಾಗಿದ್ದರು. ಬಸನಗೌಡ ಪಾಟೀಳ್ ಯತ್ನಾಳ್​ ಮಾತಿನಂತೆ ಕಳೆದ ಕಳೆದ ಜುಲೈನಲ್ಲಿ ಸಿಎಂ ಕುರ್ಚಿ ಬಿಟ್ಟು ಇಳಿದ್ರು. ಅದಕ್ಕೂ ಮೊದಲು ಭಾವನಾತ್ಮಕ ಭಾಷಣ ಮಾಡಿದ್ದ ಬಿಎಸ್​ ಯಡಿಯೂರಪ್ಪ ವಿಧಾನಸೌಧದಲ್ಲೇ ಗಳಗಳನೆ ಕಣ್ಣೀರು ಸುರಿಸಿದ್ದರು. ಇದೀಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ಮುನ್ಸೂಚನೆ ಸಿಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಜನವರಿ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದಿದ್ದರು. ಇನ್ನೂ ಸಚಿವ ಕೆ.ಎಸ್​ ಈಶ್ವರಪ್ಪ ಕೂಡ ಮಹತ್ವದ ಸುಳಿವು ನೀಡಿದ್ರು. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅವರು ತವರಿನಲ್ಲಿ ಕಣ್ಣೀರು ಹಾಕಿದ್ದಾರೆ.

ಸಿಎಂ ಕಣ್ಣೀರು ಹಾಕಿದ್ದು ಯಾಕೆ..? ಅವರು ಹೇಳಿದ್ದೇನು..?

ಬಸವರಾಜ ಬೊಮ್ಮಾಯಿ ಸ್ವಕ್ಷೇತ್ರ ಹಾವೇರಿಯ ಶಿಗ್ಗಾಂವಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಅನಾವರಣದಲ್ಲಿ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಜೀವನದಲ್ಲಿ ಯಾವುದೂ ಶಾಶ್ವತ ಅಲ್ಲ, ಈ ನಮ್ಮ ಬದುಕೂ ಕೂಡ ಇಲ್ಲಿ ಶಾಶ್ವತ ಅಲ್ಲ. ನಾವು ಎಷ್ಟು ದಿನಗಳು ಬದುಕಿರುತ್ತೇವೆ ಎಂಬುದೂ ಗೊತ್ತಿಲ್ಲ. ಆದರೆ ನೀವು ಕೊಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ. ಇಲ್ಲಿಗೆ ಬಂದಾಗ ನಿಮ್ಮ ಮನೆಯಲ್ಲಿ ರೊಟ್ಟಿ ಮಾಡಿ ಕೊಟ್ಟಿದ್ದೀರಿ. ನವಣೆ ಅಕ್ಕಿಯಲ್ಲಿ ಅನ್ನ ಮಾಡಿ ಉಣಬಡಿಸಿದ್ದೀರಿ. ನಮ್ಮ ಜೊತೆಯಲ್ಲಿ ಯಾರು ಇದ್ದಾರೆ, ಯಾರಿಲ್ಲ ಎಂದು ಹೇಳುವುದಲ್ಲ. ಒಂದು ಸಮಯದಲ್ಲಿ ಎಲ್ಲರೂ ನಮ್ಮ ಜೊತೆಯಲ್ಲೇ ಇದ್ದವರೇ ಎನ್ನುವ ಮೂಲಕ ಪಕ್ಷದಲ್ಲಿ ಬೇರೆ ಬೇರೆ ಬೆಳವಣಿಗೆಗಳು ನಡೆಯುತ್ತಿವೆ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ. ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿ ಮಾಧ್ಯಮಗಳ ಜೊತೆಗೆ ಮಾತನಾಡದೆ ಮುಖ ತಿರುಗಿಸಿ ಹೊರ ನಡೆದಿದ್ದಾರೆ.

Read this;https://thepublicspot.com/2021/12/19/belagavi-unrest-from-karnataka-marati-people-state-government-make-statement-about-mes-kirik-but-they-have-fear-loss-of-vote-bank-but-kannadigas-realy-suffering-from-marati-community/

ಈ ಹಿಂದೆಯೇ ಕೆ.ಎಸ್​ ಈಶ್ವರಪ್ಪ ಕೂಡ ಹೇಳಿದ್ದರು..?

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಏನನ್ನೂ ಹೇಳದ ಸಚಿವ ಕೆ.ಎಸ್​ ಈಶ್ವರಪ್ಪ, ಮುಂದಿನ ದಿನಗಳಲ್ಲಿ ಮುರುಗೇಶ ನಿರಾಣಿ ಕೂಡ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದರು. ಆ ಬಳಿಕ ಈ ಮಾತಿಗೆ ಜೋಡಿಸಿದ್ದ ಬಸನಗೌಡ ಪಾಟೀಲ್​ ಯತ್ನಾಳ್​, ಕೆಲವರು ನಾನು ಮುಂದಿನ ಮುಖ್ಯಮಂತ್ರಿ ಎಂದು ವಿಧಾನಸೌಧದಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎನ್ನುವ ಮೂಲಕ ಮುರುಗೇಶ್ ನಿರಾಣಿ ಅವರಿಗೇ ಟಾಂಗ್​ ಕೊಟ್ಟಿದ್ದರು. ಆ ಬಳಿಕ ಮುರುಗೇಶ್​ ನಿರಾಣಿ ಹಾಗೂ ಕೆ.ಎಸ್​ ಈಶ್ವರಪ್ಪ ಕೂಡ ಗಂಟೆಗಳ ಕಾಲ ಖಾಸಗಿ ಹೋಟೆಲ್​ನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಉಪಚುನಾವಣೆಯಲ್ಲಿ ಕಾಂಗ್ರೆಸ್​ ಮಣಿಸಲು ಸಾಧ್ಯವಾಗದಿದ್ದಾಗಲೇ ಹೈಕಮಾಂಡ್​ಗೆ ದೂರು ಸಲ್ಲಿಕೆಯಾಗಿತ್ತು. ಆ ಬಳಿಕ ಇದೀಗ ಪರಿಷತ್​ನಲ್ಲೂ ಹೇಳಿಕೊಳ್ಳುವ ಸಾಧನೆಯನ್ನು ಬಿಜೆಪಿ ಮಾಡಿಲ್ಲ. ಹೀಗಾಗಿ ಇದೇ ಮುಖ್ಯಮಂತ್ರಿ ಮುಂದಾಳತ್ವದಲ್ಲಿ ಚುನಾವಣೆಗೆ ಹೋದರೆ ಗೆಲ್ಲುವುದು ಕಷ್ಟ ಎನ್ನುವ ಸಂದೇಶ ಹೈಕಮಾಂಡ್​ಗೆ ತಲುಪಿದೆ ಎನ್ನಲಾಗ್ತಿದೆ.

ಕಾಲಿನ ನೋವು ಮುಖ್ಯಮಂತ್ರಿ ಸ್ಥಾನವನ್ನೇ ಕಸಿಯುತ್ತಾ..?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾಲಿನ ನೋವು ಇದೆ ಎನ್ನುವುದನ್ನು ಕೆಲವು ಮಾಧ್ಯಮಗಳಲ್ಲಿ ಹೇಳಲಾಗುತ್ತಿದೆ. ಆದರೆ ಕಾಲಿನ ನೋವು ಮುಖ್ಯಮಂತ್ರಿ ಸ್ಥಾನವನ್ನೇ ಕಸಿಯುತ್ತೆ ಎಂದರೆ ನಂಬಲು ಸಾಧ್ಯವೇ..? ಇಲ್ಲ.. ಯಾಕಂದ್ರೆ ಗೋವಾ ಮುಖ್ಯಮಂತ್ರಿ ಐಸಿಯುನಲ್ಲಿ ಸಾಕಷ್ಟು ದಿನ ಕೋಮಾದಲ್ಲಿ ಇದ್ದಾಗಲೇ ಮುಖ್ಯಮಂತ್ರಿ ಬದಲಾವಣೆ ಮಾಡುವ ಮನಸ್ಸು ಮಾಡಿರಲಿಲ್ಲ. ಆದರೆ ಇದೀಗ ಕಾಲಿನ ಚಿಕಿತ್ಸೆಗೆ ಅಮೆರಿಕಕ್ಕೆ ಹೋಗಬೇಕು ಎನ್ನುವ ಕಾರಣಕ್ಕೆ ರಾಜೀನಾಮೆ ಕೊಟ್ಟು ಹೋಗ್ತಾರೆ ಎನ್ನುವುದು ಮೂರ್ಖತನ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಆದರೆ ಬಿಜೆಪಿ ಉದ್ದೇಶ ಈ ಮೊದಲು ಬಿ.ಎಸ್​ ಯಡಿಯೂರಪ್ಪ ರಾಜೀನಾಮೆ ನೀಡಿದಾಗಲೇ ಸಂಘ ಪರಿವಾರದ ನಾಯಕನನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ಉದ್ದೇಶ ಹೊಂದಿತ್ತು. ಆದರೆ ಪಟ್ಟು ಬಿಡದ ಬಿ.ಎಸ್​ ಯಡಿಯೂರಪ್ಪ, ತಾನು ಸೂಚಿಸಿದವರೇ ಮುಖ್ಯಮಂತ್ರಿ ಆಗಬೇಕು ಎನ್ನುವ ಹಠದಲ್ಲಿ ಬಸವರಾಜ ಬೊಮ್ಮಾಯಿಗೆ ಪಟ್ಟ ಕಟ್ಟಲಾಗಿತ್ತು. ಇದೀಗ ಸಂಘ ಸೂಚಿಸುವ ನಾಯಕರೇ ಮುಖ್ಯಮಂತ್ರಿ ಆಗ್ತಾರೆ ಎನ್ನಲಾಗ್ತಿದೆ.

Related Posts

Don't Miss it !