ನೂತನ ಸಚಿವರ ಪಟ್ಟಿ ರಿಲೀಸ್​, ಬಿಜೆಪಿಯಲ್ಲಿ ಭುಗಿಲೆದ್ದ ಆಕ್ರೋಶ..!

ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ 29 ಶಾಸಕ ಪಟ್ಟಿ ಅಧಿಕೃತ ಆಗುತ್ತಿದ್ದಂತೆ ಬಿಜೆಪಿಯಲ್ಲಿ ಅಸಮಧಾನ ಸ್ಫೋಟವಾಗಿದೆ. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮೂವರು ಎಸ್​ಸಿ 1 ಎಸ್​ಟಿ 01, ಒಕ್ಕಲಿಗ 7, ಲಿಂಗಾಯತ 9, ಒಬಿಸಿ 7, ಇತರೆ 3 ಶಾಸಕರಿಗೆ ಸಚಿವ ಸ್ಥಾನ ಲಭಿಸಿದ್ದು, ಒಬ್ಬ ಮಹಿಳೆ, ಒಬ್ಬ ರೆಡ್ಡಿ, ಒಬ್ಬ ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಆರ್​. ಅಶೋಕ್​, ಬಿ.ಶ್ರೀ ರಾಮುಲು, ಡಾ ಸುಧಾಕರ್​, ಎಸ್​.ಟಿ ಸೋಮಶೇಖರ್, ಗೋಪಾಲಯ್ಯ, ನಾರಾಯಣಗೌಡ, ಅರಗ ಜ್ಞಾನೇಂದ್ರ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಮುರುಗೇಶ ನಿರಾಣಿ, ಉಮೇಶ್ಶ ಕತ್ತಿ ಶಶಿಕಲಾ ಜೊಲ್ಲೆ, ಮಾಧುಸ್ವಾಮಿ, ಹಾಲಪ್ಪ ಆಚಾರ್, ಶಂಕರ್ ಪಾಟೀಲ್ ಮುನೇನಕೊಪ್ಪ, ವಿ ಸೋಮಣ್ಣ, ಸಿ ಸಿ‌ ಪಾಟೀಲ್​, ಬಿ.ಸಿ ಪಾಟೀಲ್, ಆನಂದ್ ಸಿಂಗ್, ಎಸ್ ಅಂಗಾರ, ಪ್ರಭು ಚೌವ್ಹಾಣ್, ಕೋಟಾ ಶ್ರೀನಿವಾಸ ಪೂಜಾರಿ, ಎಂ.ಟಿ.ಬಿ ನಾಗರಾಜ್, ಮುನಿರತ್ನ, ಸುನೀಲ್ ಕುಮಾರ್, ಶಿವರಾಂ ಹೆಬ್ಬಾರ್, ಬೈರತಿ‌ ಬಸವರಾಜ, ಬಿಸಿ ನಾಗೇಶ್‌, ಗೆ ಸಚಿವ ಸ್ಥಾನ ಖಚಿತವಾಗಿದೆ.

ಶಾಸಕ ನೆಹರು ಓಲೇಕಾರಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಹಾವೇರಿಯಲ್ಲಿ ಓಲೇಕಾರ್​ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ಬೆಂಬಲಿಗರು, ಸಚಿವ ಸ್ಥಾನ ಬೇಕೇ ಬೇಕು ಅಂತಾ ಘೋಷಣೆ ಕೂಗಿದ್ದಾರೆ. ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಇದಕ್ಕೂ ಮೊದಲು ಮಾತನಾಡಿದ್ದ ಶಾಸಕ ನೆಹರೂ ಓಲೇಕಾರ್​, ನನಗೆ ಸಚಿವ ಸ್ಥಾನ ತಪ್ಪಿರೋದು ನಿಜಕ್ಕೂ ಪಕ್ಷಕ್ಕೆ ಶೇಮ್ ಎಂದಿದ್ದಾರೆ. ಮೇಲ್ವರ್ಗದ ಶಾಸಕರಿಗಾಗಿ ನಮ್ಮ ಕೆಳ ಜಾತಿಯನ್ನು ಪಕ್ಷವನ್ನು ಕಡೆಗಣಿಸಿದೆ. ಮುಂದಿನ ದಿನಗಳಲ್ಲಿ ನಾಯಕರಿಗೆ ತಕ್ಕ ಪಾಠ ಆಗಲಿದೆ. ಬಿಜೆಪಿಯಲ್ಲಿ ನಡೆಯುತ್ತಿರೋದು ಜಾತಿ ರಾಜಕಾರಣ ಎಂದು ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.

ಚಿತ್ರದುರ್ಗ ಬಿಜೆಪಿ ಶಾಸಕ G.H ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಪುಟದಲ್ಲಿ ಸಾಮಾಜಿಕ ನ್ಯಾಯ ಇಲ್ಲ, ನಾಲ್ಕು ಜಾತಿಗೆ ಅಷ್ಟೇ ಸೀಮಿತ ಎಂದು ಲೇವಡಿ ಮಾಡಿದ್ದಾರೆ. ನೂತನ ಸಂಪುಟದಲ್ಲಿ ಲಿಂಗಾಯತ, ಒಕ್ಕಲಿಗ, ಕುರುಬ ಸಮುದಾಯಕ್ಕೆ ಮಾತ್ರ ಮನ್ನಣೆ ನೀಡಲಾಗಿದೆ. ಸಾಮಾಜಿಕ ನ್ಯಾಯ ಎಲ್ಲಿದೆ..?ಬೇರೆ ಸಮುದಾಯದ ಮತ ಹೇಗೆ ಬಿಜೆಪಿಗೆ ಬರಬೇಕು ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂ ಓಲೈಕೆ ಅಂದರೆ, ಬಿಜೆಪಿ ಪಕ್ಷದಲ್ಲಿ ಏನಿದೆ..? ಎಂದು ಟೀಕಿಸಿರುವ ತಿಪ್ಪಾರೆಡ್ಡಿ, 50 ವರ್ಷ ರಾಜಕೀಯದ ಸಮಯ ವ್ಯರ್ಥ ಎಂದು ತೀವ್ರ ಅಸಮಾಧಾನ ತೋಡಿಕೊಂಡಿದ್ದಾರೆ. ಪಾರ್ಟಿ ಸೇವೆ, ಜನ ಸೇವೆ ಎಲ್ಲಾ ಮಾಡಿದ್ದೇನೆ, ಇನ್ನೇನು ಮಾಡಬೇಕು. ಜಾತಿ ನನ್ನ ತಲೆಯಲ್ಲಿ ಎಂದು ಕೂಡಾ ಬರಲಿಲ್ಲ. ನನ್ನ ಜಾತಿಯ ಕೆಟಗಿರಿ 3A ಎಂದು ಮೊನ್ನೆಯಷ್ಟೇ ಗೊತ್ತಾಗಿದೆ. ನೂರು ವರ್ಷದಲ್ಲಿ 70 ವರ್ಷ ವ್ಯರ್ಥ ಮಾಡಿದೆ. ಒಂದೇ ಜಾತಿಯ ಅಷ್ಟು ಮಂದಿಗೆ ಕೊಟ್ಟರೇ ಹೇಗೆ..? ನನ್ನ ತಂದೆಯ 400-500 ಕೋಟಿ ವ್ಯವಹಾರ ಇತ್ತು, ಹಣ ಖರ್ಚಾಯ್ತು. ಬ್ಯುಸಿನೆಸ್ ಹಾಳು ಮಾಡಿಕೊಂಡೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಆರ್.ಶಂಕರ್ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ನಾನು ಮನೆಯಲ್ಲಿದ್ದೆ, ಬಸವರಾಜ ಬೊಮ್ಮಾಯಿ ಬಂದು ಬಿಜೆಪಿಗೆ ಕರೆದುಕೊಂಡು ಹೋದರು. ಬಿಜೆಪಿಗೆ ಬೆಂಬಲ ನೀಡಿ ಎಂದರು, ಈಗ ಮನೆಯಲ್ಲಿ ಇದ್ದವನನ್ನ ಬೀದಿಗೆ ತಂದುಬಿಟ್ಟರು. ಇದನ್ನು ಸಿಎಂ ಬೊಮ್ಮಾಯಿ ಮನವರಿಕೆ ಮಾಡಿಕೊಳ್ಳಲಿ ಎಂದು ಟೀಕಿಸಿದ್ದಾರೆ. ಮೊದಲಿಗೆ ಸರ್ಕಾರ ಬಂದರೆ ಸಾಕು ಎಂದಿದ್ದರು, ಸರ್ಕಾರ ಬಂದಮೇಲೆ ನಮ್ಮನ್ನು ಕಾಲಕಸ ಮಾಡಿಕೊಂಡರು. ನಮ್ಮ ತ್ಯಾಗಕ್ಕೆ ಬೆಲೆ ಕೊಟ್ಟಿದ್ದರೆ ಪಕ್ಷಕ್ಕೆ ಗೌರವ ಬರುತ್ತದೆ. ಈ ಹಿಂದೆ ಕೊಟ್ಟ ಮಾತಿನಂತೆ ನಡೆಯಿರಿ ಎಂದು ಆಗ್ರಹ ಮಾಡಿದ್ದಾರೆ. ನಾನು ಶಾಸಕ ಸ್ಥಾನ, ಸಚಿವ ಸ್ಥಾನ ಬಿಟ್ಟು ಬಂದಿದ್ದು ಹುಡುಗಾಟ ಅಲ್ಲ. ಕ್ಷೇತ್ರ ಬಿಟ್ಟುಕೊಟ್ಟೆ, ಪಕ್ಷ ಹೇಳಿದಂತೆ ಕೇಳಿದೆ. ನನ್ನ ತ್ಯಾಗಕ್ಕೆ ಇದೇನಾ ಗೌರವ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸುರಪುರ ಶಾಸಕ ರಾಜುಗೌಡ ಮಾತನಾಡಿ, ನನಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಪೋನ್ ಬಂದಿತ್ತು. ಆದ್ರೆ ಸಚಿವರಾಗಿ ಅಂತ ಪೋನ್ ಬಂದಿಲ್ಲ. ಸಚಿವ ಸ್ಥಾನ ಸಿಗದಿರುವದಕ್ಕೆ ಯಾವುದೇ ಬೇಸರ ಅಸಮಾಧಾನವಿಲ್ಲ. ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕೆ ಮುಂದೆಯೂ ದುಡಿಯುತ್ತೇನೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಕೊಟ್ರು ನನಗೆ ಬೇಡ ಎಂದಿದ್ದಾರೆ. ಸಚಿವ ಆಗುವ ವಿಚಾರದಲ್ಲಿ ಸಾಕಷ್ಟು ನೋವಾಗಿದೆ. ಪ್ರತಿ ಭಾರಿ ಲಿಸ್ಟ್​ನಲ್ಲಿ ಹೆಸರು ಇರುತ್ತೆ ಆದ್ರೆ ಕೊನೆಯಲ್ಲಿ ಹೆಸರು ಇರಲ್ಲ ಎನ್ನುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಟ್ವೀಟ್ ಮೂಲಕ ಶಾಸಕ ಎಸ್.ಎ.ರಾಮದಾಸ್ ಅಸಮಧಾನ ಹೊರ ಹಾಕಿದ್ದು, ಪಕ್ಷವನ್ನ ಕಟ್ಟಿ ಬೆಳೆಸಿದ, ಅರ್ಹತೆ ಹೊಂದಿದವರಿಗೆ ಸಚಿವ ಸ್ಥಾನ ಸಿಕ್ಕಿದೆ. ಸಚಿವ ಸ್ಥಾನ ಸ್ವೀಕರಿಸುತ್ತಿರುವ ನೂತನ ಸಚಿವರಿಗೆ ಅಭಿನಂಧನೆಗಳು. ದೇಶದಲ್ಲಿ ಕರ್ನಾಟಕವನ್ನ ನಂಬರ್ 1 ಮಾಡುತ್ತೀರಿ ಎಂದು ನಂಬಿರುತ್ತೇನೆ ಎಂದು ನೂತನ ಸಚಿವರಿಗೆ ಶುಭ ಕೋರುವ ಶೈಲಿಯಲ್ಲೇ ಅಸಮಧಾನ ಹೊರ ಹಾಕಿದ್ದಾರೆ ರಾಮದಾಸ್.

Related Posts

Don't Miss it !