ಮಧ್ಯರಾತ್ರಿ 12.30ಕ್ಕೆ ಸುದ್ದಿಗೋಷ್ಟಿ ಮಾಡಿದ CM, 3 ಪ್ರಮುಖ ಘೋಷಣೆ..

ಸಾವಿನ ಸೂತಕದ ನಡುವಿನ ಸಂಭ್ರಮಕ್ಕೆ ಬ್ರೇಕ್​..!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯರಾತ್ರಿ 12.30ಕ್ಕೆ ಸುದ್ದಿಗೋಷ್ಠಿ ನಡೆಸಿ ಮಹತ್ವದ ಘೋಷಣೆ ಮಾಡಿದ್ದಾರೆ. ಇಂದು ರಾಜ್ಯ ಸರ್ಕಾರಕ್ಕೆ ಒಂದು ವರ್ಷ ಪೂರ್ಣ ಆಗ್ತಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಬೃಹತ್​ ಸಮಾವೇಶ ನಡೆಸಿ ರಾಜ್ಯ ಸರ್ಕಾರ ಸಾಧನೆಯನ್ನು ಜನರ ಮುಂದಿಡಲು ನಿರ್ಧಾರ ಮಾಡಲಾಗಿತ್ತು. ‘ಜನೋತ್ಸವ’ ಹೆಸರಿನಲ್ಲಿ ಬೃಹತ್ ಸಮಾವೇಶಕ್ಕೆ ದೊಡ್ಡಬಳ್ಳಾಪುರದ ಬಳಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಆಗಮಿಸುತ್ತಿದ್ದರು. ಆದರೆ ಪ್ರವೀಣ್​ ನಟ್ಟಾರು ಕೊಲೆ ಬಳಿಕ ಬಿಜೆಪಿ ಕಾರ್ಯಕರ್ತರು ಆಕ್ರೋಶದ ಕಟ್ಟೆ ಹೊಡೆದಿದ್ದು, ಸರ್ಕಾರ ಹಾಗು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳ್ಳಾರೆ ಬಳಿಕ ನೆಟ್ಟಾರಿಗೆ ಭೇಟಿ ನೀಡಿದ್ದ ಬಿಜೆಪಿ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ್​, ಸಚಿವರಾದ ಅಂಗಾರ, ಸುನೀಲ್​ ಕುಮಾರ್​, ಹಲವು ಶಾಸಕರು ಹಾಗು ಸಂಘ ಪರಿವಾರದ ನಾಯಕರ ವಿರುದ್ಧ ಕಿಡಿಕಾರಿದ್ದರು. ಈ ಸುದ್ದಿ ಹೈಕಮಾಂಡ್​ ಅಂಗಳ ತಲುಪುವುದಕ್ಕೆ ಹೆಚ್ಚಿನ ಸಮಯ ಬೇಕಾಗಿರಲಿಲ್ಲ.

BJP ಹೈಕಮಾಂಡ್​ ಸೂಚನೆ ಬೆನ್ನಲ್ಲೇ ಕಾರ್ಯಕ್ರಮವೇ ರದ್ದು..!

ಪ್ರವೀಣ್​ ಹತ್ಯೆಯಿಂದ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರಲ್ಲೆ ಹೆಚ್ಚಿನ ಆಕ್ರೋಶ ಮನೆ ಮಾಡಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ರಾಜ್ಯದ ಹತ್ತಾರು ಜಿಲ್ಲೆಗಳ ಬಿಜೆಪಿ ಪದಾದಿಕಾರಿಗಳು, ಸಾಮಾಜಿಕ ಜಾಲತಾಣದ ಪ್ರಮುಖರು ರಾಜೀನಾಮೆ ಘೋಷಣೆ ಮಾಡಿದ್ದಾರೆ. ಇದರ ನಡುವೆ ಬೆಂಗಳೂರಿನ ಕೂಗಳತೆ ದೂರಲ್ಲಿ ವರ್ಷದ ಸಂಭ್ರಮ ಮಾಡಲು ಮುಂದಾದರೆ ಜನರ ಆಕ್ರೋಶದ ಕಟ್ಟೆಯೊಡೆದು ಸರ್ಕಾರಕ್ಕೆ ಮುಜುಗರ ಆಗುವ ಸಾಧ್ಯತೆ ಹೆಚ್ಚು ಎನ್ನುವ ಗುಪ್ತಚರ ಇಲಾಖೆ ಮಾಹಿತಿಯಂತೆ ಬಿಜೆಪಿ ಹೈಕಮಾಂಡ್​ ಈ ನಿರ್ಧಾರ ಕೈಗೊಂಡಿದೆ. ಆ ಸಂದೇಶವನ್ನು ಬಿಜೆಪಿ ರಾಜ್ಯಾದ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಮೂಲಕ ಮುಖ್ಯಮಂತ್ರಿಗೆ ಸೂಚನೆ ಕಳುಹಿಸಿದ್ದರು. ನಳೀನ್​ ಕುಮಾರ್​ ಕಟೀಲ್​ ಬೆಂಗಳೂರಿಗೆ ಆಗಮಿಸಿ ಸಿಎಂ ಭೇಟಿ ಮಾಡಿದ ಬಳಿಕ ರಾತ್ರಿ 11.30ಕ್ಕೆ ಸುದ್ದಿಗೋಷ್ಠಿ ಮಾಡುವ ಬಗ್ಗೆ ತಿಳಿಸಲಾಯ್ತು. ಆ ಬಳಿಕ 12.30ಕ್ಕೆ ಆಗಮಿಸಿದ ಸಿಎಂ ಕಾರ್ಯಕ್ರಮ ರದ್ದು ಮಾಡುವ ಜೊತೆಗೆ ಮೂರು ಪ್ರಮುಖ ಘೋಷಣೆ ಮಾಡಿದ್ದಾರೆ.

ಹರ್ಷ ಹಾಗು ಪ್ರವೀಣ್ ನೆಟ್ಟಾರು​ ಕೊಲೆಯಿಂದ ಮನಸ್ಸಿಗೆ ಘಾಸಿ..!

ಹರ್ಷನ ಕೊಲೆ ಬಳಿಕ ಬೆಳ್ಳಾರೆಯ ಪ್ರವೀಣ್​ ನೆಟ್ಟಾರು ಕೊಲೆ ಆಗಿರುವುದು ನನ್ನ ಮನಸ್ಸಿಗೆ ಘಾಸಿಯಾಗಿದೆ. ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಹರ್ಷನ ತಾಯಿ ಹಾಗೂ ಪ್ರವೀಣ್​ ತಾಯಿಯ ನೋವನ್ನು ನೋಡಿದಾಗ ಸಂಭ್ರಮ ಮಾಡುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮ ಸರ್ಕಾರದ ಸಾಧನೆಯನ್ನು ಜನರಿಗೆ ಮುಟ್ಟಿಸಬೇಕು ಎನ್ನುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಜನೋತ್ಸವ ಕಾರ್ಯಕ್ರಮ ಮಾಡಲು ನಿರ್ಧಾರ ಮಾಡಿದ್ದೇ ಜನರಿಗೋಸ್ಕರ. ಆದರೆ ಆ ಹುಡುಗನ ತಾಯಿಯ ಆಕ್ರಂದನ ನೋಡಿದ ಬಳಿಕ ದೊಡ್ಡಬಳ್ಳಾಪುರದ ಕಾರ್ಯಕ್ರಮ ರದ್ದು ಮಾಡಿದ್ದೇವೆ. ವಿಧಾನಸೌಧದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಕೂಡ ರದ್ದು ಮಾಡಲಾಗಿದೆ. ಆದರೆ ಜನರಿಗೆ ಘೋಷಣೆ ಮಾಡಬೇಕಿದ್ದ ಯೋಜನೆಗಳನ್ನು ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡುತ್ತೇವೆ ಎಂದಿದ್ದಾರೆ. ಇನ್ನೂ ಇದೇ ವೇಳೆ ರಾಜ್ಯ ಹಾಗು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಪಿಎಫ್​ಐ ನಿಷೇಧ ಮಾಡುವ ಬಗ್ಗೆ ಯಾಕೆ ಮೀನಾಮೇಷ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಸಿಎಂ ಉತ್ತರಿಸಿದ್ದಾರೆ.

ಹಿಂದೂಗಳ ಕೊಲೆಗೆ ಕಾಂಗ್ರೆಸ್​ ಸರ್ಕಾರದ ಬಳುವಳಿ ಕಾರಣ..!

ಕರ್ನಾಟಕ ಮಾತ್ರವಲ್ಲದೆ ದೇಶದಲ್ಲಿ ಶಾಂತಿ ಕದಡಿ, ಕೋಮು ಕೋಮುಗಳ ನಡುವೆ ಅಶಾಂತಿ ಮೂಡಿಸುವ ಹುನ್ನಾರ ನಡೆಯುತ್ತಿದೆ. ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶದಲ್ಲೂ ಹೀಗೇ ನಡೆಯುತ್ತಿದೆ. ಕರ್ನಾಟಕದ ಇತಿಹಾಸದಲ್ಲಿ ಅದರಲ್ಲೂ ಕಾಂಗ್ರೆಸ್​ ಅವಧಿಯಲ್ಲಿ 22 ಜನರಿಗೂ ಹೆಚ್ಚು ಸಾವು ಸಂಭವಿಸಿದೆ. ನಾವು ಕಠಿಣ ಕ್ರಮಕ್ಕೆ ನಿರ್ಧಾರ ಮಾಡಿದ್ದೇವೆ. ಆದರೆ ಕಾಂಗ್ರೆಸ್​ ಪಕ್ಷ ಅಧಿಕಾರದಲ್ಲಿ ಇದ್ದಾರೆ ದುಷ್ಟರ ವಿರುದ್ಧದ ಕೇಸ್​ಗಳನ್ನು ಹಿಂಪಡೆಯುವ ಕೆಲಸ ಮಾಡಿತ್ತು. ಕಾಂಗ್ರೆಸ್​ ಕೊಟ್ಟ ಸಪೋರ್ಟ್​ನಿಂದಲೇ ಈ ರೀತಿಯ ದುಷ್ಕೃತ್ಯಗಳು ನಡೆಯುತ್ತಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಠಿಣ ಕ್ರಮಕ್ಕೆ ನಿರ್ಧಾರ ಮಾಡಿದ್ದು, ಕಮಾಂಡೋ ಫೋರ್ಸ್​, ಇಂಟೆಲಿಜೆನ್ಸ್​ ಘಟಕ ತೆರೆಯಲಾಗುವುದು ಎಂದಿದ್ದಾರೆ. ಇನ್ನು ಛತ್ತೀಸ್​ಗಢದಲ್ಲಿ ಪಿಎಫ್​ಐ ಬ್ಯಾನ್​ ಮಾಡಲಾಗಿತ್ತು. ಆದರೆ ಕೇವಲ ಒಂದೇ ತಿಂಗಳಲ್ಲಿ ಕೋರ್ಟ್​ ಬ್ಯಾನ್​ ತೆರವು ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಿಷೇಧ ಮಾಡಲಾಗುವುದು ಎಂದಿದ್ದಾರೆ.

Related Posts

Don't Miss it !