2 ವರ್ಷ ಮುಗೀತು, ಕೊಟ್ಟ ಮಾತು ನಾಲಿಗೆಯಲ್ಲಿ ನಿಲ್ಲಲಿಲ್ಲವೇಕೆ..?

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಸಮೀಪಿಸಿದೆ. ಅದರಲ್ಲೂ ಸಿಎಂ ಯಡಿಯೂರಪ್ಪ ಅಧಿಕಾರ ಹಿಡಿದು 2 ವರ್ಷ ಕಳೆದಿದೆ. ಈಗಾಗಲೇ ಅಧಿಕಾರದಿಂದ ಯಡಿಯೂರಪ್ಪ ಇಳಿಯುವ ಎಲ್ಲಾ ಲಕ್ಷಗಳು ಕಾಣಿಸಿವೆ. ಆಪರೇಷನ್​ ಕಮಲದ ಮೂಲಕ ರಾಜೀನಾಮೆ ನೀಡಿದ ಹೆಚ್​. ವಿಶ್ವನಾಥ್​ ಸೇರಿದಂತೆ ಪ್ರತಿಯೊಬ್ಬ ಶಾಸಕರು ಹೇಳಿದ ಮಾತಿದು. ನಮಗೆ ಯಡಿಯೂರಪ್ಪ ಮೇಲೆ ವಿಶ್ವಾಸವಿದೆ. ನಾಲಿಗೆ ಮೇಲೆ ನಿಲ್ಲುವ ನಾಯಕ ಯಡಿಯೂರಪ್ಪ ಎಂದು. ಆದರೆ ಆಪರೇಷನ್​ ಸ್ಟಾರ್​ಗಳ ಪಾಲಿಗೆ ಇರುವ ನಾಲಿಗೆ ಜನರ ಪಾಲಿಗೆ ಯಾಕೆ ನಿಲ್ಲಲಿಲ್ಲ ಎನ್ನುವ ಪ್ರಶ್ನೆ ಕಾಡುತ್ತಿದೆ.

ನಾಲಿಗೆ ಮೇಲೆ ನಿಲ್ಲೋ ನಾಯಕ ಮರೆತಿದ್ಯಾಕೆ..?

ಮಹದಾಯಿ ನದಿ ಯೋಜನೆ ಕಾಮಗಾರಿ ವಿಳಂಬ ವಿಚಾರ ವಿಧಾನಸಭಾ ಚುನಾವಣೆಗೂ ಮುನ್ನ ಚರ್ಚೆಗೆ ಬಂದಿತ್ತು. ಈ ವೇಳೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಬಿ.ಎಸ್​ ಯಡಿಯೂರಪ್ಪ, ರಾಷ್ಟ್ರೀಯ ಅಧ್ಯಕ್ಷರು ಹಾಗೂ ಗೋವಾ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಮುಂದಿನ ಡಿಸೆಂಬರ್​ 15ರ ಒಳಗಾಗಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಕೇವಲ ಒಂದು ತಿಂಗಳ ಅವಧಿಯಲ್ಲಿ ಮಹದಾಯಿ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಘಂಟಾಘೋಷವಾಗಿ ಹೇಳಿದ್ದರು. ಇದೀಗ ಅಧಿಕಾರಕ್ಕೆ ಬಂದು 2 ವರ್ಷ ಪೂರೈಸುತ್ತಿದ್ದಾರೆ. ಆದ್ರೆ ಮಹದಾಯಿ ಸಮಸ್ಯೆ ಮಾತ್ರ ಕಗ್ಗಂಟಾಗಿಯೇ ಉಳಿದುಕೊಂಡಿದೆ.

ಮತ್ತೆ ಸುಪ್ರೀಂಕೋರ್ಟ್​ ಮೆಟ್ಟಿಲೇರಲು ಸಿದ್ಧತೆ..!

ಮಹದಾಯಿ ವಿಚಾರವಾಗಿ ರೈತರು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ಮಹದಾಯಿ ಹೋರಾಟಗಾರ, ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದ ಮಠ ಈ ಬಗ್ಗೆ ಮಾಹಿತಿ ನೀಡಿದ್ದು, ಮಹದಾಯಿ ಯೋಜನೆ ವಿಳಂಬ ಕುರಿತು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನೆ ಮಾಡ್ತೇವೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುತ್ತೇವೆ. ರಾಜ್ಯದಲ್ಲಿ ಮೂರು ಪಕ್ಷಗಳಿಂದ ಈ ಬಗ್ಗೆ ಬೆಳಕು ಚೆಲ್ಲುವಂತ ಕೆಲಸ ಮಾಡಿಲ್ಲ ಎಂದಿದ್ದಾರೆ. ಮಹದಾಯಿ ಹೋರಾಟ 7ನೇ ವರ್ಷಕ್ಕೆ ಕಾಲಿಟ್ಟಿದೆ. ಇದೀಗ ಐದು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ಅಧಿಕಾರ ಕೊಟ್ಟರೆ ಸರಳವಾಗಿ ಇತ್ಯರ್ಥ..!

ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್​ ಷಾ, ಚುನಾವಣಾ ಪ್ರಚಾರದ ವೇಳೆ ಸಮಸ್ಯೆ ಬಗ್ಗೆ ಮಾತನಾಡಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆಯನ್ನು ತುಂಬಾ ಸರಳವಾಗಿ ಬಗೆಹರಿಸುತ್ತೇವೆ. ಈಗಿನ ಸರ್ಕಾರ ಮಹದಾಯಿ ವಿಚಾರದಲ್ಲಿ ಸೂಕ್ತವಾಗಿ ನಡೆದುಕೊಂಡಿಲ್ಲ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನು ಟೀಕಿಸಿದ್ದರು. ಮಾತುಕತೆ ಮೂಲಕ ವಿವಾದ ಬಗೆಹರಿಸುವ ಉದ್ದೇಶದಿಂದ ಈಗಾಗಲೇ ಗೋವಾ ಸಿಎಂ ಪತ್ರ ಬರೆದಿದ್ದಾರೆ. ಆದರೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ದೂರಿದ್ದರು.

ಅಲ್ಲೂ ಬಿಜೆಪಿ, ಇಲ್ಲೂ ಬಿಜೆಪಿ ಗೋವಾದಲ್ಲೂ ಬಿಜೆಪಿ..!

ರಾಜ್ಯ ಬಿಜೆಪಿ ನಾಯಕರು ಸದಾ ಕಾಲ ಹೇಳುವ ಸಾಮಾನ್ಯ ಸಂಗತಿ ಎಂದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದರೆ ಅಭಿವೃದ್ಧಿ ಕೆಲಸ ಮಾಡೋದು ಸುಲಭ ಎನ್ನುವುದು. ಆದರೆ ಕರ್ನಾಟಕ, ಗೋವಾ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿದೆ. ಆದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಕಳೆಯುತ್ತಿದೆ. ಇದೀಗ ಅಧಿಕಾರ ಹಸ್ತಾಂತರದ ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ, ಇಲ್ಲೀವರೆಗೂ ಮಹದಾಯಿ ಬಗ್ಗೆ ರಾಜ್ಯ ಸರ್ಕಾರ ಒಂದೇ ಒಂದು ನಡೆಯನ್ನೂ ಇಟ್ಟಿಲ್ಲ. ಕಾನೂನು ಸಮಸ್ಯೆ ಬಗ್ಗೆ ಬಿಜೆಪಿ ಹೇಳಬಹುದು. ಆದರೆ ಸಾಕಷ್ಟು ಕ್ಲಿಷ್ಟವಾದ ಪ್ರಕರಣಗಳು ಕಾನೂನು ಪಂಡಿತರ ಊಹೆಯನ್ನೂ ಮೀರಿ ಬಗೆಹರದಿರುವ ಅದೆಷ್ಟೋ ಪ್ರಕರಣಗಳು ನಮ್ಮ ಮುಂದೆ ಸಾಕ್ಷಿಯಾಗಿವೆ. ಆದರೆ ಮಹದಾಯಿ ವಿಚಾರದಲ್ಲಿ ಈ ನಿಧಾನಗತಿ ಯಾಕೆ..? ಎಂದು ಉತ್ತರ ಕರ್ನಾಟಕ ಮಂದಿ ಚಿಂತಿಸುವಂತಾಗಿದೆ.

ಮತ ಪಡೆಯುವ ಅಸ್ತ್ರ ಮುಗಿಯಬಾರದು..!?

ಕೆಲವೊಂದು ವಿಚಾರಗಳ ಪರವಾಗಿ ಮಾತನಾಡಿದರೆ ಮತಗಳಾಗಿ ಪರಿವರ್ತನೆ ಆಗಲಿದೆ. ಹಿಂದುತ್ವ, ಅಹಿಂದ, ಮಹದಾಯಿ, ಕಾವೇರಿ ವಿಚಾರಗಳನ್ನು ಚುನಾವಣೆ ಸಮಯದಲ್ಲಿ ಜನರನ್ನು ಸೆಳೆಯುವ ಉದ್ದೇಶದಿಂದ ಬಳಕೆ ಮಾಡಿಕೊಳ್ತಾರೆ. ಆದೇ ಕಾರಣಕ್ಕೆ ಮಹದಾಯಿ ವಿಚಾರ ಬಳಸಿಕೊಂಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮಾತನ್ನೇ ಮರೆತಿದೆ. ಈ ಬಗ್ಗೆ ವಿರೋಧ ಪಕ್ಷಗಳೂ ಈ ಮಾತನ್ನು ನೆನಪು ಮಾಡುವ ಕೆಲಸ ಮಾಡ್ತಿಲ್ಲ. ಮಾಧ್ಯಮಗಳೂ ಈ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ಮಹದಾಯಿ ಹೋರಾಟಗಾರರ ಗೋಳು ಸರ್ಕಾರಕ್ಕೆ ಮುಟ್ಟದಂತಾಗಿದೆ.

Related Posts

Don't Miss it !