ಸಿಎಂ ರಾಜೀನಾಮೆ ಸುಳಿವು, ಅನಾಥರಾಗುವ ಭಯದಲ್ಲಿ ಆಪರೇಷನ್​ ಕುಡಿಗಳು..!

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಗೂ ಮುನ್ನ ಮಾತನಾಡಿರುವ ಸಿಎಂ ಬಿ.ಎಸ್​ ಯಡಿಯೂರಪ್ಪ, ಜುಲೈ 25ರಂದು ಬಿಜೆಪಿ ಹೈಕಮಾಂಡ್​ ಸಂದೇಶ ರವಾನೆ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದೇನೆ. 2 ತಿಂಗಳ ಹಿಂದೆಯೇ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಇ ಹೇಳಿದ್ದೆ. ನಾನು ಅಧಿಕಾರದಲ್ಲಿ ಇರಲಿ ಬಿಡಲಿ, ಮುಂದಿನ ಬಾರಿ ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ತರುವ ಪ್ರಯತ್ನ ಮಾಡ್ತೇನೆ ಎಂದಿದ್ದಾರೆ.

ನಾನು ಯಾರನ್ನೂ ಸಿಎಂ ಮಾಡಬೇಕು ಎನ್ನುವುದನ್ನು ಹೇಳುವುದಿಲ್ಲ, ಹೈಕಮಾಂಡ್​ ಯಾವ ನಿರ್ಧಾರ ಬೇಕಾದರೂ ಮಾಡಲಿ, ಯಾವ ಸಮುದಾಯದ ನಾಯಕನನ್ನು ಸಿಎಂ ಮಾಡಬೇಕು ಎನ್ನುವ ಬಗ್ಗೆಯೂ ನಾನು ಮಾತನಾಡುವುದಿಲ್ಲ, ಯಾರ ಹೆಸರನ್ನು ನಾನು ಶಿಫಾರಸು ಮಾಡಲ್ಲ ಎಂದಿದ್ದಾರೆ. ಜೊತೆಗೆ ಹೈಕಮಾಂಡ್​ ಸಂದೇಶ ಬಂದಿಲ್ಲ, ಆ ಸಂದೇಶಕ್ಕಾಗಿ ಕಾಯುತ್ತಿದ್ದೇನೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರ ಸ್ಪಷ್ಟ ರೂಪ ಪಡೆದುಕೊಂಡಿದೆ. ಇಷ್ಟು ದಿನಗಳ ಕಾಲ ನಡೆದಿದ್ದ ಅಂತೆ ಕಂತೆಗಳಿಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.

Operation minister

ಆಪರೇಷನ್​ ಕುಡಿಗಳಲ್ಲಿ ಆತಂಕ..!

ಸಿಎಂ ಬಿಎಸ್​ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಸುಳಿವು ನೀಡುತ್ತಿದ್ದ ಹಾಗೆ ಆರಪರೇಷನ್​ ಕಮಲದ ಮೂಲಕ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಪರೇಷನ್​​ ಸ್ಟಾರ್​​ಗಳಲ್ಲಿ ಆತಂಕ ಮನೆ ಮಾಡಿದೆ. ಯಡಿಯೂರಪ್ಪ ನಡೆಸಿದ ಕೊನೆಯ ಸಚಿವ ಸಂಪುಟ ಸಭೆ ಬಳಿಕ ಗುಂಪುಗೂಡಿದ್ದ ಆಪರೇಷನ್​ ಸ್ಟಾರ್​​ ನಾಯಕರು ಮುಂದೇನು ಎನ್ನುವ ಸ್ಥಿತಿಯಲ್ಲಿದ್ದರು ಎನ್ನುವುದನ್ನು ಸ್ವತಃ ಮುಖಭಾವವೇ ಸ್ಪಷ್ಟವಾಗಿ ಹೇಳುವಂತಿತ್ತು. ಆ ಬಳಿಕ ಸಿಎಂ ಜೊತೆಯಲ್ಲೇ ನಡೆದು ಕಚೇರಿಗೆ ಹೋದ ಸಚಿವ ಎಂಟಿಬಿ ನಾಗರಾಜು ಪ್ರತ್ಯೇಕ ಮಾತುಕತೆ ನಡೆಸಿದ್ರು. ಆ ಬಳಿಕ ವಲಸಿಗ ಸಚಿವರು ಪತ್ರವೊಂದನ್ನು ಹಿಡಿದು ಸಿಎಂ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ.

ಆಪರೇಷನ್​ ಸಚಿವರಿಗೆ ಆತಂಕಕ್ಕೆ ಕಾರಣ..?

ಆಪರೇಷನ್​ ಕಮಲದ ಮೂಲಕ ಭಾಜಪಾ ಸೇರಿಸುವ ನೂತನ ಸಚಿವರಿಗೆ ಅಭದ್ರತೆ ಕಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ನಾವು ಯಡಿಯೂರಪ್ಪ ಅವರನ್ನು ನೋಡಿಕೊಂಡು ಪಕ್ಷಕ್ಕೆ ಬಂದಿದ್ದೇವೆ. ನಮಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದು ಮುಖ್ಯ. ಯಡಿಯೂರಪ್ಪ ನುಡಿದಂತೆ ನಾಲಿಗೆ ಮೇಲೆ ನಡೆಯುವ ನಾಯಕ ಎಂದೆಲ್ಲಾ ಬಿರುದು ನೀಡಿದ್ದರು. ಇದೀಗ ಯಡಿಯೂರಪ್ಪ ಜಾಗ ಖಾಲಿ ಮಾಡುವ ಕಾಲ ಸನ್ನಿಹಿತವಾಗಿದೆ. ಮುಂದಿನ ಕ್ಯಾಬಿನೆಟ್​ ಊಹೆಗೂ ನಿಲುಕದ ಪರಿಸ್ಥಿತಿಯಲ್ಲಿದೆ. ಯಡಿಯೂರಪ್ಪ ಭರವಸೆ ಕೊಟ್ಟು ಗೆಲ್ಲಿಸಿಕೊಂಡು ಸಚಿವರನ್ನಾಗಿ ಮಾಡಿದ್ದರು. ಮುಂದಿನ ಕ್ಯಾಬಿನೆಟ್​ನಲ್ಲಿ ಸಚಿವರನ್ನಾಗಿ ಮಾಡುವ ಆಯ್ಕೆ ಯಡಿಯೂರಪ್ಪ ಬಳಿ ಇರಲಾರದು. ಇದೇ ಕಾರಣದಿಂದ ಆಪರೇಷನ್​​ ಸ್ಟಾರ್ ನಾಯಕರು ಕಂಗಾಲಾಗಿದ್ದಾರೆ. ಮುಂದಿನ ಕ್ಯಾಬಿನೆಟ್​ ರಚನೆ ಸಂದರ್ಭದಲ್ಲೂ ನಮಗೆ ಸ್ಥಾನ ಕೊಡಿಸುವ ಭರವಸೆಗಾಗಿ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಆದರೆ ಅವರ ಮನವಿ ಕೈಗೂಡುತ್ತಾ ಕಾದು ನೋಡ್ಬೇಕು.

Related Posts

Don't Miss it !